ಕರ್ನಾಟಕ

ವಕ್ಫ್ ಆಸ್ತಿ ಕಬಳಿಕೆ ಮಾಣಿಪ್ಪಾಡಿ ವರದಿ ಮಂಡಿಸಲು ಆಗ್ರಹ

Pinterest LinkedIn Tumblr

joshi1ಬೆಂಗಳೂರು, ಮಾ. ೨೨- ರಾಜ್ಯದಲ್ಲಿ 4 ಲಕ್ಷ ಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿ ಕಬಳಿಕೆಯಾಗಿದ್ದು, ಈ ಬಗ್ಗೆ ಅನ್ವರ್ ಮಾಣಿಪ್ಪಾಡಿ ಅವರು ನೀಡಿರುವ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಒತ್ತಾಯಿಸಿದ್ದಾರೆ.

ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ನಗರದ ಪುರಭವದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಆಸ್ತಿ ಬಡ ಮುಸ್ಲಿಂರಿಗೆ ದೊರೆಯಬೇಕು. ಹಲವು ಕಾಂಗ್ರೆಸ್ ಮುಖಂಡರು, ಸಚಿವರು, ವಕ್ಫ್ ಆಸ್ತಿಯನ್ನು ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಅನ್ವರ್ ಮಾಣಿಪ್ಪಾಡಿ ಅವರು ವರದಿ ಸಲ್ಲಿಸಿದ್ದರೂ ಸರ್ಕಾರ ವರದಿಯನ್ನು ಸ್ವೀಕರಿಸುತ್ತಿಲ್ಲ. ಈ ಮೂಲಕ ಭ್ರಷ್ಟರನ್ನು ರಕ್ಷಿಸಲು ಮುಂದಾಗಿದೆ ಎಂದು ಆರೋಪಿಸಿದರು.

ವಕ್ಫ್ ಆಸ್ತಿ ಸಚಿವ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಕಮರುಲ್ ಇಸ್ಲಾಂ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಒತ್ತುವರಿಯಾಗಿರುವ ಎಲ್ಲಾ ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆದು, ಅವುಗಳನ್ನು ಬಡ ಮುಸ್ಲಿಂರ ಕಲ್ಯಾಣಕ್ಕೆ ಉಪಯೋಗಿಸಬೇಕು ಎಂದು ಹೇಳಿದರು.

ಭ್ರಷ್ಟಾಚಾರ ನಿಗ್ರಹ ದಳ ರಚನೆಗೆ ಕಾಂಗ್ರೆಸ್ ಹಿರಿಯ ಮುಖಂಡರು, ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಸಿದ್ದರಾಮಯ್ಯ ಮೊಂಡುತನ ತೋರಿಸಿ ಎಸಿಬಿ ರಚನೆ ಮಾಡಿದ್ದಾರೆ. ಈ ಮೂಲಕ ಭ್ರಷ್ಟರಿಗೆ ರಕ್ಷಣೆ ನೀಡಲು ಅವರು ಮುಂದಾಗಿದ್ದಾರೆ. ಇದೇ ರೀತಿ ಮುಂದುವರೆದರೆ, ಶಾಸಕರನ್ನು ರಸ್ತೆಯಲ್ಲಿ ಸಾರ್ವಜನಿಕರು ಅಟ್ಟಾಡಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ಅಬ್ದುಲ್ ಅಜೀಮ್ ಮಾತನಾಡಿ, ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯನ್ನು ತಿರಸ್ಕರಿಸಿರುವುದು ಖಂಡನೀಯ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಕರ್ನಾಟಕ ಸೇರಿದಂತೆ, ದೇಶಾದ್ಯಂತ ಲಕ್ಷಾಂತರ ಎಕರೆ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ಮುಖಂಡರು ಕಬಳಿಸಿಕೊಂಡಿದ್ದಾರೆ. ಅವುಗಳೆಲ್ಲವನ್ನೂ ವಶಕ್ಕೆ ಪಡೆಯಬೇಕು ಎಂದು ಹೇಳಿದರು.

ಬಿಜೆಪಿ ಕೋಮುವಾದಿ ಪಕ್ಷವೆಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಮುಸ್ಲಿಂರ ಹಕ್ಕು ಮತ್ತು ರಕ್ಷಣೆಗೆ ಬಿಜೆಪಿ ಮುಂದಾಗಿದೆ. ವಕ್ಫ್ ಆಸ್ತಿ ರಕ್ಷಣೆ ಚಳವಳಿಯನ್ನು ಹಳ್ಳಿಹಳ್ಳಿಗೂ ವಿಸ್ತರಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು.

ವಕ್ಫ್ ಬೋರ್ಡನ್ನು ಸೂಪರ್ ಸೀಡ್ ಮಾಡಬೇಕು. ಅದಕ್ಕೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯನ್ನು ಆ‌ಡಳಿತಾಧಿಕಾರಿಯನ್ನಾಗಿ ನೇಮಿಸಬೇಕೆಂದು ಹೇಳಿದರು.

ಬಿಜೆಪಿ ಕೌನ್ಸಿಲರ್‌ಗಳು, ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Write A Comment