ಕರ್ನಾಟಕ

ಬೆಳೆ ನಷ್ಟಕ್ಕೆ ಪರಿಹಾರ ಕೋರಿ ಕೇಂದ್ರಕ್ಕೆ ಮತ್ತೊಮ್ಮೆ ಪ್ರಸ್ತಾವನೆ

Pinterest LinkedIn Tumblr

bele

ಬೆಂಗಳೂರು, ಡಿ.18- ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಸುಮಾರು 23ಸಾವಿರ ಕೋಟಿ ರೂ.ಗಳಷ್ಟು ಬೆಳೆ ಹಾನಿಯಾಗಿದೆ.  ಕೇಂದ್ರ ಸರ್ಕಾರ ಇದಕ್ಕೆ ಪೂರಕವಾಗಿ ಪರಿಹಾರ ಕಾರ್ಯಗಳಿಗೆ ಆರ್ಥಿಕ ನೆರವು ನೀಡಬೇಕೆಂದು ರಾಜ್ಯ ಸರ್ಕಾರ ಎರಡನೇ ಬಾರಿಗೆ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಿದೆ.

ಈ ಮೊದಲು ಮೂರ್ನಾದಲ್ಕು ಬಾರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೃಷಿ ಸಚಿವರು, ಗೃಹ ಸಚಿವರು, ಪ್ರಧಾನಿ ಸೇರಿದಂತೆ ಎಲ್ಲಾ ಹಂತದಲ್ಲೂ ಆರ್ಥಿಕ ಅನುದಾನಕ್ಕೆ ಮನವಿ ಮಾಡಲಾಗಿದೆ.  ಮುಂಗಾರು ಮಳೆ ಕೊರತೆಯಿಂದ ಸುಮಾರು 16ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 3800 ಕೋಟಿ ರೂ.ಗಳ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.

ಆದರೆ, ಕೇಂದ್ರ ಸರ್ಕಾರ ಸುಮಾರು 6 ತಿಂಗಳ ನಂತರ 1540 ಕೋಟಿ ರೂ. ನೆರವು ನೀಡುವುದಾಗಿ  ಹೇಳಿದೆ. ಆದರೆ, ಇನ್ನೂ ಅನುದಾನ ಬಂದಿಲ್ಲ.

ಹಿಂಗಾರು ಮಳೆ ಕೊರತೆಯಿಂದ ಸುಮಾರು 7ಸಾವಿರ ಕೋಟಿ ರೂ.  ಬೆಳೆ ನಷ್ಟವಾಗಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಂದ ಒಟ್ಟು 23 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಮಾರ್ಗಸೂಚಿಯಂತೆ ಶೇ.30ರಷ್ಟು ಪರಿಹಾರ ನೀಡುವುದಾದರೂ, ರಾಜ್ಯ ಸರ್ಕಾರಕ್ಕೆ  6ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಆರ್ಥಿಕ ನೆರವು ಸಿಗಬೇಕಿದೆ.  ಕೇಂದ್ರ ಸರ್ಕಾರ ಈಗ ಘೋಷಿಸಿರುವ 1540 ಕೋಟಿ ರೂ. ಯಾವುದಕ್ಕೂ ಸಾಲುವುದಿಲ್ಲ. ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ಸೋಮವಾರ ಅಥವಾ ಮಂಗಳವಾರ ಹೊಸದಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Write A Comment