ಬೆಂಗಳೂರು: ನಕಲಿ ಸಿಮ್ ಕಾರ್ಡ್ ಹಾಗೂ ಆನ್ ಲೈನ್ ಬ್ಯಾಂಕಿಂಗ್ನಲ್ಲಿನ ಲೋಪವನ್ನು ಬಳಸಿಕೊಂಡು ಖಾಸಗಿ ಸಂಸ್ಥೆಯ ಖಾತೆಯಿಂದ ಅಪಾರ ಪ್ರಮಾಣದ ಹಣ ದೋಚಿರುವ ಎರಡನೇ ಹೈಟೆಕ್ ವಂಚನೆ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬಸವೇಶ್ವರನಗರ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿರುವ ವಾಪ್ಸ್ ನಾಲೆಡ್ಜ್ ಸರ್ವಿಸ್ ಹಾಗೂ ವಾಪ್ಸ್ ಟೆಕ್ನೋಸಾಫ್ಟ್ ಪ್ರೈ ಲಿಮಿಟೆಡ್ ಕಂಪನಿಯೇ ಈ ವಿನೂತನ ಸೈಬರ್ ವಂಚನೆಗೆ ಒಳಗಾಗಿರುವ ಕಂಪನಿ. ಈ ಕಂಪನಿಯ ಖಾತೆಯಿಂದ 45 ಲಕ್ಷ ರೂಪಾಯಿಗಳನ್ನು ವಂಚಕರು ಹೈಟೆಕ್ ವಿಧಾನದಲ್ಲಿ ದೋಚಿದ್ದಾರೆ. ಈ ಪ್ರಕರಣಕ್ಕೆ ಜಯನಗರ ಬಳಿಯ ರಿಲಯನ್ಸ್ ಮೊಬೈಲ್ ಮಳಿಗೆ ಹಾಗೂ ವಿಜಯಾ ಬ್ಯಾಂಕ್ ಶಾಖೆಯ ಸಿಬ್ಬಂದಿಯ ಕರ್ತವ್ಯ ಲೋಪವೇ ಕಾರಣ ಎಂದು ಆರೋಪಿಸಿ ವಾಪ್ಸ್ ಟೆಕ್ನೋಸಾಫ್ಟ್
ಹಾಗೂ ನಾಲೆಡ್ಜ್ ಸರ್ವಿಸ್ ಕಂಪನಿಗಳ ಮುಖ್ಯಸ್ಥ ಆರ್. ಸಿದ್ದೇಶ್ಕುಮಾರ್ ಸಿಐಡಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು ತನಿಖೆ ಮುಂದುವರಿದಿದೆ.
ಮೊಬೈಲ್ ಕಂಪನಿಯ ನಕಲಿ ಸಿಮ್ ನೀಡಿಕೆ ವ್ಯವಸ್ಥೆ ಹಾಗೂ ವಿಜಯಾ ಬ್ಯಾಂಕಿನ ಆನ್ಲೈನ್ ಬ್ಯಾಂಕ್ನ ಲೋಪಗಳನ್ನು ಸಮರ್ಥವಾಗಿ ಬಳಸಿಕೊಂಡಿರುವ ವಂಚಕರು ಈ ದುಷ್ಕೃತ್ಯ ಎಸೆಗಿದ್ದು, ಸತತ 5ದಿನದಲ್ಲಿ 45 ಲಕ್ಷ ರೂ. ದೋಚಿದ್ದಾರೆ. ಆರಂಭದಲ್ಲಿ ಈ ಮೊತ್ತ 2 ಖಾತೆಗೆ ವರ್ಗಾವಣೆಯಾಗಿದೆ. ಅನಂತರ 7 ಖಾತೆಗಳಿಗೆ ಕ್ರಮೇಣ 17 ಖಾತೆಗಳಿಗೆ ವರ್ಗಾಹಿಸುವ ಮೂಲಕ ಒಟ್ಟು 26 ಖಾತೆಗಳಿಗೆ ಹಣ ವರ್ಗಾವಣೆ ನಡೆದಿದೆ.
