ಕರ್ನಾಟಕ

ಟಿಪ್ಪು ಜಯಂತಿ ಆಚರಣೆಯ ವೇಳೆ ಮಡಿಕೇರಿಯಲ್ಲಿ ನಡೆದ ಘರ್ಷಣೆಯಲ್ಲಿ ಗುಂಡೇಟು ತಿಂದಿದ್ದ ಶಾಹುಲ್ ಸಾವು

Pinterest LinkedIn Tumblr

shahul

ಮೈಸೂರು: ಟಿಪ್ಪು ಜಯಂತಿ ಆಚರಣೆಯ ವೇಳೆ ಮಡಿಕೇರಿಯಲ್ಲಿ ನಡೆದ ಘರ್ಷಣೆಯಲ್ಲಿ ಗುಂಡೇಟು ತಿಂದಿದ್ದ ಶಾಹುಲ್, ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮಡಿಕೇರಿಯ ಹೊರವಲಯದಲ್ಲಿ ಹೋಗುತ್ತಿದ್ದ ವೇಳೆ, 25 ವರ್ಷದ ಶಾಹುಲ್ ಮೇಲೆ, ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಆತನಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಆತನ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಮರಣೋತ್ತರ ಪರೀಕ್ಷೆಯ ಚಿತ್ರೀಕರಣ ನಡೆಸುವ ಅವಶ್ಯಕತೆ ಇದೆ. ಹೀಗಾಗಿ ಇಂದು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಶಾಹುಲ್‍ನ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ಶಾಹುಲ್ ಮೃತಪಟ್ಟಿರುವುದರಿಂದ ಶವಾಗಾರದ ಸುತ್ತಮುತ್ತ ದಕ್ಷಿಣ ವಲಯ ಐಜಿಪಿ ಬ್ರಿಜೇಶ್ ಕುಮಾರ್ ಸಿಂಗ್ ರವರ ಸೂಚನೆಯ ಮೇರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಮೃತನ ಅಂತ್ಯಕ್ರಿಯೆ ನಡೆಯಲಿದೆ. ಶಾಹುಲ್ ಮೃತಪಟ್ಟಿರುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮಡಿಕೇರಿಯಲ್ಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಘರ್ಷಣೆ ಬಳಿಕ ಪ್ರಕ್ಷುಬ್ಧವಾಗಿದ್ದ ಮಡಿಕೇರಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

Write A Comment