ಕರ್ನಾಟಕ

ಜಿ.ಪಂ.ಅಧ್ಯಕ್ಷರಿಗೆ ಸಚಿವರ ಸ್ಥಾನಮಾನ: ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮಂಡನೆ

Pinterest LinkedIn Tumblr

HKPatil___ಬೆಂಗಳೂರು, ನ.18: ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಸಬಲೀಕರಿಸುವ ದೃಷ್ಟಿಯಿಂದ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಿ, ಜಿ.ಪಂ.ಅಧ್ಯಕ್ಷರಿಗೆ ಸಚಿವರ ಸ್ಥಾನಮಾನ ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಬುಧವಾರ ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಪಂಚಾಯತ್ ವ್ಯವಸ್ಥೆ ಸುಧಾರಣೆ ಸಂಬಂಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಸಮಿತಿ ನೀಡಿದ ವರದಿಯನ್ನ ಆಧರಿಸಿ ‘ಕರ್ನಾಟಕ ಪಂಚಾಯತ್ ರಾಜ್ (ಎರಡನೆ ತಿದ್ದುಪಡಿ) ವಿಧೇಯಕ-2015ನ್ನು ಮಂಡಿಸಿದರು. ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಕುಂದು ಕೊರತೆ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ರಮೇಶ್ ಕುಮಾರ್ ವರದಿಯಲ್ಲಿನ 88 ಶಿಫಾರಸುಗಳ ಪೈಕಿ 17 ಶಿಫಾರಸುಗಳನ್ನು ಕೈಬಿಟ್ಟಿದ್ದು, ಸಂಪುಟದ ಉಪ ಸಮಿತಿ ನೀಡಿದ ಹನ್ನೆರಡು ಹೊಸ ಶಿಫಾರಸುಗಳನ್ನು ವಿಧೇಯಕದಲ್ಲಿ ಅಡಕ ಗೊಳಿಸಲಾಗಿದೆ.

ಗಣಿಗಾರಿಕೆ, ಕೊರೆದ ಬಾವಿಗಳನ್ನು ಮುಚ್ಚಿಸುವ ಅಧಿಕಾರವನ್ನು ಪಂಚಾಯತ್‌ಗೆ ನೀಡಲಾಗಿದ್ದು, ಗ್ರಾಮಸ್ಥರೇ 20 ಲಕ್ಷ ರೂ.ಗಳವರೆಗಿನ ಕಾಮಗಾರಿ ಗುತ್ತಿಗೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ, ತಾಲೂಕು ಯೋಜನಾ ಮಂಡಳಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಪವನ, ಸೋಲಾರ್ ವಿದ್ಯುತ್ ಘಟಕಗಳು, ಮೊಬೈಲ್ ಟವರ್ ಹಾಗೂ ಜಾಹೀರಾತು ಫಲಕಗಳಿಂದ ಹಾಗೂ ಆಯಾ ವ್ಯಾಪ್ತಿಯ ವಿಮಾನ ನಿಲ್ದಾಣಗಳಿಂದ ನೇರ ತೆರಿಗೆಯನ್ನು ಸಂಗ್ರಹಿಸಲು ಆಯಾ ಪಂಚಾಯತ್‌ಗಳಿಗೆ ಅಧಿಕಾರ ನೀಡಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.

ಕನಿಷ್ಠ 30 ತಿಂಗಳ ವರೆಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತಿಲ್ಲ. ಪಂಚಾಯತ್ ಸದಸ್ಯರು ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯಗೊಳಿಸಿದ್ದು, ಬಯಲು ಶೌಚಾಲಯ ಸೇರಿದಂತೆ ವಿವಾದಿತ ಸಾಂಪ್ರದಾಯಿಕ ಆಚರಣೆಗಳನ್ನು ನಿಷೇಧಿಸುವ ಅಧಿಕಾರವನ್ನು ಪಂಚಾಯತ್‌ಗಳಿಗೆ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಆಡಳಿತದ ಎಲ್ಲ ಹಂತಗಳಲ್ಲಿ ಪಾರದರ್ಶಕತೆ, ಗ್ರಾಮ ಸ್ವರಾಜ್ ಘಟಕಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ರೈತರ ಆತ್ಮಹತ್ಯೆಯಂತಹ ಗಂಭೀರ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲೂ ಪಂಚಾಯತ್‌ಗಳಿಗೆ ಅಧಿಕಾರ ನೀಡಿದೆ. ಅಲ್ಲದೆ, ಪಂಚಾಯತ್ ಅಧ್ಯಕ್ಷರ ನೇರ ಚುನಾವಣೆಯನ್ನು ನಡೆಸಬೇಕೆಂಬ ರಮೇಶ್ ಕುಮಾರ್ ವರದಿಯ ಶಿಫಾರಸನ್ನು ಕೈ ಬಿಡಲಾಗಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಸೇವಾ ವರದಿಯನ್ನು ಅಧ್ಯಕ್ಷರು ಬರೆಯುವ ಶಿಫಾರಸನ್ನು ಕೈ ಬಿಟ್ಟಿದ್ದು, ಹದಿನೈದು ಸಾವಿರ ಮಂದಿಗೆ ಒಂದು ಪಂಚಾಯತ್ ಸ್ಥಾಪಿಸಬೇಕು ಎಂಬ ರಮೇಶ್ ಕುಮಾರ್ ವರದಿಯ ಶಿಫಾರಸನ್ನು ಕೈಬಿಡಲಾಗಿದೆ.

Write A Comment