ಕೃತ್ಯ ನಡೆದಿದ್ದು ಹೇಗೆ?: ವಾಪ್ಸ್ನ ಸಿದ್ದೇಶ್ಕುಮಾರ್ ಹೇಳುವಂತೆ, ಕಂಪನಿಯು ಬಸವೇಶ್ವನಗರದ ವಿಜಯಾ ಬ್ಯಾಂಕ್ನಲ್ಲಿ ಹೊಂದಿರುವ ಚಾಲ್ತಿ ಖಾತೆಯನ್ನು ಲೆಕ್ಕ
ವ್ಯವಸ್ಥಾಪಕರಾದ ಗೋವಿಂದಯ್ಯ ನಿರ್ವಹಿಸುತ್ತಿದ್ದರು. ಗೋವಿಂದಯ್ಯ ಅವರ ರಿಲಯನ್ಸ್ ಮೊಬೈಲ್ ಸೇವೆ ಜ. 13ರಂದು ಇದಕ್ಕಿದ್ದ ಹಾಗೆ ಹಣ ಪಾವತಿ ಲೋಪ ಕಾರಣ ನೀಡಿ ಸ್ಥಗಿತಗೊಂಡಿದೆ. ಜ. 12 ರಂದು ಇದೇ ಗೋವಿಂದಯ್ಯ ಅವರ ನಕಲಿ ದಾಖಲೆ ಬಳಸಿ
ಅನಾಮಿಕರು ನಕಲಿ ಸಿಮ್ ಖರೀದಿ ಮಾಡಿದ್ದಾರೆ.
ಈ ನಕಲಿ ಸಿಮ್ ನೀಡುವಾಗ ರಿಲೈಯನ್ಸ್ ಕಂಪನಿ ಯಾವುದೇ ದಾಖಲೆಯನ್ನಾಗಲೀ ಅಥವಾ ಬಳಕೆದಾರರ ಫೋಟೋವನ್ನಾಗಲೀ ಪರಿಶೀಲಿಸಿಲ್ಲ. ಇದೇ ಇಡೀ ವಂಚನೆಯ ಮೂಲವಾಗಿದ್ದು ಈ ಸಿಮ್ ಮುಂಬೈನಲ್ಲಿ ಆಕ್ಟಿವೇಟ್ ಆಗಿ ಬಳಕೆಯಾಗಿದೆ.
ಈ ಬಗ್ಗೆ ಅರಿವಿಲ್ಲದ ಗೋವಿಂದಯ್ಯ, ಹಣ ಪಾವತಿ ಮಾಡದ ಕಾರಣಕ್ಕಾಗಿ ಮೊಬೈಲ್ ಸೇವೆ ಕಡಿತಗೊಳಿಸಲಾಗಿದೆ ಎಂದು ಭಾವಿಸಿದ್ದರು. ಈ ವೇಳೆಗೆ ಸತತವಾಗಿ ಆನ್ಲೈನ್ ಮೂಲಕ ವಾಪ್ಸ್ ಟೆಕ್ನೊ ನಾಲೆಡ್ಜ್ ಖಾತೆಯಿಂದ ಜ. 13, 14, 15, 16 ಹಾಗೂ
ಜ. 18ರಂದು ನಿತ್ಯ 5 ಲಕ್ಷದಂತೆ ಒಟ್ಟು 25 ಲಕ್ಷ ರೂ. ಹಾಗೂ ವಾಪ್ಸ್ (ವಿಎಪಿಎಸ್) ಟೆಕ್ನೋಸಾಫ್ಟ್ ಪ್ರೈ.ಲಿಗೆ ಸೇರಿದ ಖಾತೆಯಿಂದ ಸತತ ನಾಲ್ಕು ದಿನ ಪ್ರತಿ ಬಾರಿ 5 ಲಕ್ಷದಂತೆ 20 ಲಕ್ಷ ರೂ. ಸೇರಿ ಒಟ್ಟು 45 ಲಕ್ಷ ರೂ. ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ.
ಹಣ ವರ್ಗಾವಣೆಯಾದ ಎರಡೂ ಖಾತೆಗಳು ನಕಲಿ ದಾಖಲೆ ಮೂಲಕ ಸೃಷ್ಟಿಯಾಗಿರುವುದು ಕೂಡ ಬೆಳಕಿಗೆ ಬಂದಿದೆ. ಹೀಗೆ ಹಣ ವರ್ಗಾವಣೆ ಆಗುವಾಗ
ಗೋವಿಂದಯ್ಯ ಅವರ ಫೋನಿಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬರುವ ಬದಲು
ಖದೀಮರ ಮೊಬೈಲ್ಗೆ ಒಟಿಪಿ ಹೋಗಿದೆ. ಆದರೆ, ಈ ಸಮಯದಲ್ಲಿ ಹಣ ವರ್ಗಾವಣೆ ಆದ ಬಗ್ಗೆ ಇಮೇಲ್ ಹೋಗಿಲ್ಲ. ಆದರೆ, 5 ನೇ ದಿನ ಹೊಸ ಸಿಮ್ ಖರೀದಿಸಿದ ಗೋವಿಂದಯ್ಯ ಅವರಿಗೆ ಜ. 18 ರಂದು ಬೆಳಗ್ಗೆ 9.20 ಗಂಟೆಗೆ ಏಳು ನಿಮಿಷದಲ್ಲಿ 5 ಲಕ್ಷ ಡ್ರಾ ಆಗಿರುವ ಬಗ್ಗೆ ಎರಡು ಸಂದೇಶ ಬರುತ್ತದೆ.
