ಕುಮಾರ ತಂದುಕೊಟ್ಟ ತುಂಬ್ರಿ ಹಾಗೂ ಹಲಗೆಹಣ್ಣಲ್ಲಿ ಮೊದಲು ಯಾವುದನ್ನು ತಿನ್ನಲಿ ಎಂದು ನೋಡತೊಡಗಿದೆ. ಹಲಗೆಹಣ್ಣು ಬಾಯಲ್ಲಿ ನೀರೂರಿಸಿತ್ತು. ಎಷ್ಟೆಂದರೂ ಹುಳಿ- ಸಿಹಿ ಹಣ್ಣಲ್ಲವೆ? ಐದೋ ಆರೋ ತಿಂದಂತೆ ಹುಳಿಯಿಂದಾಗಿ ನಾಲಗೆ ಚುರುಗುಟ್ಟತೊಡಗಿತು. ತುಂಬ್ರಿ ಹಣ್ಣಿನತ್ತ ಕೈ ಹೋಯಿತು. ಇದು ಅಪ್ಪಟ ಸಿಹಿ, ರಸಭರಿತ. ನಾಲ್ಕು ಅಥವಾ ಎರಡು ಬೀಜಗಳು. ಬೀಜದ ಸುತ್ತಲಿನ ಕವಚ ಇನ್ನಷ್ಟು ರುಚಿ. ನಾಳೆಗೆ ಒಂದಿಷ್ಟು ಇರಲಿ ಎಂದು ತೆಗೆದಿಟ್ಟೆ. ಹಲಗೆಹಣ್ಣು ಕೊಯ್ದಮೇಲೆ ಎರಡೇ ದಿನ ಬಾಳಿಕೆ. ತುಂಬ್ರಿ ನಾಲ್ಕು ದಿನ ಹೆಚ್ಚು ಉಳಿಯುತ್ತದೆ. ತುಂಬ್ರಿಯನ್ನು ಅಕ್ಕಿಡಬ್ಬದಲ್ಲಿ ಹಾಕಿಟ್ಟರೆ ಇನ್ನಷ್ಟು ದಿನ ಬಾಳಿಕೆ ಗ್ಯಾರೆಂಟಿ. ಬೇಸಗೆ ಹೆಚ್ಚಿದಂತೆ ಹಣ್ಣುಗಳ ಸಂಖ್ಯೆಯೂ ಅಧಿಕ.
ಕೌಳಿಹಣ್ಣು, ಕಾಡುತುಂಬ್ರಿ, ಗುಡ್ಡೇಗೇರು, ಮುಳ್ಳಣ್ಣು, ಬಿಕ್ಕೆಹಣ್ಣು, ದಡಸಲು ಹಣ್ಣು, ಕಣಗಿಲೆ, ಅತ್ತಿಹಣ್ಣು, ಕಂಬ್ಳಿಹುಳದ ಹಣ್ಣು, ಸಿಂಬಳದಣ್ಣು, ಹೊಳೆದಾಸವಾಳದ ಹಣ್ಣು, ಸಂಡಿಗೆ ಹಣ್ಣು, ಗೇರುಹಣ್ಣು, ನೆಲ್ಲಿಕಾಯಿ, ಹುಣಸೆಹಣ್ಣು, ಬೀಜದ ಪೇರಲೆ, ಬಿಂಬುಳಿ, ಕರಿಮಾದಲ ಹೀಗೆ ಹುಡುಕುತ್ತಾ ಹೊರಟರೆ ಕಾಡು, ಹಿತ್ತಲು, ಕೊಪ್ಪಲು, ತೋಟ, ಬ್ಯಾಣ, ಖುಷ್ಕಿ, ಕೆರೆ-ಹೊಳೆ ದಂಡೆ ಎಲ್ಲೆಲ್ಲೂ ಹಣ್ಣುಗಳ ತೇರು ಹೊತ್ತ ಗಿಡಮರಗಳು ಸಿಗುತ್ತವೆ. ತಿಂದೂ ತಿಂದೂ ಸಾಕಾಗಿ ಹಿಂದಿರುಗುವ ಸಮಯಕ್ಕೆ ಸೂರ್ಯ ಪಡುವಣದಲ್ಲಿ ಪವಡಿಸಿ ಸಾಕಷ್ಟು ಹೊತ್ತಾಗಿರುತ್ತದೆ. ಕಾಡು ನುಗ್ಗುವಾಗ ಸಿಕ್ಕ ದಾರಿ ಹಿಂತಿರುಗಲು ಸಿಗದೆ ಪಡಿಪಾಟಲು. ಮೇಯಲು ಬಂದ ಮಲೆನಾಡುಗಿಡ್ಡದ ಬಾಲ ಹಿಡಿದೋ, ಗಂಟೆಯ ಸದ್ದು ಆಲಿಸಿ ಊರದಾರಿ ಹಿಡಿದು ಮನೆ ಸೇರುವ ಹೊತ್ತಿಗೆ ರಾತ್ರಿಯ ಎಂಟು ದಾಟಿದ್ದೂ ಉಂಟು.
ಬೆಳಗಿನ ನಾಷ್ಟಾ ಹಣ್ಣು!
