ಕರ್ನಾಟಕ

ಬೆಂಗಳೂರಿನ ಉತ್ತರಾದಿಮಠದ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

Pinterest LinkedIn Tumblr

mutt-new

ಬೆಂಗಳೂರು: ನಗರದ ಬಸವನಗುಡಿಯ ಉತ್ತರಾದಿಮಠದ ಆವರಣದಲ್ಲಿರುವ ಬಾವಿಗೆ ಜಿಗಿದು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಂಡ್ಯ ಮೂಲದ ಸೀತಾಲಕ್ಷ್ಮೀ (45) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ಮಠಕ್ಕೆ ಬಂದಿದ್ದ ಸೀತಾಲಕ್ಷ್ಮೀ ಅವರು 3 ಗಂಟೆ ಸುಮಾರಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯವೂ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದೆ

ಸಂಜೆ 5 ಗಂಟೆಯ ವೇಳೆಗೆ ಬಾವಿಗೆ ನೀರು ತರಲು ಹೋಗಿದ್ದ ಮಠದ ವಿದ್ಯಾರ್ಥಿಗಳು ಶವ ತೇಲುತ್ತಿರುವುದನ್ನು ನೋಡಿ ಮಠದ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದರು. ಮಠದವರು ನಂತರ ಶಂಕರಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕದಳದ ಸಿಬ್ಬಂದಿ ಶವವನ್ನು ಹೊರತೆಗೆದಿದ್ದರು.

ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ, ಶವದ ಗುರುತು ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ಪೊಲೀಸರು ಮಠದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಮೃತ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರನಿಗೆ ಕರೆ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸೀತಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಠಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟ ಪಡಿಸಿದೆ.

Write A Comment