ಕರ್ನಾಟಕ

ಹೊರ ರಾಜ್ಯದಿಂದ ಬಂದವರಿಂದಲೇ ಹೆಚ್ಚುತ್ತಿರುವ ಅತ್ಯಾಚಾರ : ಮಾಹಿತಿ ಪಡೆದು ಕೆಲಸ ಕೊಡಿ

Pinterest LinkedIn Tumblr

rapeಬೆಂಗಳೂರು, ನ.13- ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಹೊರಗಿನಿಂದ ಬಂದವರಿಂದಲೇ ಹೆಚ್ಚಾಗಿವೆ. ಸೆಕ್ಯೂರಿಟಿ ಏಜೆನ್ಸಿಗಳು ಹಾಗೂ  ವಾಹನ ಚಾಲನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಪೂರ್ವಾ ಪರವನ್ನು ವಿಚಾರಿಸಿ ಮಾಹಿತಿಯನ್ನು ಸಂಗ್ರಹಿಸಿಟ್ಟಿಕೊಳ್ಳುವಂತೆ ವಿಧಾನಪರಿಷತ್ ಸದಸ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಅಧ್ಯಯನ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಸಲಹೆ ನೀಡಿದ್ದಾರೆ.
ಮೊನ್ನೆ ನಗರದ ಕಬ್ಬನ್‌ಪಾರ್ಕ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ನಂತರ ಪತ್ರಿಕಾಗೋಷ್ಠಿಯಲ್ಲಿ  ವಿವರಣೆ ನೀಡಿದ ಅವರು, ಪ್ರಕರಣದ ಪ್ರಮುಖ ಆರೋಪಿಯಾದ ರಾಜುಮೇಟಿ ಎಂಬುವನು ಹೊರ ರಾಜ್ಯದಿಂದ ಆಗಮಿಸಿದ್ದು, ಬೆಳಗ್ಗೆ ಆದಾಯ ತೆರಿಗೆ ಇಲಾಖೆಯಲ್ಲಿ, ರಾತ್ರಿ ಕಬ್ಬನ್‌ಪಾರ್ಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ರಾಜಾಜಿನಗರದ ಕೇಶವಮೂರ್ತಿ ಎಂಬುವರಿಗೆ ಸೇರಿದ ಏಜೆನ್ಸಿಯ ನೌಕರನಾದ ಈತನ ಹಿನ್ನೆಲೆಯ ಬಗ್ಗೆ ಸರಿಯಾದ ಪರಿಶೀಲನೆ ನಡೆದಿರಲಿಲ್ಲ ಎಂದು ಹೇಳಿದರು.

ಸಂತ್ರಸ್ತ ಮಹಿಳೆ ಎಂಟೆಕ್ ಪದವೀಧರೆ ಯಾಗಿದ್ದು, ತುಮಕೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಟೆನ್ನಿಸ್ ಆಟಗಾರ್ತಿ ಯಾಗಬೇಕೆಂಬ  ಕನಸಿನೊಂದಿಗೆ ಕಬ್ಬನ್‌ಪಾರ್ಕ್‌ನಲ್ಲಿರುವ ಟೆನ್ನಿಸ್ ಕ್ಲಬ್‌ಗೆ ಬಂದು ಅರ್ಜಿ ಪಡೆದು ಭರ್ತಿ ಮಾಡಿ ಹಿಂದಿರುಗಿಸಲು ಬುಧವಾರ ಆಗಮಿಸಿದ್ದಾರೆ. ಸಂಜೆಯವರೆಗೂ ಆಕೆ ಅಲ್ಲೇ ಕುಳಿತಿರುವುದನ್ನು ಗಮನಿಸಿದ ಪೊಲೀಸರು ಆಕೆಯನ್ನು ಕೆ.ಆರ್.ವೃತ್ತದವರೆಗೂ ಡ್ರಾಪ್ ಮಾಡಿ ತುಮಕೂರಿಗೆ ವಾಪಾಸಾಗುವಂತೆ ಸಲಹೆ ನೀಡಿದ್ದಾರೆ.