‘ನಮ್ಮಲ್ಲಿ ಇನ್ನೊಂದು ಹಸಿರುಕ್ರಾಂತಿ ನಡೆಯುವುದೇ ಆದರೆ ಅದು ತೋಟಗಾರಿಕೆ ಬೆಳೆಗಳಲ್ಲಿ. ಅದರಲ್ಲೂ ಹಣ್ಣಿನ ಬೆಳೆಗಳದ್ದು’ ಎಂದು ಧಾರವಾಡದ ‘ಸ್ಕೋಪ್’ ಸಂಸ್ಥೆಯ ಅಧ್ಯಕ್ಷ ಡಾ. ಪ್ರಕಾಶ್‌ಭಟ್ ಹೇಳುತ್ತಾರೆ. ‘ಕಡಿಮೆ ಮಾನವ ಶ್ರಮ, ಹೆಚ್ಚು ಫಸಲು. ಆಹಾರವಾಗಿ ಎಲ್ಲ ಜೀವಿಗಳಿಗೂ ಉಪಯುಕ್ತ. ನೋಡಿ. ನಮ್ಮದು ಧಾರವಾಡದ ಬಡಾವಣೆಯಲ್ಲಿರುವ ಮನೆ. ಅಂಗಳದಲ್ಲಿ ಬೆಣ್ಣೆಹಣ್ಣಿನ ಮರ, ಕೆಂಪು ಸ್ಟಾರ್ ಆ್ಯಪಲ್, ಪೇರಲ, ಬಾಳೆಮರಗಳಿವೆ. ಪಕ್ಕದ ಬೆಟ್ಟದಲ್ಲಿ ಕವಳಿ, ಬಿಕ್ಕೆ ಮುಂತಾದವುಗಳೂ ಇವೆ. ಹೆಚ್ಚಿನ ದಿನಗಳಲ್ಲಿ ನಮ್ಮ ಬೆಳಗ್ಗಿನ ನಾಷ್ಟಾ ಕೇವಲ ಹಣ್ಣುಗಳು ಮಾತ್ರ’. ಬೈಫ್ ಸಂಸ್ಥೆಯಲ್ಲಿದ್ದಾಗ ಧಾರವಾಡದ ಸುತ್ತಲಿನ 22 ಹಳ್ಳಿಗಳನ್ನು ಬರಮುಕ್ತಗೊಳಿಸಿದ ಪ್ರಕಾಶ್‌ಭಟ್‌ರವರಿಗೆ ಈಗಲೂ ಹಸಿರುಪಯಣ ತುಂಬಾ ಇಷ್ಟ. ಕೇವಲ ಅನ್ನ, ರೊಟ್ಟಿಯಲ್ಲದೇ ಹಣ್ಣು ತರಕಾರಿಗಳ ಕಡೆ ಸಾಗುವುದೇ ಆರೋಗ್ಯ, ಫಿಟ್‌ನೆಸ್ ಉಳಿಸಿಕೊಳ್ಳಲು ಇರುವ ಸೂಕ್ತ ದಾರಿ ಎನ್ನುವ ಅಭಿಪ್ರಾಯ ಅವರದು.
ಇದು ಮೂಡಬಿದ್ರೆಯಲ್ಲಿ ತೋಟ ಮಾಡಿ ನೂರಾರು ಜಾತಿಯ ಹಣ್ಣುಗಳನ್ನು ಈಗ್ಗೆ 50 ವರ್ಷಗಳ ಹಿಂದೆಯೇ ತುಂಬಿದ ಸೋನ್ ಸೋದರರ ಮಹಾನ್ ಕನಸು- ನನಸು. ರಂಬುಟಾನ್ ಹಣ್ಣಿನ ರುಚಿ ತಿಳಿದ ಎಲ್.ಸಿ. ಸೋನ್ಸ್‌ರವರು ಹಠ ಹಿಡಿದು ಮಲೇಶಿಯಾ ವಿದ್ಯಾರ್ಥಿಗಳ ಬೆನ್ನು ಬಿದ್ದರು. ಬೀಜ ತರಿಸಿ, ಕೃಷಿ ಕ್ರಮ ತಿಳಿದು ಬೆಳೆದರು. ಇವರ ‘ಬಾಸೆಲ್ ಮಿಷನ್ ಫಾರ್ಮ್’ನ ರಂಬುಟಾನ್ ಮಾರುಕಟ್ಟೆಗೆ ಬರುವ ಮೊದಲೇ ವ್ಯಾಪಾರವಾಗಿರುತ್ತದೆ. ‘ಡೋರಿಯನ್’ ಎಂಬ ಕೆಟ್ಟ ವಾಸನೆಯ, ಒಮ್ಮೆ ತಿಂದರೆ ಮೂಗು ಮುಚ್ಚಿಯಾದರೂ ತಿನ್ನಲೇಬೇಕೆಂದು ಚಟ ಹುಟ್ಟಿಸುವ ಹಣ್ಣೂ ಇವರಲ್ಲಿದೆ.
ಹಳೆಹಣ್ಣುಗಳ ಸವಿನೆನಪು
ನಮ್ಮ ನೇರಳೆ, ಬಿರಳೆ, ಜಂಬುನೇರಳೆ, ನಂಜಲು, ಅಂಕೋಲೆ, ಸಂಪಿಗೆ ಹಣ್ಣುಗಳಿಗೂ ಹೀಗೇ ಚಟ ಹುಟ್ಟಿಸುವಷ್ಟು ರುಚಿ ಇದೆ. ನೇರಳೆಯ ಶ್ರಾಯದಲ್ಲಿ ನಾಲಿಗೆ ನೀಲಿಗಟ್ಟುವುದನ್ನು ಮೆಳ್ಳೆಗಣ್ಣಿಂದ ನೋಡಿಕೊಳ್ಳುವುದು, ಇನ್ನಷ್ಟು ತಿನ್ನುವುದು, ತಿಂದೂ ತಿಂದೂ ಗಂಟಲು ನೋವು ಬಂದಾಗ ತಿಂದಿದ್ದು ಹೆಚ್ಚಾಯಿತಲ್ಲ ಎಂದು ಉಪಾಯ ಹುಡುಕುವುದು. ಅಜ್ಜಿ ಕೊಡುವ ಹುಣಸೆಹಣ್ಣು ತಿಂದು ಹೋಗಲಾಡಿಸಿಕೊಳ್ಳುವುದು. ಅತಿಯಾಗಿ ಕೌಳಿಹಣ್ಣು ತಿಂದು ಮರುದಿನ ಕೆಂಪುಮಲ ಬಂತೆಂದು ಗೆಳೆಯರೊಂದಿಗೆ ಗುಟ್ಟಾಗಿ ವಿಷಯ ಹಂಚಿಕೊಳ್ಳುವುದು. ಆರಿಸಿ ತಂದ ನಂಜಲುಹಣ್ಣು, ದಡಸಲು ಹಣ್ಣನ್ನು ಜೇಬಿನಲ್ಲಿಟ್ಟುಕೊಂಡು ಪರಸ್ಪರ ಮತ್ತ್ಯಾವುದೋ ಹಣ್ಣಿನೊಂದಿಗೆ ವಿನಿಮಯ. ಕೆಂಪಾದ, ಕಪ್ಪಾದ ಜೇಬು ನೋಡಿ ತೊಳೆದರೂ ಬಣ್ಣ ಹೋಗದೇ ಕಲೆ ಉಳಿಯಿತೆಂದು ಅಮ್ಮ ನೀಡಿದ ಪೆಟ್ಟುಗಳೆಲ್ಲಾ ಹಳೆಯ ನೆನಪು.
