ಕರ್ನಾಟಕ

ಅಧಿಕಾರಿಗಳ ಗ್ಯಾಲರಿಯಲ್ಲಿ ಉಗ್ರಪ್ಪ ಪ್ರತ್ಯಕ್ಷ; ಬಿಜೆಪಿ-ಜೆಡಿಎಸ್ ಧರಣಿ

Pinterest LinkedIn Tumblr

ugrappa__fi____ಬೆಂಗಳೂರು, ನ. 23: ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಕಲಾಪದ ವೇಳೆ ವಿಧಾನಸಭೆಯ ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತು ‘ಸರಕಾರಕ್ಕೆ ಮಾರ್ಗದರ್ಶನ’ ನೀಡುತ್ತಿದ್ದುದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರನ್ನು ಕೆರಳಿಸಿದ್ದಲ್ಲದೆ, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗಕ್ಕೆ ಸಾಕ್ಷಿಯಾಯಿತು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ಬಳಿಕ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಪದಚ್ಯುತಿ ಪ್ರಸ್ತಾವ ಚರ್ಚೆಯ ವೇಳೆ ಹಠಾತ್ತನೆ ಅಧಿಕಾರಿಗಳ ಗ್ಯಾಲರಿಯಲ್ಲಿ ಉಗ್ರಪ್ಪ ಪ್ರತ್ಯಕ್ಷರಾದರು. ಮಾತ್ರವಲ್ಲ, ಮುಂದಿನ ಸಾಲಿನಲ್ಲಿ ಕುಳಿತು ಸಿಎಂ ಸಿದ್ದರಾಮಯ್ಯನವರಿಗೆ ಒಂದು ಚೀಟಿಯನ್ನು ಕಳುಹಿಸಿಕೊಟ್ಟರು.

ಇದನ್ನು ಗಮನಿಸಿದ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ‘ಅಧಿಕಾರಿಗಳ ಗ್ಯಾಲರಿ ಯಲ್ಲಿ ಅನ್ಯ ವ್ಯಕ್ತಿಗಳು ಕುಳಿತುಕೊಳ್ಳಲು ಅವಕಾಶವಿದೆಯೇ’ ಎಂದು ಸ್ಪೀಕರ್ ಅವರ ನ್ನು ಪ್ರಶ್ನಿಸಿದರು. ಕೂಡಲೇ ಅವರನ್ನು ಹೊರಗೆ ಕಳುಹಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ವಿಪಕ್ಷ ನಾಯಕ ಶೆಟ್ಟರ್ ಸೇರಿದಂತೆ ಹಲವು ಸದಸ್ಯರು ಧ್ವನಿಗೂಡಿಸಿದರು.

ಸೂಚನೆ ಉಲ್ಲಂಘನೆ: ಲೋಕಾಯುಕ್ತರ ಪದಚ್ಯುತಿ ಸಂಬಂಧ ಚರ್ಚೆಯಲ್ಲಿದ್ದ ಕಲಾಪದಲ್ಲಿ ಉಗ್ರಪ್ಪ ದಿಢೀರ್ ಹಾಜರಿಯಿಂದ ಕೆರಳಿದ ಸ್ಪೀಕರ್ ತಿಮ್ಮಪ್ಪ, ಇಲ್ಲಿ ಅನಗತ್ಯ ಸಮಸ್ಯೆ ಸೃಷ್ಟಿಸಬೇಡಿ, ಕೂಡಲೇ ಹೊರ ಹೋಗಿ ಎನ್ನುವಂತೆ ಸೂಚನೆ ನೀಡಿದರು. ಆದರೆ, ಉಗ್ರಪ್ಪ ತಾವು ಕುಳಿತಿದ್ದ ಆಸನವನ್ನು ಬಿಟ್ಟು ಕದಲಲಿಲ್ಲ.

ಕೂಡಲೇ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳ ಗ್ಯಾಲರಿಯ ಹೊರಗೆ ಮೇಲ್ಮನೆ ಸದಸ್ಯರಿಗೆ ಮತ್ತು ಲೋಕಸಭಾ ಸದಸ್ಯರಿಗೆ ಎಂಬ ಫಲಕವಿದ್ದು, ಆ ಹಿನ್ನೆಲೆಯಲ್ಲಿ ಅವರು ಗ್ಯಾಲರಿಗೆ ಬಂದು ಆಸೀನರಾಗಿದ್ದಾರೆ ಎಂದು ಸ್ಪಷ್ಟಣೆ ನೀಡಿದರು. ಇದರಿಂದ ಗದ್ದಲ ಸೃಷ್ಟಿಯಾಯಿತು.

ಉಗ್ರಪ್ಪ ಅವರನ್ನು ಹೊರಗೆ ಕಳುಹಿಸಬೇಕೆಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ಆ ಬಳಿಕ ಪುನಃ ಸದನ ಸೇರಿದರೂ ಸಮಸ್ಯೆ ಇತ್ಯರ್ಥವಾಗಲಿಲ್ಲ. ಆ ನಂತರ ಸದನ ಕಲಾಪ ಸಮಿತಿ ಸದಸ್ಯರ ಸಭೆ ನಂತರ ಪರಿಸ್ಥಿತಿ ತಿಳಿಗೊಳಿಸಲಾಯಿತು.

ಪಾದಕ್ಕೆ ನಮಸ್ಕಾರ: ‘ಅವರು ಮೇಲಿನಿಂದ ಬಂದಿದ್ದು, ಅವರ ಪಾದಗಳಿಗೆ ನಮಸ್ಕಾರ’ ಎಂದು ಸ್ಪೀಕರ್, ಉಗ್ರಪ್ಪ ವಿರುದ್ಧ ವ್ಯಂಗ್ಯವಾಡಿದ ಪ್ರಸಂಗವೂ ನಡೆಯಿತು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ರಮೇಶ್ ಕುಮಾರ್, ಆ ಸ್ಥಾನದಲ್ಲಿ ಕುಳಿತು ನೀವು ಹೀಗೆ ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಹೊರಗಿನ ಫಲಕ ಹಾಕಿದ ಹಿನ್ನೆಲೆಯಲ್ಲಿ ಉಗ್ರಪ್ಪ ಇಲ್ಲಿಗೆ ಬಂದಿದ್ದು, ನನ್ನಿಂದ ತಪ್ಪಾಗಿದೆ ಎಂದ ಸ್ಪೀಕರ್, ಅದನ್ನು ಕೂಡಲೇ ಸರಿಪಡಿಸುವೆ. ಸಂಪ್ರಾದಾಯದಂತೆ ಪತ್ರಕರ್ತರ ಗ್ಯಾಲರಿಯ ಮುಂದಿನ ಸಾಲಿನಲ್ಲಿ ಮೇಲ್ಮನೆ ಸದಸ್ಯರಿಗೆ ಮತ್ತು ಲೋಕಸಭಾ ಸದಸ್ಯರಿಗೆ ಕುಳಿತು ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ರೂಲಿಂಗ್ ನೀಡಿದರು.

Write A Comment