ಕರ್ನಾಟಕ

ಹುಚ್ಚೆದ್ದು ಕುಣಿದರು, ಬಿಗಿದು ಅಪ್ಪಿದರು, ಹೊಸ ವರ್ಷ ಸ್ವಾಗತಿಸಿದರು; ಬೆಳಕಿನ ಮಳೆಯಲ್ಲಿ ಸಂಭ್ರಮದ ಹೊಳೆ

Pinterest LinkedIn Tumblr

32

ಬೆಂಗಳೂರು: ರಂಗು ರಂಗಿನ ದೀಪಗಳಿಂದ ಅಲಂಕಾರಗೊಂಡ ಆ ಹಾದಿಗೆ ಯುವ ಸಮೂಹ ಮುತ್ತಿಗೆ ಹಾಕಿತ್ತು. ಅಲ್ಲಿ ಸಾವಿರ ಕೊರಳೊಳಗಿಂದ ನವೋಲ್ಲಾಸದ ಕೇಕೆ ಒಮ್ಮೆಲೇ ಹೊಮ್ಮಿತ್ತು. ಹೊಸ ವರುಷ ಎದುರುಗೊಳ್ಳುವ ಹರುಷದ ಉಬ್ಬರ ಮೇರೆ ಮೀರಿತ್ತು.

ನಗರದಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಬಹುಮೆಚ್ಚಿನ ‘ರಂಗಸ್ಥಳ’ವಾದ ಬ್ರಿಗೇಡ್ ರಸ್ತೆಯ ಜಂಕ್ಷನ್‌ನಲ್ಲಿ ಗುರುವಾರ ರಾತ್ರಿ ಕಂಡ ಚಿತ್ರಣವಿದು.

ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಯುಬಿ ಸಿಟಿ, ಕಮರ್ಷಿ­ಯಲ್ ಸ್ಟ್ರೀಟ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಯ ಅಬ್ಬರದ ಸಂಗೀತ ತೇಲಿಬರುತ್ತಿತ್ತು. ಸಿಂಗಾರಗೊಂಡ ಹೋಟೆಲ್‌, ರೆಸ್ಟೋರೆಂಟ್‌, ಬಾರ್‌, ಕ್ಲಬ್‌, ಪಬ್‌, ಡಿಸ್ಕೋಥೆಕ್‌ಗಳಲ್ಲಿ ಯುವ ಜನರ ಹಾಜರಿಯೇ ಅಧಿಕವಾಗಿತ್ತು.

ವಿವಿಧ ವೇಷಭೂಷಣಗಳನ್ನು ತೊಟ್ಟು ಬಂದವರ ಕೇಕೆ, ಗದ್ದಲದಿಂದ ತುಂಬಿದ ಬ್ರಿಗೇಡ್ ರಸ್ತೆಗೆ ರಾತ್ರಿ 12ಗಂಟೆ ಸಮೀಪಿಸುತ್ತಿದ್ದಂತೆ ಹೊಸದೇ ರಂಗು ಬಂದಿತ್ತು.

ಗಡಿಯಾರದ ಮುಳ್ಳು 12ರ ಅಂಕಿಯ ಮೇಲೆ ಸರಿದದ್ದೇ ತಡ, ಪಟಾಕಿ, ಬಾಣ-ಬಿರುಸಿನ ಬೆಳಕು, ವಾದ್ಯಗಳ ಅಬ್ಬರ ಮುಗಿಲು ಮುಟ್ಟಿತ್ತು. ಅದರ ಹಿಂದೆಯೇ ಇಡೀ ಪರಿಸರದಲ್ಲಿ ‘ಹ್ಯಾಪಿ ನ್ಯೂ ಇಯರ್‌…!’ ಎಂಬ ಹರ್ಷೋದ್ಗಾರ ಅನುರಣಿಸಿತ್ತು.

ತರುವಾಯ ಯುವಸಮೂಹದ ದಣಿವರಿಯದ ಕುಣಿತ. ಆ ಸಂಭ್ರಮದ ಗಳಿಗೆಗಳನ್ನು ಕೆಲವರು ಮೊಬೈಲ್‌ನಲ್ಲಿ ‘ಸೆಲ್ಫಿ’ ತೆಗೆದುಕೊಂಡರು. ಇನ್ನೂ ಕೆಲವರು ತಮ್ಮ ಪ್ರೀತಿಪಾತ್ರರನ್ನು ಮೇಲಕ್ಕೆಸೆದು ಸಂತಸಪಟ್ಟರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಇತರೆಡೆಯೂ ಸಡಗರ: ನಗರದ ಇತರೆ ಪ್ರಮುಖ ಪ್ರದೇಶಗಳಲ್ಲಿ ಕೂಡ ಹೊಸ ವರ್ಷವನ್ನು ಸ್ವಾಗತಿಸುವ ಸಡಗರಕ್ಕೆ ಎಲ್ಲೆ ಇರಲಿಲ್ಲ. ನಗರದ ವಿವಿಧೆಡೆ ಸಂಜೆಯಿಂದಲೇ ಕೇಕ್‌ ಹಾಗೂ ಸಿಹಿ ತಿನಿಸುಗಳ ಖರೀದಿ ಜೋರಿನಿಂದ ನಡೆದಿತ್ತು.

ಕೋರಮಂಗಲ, ಇಂದಿರಾನಗರ, ಜೆ.ಪಿ.ನಗರ, ಜಯನಗರ, ಗಾಂಧಿ ಬಜಾರ್‌, ಚಾಮರಾಜಪೇಟೆ, ಮಲ್ಲೇಶ್ವರದಲ್ಲೂ ಜನ ಪಟಾಕಿ ಸಿಡಿಸಿ ನೂತನ ವರ್ಷವನ್ನು ಸ್ವಾಗತಿಸಿದರು.

ಡಿಜೆ ಸಂಗೀತದ ಮೋಡಿ: ನಗರದ ಪ್ರತಿಷ್ಠಿತ, ಪಂಚತಾರಾ ಹೋಟೆಲ್‌ಗಳಲ್ಲಿ ಹೊಸ ವರ್ಷವನ್ನು ಅದ್ದೂರಿಯಿಂದ ಸ್ವಾಗತಿಸಲು ಯುವ ಜನರಿಗೆ ಇಷ್ಟವಾಗುವ ಡಿಜೆ ನೈಟ್‌, ಥೀಮ್‌ ಪಾರ್ಟಿ, ಬಾಲಿವುಡ್‌ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪೂಜೆ, ಪ್ರಾರ್ಥನೆ: ಹೊಸ ವರ್ಷ ಪ್ರವೇಶವಾಗುತ್ತಿದ್ದಂತೆ ನಗರದ ವಿವಿಧ ದೇವಸ್ಥಾನ, ಚರ್ಚ್‌ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನಾ ಸಭೆಗಳು ನಡೆದವು. ಅರಮನೆ ಮೈದಾನದಲ್ಲಿ ಎಫ್‌ಜಿಎಜಿ ಚರ್ಚ್ ವತಿಯಿಂದ ವಿಶೇಷ ಸಾಮೂಹಿಕ ಪ್ರಾರ್ಥನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಖಾಕಿ ಸರ್ಪಗಾವಲು: ಬ್ರಿಗೇಡ್ ರಸ್ತೆ ಸುತ್ತಲಿನ ಪ್ರದೇಶದಲ್ಲಿ ಭಾರಿ ಬಂದೋಬಸ್ತ್‌ ಮಾಡಲಾಗಿತ್ತು.

Write A Comment