ಒಮ್ಮೆ ಪಕ್ಕದ ಮನೆಯ ನಾಗಣ್ಣ, ಸೂರಣ್ಣ ಇಬ್ಬರೂ ಗುಡ್ಡೇಗೇರು ಹಣ್ಣು ಕೊಯ್ಯಲು ಕಾಡಿಗೆ ಹೋಗಿದ್ದರು. ಸತಿ ಹಾಗೂ ನಾನು ಚಿಕ್ಕವರೆಂದು ದಾರಿಯಲ್ಲಿ ನಮ್ಮ ಕಣ್ಣುತಪ್ಪಿಸಿ ನಾಪತ್ತೆಯಾಗಿದ್ದರು. ಕಾಡತುಂಬಾ ಇರುವ ಗುಡ್ಡೇಗೇರಿನ ಹಣ್ಣಿನ ಮರಗಳು. ಇದರ ಹಸಿಹಣ್ಣನ್ನು ಹೆಚ್ಚು ತಿನ್ನಲಾಗದು. ಚೊಗರು ಹೆಚ್ಚು. ಒಣಗಿಸಿದರೆ ರುಚಿ ಜಾಸ್ತಿ. ಅದರಲ್ಲೂ ಆಲೆಮನೆಯಲ್ಲಿ ಬೆಲ್ಲ ಕಾಯಿಸುವಾಗ ಕೊಪ್ಪರಿಗೆಗೆ ಹಾಕಿ ತೆಗೆದು ತಿಂದರೆ ಇನ್ನಷ್ಟು ರುಚಿ. ಇಬ್ಬರೂ ಹಿಂತಿರುಗಿ ಬರುವಾಗ ರಾತ್ರಿ ಏಳುಗಂಟೆ. ನಾಗಣ್ಣ ಎರಡು ಮಾರು ಉದ್ದದ ಗುಡ್ಡೇಗೇರು ಹಣ್ಣಿನ ಸರ ಮಾಡಿಕೊಂಡು ಬಂದಿದ್ದ. ಅವನಪ್ಪ ಮಾತ್ರ ಕೆಂಗಣ್ಣು ಮಾಡಿಕೊಂಡು ಬಾಗಿಲಿನಲ್ಲಿ ನಿಂತಿದ್ದರು. ಅದೇ ಸರದಿಂದ ಕಂಬಕ್ಕೆ ಕಟ್ಟಿ, ನಾಲ್ಕು ಪೆಟ್ಟುಕೊಟ್ಟು ಎರಡು ತಾಸು ನಿಲ್ಲಿಸಿದ್ದರು. ‘ನಿಮ್ಮಪ್ಪ ಸಹ ಹೀಗೆ ಮಾಡುತ್ತಾರೆ’ ಎಂದು ಅಮ್ಮ ಅದನ್ನು ತೋರಿಸಿದ್ದಳು. ಯಾವುದೇ ಹಣ್ಣೂ ಸುಲಭದಲ್ಲಿ ದಕ್ಕದು.
‘ಮೈನರ್ ಫ್ರೂಟ್ಸ್’ ಕುರಿತು ಮೇಜರ್ ಚಳವಳಿ
ನಮ್ಮಲ್ಲಿ ಭವಿಷ್ಯದ ಭರವಸೆಯ ಹಣ್ಣುಗಳನ್ನು ‘ಮೈನರ್ ಫ್ರೂಟ್’ ಎಂದು ಪರಿಗಣಿಸಿ ಉಪೇಕ್ಷಿಸುತ್ತೇವೆ. ಬಾಲ್ಯದಲ್ಲಿ ಇಷ್ಟಪಟ್ಟು ತಿಂದಿದ್ದನ್ನು ನಮ್ಮ ಮಕ್ಕಳಿಗೆ ತೋರಿಸಿ ತಿನ್ನಿಸಬೇಕೆಂಬುದನ್ನೂ ಸಹ ಮರೆಯುತ್ತೇವೆ ಅಥವಾ ದೂರ ಇಡುತ್ತೇವೆ. ಕೊನೇಪಕ್ಷ ಅವುಗಳಲ್ಲಿರುವ ಪೋಷಕಾಂಶಗಳು, ಔಷಧೀಯ ಗುಣಗಳನ್ನೂ ಸಹ ಗಮನಿಸುವುದಿಲ್ಲ. ಮುರುಗ (ಪುನರ್ಪುಳಿ)ಯಲ್ಲಿ ವಾಂತಿ, ಭೇದಿ, ಹೊಟ್ಟೆನೋವು, ಗ್ಯಾಸ್‌ಟ್ರಬಲ್ ಮುಂತಾದ ಕಾಯಿಲೆಗಳಿಗೆ ಪರಿಹಾರವಿದೆ. ಮೌಲ್ಯವರ್ಧನೆ ಮಾಡಲಾಗುತ್ತಿದೆ. ಆದರೂ ಮೈನರ್‌ನಿಂದ ಮೇಜರ್ ಆಗಿಯೇ ಇಲ್ಲ. ಹಣ್ಣುಗಳ ಪ್ರೇಮಿ, ಕೆನ್‌ಲವ್ ಈ ಕುರಿತು ಹವಾಯಿಯಲ್ಲೊಂದು ದೊಡ್ಡ ಕ್ರಾಂತಿಯನ್ನೇ ಮಾಡಿದ್ದನ್ನು ನಮಗೆಲ್ಲಾ ಪತ್ರಕರ್ತ ಶ್ರೀಪಡ್ರೆಯವರು ಪರಿಚಯಿಸಿಕೊಟ್ಟರು.
ಹವಾಯಿ ಮತ್ತು ಭಾರತ ಎರಡೂ ಸರಿಸುಮಾರು ಒಂದೇ ಅಕ್ಷಾಂಶದಲ್ಲಿರುವ ಎರಡೂ ದೇಶಗಳು. ಹಣ್ಣುಗಳನ್ನು ಬೆಳೆಯಲು ಹಾಗೂ ಈಗಿರುವ ಹಣ್ಣುಗಳನ್ನು ಜನಪ್ರಿಯಗೊಳಿಸಲು ಸುಲಭಸಾಧ್ಯ. ಹವಾಯಿಯಲ್ಲಿ ಮೈಸೂರು ರಾಸ್‌ಬೆರ್ರಿ ಅತಿಪ್ರಿಯ ಹಣ್ಣು, ಅಡುಗೆಗೂ ಬಳಸುತ್ತಾರೆ. ಇದರ ಮೌಲ್ಯವರ್ಧಿತ ಉತ್ಪನ್ನಗಳ ಸರಮಾಲೆಯೇ ಇದೆ. ಕೃಷಿಕರಿಗೆ ಸದಾ ನಿಶ್ಚಿತ ವರಮಾನ ತರುವ ಹಣ್ಣು. ಇದರ ಮೂಲ ಊರಾದ ಕೊಡಗಿನವರನ್ನು ಕೇಳಿ; ‘ಇದೊಂದು ಮುಳ್ಳುಕಂಟಿ ಕಳೆ ತರಹ. ಕೃಷಿ ಮಾಡಿದರೆ ಗಿಡ ಹುಟ್ಟುವುದಿಲ್ಲ. ಇದನ್ನು ಕೊಂಡು ತಿನ್ನುವವರಾರು?’ ಎನ್ನುವ ಪ್ರಶ್ನೆ ಎತ್ತುತ್ತಾರೆ. ನಮ್ಮಲ್ಲೂ ತಿನ್ನುವ ಕುರಿತಾದ ದೊಡ್ಡ ಚಳವಳಿ ನಡೆಯಬೇಕಿದೆ.
ಗೋಬಿ ತಿನ್ನೋ ಬದಲು ಸೇಬು ತಿನ್ನಿ
ಕೆನ್‌ಲವ್‌ರವರ ’12 ಟ್ರೀಸ್ ಪ್ರೊಜೆಕ್ಟ್’ ಹಾಗೂ ‘ಬೈ ಲೋಕಲ್’, ‘ಈಟ್ ಲೋಕಲ್’ ಚಳವಳಿಗಿಂತಲೂ ತೀವ್ರವಾಗಿ ಇರಬೇಕು. ಹುಬ್ಬಳ್ಳಿ ಬಸ್‌ಸ್ಟ್ಯಾಂಡ್ ಬಳಿ ದೋರಹುಣಸೆ ಮಾರಲು ಕುಳಿತ ಅಜ್ಜಿಯ ಬುಟ್ಟಿ ಸಂಜೆಯಾದರೂ ಖಾಲಿಯಾಗದೇ ಇರುತ್ತದೆ. ಶಿವಮೊಗ್ಗದಲ್ಲಿ ಚೌತಿ ಮರುದಿನ ಚಳ್ಳೆಕಾಯಿ, ಹಣ್ಣುಗಳನ್ನು ಹರಡಿಕೊಂಡು ಕುಳಿತ ಹಳ್ಳಿಗನನ್ನು ಹೊಸ ಸೊಸೆಯಂದಿರು, ಯುವಪೀಳಿಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ನೋಡಿದ್ದರೆ ಬೇಸಿಗೆಯ ನೀರಿನ ದಾಹವನ್ನು ದೋರಹುಣಸೆ ತಣಿಸುತ್ತಿತ್ತು. ಶೀತದಿಂದ ಮೈಬಿರಿಯುವಿಕೆ, ಕಾಲು ಸೀಳುವುದನ್ನು ಚಳ್ಳೆಕಾಯಿ ಉಪ್ಪಿನಕಾಯಿ ತಡೆಯುತ್ತಿತ್ತು. ಅದೇ ಹಣ್ಣಿನ ಮಾರಾಟಗಾರರ ಪಕ್ಕ ಗಾಡಿ ಇಟ್ಟುಕೊಂಡು ಕರಿದ ಎಣ್ಣೆ, ನಲ್ಲಿ ನೀರು, ರಸ್ತೆ ಧೂಳು ಹೀಗೆ ಗಲೀಜಿನ ಪರಮಾವಧಿಯಲ್ಲಿ ಸಿದ್ಧಪಡಿಸಿದ ಗೋಬಿ, ಪಾನಿಪುರಿಗಳು ಯುವಪೀಳಿಗೆಯ ನಿತ್ಯದ ಆಹಾರವಾಗಿವೆ.
ಶಬರಿಯು ಕಾಡಿನಹಣ್ಣುಗಳನ್ನು ರಾಮ ಬರುವನೆಂದು ದಿನಾ ಸಂಗ್ರಹಿಸುತ್ತಿದ್ದಳಂತೆ. ಅದರಲ್ಲಿ ಒಂದು ಫಲವು ರಾಮನಿಗೆ ಸೀತೆಯ ನೆನಪನ್ನು ತಂದಿದ್ದಕ್ಕಾಗಿ ‘ಸೀತಾಫಲ’ವೆಂಬ ಹೆಸರು ಬಂತು ಎಂಬುದು ಪುರಾಣ. ಆದರೆ ಹಂಪಿ, ಆಂಧ್ರದ ಗುಡ್ಡಗಳಲ್ಲಿ ಬೆಳೆಯುತ್ತಿದ್ದ ಇದನ್ನು ಕೊಯ್ದು ತಂದು ಮಾರುವ ದೊಡ್ಡ ಸಮೂಹವೇ ಇದೆ. ಆ ಸಮುದಾಯದ ಮಹಿಳೆಯರ ಆದಾಯವೇ ಸೀತಾಫಲದಿಂದ ಸಿಗುವ ಹಣ. ಕ್ರಮೇಣ ಇದೀಗ ಕೃಷಿ ಹೊಲ ತೋಟಗಳಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಸೇಬು, ಕಿತ್ತಳೆ, ಮೂಸಂಬಿಗಳೊಂದಿಗೆ ಕುಳಿತುಕೊಳ್ಳತೊಡಗಿದೆ. ಇದೇ ಭಾಗ್ಯ ನೇರಳೆಹಣ್ಣಿಗೂ ದಕ್ಕಿದೆ. ಆದರೆ ಇದಕ್ಕಾಗಿ ದಶಕಗಳಷ್ಟು ಕಾಲ ಕಳೆದಿದೆ. ಇಷ್ಟಾದರೂ ನಮ್ಮಲ್ಲಿ ಯಥೇಚ್ಛವಾಗಿ ಬಿಡುವ ಹಲಸಿಗೆ ಇಷ್ಟು ಮಾನ್ಯತೆ ದೊರಕಿಲ್ಲ.
