ಕರ್ನಾಟಕ

125 ವಿದ್ಯುತ್ ಉಪಕೇಂದ್ರ ಸ್ಥಾಪನೆ

Pinterest LinkedIn Tumblr

dks

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 125 ವಿದ್ಯುತ್ ಉಪಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಈ ವರ್ಷ 77 ವಿದ್ಯುತ್ ಉಪಕೇಂದ್ರಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ಯಲಹಂಕದಲ್ಲಿಂದು ನೂತನ ವಿದ್ಯುತ್ ಉಪಕೇಂದ್ರ ಹಾಗೂ 66 ಕೆ.ವಿ. ಪ್ರಸರಣ ಮಾರ್ಗಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಅಗತ್ಯವಿರುವೆಡೆ ವಿದ್ಯುತ್ ಉಪಕೇಂದ್ರಗಳನ್ನು ಹೊಸದಾಗಿ ಕೈಗೆತ್ತಿಕೊಳ್ಳಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದರು.

ಈ ವರ್ಷ 77 ವಿದ್ಯುತ್ ಉಪಕೇಂದ್ರಗಳ ಕಾಮಗಾರಿಗಳು ಆರಂಭವಾಗಲಿವೆ. ಹೊಸದಾಗಿ ಒಟ್ಟು 125 ವಿದ್ಯುತ್ ಉಪಕೇಂದ್ರಗಳನ್ನು ಆರಂಭಿಸುವ ತೀರ್ಮಾನ ಮಾಡಲಾಗಿದೆ ಎಂದರು.

66 ಕೆ.ವಿ. ಹೊಸ ಲೈನ್
ಯಲಹಂಕದಲ್ಲಿ ಇಂದು ಆರಂಭಿಸಲಾದ ವಿದ್ಯುತ್ ಉಪಕೇಂದ್ರ ಹಾಗೂ 66 ಕೆ.ವಿ. ಲೈನ್‌ನಿಂದ ಬೆಂಗಳೂರು ಉತ್ತರ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿದ್ದ ಅ‌ಡಚಣೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದರು.

ಬೆಂಗಳೂರು ನಗರ ಸೇರಿದಂತೆ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ಅ‌ಡಚಣೆಗಳನ್ನು ಸರಿಪಡಿಸಲು ಹೊಸದಾಗಿ 1300 ರಿಂದ 1400 ಕೋಟಿ ರೂ. ವೆಚ್ಚದಲ್ಲಿ 66 ಕೆ.ವಿ. ಲೈನ್‌ಗಳನ್ನು ಸ್ಥಾಪಿಸುವ ಬಗ್ಗೆ ಯೋಜನೆ ತಯಾರಿಸಲಾಗುತ್ತಿದೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಇಂಥಹ 66 ಕೆ.ವಿ. ಲೈನ್‌ಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.

ಈ 66 ಕೆ.ವಿ. ಲೈನ್ ಸ್ಥಾಪನೆಯಿಂದ ವಿದ್ಯುತ್ ಇಲಾಖೆಗೆ ಆದಾಯ ಬರುವುದಲ್ಲದೆ, ಹಣದ ಉಳಿತಾಯವೂ ಆಗುತ್ತದೆ ಎಂದರು.

ಯಲಹಂಕದಲ್ಲಿ ಇಂದು ಚಾಲನೆ ನೀಡಿರುವ ಉಪಕೇಂದ್ರ ಹಾಗೂ 66 ಕೆ.ವಿ. ಲೈನ್‌ಗಳಿಂದ ಕೆಪಿಟಿಸಿಎಲ್‌ಗೆ ವಾರ್ಷಿಕ 16 ಕೋಟಿ ರೂ. ಉಳಿತಾಯವಾಗುತ್ತದೆ. ಜತೆಗೆ 45 ಕೋಟಿ ರೂ. ಆರ್ಥಿಕ ನಷ್ಟವೂ ನಿಲ್ಲಲಿದೆ ಎಂದರು.

ಭಾರತದಲ್ಲೆ ಪ್ರಪ್ರಥಮ ಬಾರಿಗೆ 66 ಕೆ.ವಿ. ಕವರ್ಡ್ ವಾಹಕ ತಾಂತ್ರಿಕತೆಯನ್ನು ಉಪಯೋಗಿಸಿ 11 ಮೀಟರ್ ಸ್ಟನ್ ಕಂಬದ ಮೇಲೆ ಈ ವಾಹಕವನ್ನು ಎಳೆದು ಹಾಲಿ ಇರುವ ಮಾರ್ಗವನ್ನು ಮುಕ್ತಗೊಳಿಸಿ 220-66 ಕೆ.ವಿ. ಎಂ.ಸಿ.ಎಂ.ವಿ. ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ರಾಜ್ಯದ ಈ ಪ್ರಾಯೋಗಿಕ ಕಾರ್ಯವನ್ನು ಇಡೀ ದೇಶದ ಇಂಧನ ಇಲಾಖೆಯೇ ಗಮನಿಸುತ್ತಿತ್ತು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಹಲವೆಡೆ ಇಂತಹ ಲೈನ್‌ಗಳನ್ನು ಅಳವಡಿಸಲಾಗುವುದು ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

ಈ ಉಪಕೇಂದ್ರ ಹಾಗೂ ಲೈನ್ ನಿರ್ಮಾಣಕ್ಕೆ 60 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅವರು ತಿಳಿಸಿದರು.

ವಿದ್ಯುತ್ ಉಳಿತಾಯದ ಎಲ್‌ಇಡಿ ಬಲ್ಬ್‌ಗಳನ್ನು ಮನೆ ಮನೆಗೆ ವಿತರಿಸುವ ಕಾರ್ಯ ಈ ತಿಂಗಳಿನಿಂದ ಚುರುಕಾಗಲಿದೆ. ಪ್ರಾಯೋಗಿಕವಾಗಿ ಬೆಸ್ಕಾಂ ಕಚೇರಿಯಲ್ಲಿ ಎಲ್ಇಡಿ ಬಲ್ಬ್‌ಗಳ ಮಾರಾಟವನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಖ್ತರ್, ತಾಂತ್ರಿಕ ನಿರ್ದೇಶಕ ಸುಮಂತ್ ಉಪಸ್ಥಿತರಿದ್ದರು.

Write A Comment