ಕರ್ನಾಟಕ

ನಾಳೆ ಮೇಲ್ಮನೆ ಚುನಾವಣೆಗೆ ಮತದಾನ : 125 ಅಭ್ಯರ್ಥಿಗಳ ಹಣೆಬರಹ ನಿರ್ಧಾರ

Pinterest LinkedIn Tumblr

VIDHANA1

ಬೆಂಗಳೂರು, ಡಿ.26-ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಅಭ್ಯರ್ಥಿಗಳು ಮತದಾರರ ಓಲೈಕೆಗೆ ಕೊನೆ ಗಳಿಗೆಯ ಪ್ರಯತ್ನ ಮಾಡುತ್ತಿದ್ದಾರೆ. ಆಡಳಿತ ಮತ್ತು ಪ್ರತಿ ಪಕ್ಷಗಳ ಆರೋಪ – ಪ್ರತ್ಯಾರೋಪಗಳ ಸುರಿಮಳೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಮತದಾರರ ಮನ ಗೆಲ್ಲುವ ಯತ್ನದಲ್ಲಿ ತೊಡಗಿದ್ದಾರೆ. ತಮ್ಮ ಗೆಲುವಿಗಾಗಿ ಹರ ಸಾಹಸ ಮಾಡುತ್ತಿರುವ ಬಹಳಷ್ಟು ಅಭ್ಯರ್ಥಿಗಳು ಹಣ, ಉಡುಗೊರೆ ಸೇರಿದಂತೆ ನಾನಾ ರೀತಿಯ ಆಮಿಷವೊಡ್ಡುತ್ತಿರುವುದು ಕಂಡುಬಂದಿದೆ. ಹೀಗಾಗಿ ಮತದಾನಕ್ಕೂ ಮುನ್ನ ಹಣ ಹಾಗೂ ಆಮಿಷದ್ದೇ ಕಾರುಬಾರು ನಡೆಯುತ್ತಿದೆ.

ಚುನಾವಣಾ ಕಣದಲ್ಲಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿದಂತೆ 125 ಅಭ್ಯರ್ಥಿಗಳ ಭವಿಷ್ಯವನ್ನು ನಾಳೆ ಮತದಾರರು ನಿರ್ಣಯಿಸಲಿದ್ದಾರೆ. ಆಡಳಿತ- ಪ್ರತಿಪಕ್ಷಗಳಿಗೆ ಸವಾಲಾಗಿರುವ ಈ ಮಿನಿ ಮಹಾ ಸಮರವಾದ ವಿಧಾನ ಪರಿಷತ್ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಚುನಾವಣಾ ಕಣದಲ್ಲಿ 117 ಪುರುಷ ಹಾಗೂ 8 ಮಹಿಳಾ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ನ 21, ಬಿಜೆಪಿಯ 20 ಹಾಗೂ ಜೆಡಿಎಸ್‌ನ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಲ್ಲದೆ, 60 ಮಂದಿ ಪಕ್ಷೇತರರು ಸೇರಿದಂತೆ ಇತರೆ ಆರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಬೆಳಗ್ಗೆ 8ರಿಂದ ಸಂಜೆ ನಾಲ್ಕುಗಂಟೆಯವರೆಗೆ ಮತದಾನ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಶಾಸಕರು ಹಾಗೂ ಸಂಸದರು ಸೇರಿದಂತೆ ಒಟ್ಟು 1.07 ಲಕ್ಷ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಈ ಚುನಾವಣೆಗೆ 168 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದರೂ 43 ಮಂದಿ ಅಭ್ಯರ್ಥಿಗಳು ಕೊನೆ ಗಳಿಗೆಯಲ್ಲಿ ನಾಮಪತ್ರ ವಾಪಸು ಪಡೆದಿದ್ದರು.

ಡಿ.30ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶವೂ ಪ್ರಕಟವಾಗಲಿದೆ. ಈ ಚುನಾವಣೆಯಲ್ಲಿ ಕಲಬುರ್ಗಿ, ವಿಜಯಪುರ, ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು(ನಗರ ಹಾಗೂ ಗ್ರಾಮಾಂತರ)ದ್ವಿ ಸದಸ್ಯ ಕ್ಷೇತ್ರಗಳಾಗಿದ್ದರೆ, ಉಳಿದವು ಏಕ ಸದಸ್ಯ ಕ್ಷೇತ್ರಗಳು. ಮತ ಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮತ ಪತ್ರ, ಮತ ಪೆಟ್ಟಿಗೆಗಳೊಂದಿಗೆ ಇಂದೇ ತೆರಳಿದರು.

Write A Comment