ಹಣ್ಣುಗಳಿಂದ ಹೆಲ್ತ್
ಇನ್ನೂ ರಸ್ತೆಯ ಪಕ್ಕವೇ ರಾಶಿ ಬಿದ್ದಿರುತ್ತವೆ. ಎಷ್ಟೋ ಹಣ್ಣುಗಳು ಮರದಲ್ಲೇ ಕೊಳೆತುಹೋಗುತ್ತವೆ. ಮಂಗಗಳ ಪಾಲಾಗುತ್ತವೆ. ಎಷ್ಟೆಲ್ಲಾ ಕಾಡುಪ್ರಾಣಿಗಳು ಇಂತಹ ಹಣ್ಣುಗಳನ್ನೇ ಅವಲಂಬಿಸಿವೆ ಗೊತ್ತೇ? ಬೇಸಗೆಯಲ್ಲಿ ಬಾಯಾರಿಕೆ ನೀಗಿಕೊಳ್ಳಲು ಜಿಂಕೆಗಳು ನೆಲ್ಲಿ ಹಾಗೂ ಕಣಗಿಲಹಣ್ಣುಗಳನ್ನು ಅರಸಿಹೋಗುತ್ತವೆ. ಇವುಗಳಿಗೆ ಮರದಿಂದ ಹಣ್ಣು ಕಿತ್ತುಕೊಡುವ ಉಪಕಾರಿಗಳು ಯಾರು ಬಲ್ಲಿರಾ?! ಕಪಿಸೈನ್ಯ!! ಅತ್ತಿ, ಆಲ, ಗೋಳಿ ಮುಂತಾದ ಮರಗಳು ಹಣ್ಣು ಬಿಟ್ಟಾಗ ಹಕ್ಕಿಗಳ ದಿಬ್ಬಣವೇ ಬರುತ್ತವೆ. ಇವೇ ಬೀಜಪ್ರಸಾರಕರೂ ಹೌದು. ಕಾಡುಹಂದಿಗೆ ಅಮಟೆ, ಬಾವಲಿಗಳಿಗೆ ಗೋಣಿ, ಹಣ್ಣುಗುಟರಕ್ಕೆ ಪೇರಲೆ, ಅಳಿಲುಗಳಿಗೆ ಕರಿಮಾದಲ, ನರಿಗಳಿಗೆ ಬಿಲ್ವ ಹೀಗೆ ಒಂದೊಂದು ಹಣ್ಣು ಒಂದೊಂದು ಪ್ರಾಣಿಗಳಿಗೆ ಇಷ್ಟ. ಪ್ರಾಣಿ, ಪಕ್ಷಿ, ಕೀಟಗಳು ಈ ಹಣ್ಣುಗಳನ್ನು ಕೇವಲ ಆಹಾರವಾಗಷ್ಟೇ ಅಲ್ಲ, ಔಷಧಿಯಾಗಿಯೂ ಬಳಸುತ್ತವೆ.
ನಮ್ಮ ಆಹಾರದಲ್ಲಿ ಹಣ್ಣುಗಳಿರಲೇಬೇಕು. ತಜ್ಞರ ಅಭಿಪ್ರಾಯದಂತೆ ಮಧ್ಯಮವರ್ಗದ ದಿನದ ಸರಾಸರಿ ಹಣ್ಣುಗಳ ಸೇವನೆ 16 ಗ್ರಾಂ ಮಾತ್ರ. ಇದು 85 ಗ್ರಾಂಗಳಷ್ಟಾದರೂ ಆದರೆ ಇಂದಿನ ಕಾಯಿಲೆಗಳಾದ ರಕ್ತದೊತ್ತಡದಿಂದ ಕ್ಯಾನ್ಸರ್‌ವರೆಗಿನ ಕಾಯಿಲೆಗಳು ದೂರವಿರುತ್ತವೆ. ಹಣ್ಣುಗಳಲ್ಲಿರುವ ಜೀವಸತ್ವಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ನಾರಿನ ಪದಾರ್ಥಗಳು ಜೀರ್ಣಶಕ್ತಿಯನ್ನು ಸರಿಪಡಿಸುತ್ತವೆ. ಮೂಳೆಗಳ ಬೆಳವಣಿಗೆ ಹೆಚ್ಚಿಸಬೇಕಾದರೆ ದಡಸಲು, ತುಂಬ್ರಿಹಣ್ಣುಗಳನ್ನು, ಹಸಿವುಹೀನತೆ, ಊತಗಳು, ಉಬ್ಬಿದ ಮೂಗು, ಚರ್ಮದಲ್ಲಿ ಹೊರಪೆಗಳೆದ್ದರೆ ಬಿಲ್ವ, ಬೇಲ, ಪ್ಲಮ್, ನೇರಳೆ, ಗೇರು ಮುಂತಾದವುಗಳು. ಹಲ್ಲು ಒಸಡಲ್ಲಿ ರಕ್ತ ಬರುತ್ತಿದ್ದರೆ ನೆಲ್ಲಿಕಾಯಿ, ಬೋರೆಹಣ್ಣುಗಳು ದೃಢತೆ ನೀಡುತ್ತವೆ. ಲಕ್ಷಣಫಲಕ್ಕೆ ಕ್ಯಾನ್ಸರ್ ನಿಯಂತ್ರಕವೆಂಬ ಹೆಸರಿದೆ. ಕಾಡುಮಾವಿನಹಣ್ಣು ಡಯಾಬಿಟೀಸ್ ನಿಯಂತ್ರಿಸುತ್ತದೆ.
