ಹೆಬ್ರಿ: ರಾಷ್ಟ್ರದ ಅಭಿವೃದ್ಧಿಯಲ್ಲಿ ಕಲೆ, ಸಾಹಿತ್ಯದ ಕೊಡುಗೆ ಕೂಡ ಅತ್ಯಂತ ಹಿರಿದು. ಇಂತಹ ಸಾಂಸ್ಕೃತಿಕ ವೈಭವವು ಗ್ರಾಮೀಣ ಪ್ರದೇಶದ ಜನರ ಮನದಲ್ಲಿ ಹೊಸ ಚೈತನ್ಯ ನೀಡುತ್ತಿದೆ ಎಂದು ಹೆಬ್ರಿ ಪೊಲೀಸ್ ಠಾಣಾಧಿಕಾರಿ ಪಿ. ಸೀತಾರಾಮ್ ಹೇಳಿದರು.
ಮುದ್ರಾಡಿ ನೆಲ್ಲಿಕಟ್ಟೆ ಶಾಲಾ ಆವರಣದಲ್ಲಿ ಶನಿವಾರ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆಯ ಸಹಯೋಗದಲ್ಲಿ ಸಮಗ್ರ ಗಿರಿಜನ ಉಪಯೋಜನೆ ಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲಾವಿದರಿಗಾಗಿ ನಡೆದ ಒಂದು ದಿನದ ಸಾಂಸ್ಕೃತಿಕ ವೈಭವ ಗಿರಿಜನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕುಂಭಾಶಿ ಗಣೇಶ್ ಕೊರಗ ಮಾತನಾಡಿ, ಗಿರಿಜನರ ಅದ್ಭುತ ಕಲೆಗಳು ತುಳಿತಕ್ಕೊಳಗಾಗಿ ಬದಿಗೆ ಸರಿದಿದೆ. ನಮ್ಮತನ ಕಳೆದು ಹೋಗುವ ಅಪಾಯವಿದೆ. ಇಂತಹ ಕಾಲದಲ್ಲಿ ಸರ್ಕಾರದ ಈ ಕಾರ್ಯಕ್ರಮ ನಮಗೆಲ್ಲ ಧೈರ್ಯ ತುಂಬಿದೆ ಎಂದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ದೇವದಾಸ ಪೈ ಮಾತನಾಡಿ, ಗಿರಿಜನರ ಪರಂಪರಾಗತ ಕಲೆ, ಜಾನಪದ ನೃತ್ಯವನ್ನು ಪ್ರೋತ್ಸಾಹಿಸಲು ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ. ಗಿರಿಜನರ ಅಭಿವೃದ್ಧಿಯ ಜತೆಗೆ ಗಿರಿಜನರ ಬದುಕಿನಲ್ಲಿ ಸದಾ ಚೈತನ್ಯ ತುಂಬಲು ದೊಡ್ಡ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಗಿರಿಜನರ ಬದುಕು ಹಾಗೂ ಜನಪದ ಪರಂಪರೆಯ ಬಗ್ಗೆ ಸುಬ್ಬಪ್ಪ ಕೈಕಂಬ ಉಪನ್ಯಾಸ ನೀಡಿದರು. ಮುಖ್ಯ ಶಿಕ್ಷಕ ಮಹಾಬಲ ನಾಯ್ಕ್, ಶಿಕ್ಷಕ ಶಶಿಕಲಾ, ಶಾಲಾಭಿವೃದ್ಧಿ ಸಮಿತಿಯ ಬಚ್ಚಪ್ಪು ಸುರೇಶ ನಾಯ್ಕ್, ಹೆಬ್ರಿ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಚ್.ಸಂಜೀವ ನಾಯ್ಕ್, ಕಬ್ಬಿನಾಲೆ ಸದಾಶಿವ ನಾಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ರಂಗ ಭೂಮಿ ಕಲಾವಿದ ನಿರ್ದೇಶಕ ಬಾಸುವ ಕೊಡಗು ಸಮನ್ವಯಕಾರರಾಗಿದ್ದರು.
ಮುದ್ರಾಡಿ ಆದಿಶಕ್ತಿ ಕ್ಷೇತ್ರದಿಂದ ನೆಲ್ಲಿಕಟ್ಟೆ ಶಾಲೆಯ ತನಕ ವಿವಿಧ ಕಲಾತಂಡಗಳ ವೈಭವದ ಮೆರವಣಿಗೆ ನಡೆಯಿತು. ಮುದ್ರಾಡಿ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದ ಧರ್ಮದರ್ಶಿ ಧರ್ಮಯೋಗಿ ಮೋಹನ್, ನೆಲ್ಲಿಕಟ್ಟೆ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಹೆಮ್ಮಣ್ಣು, ಕಾರ್ಕಳ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ, ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ನಮತುಳುವೆರ್ ಕಲಾ ಸಂಘಟ ನೆಯ ಅಧ್ಯಕ್ಷ ರಂಗ ನಿರ್ದೇಶಕ ಸುಕುಮಾರ್ ಮೋಹನ್ ಕಾರ್ಯಕ್ರಮ ನಿರೂಪಿಸಿ, ಪೂರ್ಣಿಮಾ ಸ್ವಾಗತಿಸಿದರು.
ವೈವಿಧ್ಯಮಯ ಕಾರ್ಯಕ್ರಮ
ಮೈಸೂರು, ನಂಜನಗೂಡು, ಮಂಗಳೂರು, ಉಡುಪಿ ಜಿಲ್ಲೆಗಳ ವಿವಿಧ ಕಲಾತಂಡಗಳಿಂದ ಡೊಳ್ಳುಕುಣಿತ, ಹೋಳಿನೃತ್ಯ, ಗುಮ್ಟೆಮೇಳ, ಜಾನಪದ ಹಾಡು, ಕೋಲಾಟ, ವೀರಭದ್ರ ಕುಣಿತ, ಗಿರಿಜನ ನೃತ್ಯ, ಗಿರಿಜನ ಕೋಲಾಟ, ಸಂಪ್ರದಾಯದ ಹಾಡುಗಳು, ಚಿಟ್ಟಿಮೇಳ, ಡೋಲು ಕುಣಿತ, ಬೀಸು ಕಂಸಾಳೆ, ಕೊರಗರ ಗಜಮೇಳ, ಕೊರಗರ ಡೋಲು, ಕೊಳಲು ಕುಣಿತ ಹಾಗೂ ಯಕ್ಷಗಾನ ಸೇರಿದಂತೆ ವಿವಿಧ ಗಿರಿಜನ ಕಲಾ ಪ್ರಕಾರಗಳ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು.