ಕರ್ನಾಟಕ

ಬಿಬಿಎಂಪಿ ಸಾಲಕ್ಕಾಗಿ ಒತ್ತೆಯಿಟ್ಟಿದ್ದ ಮೆಯೋಹಾಲ್,ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಮುಕ್ತಿ

Pinterest LinkedIn Tumblr

gergeಬೆಂಗಳೂರು, ಜ.30-ಬಿಬಿಎಂಪಿ ಸಾಲಕ್ಕಾಗಿ ಅಡಮಾನ ಮಾಡಿದ್ದ 11 ಆಸ್ತಿಗಳ ಪೈಕಿ ಎರಡು ಆಸ್ತಿಗಳನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ನಗರದ ಮೇಯೊ ಹಾಲ್ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸಾಲದ ಸುಳಿಯಿಂದ ಮುಕ್ತವಾಗಿದೆ.

ಕಾಲಕಾಲಕ್ಕೆ ಬಡ್ಡಿ ಮತ್ತು ಅಸಲಿನ ಮೊತ್ತ ತೀರಿಸಿದ್ದರಿಂದ ಬಿಜೆಪಿ ಸರ್ಕಾರ ಅಡವಾಗಿರಿಸಿದ್ದ ಎರಡು ಪಾರಂಪರಿಕ ಕಟ್ಟಡಗಳನ್ನು ಹುಡ್ಕೊ ಸಂಸ್ಥೆ ವಾಪಸ್ ನೀಡಿದೆ ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. 2011-12 ಹಾಗೂ 2012-13ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಬಿಎಂಪಿ ವ್ಯಾಪ್ತಿಯ ಕೆ.ಆರ್.ಮಾರುಕಟ್ಟೆ 480 ಕೋಟಿಗೆ, ಮಲ್ಲೇಶ್ವರಂ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸನ್ ಮಾರುಕಟ್ಟೆ, 249.54 ಕೋಟಿಗೆ, ಪಿ

ಯುಸಿ ಕಟ್ಟಡ, ಮೆಯೋ ಕೋರ್ಟ್, ಕೆಂಪೇಗೌಡ ಮ್ಯೂಸಿಯಂ ಪಶ್ಚಿಮ ವಲಯ ಕಚೇರಿ, ಕಲಾಸಿಪಾಳ್ಯ ಮಾರುಕಟ್ಟೆಗಳನ್ನು, 747.28 ಕೋಟಿಗೆ, ರಾಜಾಜಿನಗರ ಮಾರುಕಟ್ಟೆ, ಟ್ಯಾನರಿ ರಸ್ತೆಯ ಪ್ಲಾಟರ್ ಹೌಸ್, 169.03 ಕೋಟಿ ರೂ.ಗೆ ಸೇರಿ 1645.85 ಕೋಟಿ ರೂ.ಗಳಿಗೆ 11 ಆಸ್ತಿಗಳನ್ನು ಹುಡ್ಕೋ ಸಂಸ್ಥೆಗೆ ಅಡಮಾನವಿರಿಸಲಾಗಿತ್ತು. ಬಿಬಿಎಂಪಿಯಲ್ಲಿ ಸಂಪನ್ಮೂಲ ಕ್ರೋಢೀಕರಿಸಿ ಈವರೆಗೂ 445.94 ಕೋಟಿ ರೂ.ಗಳ ಅಸಲು ಪಾವತಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಎರಡು ಕಟ್ಟಡಗಳನ್ನು ವಾಪಸ್ ನೀಡಿದೆ. 1209.91 ಕೋಟಿ ರೂ. ಸಾಲ ತೀರಿಸಿ 9 ಕಟ್ಟಡ ಹಿಂಪಡೆಯಬೇಕಿದೆ. ಪಾಲಿಕೆಯ ಎಕ್ಸ್ರೂ ಖಾತೆಯಿಂದ ಒಂದು ಕಂತಿನ 94 ಕೋಟಿಯನ್ನು ಮುಂಗಡ ಪಾವತಿಸುತ್ತಿರುವುದರಿಂದ 5.88 ಕೋಟಿ ರೂ. ಉಳಿತಾಯವಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಕಾರ್ಪೋರೇಷನ್, ಸಿಂಡಿಕೇಟ್, ಕೆನರಾ ಬ್ಯಾಂಕ್‌ಗಳಿಂದ 2008 ರಿಂದ 2011ರವರೆಗೆ 1450 ಕೋಟಿ ರೂ.ಗಳನ್ನು 10 ವರ್ಷದ ಅವಧಿಗೆ ಸಾಲ ಪಡೆಯಲಾಗಿದೆ. ಶೇ.10.65 ರಿಂದ 11.25 ಬಡ್ಡಿ ದರವಿದೆ. ಇದರಲ್ಲಿ ಈವರೆಗೆ 784.97 ಕೋಟಿ ರೂ. ತೀರಿಸಲಾಗಿದೆ. 665.03 ಕೋಟಿ ಬಾಕಿ ಇದೆ. ಸಾಲಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಬಡ್ಡಿ ಹೆಚ್ಚಳವಾಗಿದ್ದು, ಹುಡ್ಕೊ ಸಂಸ್ಥೆ ಶೇ.10.15ಬಡ್ಡಿ ದರದಲ್ಲಿ ಸಾಲ ನೀಡಲು ಮುಂದೆ ಬಂದಿದೆ. ಹುಡ್ಕೋದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ರಾಷ್ಟ್ರೀಕೃತ ಬ್ಯಾಂಕ್ ಸಾಲ ತೀರಿಸಲಾಗುವುದು. ಇದರಿಂದ ವರ್ಷಕ್ಕೆ 5.16 ಕೋಟಿ ರೂ. ನಂತೆ ವರ್ಷಕ್ಕೆ 21 ಕೋಟಿ ಬಡ್ಡಿ ಉಳಿತಾಯವಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಮಂಜುನಾಥರೆಡ್ಡಿ, ಬಿಬಿಎಂಪಿ ವಿವಿಧ ಬ್ಯಾಂಕ್‌ಗಳಿಂದ 1800 ಕೋಟಿಗೂ ಹೆಚ್ಚು ಸಾಲ ಮಾಡಿದೆ. ಪ್ರತಿದಿನ 20 ಲಕ್ಷ ಬಡ್ಡಿ ಪಾವತಿಸಬೇಕಿದೆ. ಇದರಿಂದ ಮುಕ್ತಿ ಕೊಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದರ ಪರಿಣಾಮ ಸುಧಾರಣಾ ಕ್ರಮ ಕೈಗೊಂಡು ಮೊದಲ ಹೆಜ್ಜೆ ಇರಿಸಲಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಜ್ವರದಿಂದ ಬಳಲುತ್ತಿರುವುದರಿಂದ ಕಾಗದ ಪತ್ರ ಹಸ್ತಾಂತರ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ವಿಧಾನಪರಿಷತ್ ಸದಸ್ಯ ಶರವಣ, ಬಿಬಿಎಂಪಿ ಸದಸ್ಯರು ಹಾಜರಿದ್ದರು.

Write A Comment