ಹಣ್ಣುಗಳ ಪ್ರಚಾರ
ಇಷ್ಟಾದರೂ ಹಣ್ಣುಗಳನ್ನು ಜನಪ್ರಿಯಗೊಳಿಸುವ ಕೆಲಸ ಸುಲಭದ್ದಲ್ಲ. ಅದರಲ್ಲೂ ಯುವಜನಾಂಗದ ಕೈಯಲ್ಲಿ ಹಣ್ಣು ಹಿಡಿಸುವ ಕೆಲಸಕ್ಕೆ ಅಪಾರ ಶ್ರಮ ಬೇಕು. ಬುದ್ಧಿಶಕ್ತಿ ಕೆಲಸ ಮಾಡಬೇಕು. ಹಣ್ಣುಗಳೆಂದರೆ ಕೇವಲ ಸಿಹಿಯಲ್ಲ. ಹುಳಿ, ಕೊಬ್ಬರಿ ರುಚಿ, ಹುಳಿಸಿಹಿ ಹೀಗೆ ಬೇರೆ ಬೇರೆ ರುಚಿ, ಸುಗಂಧಗಳಿವೆ ಎಂಬುದನ್ನು ತಿಳಿಸಬೇಕಾಗಿದೆ. ಬೆಂಗಳೂರಿನಲ್ಲಿ ಸಿಗುವ ಎಳನಿಂಗು- ತಾಟಿನಿಂಗುಗಳು ಬೀದರ್, ಗುಲ್ಬರ್ಗಾಗಳಲ್ಲೂ ಸಿಗುವ ವ್ಯವಸ್ಥೆಯಾಗಬೇಕು. ಕೊಡಗಿನಲ್ಲಿನ ಬೆಣ್ಣೆಹಣ್ಣಿನ ಗಿಡಗಳು ಹಾವೇರಿ, ಗದಗದ ಹಿತ್ತಲಿನಲ್ಲಿಯೂ ಹುಟ್ಟಬೇಕು. ಇದಕ್ಕೆ ಬೇಕಾದ್ದು ಪ್ರಚಾರ, ಮಾಹಿತಿ, ಜಾಗೃತಿ ಹಾಗೂ ಸೂಕ್ತಪ್ರಮಾಣದ ಒದಗಿಸುವಿಕೆ. ಬನವಾಸಿಯ ರವೂಫ್ ಸಾಹೇಬರು ಹೇಳಿದ ಕತೆಯಿದು. ಅಪಾರ ಪ್ರಮಾಣದ ಅನಾನಸು ಕೃಷಿಕ. ರಾಜ್ಯದಾದ್ಯಂತ ಅನಾನಸ್ಸನ್ನು ಪರಿಚಯಿಸಬೇಕಿತ್ತು. ಬಳ್ಳಾರಿಗೆ ಒಯ್ದರೆ ಕೊಳ್ಳುವವರೇ ಇರಲಿಲ್ಲ. ಅದಕ್ಕಿರುವ ಹುಳಿರುಚಿ ಬಳ್ಳಾರಿಯ ಜನಗಳಿಗೆ ಸ್ವೀಕೃತವಾಗಿರಲಿಲ್ಲ. ಲೋಡ್ ಫೂರ್ತಿ ಹಾಳಾಗಬಹುದೆಂಬ ಆತಂಕ. ಆಗಲೇ ಸ್ಲೈಸ್ ಅರ್ಥಾತ್ ವೃತ್ತಾಕಾರದ ಹೋಳು ಮಾಡಿ ಕಾಳುಮೆಣಸು, ಉಪ್ಪು ಹಾಗೂ ಸಕ್ಕರೆ ಬೆರೆಸಿ ನೀಡುವ ಆಲೋಚನೆ ಬಂತು. ಜನರನ್ನು ಕರೆದು, ಕರೆದು ಉಚಿತವಾಗಿ ನೀಡಿದರು. ಇಡೀ ಪಟ್ಟಣ ಬಡಾವಣೆಗಳಿಗೆಲ್ಲಾ ರುಚಿ ತೋರಿಸಿದರು. ಮರುವಾರ ನಾಲ್ಕು ಲೋಡ್ ತರಿಸಿ ಮಾರಾಟಕ್ಕಿಟ್ಟರು. ಕೆಲವೇ ತಿಂಗಳುಗಳಲ್ಲಿ 12 ಲೋಡ್‌ಗಳಷ್ಟು ಮಾರಾಟದ ದಾಖಲೆ ನಿರ್ಮಾಣವಾಯಿತು.
ಕೆನ್‌ಲವ್, ಪ್ರಚಾರಕ್ಕೆ ಇಂಟರ್‌ನೆಟ್ ಬಳಸಿದರು. ಸೈನ್‌ಬೋರ್ಡ್‌ನಲ್ಲಿ ಹಣ್ಣುಗಳ ಮಾಹಿತಿ, ಪೌಷ್ಟಿಕಾಂಶ, ರುಚಿ, ಬಳಕೆ ವಿಧಾನಗಳನ್ನೆಲ್ಲಾ ಬರೆಸಿ ಅಂಗಡಿಗಳಿಗೆ ತೂಗುಹಾಕಲು ತಿಳಿಸಿದರು. ಒಮ್ಮೆ ರುಚಿ ಮನಸೆಳೆದರೆ ನಾಲಿಗೆಯು ಅದೇ ಅಂಗಡಿಗೆ ಮತ್ತೊಮ್ಮೆ ಎಳೆದು ತರುತ್ತದೆ. ಹಾಗೆ ಬಂದಾಗಲೆಲ್ಲಾ ಅದೇ ಹಣ್ಣು ಅಂಗಡಿಯಲ್ಲಿ ಇರಬೇಕಾದ್ದು ಅಗತ್ಯ ಅಥವಾ ಅವುಗಳ ಶ್ರಾಯದ ಋತುವನ್ನು ತಿಳಿಸಿರಬೇಕು. ಇಷ್ಟಕ್ಕೂ ಮಿಗಿಲಾಗಿ ರೈತರು ಅವುಗಳನ್ನೆಲ್ಲಾ ಬೆಳೆದಿರಬೇಕು. ಇಲ್ಲಿನ ಸಣ್ಣ ರೈತರ ಕತೆ ಬಲು ಭಿನ್ನ. ಭತ್ತದ ಕೃಷಿ ವರ್ಷಾವರ್ಷ ದುಬಾರಿಯಾಗುತ್ತಿದೆ. ಅಡಿಕೆ, ಕಾಫಿ, ತೆಂಗಿಗೆ ಬೆಲೆ ಸಿಕ್ಕರೆ ಮಾತ್ರ ಬದುಕು ನೇರ. ಪೀಡೆಗಳ ಕಾಟ ಬೆಲೆ ಸ್ಥಿರತೆ ಇಲ್ಲದ ಸ್ಥಿತಿ. ಹೀಗಾಗಿ ಜಮೀನು ಮಾರುವವರ ಸಂಖ್ಯೆ ಹೆಚ್ಚಾಗಿದೆ.
ರೈತನನ್ನು ಉಳಿಸಿ
‘ಒಂದು ಎಕರೆಗೆ ವಾರ್ಷಿಕ ಕನಿಷ್ಠ ಎಂಟರಿಂದ ಹತ್ತು ಲಕ್ಷ ಆದಾಯ ಸಿಕ್ಕರೆ ಆತ ರೈತನಾಗಿಯೇ ಉಳಿಯುತ್ತಾನೆ’ ಎಂಬ ಮಾತನ್ನು ಪ್ರಗತಿಪರ ಕೃಷಿಕ ಉಳ್ಳೂರು ಚಂದ್ರು ಹೇಳುತ್ತಾರೆ. ಇದನ್ನು ಶಿರಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಶಿವಶಂಕರ್‌ಸ್ವಾಮಿಯವರೂ ಸಹ ಅನುಮೋದಿಸುತ್ತಾರೆ. ಹೀಗಿರುವಾಗ ಇದಕ್ಕಿರುವ ದಾರಿ ಎರಡು. ಮೊದಲನೆಯದು ತೋಟಗಾರಿಕಾ ಬೆಳೆಗಳ ಕೃಷಿ ರೈತರ ಉತ್ಪಾದನೆಗಳನ್ನು ಮಾರಾಟ ಮಾಡುವ ಸಂಸ್ಥೆ ಈ ಎರಡಕ್ಕೂ ಕೃಷಿ ಇಲಾಖೆಯ ಪ್ರೋತ್ಸಾಹವಿದೆ. ವಿಶ್ವವಿದ್ಯಾಲಯಗಳ ಸಹಕಾರವಿದೆ. ಆದರೆ ಬೇರುಮಟ್ಟದ ಕೆಲಸ ಮಾತ್ರ ಇನ್ನೂ ಆಗಿಲ್ಲ. ಸ್ವಇಚ್ಚೆಯಿಂದ ಮಾಹಿತಿ ಸಂಗ್ರಹಿಸಿ ಬೆಳೆಯುವವರು ಇದ್ದಾರೆ. ಮಾರುಕಟ್ಟೆ ತಲುಪುವ ಕೆಲಸವಾಗಿಲ್ಲ.
ಮೌಲ್ಯವರ್ಧನೆಯಿಂದಲೂ ರೈತರಿಗೆ ಲಾಭ ಸಾಧ್ಯ. ಹಣ್ಣುಗಳ ಜೀವಿತಾವಧಿಯನ್ನೂ ಹೆಚ್ಚಿಸಬಹುದಾಗಿದೆ. ಹಾಗೇ ಮಕ್ಕಳು, ಯುವಕರಷ್ಟೇ ಅಲ್ಲ, ವೃದ್ಧರಿಗೂ ಬಾಯಾಡಲು ಉಪಯುಕ್ತ. ನೆಲ್ಲಿ, ಮಾವು, ಹಲಸು, ಅಂಜೂರ, ಗುಡ್ಡೆಗೇರುಗಳಂತೆ ಇನ್ನಷ್ಟು ಹಣ್ಣುಗಳನ್ನು ಒಣಹಣ್ಣುಗಳನ್ನಾಗಿ ಮಾಡಲು ಸಾಧ್ಯವಿದೆ. ಅದಕ್ಕಾಗಿಯೇ ‘ಆಸ್ಮೋ ಡೀಹೈಡ್ರೇಶನ್’ ವಿಧಾನವಿದೆ. ಇಂದು ಐಐಎಚ್‌ಆರ್ ಸಹ ಈ ತಂತ್ರಜ್ಞಾನವನ್ನು ಅನುಮೋದಿಸುತ್ತಿದೆ. ಚೆನ್ನೈನಲ್ಲಿರುವ ಪೀಪೀ ಸಮೂಹಸಂಸ್ಥೆಯೊಂದು ಪಪ್ಪಾಯಿ, ಅನಾನಸ್ ಹಾಗೂ ನೆಲ್ಲಿಗಳನ್ನು ಇದೇ ವಿಧಾನದಲ್ಲಿ ಒಣಗಿಸಿ ಮಾರುತ್ತಿದೆ. ಹಣ್ಣುಗಳ ಸುಗಂಧ, ರುಚಿ ಹಾಗೂ ಶಕ್ತಿ ಸ್ವಲ್ಪವೂ ಕಡಿಮೆಯಾದಂತೆ ಅನ್ನಿಸದು ಎಂಬುದು ಗ್ರಾಹಕರ ಅಭಿಪ್ರಾಯ.
ಹಣ್ಣುಗಳ ಮಾರುಕಟ್ಟೆ ಹೇಗೆ?
ಐಐಎಚ್‌ಆರ್‌ನ ವಿಜ್ಞಾನಿ ಡಾ. ತಿವಾರಿ ಹೇಳುತ್ತಾರೆ, ‘ಒಂದೊಮ್ಮೆ ನಾವು ಇದನ್ನು ವ್ಯಾಪಕವಾಗಿ ಬಳಸತೊಡಗಿದರೆ ಹಣ್ಣು ಹಾಗೂ ತರಕಾರಿಗಳಿಗೆ ಹೊಸ ಆಯಾಮ ದೊರೆಯುತ್ತದೆ. ಹಣ್ಣುಗಳನ್ನೆಲ್ಲಾ ಸ್ನ್ಯಾಕ್‌ಗಳಂತೆ ತಿನ್ನಬಹುದು. ತಿಂಡಿಯ ಬದಲು ಬಳಸಬಹುದು. ಎಲ್ಲೆಂದರಲ್ಲಿ, ಹೇಗೆ ಬೇಕಾದರೂ ಒಯ್ಯಬಹುದು. ಇಂದಿರಾನಗರದಲ್ಲಿರುವ ಮೆಟ್ರೋ ಸ್ಟೇಷನ್ ಬಳಿಯ ಜ್ಯೂಸ್ ಸೆಂಟರ್‌ನಲ್ಲಿ ಮೊದಲ ಬಾರಿ ಬೆಣ್ಣೆಹಣ್ಣಿನ ಜ್ಯೂಸ್ ಕುಡಿದಾಗ ಅಂಗಡಿಯವರನ್ನು ಕೇಳಿದ್ದೆ ‘ಇಲ್ಲಿ ಪ್ರತಿದಿನ ಎಷ್ಟು ಗ್ಲಾಸ್ ಬೆಣ್ಣೆಹಣ್ಣಿನ ಜ್ಯೂಸ್ ಮಾರಾಟ ಆಗುತ್ತದೆ?’. ಆಗವರು ಹೇಳಿದ್ದು ‘ಕನಿಷ್ಠ 80 ಗ್ಲಾಸ್’. ಇಷ್ಟೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಕೇಳುವ ಮೊದಲೇ ಅವರ ಉತ್ತರ ಸಿದ್ಧವಾಗಿತ್ತು. ‘ಕೇವಲ ಮೂರೇ ತಿಂಗಳಲ್ಲಿ ಮಾಡಿದ್ದು; ಹೊಸರುಚಿಯ ಪರಿಚಯ; ಬೆಲೆ ಕಡಿಮೆ; ಮತ್ತೆ ಮತ್ತೆ ಹೊಗಳಿದ್ದು; ಇಷ್ಟಕ್ಕೇ ಇಲ್ಲಿನ ಸಾಫ್ಟೇರಿಗಳೆಲ್ಲಾ ಇದರ ರುಚಿಗೆ ಮಾರುಹೋದರು.
