ಕರ್ನಾಟಕ

ಅನ್ನಭಾಗ್ಯ ಅಲ್ಲ ಕನ್ನಭಾಗ್ಯ ಯೋಜನೆ : ಬೆಳಕಿಗೆ ಬಂತು 36 ಕೋಟಿ ಹಣ ದುರುಪಯೋಗ ಹಗರಣ

Pinterest LinkedIn Tumblr

annaಬೆಂಗಳೂರು, ಫೆ.11- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಜನಪ್ರಿಯ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆ ಕೆಲವರ ಪಾಲಿಗೆ ಕನ್ನಭಾಗ್ಯವಾಗಿ ಪರಿಣಮಿಸಿದೆ. ಕಾರಣ ಈ ಯೋಜನೆಯಲ್ಲಿ 36 ಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಮಾಹಿತಿ ಹಕ್ಕಿ (ಆರ್‌ಟಿಇ)ನಲ್ಲೇ 36 ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಪತ್ತೆಯಾಗಿದೆ. ಈಗ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ರಾಜ್ಯದಲ್ಲಿ 2013ರ ಮೇ ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಮರು ಘಳಿಗೆಯೇ ಅನ್ನಭಾಗ್ಯ ಯೋಜನೆ ಪ್ರಕಟಿಸಿದರು.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಎರಡು ಹೊತ್ತು ಅನ್ನ ಸಿಗಲಿ ಎಂಬ ಕಾರಣಕ್ಕಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಒಂದು ರೂ.ಗೆ ಒಂದು ಕೆ.ಜಿ ಅಕ್ಕಿ ಒದಗಿಸುವುದೇ ಅನ್ನಭಾಗ್ಯ ಯೋಜನೆಯ ಮುಖ್ಯ ಉದ್ದೇಶ.

ಹಸಿವಿನಿಂದ ಯಾರೊಬ್ಬರೂ ಬಳಲಬಾರದೆಂಬ ಕಾರಣದಿಂದಲೇ ಈ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿತು. ಕೇಂದ್ರ ಸರ್ಕಾರವು ಇದಕ್ಕೆ ಆರ್ಥಿಕ ನೆರವು ಒದಗಿಸುತ್ತದೆ. ಈ ಯೋಜನೆ ಜನಪ್ರಿಯಗೊಂಡ ಮೇಲೆ ಸರ್ಕಾರ ಒಂದು ರೂ.ಗೆ ಒಂದು ಕೆ.ಜಿ. ಅಕ್ಕಿ ನೀಡುತ್ತಿದ್ದನ್ನು ಕೊನೆಗೆ ಕುಟುಂಬದ ಒಬ್ಬ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲು ತೀರ್ಮಾನಿಸಿತು.ಅನ್ನಭಾಗ್ಯ ಯೋಜನೆ ಬಗ್ಗೆ ಆಗಾಗ್ಗೆ ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಿವೆ. ಇದು ನಿಜವಾಗಿಯೂ ಫಲಾನುಭವಿಗಳಿಗೆ ತಲುಪದೆ ಮಧ್ಯವರ್ತಿಗಳ ಪಾಲಾಗುತ್ತದೆ ಎಂಬುದು ಕೆಲವರ ವಾದ.

ಇನ್ನು ಸರ್ಕಾರದಲ್ಲಿರುವ ಅಕ್ಕಿ ಮಾಲೀಕರೇ ಮಧ್ಯವರ್ತಿಗಳಿಂದ ಅಕ್ಕಿ ಖರೀದಿಸಿ ಪುನಃ ಸರ್ಕಾರಕ್ಕೆ ಮಾರಾಟ ಮಾಡುತ್ತಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಫಲಾನುಭವಿಗಳು ಕೂಡ ಪುಕ್ಕಟ್ಟೆ ಸಿಗುವ 10 ಕೆ.ಜಿ. ಅಕ್ಕಿಯನ್ನು ಹೊಟೇಲ್‌ಗಳಿಗೆ 15 ರೂ.ನಂತೆ ಮಾರಾಟ ಮಾಡುತ್ತಿರುವುದು ಜಗಜ್ಜಾಹೀರ. ಸರ್ಕಾರ ಪುಕ್ಕಟ್ಟೆ ಅಕ್ಕಿ ನೀಡುತ್ತಿದ್ದರಿಂದ ಕೆಲವರು ಸೋಮಾರಿಗಳಾದರೆಂದು ಪ್ರತಿಪಕ್ಷಗಳು ಟೀಕಿಸುತ್ತಿದ್ದರು. ಆದರೂ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಯೋಜನೆ ಮುಂದುವರೆಸಿತು.

36 ಕೋಟಿ ಕನ್ನ:

ಅನ್ನಭಾಗ್ಯ ಯೋಜನೆಗೆ ಕನ್ನ ಕೊರೆದಿರುವ ಖದೀಮರು ಒಟ್ಟು 36 ಕೋಟಿ ಹಣವನ್ನು ಲಪಟಾಯಿಸಿದ್ದಾರೆ. 2013-14ರಲ್ಲಿ ಕರ್ನಾಟಕ ಸರ್ಕಾರ ಛತ್ತೀಸ್‌ಗಢದಿಂದ ಈ ಯೋಜನೆಗಾಗಿ ಅಕ್ಕಿ ಖರೀದಿಸಲು ಮುಂದಾಗಿತ್ತು. ಈ ಪ್ರಕಾರ ಛತ್ತೀಸ್‌ಗಢ ಸರ್ಕಾರವು ರಾಜ್ಯಕ್ಕೆ 15,32,369 ಕ್ವಿಂಟಾಲ್ ಅಕ್ಕಿಯನ್ನು ಕೆ.ಜಿ.ಗೆ 25 ರೂ. ದರದಲ್ಲಿ ಖರೀದಿ ಮಾಡಲಾಗಿದೆ ಎಂದು ಸರ್ಕಾರದ ವಾದ. ವಾಸ್ತವವಾಗಿ ಛತ್ತೀಸ್‌ಗಢವು ಪ್ರತಿ ಕೆ.ಜಿಗೆ 22.60 ಪೈಸೆಯಂತೆ ಸರ್ಕಾರಕ್ಕೆ ನೀಡಿದೆ. 15, 32,369 ಕ್ವಿಂಟಾಲ್‌ಗೆ 25ರೂ. ನಂತೆ ಒಟ್ಟು 383,09,24,400 ಕೋಟಿ ಹಣವನ್ನು ನೀಡಿದೆ. ಆದರೆ ಛತ್ತೀಸ್‌ಗಢಕ್ಕೆ ಸರ್ಕಾರದ ವತಿಯಿಂದ ಪಾವತಿಯಾಗಿರುವುದು 346,31,55,658 ಹಣ ಸಂದಾಯವಾಗಿದೆ.

ಅಂದರೆ ಇಲ್ಲಿ 36,77,68,742 ರೂ.ಗೆ ಲೆಕ್ಕವೂ ಬುಕ್ಕವೂ ಇಲ್ಲ. ಈ ಬಗ್ಗೆ ಸರ್ಕಾರವು ಕಣ್ಮುಚ್ಚಿ ಕುಳಿತಿಕೊಂಡಿದೆ. ಮೂಲಗಳ ಪ್ರಕಾರ ಮಧ್ಯವರ್ತಿಗಳು ಮತ್ತು ಅಧಿಕಾರಿಗಳೇ ಶಾಮೀಲಾಗಿ ನಡೆಸಿರುವ ದಂಧೆ ಎಂಬ ಆರೋಪವಿದೆ.

Write A Comment