ಕರ್ನಾಟಕ

ಎತ್ತಿನಹೊಳೆ ಯೋಜನೆಗೆ 1,598 ಕೋಟಿ ರೂ.ವೆಚ್ಚ: ಸಚಿವ ಎಂ.ಬಿ.ಪಾಟೀಲ

Pinterest LinkedIn Tumblr

ptilಬೆಂಗಳೂರು, ನ. 23: ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಗೆ ಕುಡಿಯುವ ನೀರು ಒದಗಿಸುವ ‘ಎತ್ತಿನಹೊಳೆ ಯೋಜನೆ’ಗೆ ಅಕ್ಟೋಬರ್ ಅಂತ್ಯಕ್ಕೆ 1,598 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಎಂ.ಕೃಷ್ಣಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಭಾರತೀಯ ವಿಜ್ಞಾನ ಸಂಸ್ಥೆ ನಿವೃತ್ತ ಪ್ರೊ.ರಾಮಪ್ರಸಾದ್, ಕರ್ನಾಟಕ ವಿದ್ಯುತ್ ನಿಗಮ ಹಾಗೂ ರಾಷ್ಟ್ರೀಯ ಜಲ ವಿಜ್ಞಾನ ಕೇಂದ್ರದ 23.41 ಟಿಎಂಸಿ ನೀರು ದೊರೆಯಲಿದೆ ಎಂದು ದೃಢೀಕರಿಸಿವೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಮೊದಲನೆ ಹಂತದಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕೆರೆಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳಿಗಳಿಂದ 8 ಕಡೆ ತಿರುವು ಕಟ್ಟೆಗಳನ್ನು ನಿರ್ಮಿಸಿ ಪಂಪ್‌ಗಳ ಮೂಲಕ ಹೊರವನಹಳ್ಳಿ ಹತ್ತಿರದ ವಿತರಣಾ ತೊಟ್ಟಿಗೆ ನೀರು ಹರಿಸಲಾಗುತ್ತದೆ.
ಈ ಹಂತದ ಕಾಮಗಾರಿಗಳನ್ನು ಐದು ಪ್ಯಾಕೇಜ್‌ಗಳಾಗಿ ವಿಂಗಡಿಸಿ ಟರ್ನ್ ಕೀ ಆಧಾರದ ಮೇಲೆ 3716.51 ಕೋಟಿ ರೂ.ಗಳಿಗೆ ಟೆಂಡರ್ ಗುತ್ತಿಗೆಯನ್ನು ವಹಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದ ಅವರು,ಎರಡನೆ ಹಂತದಲ್ಲಿ ವಿತರಣಾ ತೊಟ್ಟಿಯಿಂದ 274ಕಿ.ಮೀ ಉದ್ದ ಗುರುತ್ವ ಕಾಲುವೆಯನ್ನು ನಿರ್ಮಿಸಿ ಬೈರಗೊಂಡಲು ಗ್ರಾಮದಲ್ಲಿ 5.78 ಟಿ.ಎಂ.ಸಿ. ಸಾಮರ್ಥ್ಯದ ನೀರು ಸಂಗ್ರಹಣಾ ಜಲಾಶಯವನ್ನು ನಿರ್ಮಿ ಸಲಾಗುವುದು. ಈ ಹಂತದ ಕಾಮಗಾರಿಗಳಿಗೆ 9403.56 ಕೋಟಿ ರೂ. ಅಂದಾಜು ವೆಚ್ಚದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಎಂ.ಕೃಷ್ಣಪ್ಪ, ಎತ್ತಿನಹೊಳೆ ಯೋಜನೆ ಕಾಮಗಾರಿ ವಿಳಂಬವಾಗುತ್ತಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬಯಲು ಸೀಮೆ ಜನರಿಗೆ ನೀರಿನ ಸೌಲಭ್ಯ ಕಲ್ಪಿಸಲು ಸರಕಾರ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಕೆಆರ್‌ಎಸ್ ಜಲಾಶಯದಲ್ಲಿ 3.318 ಟಿಎಂಸಿ ಹೂಳು ಶೇಖರಣೆ

ಬೆಂಗಳೂರು, ನ. 23: ಕೃಷ್ಣರಾಜಸಾಗರ ಜಲಾಶಯ ನಿರ್ಮಾಣ ವಾದಾಗಿನಿಂದ ಈವರೆಗೆ ಸುಮಾರು 3.318ಟಿಎಂಸಿಯಷ್ಟು ಪ್ರಮಾಣದ ಹೂಳು ಶೇಖರಣೆಯಾಗಿದ್ದು, ಈ ಪ್ರಮಾಣವು ಒಟ್ಟಾರೆ ಶೇಖರಣೆಯ ಶೇ.0.087ರಷ್ಟು ಇರುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಯಲ್ಲಿ ಶಾಸಕ ಕೆ. ಗೋಪಾಲಯ್ಯ ಕೇಳಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಹೂಳಿನ ಪ್ರಮಾಣವು ಜಲಾಶಯದ ಒಟ್ಟಾರೆ ಶೇಖರಣೆಯ ಶೇ.0.087ರಷ್ಟು ಮಾತ್ರ ಇರುವುದರಿಂದ, ಅಣೆಕಟ್ಟಿಗೆ ಯಾವುದೇ ರೀತಿಯ ಅಪಾಯವಿರುವುದಿಲ್ಲ ಎಂದರು. ಹೂಳಿನ ಪ್ರಮಾಣವು ಸಿಡಬ್ಲ್ಯೂಸಿ ತಿಳಿಸಿರುವ ಮಿತಿಗಿಂತ ಕಡಿಮೆ ಇರುತ್ತದೆ. ಈ ಪ್ರಮಾಣದ ಹೂಳು ಶೇಖರಣೆಯಿಂದ ಯಾವುದೇ ಪ್ರತಿಕೂಲ ಪರಿಣಾಮ ಇಲ್ಲದಿರುವುದರಿಂದ, ಹೂಳನ್ನು ತೆಗೆಯಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ.

Write A Comment