ನಮ್ಮವರು ಹೊಟೇಲ್‌ಗೆ ಹೋದರೆ ಮಸಾಲೆದೋಸೆ, ಇಡ್ಲಿ-ವಡಾ ಬಿಟ್ಟು ಬೇರೇನೂ ಕೇಳುವುದಿಲ್ಲ. ಜ್ಯೂಸ್ ಸೆಂಟರ್‌ನಲ್ಲಿ ಆ್ಯಪಲ್ ಜ್ಯೂಸ್, ಮ್ಯಾಂಗೋ ಜ್ಯೂಸ್, ಮೂಸಂಬಿ, ದ್ರಾಕ್ಷಿ ಇವಿಷ್ಟೇ. ಒಮ್ಮೆ ಅಂಜೂರ, ಮತ್ತೊಮ್ಮೆ ಬೆಣ್ಣೆಹಣ್ಣು, ಮಗದೊಮ್ಮೆ ಕಿನೋ, ನೇರಳೆ, ಹಲಸು ಹೀಗೆ ಕೇಳಿದ್ದರೆ ಟೇಸ್ಟ್ ಬದಲಾಗುತ್ತಿತ್ತು. ಪರ್ಯಾಯದ ದಾರಿ ಸಿಗುತ್ತಿತ್ತು. ಇದು ರೈತರು, ಗ್ರಾಹಕರು ಹಾಗೂ ತಯಾರಕರ ಮಧ್ಯೆ ಆಗಬೇಕಾದ ಒಪ್ಪಂದ. ಲಿಖಿತವಾಗಿಯಾಗಲೀ, ಮಾತಿನಿಂದಾಗಲೀ ಈ ಸಂವಹನ ಕೈಗೂಡದು. ಸೂಕ್ತ ಶೈಕ್ಷಣಿಕ ಮಾರ್ಗ ಬೇಕಾಗಿದೆ. ಅಡುಗೆ ತಯಾರಕರು, ದೊಡ್ಡ ಹೊಟೇಲ್‌ನ ಅಡುಗೆಯವರು, ಶೆಫ್‌ಗಳಿಗೆ, ಜ್ಯೂಸ್ ತಯಾರಕರಿಗೆ ಈ ಭವಿಷ್ಯದ ಅಸಾಮಾನ್ಯ ಹಣ್ಣುಗಳ ಪರಿಚಯ ಮಾಡಿಸಬೇಕಾಗಿದೆ. ಅವುಗಳ ಉತ್ಪಾದನೆಗಳ, ಬಳಕೆಯ ಕುರಿತು ಅರಿವು ಮೂಡಿಸಬೇಕಾಗಿದೆ. ಹಾಗೇ ರೈತರಿಗೆ ಅವರ ಉತ್ಪಾದನೆಗಳ ಗುಣಮಟ್ಟ ಸುಧಾರಣೆ ಕುರಿತ ತಿಳಿವಳಿಕೆ ಕೊಡಬೇಕಾಗಿದೆ. ಇವರಿಬ್ಬರ ಕೂಡುವಿಕೆಯಿಂದ ದೇಶೀ ಹಾಗೂ ವಿದೇಶೀ ಹಣ್ಣುಗಳ ಬಳಕೆ ಹೆಚ್ಚುತ್ತದೆ.
ನೀವೂ ತಿನ್ನಿ
ಈಗ್ಗೆ ಸುಮಾರು 30 ವರ್ಷಗಳ ಹಿಂದೆ ಶ್ರೀಧರ್ ಎಂಬ ಅರೆಕಾಲಿಕ ಕೃಷಿಕರು ತಮ್ಮ ತೋಟದ ಪಪ್ಪಾಯವನ್ನು ಜನಪ್ರಿಯಗೊಳಿಸಿದ್ದರು. ಬೆಂಗಳೂರಿನ ಅಶೋಕಾ ಹೊಟೇಲ್ ಶೆಫ್‌ರ ಮನವೊಲಿಸಿದರು. ಪ್ರತಿಯೊಂದು ರೂಮ್‌ಗೂ ಬೆಳಗಿನ ಆರು ಗಂಟೆಗೆ ಪಪ್ಪಾಯ ಹಣ್ಣಿನ ತುಂಡುಗಳ ನೀಡಿಕೆ. ಅದರೊಂದಿಗೆ ಮಾಹಿತಿ ಪತ್ರ. ‘ಇದು ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತದೆ’ ಎಂದು. ಈ ಹೊಸ ಮಾರ್ಗ ಅದೆಷ್ಟು ಜನಪ್ರಿಯವಾಯಿತೆಂದರೆ ಉಳಿದ ಹೊಟೇಲ್‌ಗಳವರು ಅನಿವಾರ್ಯವಾಗಿ ತಮ್ಮ ರೂಮ್‌ಗಳಿಗೆ ಹಣ್ಣುಗಳನ್ನು ಒದಗಿಸಬೇಕಾದ ಸ್ಥಿತಿ ಬಂತು. ಹಾಗೆಂದು ಅವರ ತೋಟದಲ್ಲಿ ಇನ್ನಿತರ ಹಣ್ಣುಗಳಿದ್ದರೂ ಅವುಗಳ ಕುರಿತು ಶೆಫ್‌ನ ಮನ ಪರಿವರ್ತಿಸಲು ಮಾತ್ರ ಸಾಧ್ಯವಾಗಲಿಲ್ಲ. ಚಿರಯೌವ್ವನೆ, 65 ವರ್ಷಗಳಾದರೂ 35ರಂತೆ ಕಂಗೊಳಿಸುವ ಬಾಲಿವುಡ್ ತಾರೆ ರೇಖಾರವರು ಹೇಳುವಂತೆ ‘ರಾಸಾಯನಿಕ ಮುಕ್ತ ಸೀತಾಫಲ, ಪಪ್ಪಾಯ, ಅಂಜೂರ, ಪ್ಲಮ್, ಅಕ್ರೂಟ್, ಬಾದಾಮಿ, ಅವಕಾಡೋ, ಚೆರ್ರಿ, ರಾಸ್ ಬೆರ್ರಿ ಇಂತಹ ಹಣ್ಣು ಹಾಗೂ ಬೀಜಗಳೇ ನನ್ನ ದಿನದ ಪ್ರಮುಖ ಆಹಾರ. ಎಂತಹ ಸಮಾರಂಭದಲ್ಲೂ ಹಣ್ಣುಗಳ ವಿನಹ ಬೇರೇನನ್ನೂ ಸೇವಿಸುವುದಿಲ್ಲ’ ಎಂಬ ಮಾತನ್ನು ಚಿರಯೌವ್ವನ, ಸೌಂದರ್ಯ ಬಯಸುವ ಪ್ರತಿಯೊಬ್ಬರೂ ಸದಾ ನೆನಪಿನಲ್ಲಿಡಬೇಕು ಹಾಗೂ ಆಚರಿಸಲೂಬೇಕು.
-ಪೂರ್ಣಪ್ರಜ್ಞ ಬೇಳೂರು, ಶಿವಮೊಗ್ಗ