ಕರ್ನಾಟಕ

ನೂತನ ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್, ಜೋಸೆಫ್, ವಿಕ್ರಂಜೀತ್ ಸೇನ್ ಹೆಸರು ಪ್ರಸ್ತಾಪ

Pinterest LinkedIn Tumblr

Justice_ಬೆಂಗಳೂರು, ಡಿ.21: ನೂತನ ಲೋಕಾಯುಕ್ತ ಹುದ್ದೆಗೆ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್, ನ್ಯಾಯಮೂರ್ತಿಗಳಾದ ಸಿರಿಯಾಕ್ ಜೋಸೆಫ್ ಹಾಗೂ ವಿಕ್ರಂಜಿತ್ ಸೇನ್ ಅವರ ಹೆಸರುಗಳು ಬಲವಾಗಿ ಕೇಳಿಬಂದಿದ್ದು, ಆ ಹುದ್ದೆಗೆ ‘ಅರ್ಹ’ರನ್ನು ನೇಮಿಸಲು 2016ರ ಜನವರಿ ಮೊದಲ ವಾರದಲ್ಲಿ ಸಭೆ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಭ್ರಷ್ಟಾಚಾರ ಆರೋಪ ಹಾಗೂ ‘ಪದಚ್ಯುತಿ’ ಪ್ರಸ್ತಾವದ ಹಿನ್ನೆಲೆಯಲ್ಲಿ ತನ್ನ ಸ್ಥಾನಕ್ಕೆ ನ್ಯಾ.ಭಾಸ್ಕರ್ ರಾವ್ ರಾಜೀನಾಮೆ ನೀಡಿರುವುದರಿಂದ ಲೋಕಾಯುಕ್ತ ಹುದ್ದೆ ಖಾಲಿಯಾಗಿದೆ. ಲೋಕಾಯುಕ್ತ ಸ್ಥಾನಕ್ಕೆ ದಕ್ಷ ಹಾಗೂ ಸಮರ್ಥರನ್ನು ನೇಮಿಸಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ.

ಲೋಕಾಯುಕ್ತ ಹುದ್ದೆಗೆ ಕರ್ನಾಟಕ ಮೂಲದವರಾದ ನ್ಯಾ.ಎಸ್.ಆರ್. ನಾಯಕ್ ಅವರ ಹೆಸರು ಕೇಳಿಬಂದಿದ್ದು, ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ನಾಯಕ್, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೆಳವರ್ಗಕ್ಕೆ ಸೇರಿದ ಅವರನ್ನು ಹುದ್ದೆಗೆ ನೇಮಿಸಲು ಸಿಎಂ ಒಲವು ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.

ಈ ಮಧ್ಯೆಯೇ ಎಸ್.ಆರ್.ನಾಯಕ್ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯ ಮೂರ್ತಿಗಳಾಗಿ ಸೇವೆ ಸಲ್ಲಿಸಿದ ವಿಕ್ರಮ್‌ಜಿತ್ ಸೇನ್ ಮತ್ತು ಸಿರಿಯಾಕ್ ಜೋಸೆಫ್ ಅವರ ಹೆಸರುಗಳು ಲೋಕಾಯುಕ್ತ ಹುದ್ದೆಗೆ ಪರಿಶೀಲನೆಯಲ್ಲಿವೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಪಶ್ಚಿಮ ಬಂಗಾಲ ಮೂಲದ ವಿಕ್ರಂಜಿತ್ ಸೇನ್ ಹೊಸದಿಲ್ಲಿಯಲ್ಲಿ ವ್ಯಾಸಂಗ ಮಾಡಿ ಅಲ್ಲಿಯೇ ವೃತ್ತಿ ಜೀವನ ಆರಂಭಿಸಿದ್ದಾರೆ. ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 2015ರ ಡಿಸೆಂಬರ್ 31ಕ್ಕೆ ಅವರು ನಿವೃತ್ತಿ ಹೊಂದಲಿದ್ದಾರೆಂದು ಹೇಳಲಾಗಿದೆ.

ಕೇರಳ ಮೂಲದ ಸಿರಿಯಾಕ್ ಜೋಸೆಫ್ 2006ರ ಜನವರಿಯಿಂದ 2008ರ ಜುಲೈ 6ರ ವರೆಗೆ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದು, ಕೇರಳ, ಹೊಸದಿಲ್ಲಿ ಹೈಕೋರ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ಗೊತ್ತಾಗಿದೆ.

Write A Comment