ಈ ವೇಳೆ ಎಚ್ಚೆತ್ತುಕೊಂಡ ಗೋವಿಂದಯ್ಯ, ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ವಂಚನೆ ವಿಷಯ ಬಯಲಾಗಿದೆ. ಬಳಿಕವೂ 5 ಲಕ್ಷ ವರ್ಗಾವಣೆಯಾಗುವುದನ್ನು ತಡೆಯಲು ಬ್ಯಾಂಕ್ ವಿಫಲವಾಗಿದೆ ಎಂದು ಸಿದ್ದೇಶ್ಕುಮಾರ್ ಆರೋಪಿಸಿದ್ದಾರೆ.
ಜನವಸತಿ ಪ್ರದೇಶದ ಶಾಖೆಯಿಂದ ಈ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗುತ್ತಿದ್ದರೂ
ಬ್ಯಾಂಕ್ ಗಮನಿಸಿಲ್ಲ ಹಾಗೂ ಬ್ಯಾಂಕ್ನ ಆನ್ಲೈನ್ ವ್ಯವಸ್ಥೆ ಪ್ರಾಕ್ಸಿ ಐಪಿ ಅಡ್ರೆಸ್ಗಳನ್ನು ಒಪ್ಪಿಕೊಳ್ಳುತ್ತದೆ. ಇದರ ಜೊತೆಗೆ ರಿಲಯನ್ಸ್ ಕಂಪನಿಯು ದಾಖಲೆ ಪರಿಶೀಲಿಸದೇ ನಕಲಿ ಸಿಮ್ ನೀಡಿದೆ. ಎಂದು ಕಂಪನಿಯು ದೂರು ದಾಖಲಿಸಿದ್ದು ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಕೆಲವೇ ದಿನಗಳ ಹಿಂದೆ ಆಕ್ಸಿಸ್ ಬ್ಯಾಂಕ್ ಗ್ರಾಹಕರ ಖಾತೆಯಿಂದಲೂ ಇದೇ ಬಗೆಯಲ್ಲಿ ಹೈಟೆಕ್ ವಂಚನೆ ಮಾಡಿರುವ ಪ್ರಕರಣ ವರದಿಯಾಗಿತ್ತು. ಬ್ಯಾಂಕಿನ ಮ್ಯಾನೇಜರ್ ಸೇರಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಸಿಮ್ ಪಡೆದಿದ್ದು ಹೇಗೆ?
ಗೋವಿಂದಯ್ಯ ಅವರ ಆಧಾರ್ಕಾರ್ಡ್ನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡ ಖದೀಮರು ಬೇರೆಯವರ ಫೋಟೋ ನೀಡಿ ಜಯ ನಗರದಲ್ಲಿ ಸಿಮ್ ಪಡೆದಿದ್ದಾರೆ. ಈ ವೇಳೆ ಆಧಾರ್ ಕಾರ್ಡ್ನಲ್ಲಿರುವ ಫೋಟೋ ಹಾಗೂ ಅವರು ನೀಡಿರುವ ಫೋಟೋಗೆ ತಾಳೆಯಾಗದಿದ್ದರೂ ಸಿಮ್ ನೀಡಲಾಗಿದೆ. ಹೀಗೆ ನೀಡುವಾಗ ಕಂಪನಿಯು
ಯಾವುದೇ ದಾಖಲೆಯನ್ನಾಗಲೀ, ಸಹಿಯನ್ನಾಗಲೀ ತಾಳೆ ಮಾಡಿಲ್ಲ. ಅಲ್ಲದೆ, ಸಿಮ್ ಪಡೆದ ಎರಡೂವರೆ ಗಂಟೆಯಲ್ಲೇ ಆ್ಯಕ್ಟಿವೇಟ್ ಮಾಡಲಾಗಿದೆ. ಇದರ ದುರುಪಯೋಗಪಡಿಸಿಕೊಂಡ ಖದೀಮರು 45 ಲಕ್ಷ ರೂ. ದೋಚಿದ್ದಾರೆ.
-ಉದಯವಾಣಿ