ಆಕೆ ಮತ್ತೆ ಟೆನ್ನಿಸ್‌ಕ್ಲಬ್ ಬಳಿ ಬಂದು ಅರ್ಜಿಯೊಂದಿಗೆ ಕಾಯುತ್ತಿದ್ದಾಗ ಈ ಇಬ್ಬರು ಭದ್ರತಾ ಸಿಬ್ಬಂದಿಗಳು ಕಬ್ಬನ್ ಪಾರ್ಕ್‌ನಿಂದ ಹೊರಗೆ ಹೋಗುವ ದಾರಿ ತೋರಿಸುವ ನೆಪ ಹೇಳಿ ಎರಡು ಸ್ಥಳದಲ್ಲಿ ಅತ್ಯಾಚಾರ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕೆಲಸಕ್ಕೆ ಸೇರಿಸಿಕೊಳ್ಳುವ ಸಿಬ್ಬಂದಿಗಳ ಪೂರ್ವಾಪರಗಳನ್ನು ಸರಿಯಾಗಿ ವಿಚಾರಿಸದೇ ಇರುವುದರಿಂದ ಇಂತಹ ಘಟನೆಗಳು ಆಗುತ್ತವೆ. ಆರೋಪಿಗಳು ಪಾರಾಗುತ್ತಿದ್ದಾರೆ. ಇನ್ನು ಮುಂದೆ ಹೊರರಾಜ್ಯದಿಂದ ಬರುವ  ಯಾವುದೇ ವ್ಯಕ್ತಿಗಳನ್ನು ಸೆಕ್ಯೂರಿಟಿ ಏಜೆನ್ಸಿಗಳು, ಟ್ರಾವೆಲ್ಸ್ ಕಂಪೆನಿಗಳು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಆಯಾಯ ವ್ಯಕ್ತಿಗಳ ವರ್ತನೆ ಮತ್ತು ಗುಣಲಕ್ಷಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ತಪಾಸಣೆಯನ್ನು ಕಡ್ಡಾಯಗೊಳಿಸುವ ಸಲುವಾಗಿ ಸೂಕ್ತ ಕಾನೂನು ರೂಪಿಸಲು ಸರ್ಕಾರಕ್ಕೆ ಶಿಫರಾಸು ಮಾಡುವುದಾಗಿ ಉಗ್ರಪ್ಪ ಹೇಳಿದರು. ತಮ್ಮ ನೇತೃತ್ವದ ಅತ್ಯಾಚಾರ ತಡೆ ಅಧ್ಯಯನ ಸಮಿತಿ ಶೀಘ್ರವೇ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸುವುದಾಗಿಯೂ ತಿಳಿಸಿದರು. ರಾಯಚೂರಿನಲ್ಲಿ ವಸತಿಗೃಹದಲ್ಲಿದ್ದ ಬಾಲಕನೊಬ್ಬನನ್ನು ಲೈಂಗಿಕ ಅಲ್ಪಸಂಖ್ಯಾತರು ಎಳೆದೊಯ್ದು ಗೋವಾ, ಬೆಂಗಳೂರು, ಬೆಳಗಾವಿ ಮತ್ತಿತರಕಡೆ ಭಿಕ್ಷೆ ಬೇಡಿಸಿ ಹಣ ಸಂಪಾದನೆ ಮಾಡಿದ್ದು, ಕೊನೆಗೆ ಆ ಬಾಲಕನ ಲಿಂಗಪರಿವರ್ತನೆಗೆ ಬಾಂಬೆಗೆ ಕರೆದೊಯ್ಯುವಾಗ ಪೊಲೀಸರು ಪತ್ತೆಹಚ್ಚಿ ರಕ್ಷಿಸಿದ್ದಾರೆ.  ಇಂತಹ ದೊಡ್ಡ ಜಾಲಗಳೇ ಇವೆ. ಇದರ ತನಿಖೆಗೆ ಪೊಲೀಸರು ವಿಶೇಷ ಕಾರ್ಯಪಡೆ ರಚಿಸಿದ್ದಾರೆ ಎಂದು ಉಗ್ರಪ್ಪ ಹೇಳಿದರು.

Write A Comment