ಮಡಿಕೇರಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಮುಂಡಂಡ ಎಂ. ನಾಣಯ್ಯ ಭಾನುವಾರ ಸಂಜೆ ನಿಧನರಾದರು. ಜನಾನುರಾಗಿಯಾಗಿ, ವಿಭಿನ್ನ ನಡೆ ನುಡಿಯಿಂದ ಗುರುತಿಸಿಕೊಂಡಿದ್ದ ನಾಣಯ್ಯ ಇಹಲೋಕದ ಯಾತ್ರೆ ಮುಗಿಸಿದ್ದಾರೆ.
75 ವರ್ಷದ ಎಂ.ಎಂ. ನಾಣಯ್ಯ ಅವರು ಕೆಲ ತಿಂಗಳಿಂದ ದೈಹಿಕವಾಗಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಭಾನುವಾರ ಸಂಜೆ 5.45 ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಪ್ರೇಮಾ ಹಾಗೂ ಇಬ್ಬರು ಪುತ್ರರನ್ನು ನಾಣಯ್ಯ ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಅವರ ಹುಟ್ಟೂರು ನಾಪೋಕ್ಲು ಬಳಿಯ ಬೇತು ಗ್ರಾಮದಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
ಆರ್.ಗುಂಡೂರಾವ್ ಹಾಗೂ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಶಾಸಕರಾಗಿದ್ದರು. ಕೃಷ್ಣ ಅವಧಿಯಲ್ಲಿ ಅಬಕಾರಿ ಹಾಗೂ ಐಟಿ-ಬಿಟಿ ಸಚಿವರಾಗಿ ಜತೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.