ಕರ್ನಾಟಕ

‘ಗಿರೀಶ್ ಕಾರ್ನಾಡ್ ಒಬ್ಬ ತಲೆತಿರುಕು ಸಾಹಿತಿ’ : ನಾರಾಯಣಗೌಡ ಆಕ್ರೋಶ

Pinterest LinkedIn Tumblr

narayana gowda

ಬೆಂಗಳೂರು,ನ.10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಒಬ್ಬ ತಲೆತಿರುಕ ಸಾಹಿತಿ. ಇವರಿಗೆ ಬೆಂಗಳೂರು ಇತಿಹಾಸವೇ ಗೊತ್ತಿಲ್ಲ. ಇವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಲ್ಲ. ಹೊಡೆದುಕೊಂಡಿದ್ದು ಎಂದು ಕರ್ನಾಟಕ ರಕ್ಷಣಾವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ್ದಾರೆ.

ಇಂದು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂದರ್ಭದಲ್ಲಿ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವ ಬದಲು ಟಿಪ್ಪು ಸುಲ್ತಾನ್ ಅವರ ಹೆಸರಿಡುವುದೇ ಸೂಕ್ತವಾಗಿತ್ತು. ಕೆಂಪೇಗೌಡರು ಸ್ವಾತಂತ್ರ್ಯ ಸೇನಾನಿಯಾಗಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಗಿರೀಶ್ ಕಾರ್ನಾಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಗಿರೀಶ್ ಕಾರ್ನಾಡ್ ಒಬ್ಬ ಸರ್ಕಾರದ ಗುಲಾಮ. ಇವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮ್ಮ ನಾಡಿನ ದುರಂತ ಎಂದು ಹೇಳಿದ್ದಾರೆ.

ಕೆಂಪೇಗೌಡರು ಬೆಂಗಳೂರು ನಿರ್ಮಾತೃ. ಬೆಂಗಳೂರಿಗೆ ಅವರು ನೀಡಿದ ಕೊಡುಗೆ ಏನೆಂಬುದು ಇತಿಹಾಸದಲ್ಲಿ ದಾಖಲಾಗಿದೆ. ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವ ಗಿರೀಶ್ ಕಾರ್ನಾಡ್‌ರವರ ಹೇಳಿಕೆಯನ್ನು ನಾಡಿನ ಜನತೆ ಖಂಡಿಸಬೇಕು. ಸರ್ಕಾರವನ್ನು ಓಲೈಸಲು ಗಿರೀಶ್ ಕಾರ್ನಾಡ್ ಅಂತಹ ಸಾಹಿತಿಗಳು ಕೀಳು ಮಟ್ಟದ ಪ್ರಚಾರಕ್ಕೆ ಇಳಿಯುತ್ತಾರೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಇಂತಹ ಹೇಳಿಕೆಯನ್ನು ಯಾವ ಕನ್ನಡಿಗನೂ ಸಹಿಸುವುದಿಲ್ಲ ಎಂದು ಅವರು ಹೇಳಿದರು.

ಈ ನಾಡಿಗೆ ಕೆಂಪೇಗೌಡರ ಕೊಡುಗೆ ಏನು ಎಂಬುದನ್ನು ಮೊದಲು ಕಾರ್ನಾಡ್ ಅವರು ತಿಳಿದುಕೊಳ್ಳಬೇಕು. ಬಾಯಿ ಚಪಲಕ್ಕೆ ಮಾತನಾಡುವುದು ಅವರ ಘನತೆಗೆ ತಕ್ಕದ್ದಲ್ಲ ಎಂದಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿರುವುದು ಸರ್ಕಾರವಲ್ಲ. ಇದು ಬೆಂಗಳೂರು ಜನರ ತೀರ್ಮಾನ. ಕಾರ್ನಾಡ್ ಅವರು ಇದನ್ನು ತಿಳಿದುಕೊಂಡು ಮಾತನಾಡಲಿ. ಸಾಮರಸ್ಯದಿಂದಿರುವ ಜನರ ನಡುವೆ ಕಿಚ್ಚು ಹಚ್ಚುವ ಕೆಲಸವನ್ನು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಗಿರೀಶ್ ಕಾರ್ನಾಡ್ ಅವರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕಾರ್ನಾಡ್ ವಿರುದ್ಧ ಹೋರಾಟ ನಡೆಸುವುದಾಗಿ ನಾರಾಯಣಗೌಡ ಎಚ್ಚರಿಕೆ ನೀಡಿದರು. ಕಾರ್ನಾಡ್ ಹೇಳಿಕೆಯನ್ನು ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ನಟರಾಜ್ ಗೌಡ ತೀವ್ರವಾಗಿ ಖಂಡಿಸಿದ್ದಾರೆ. ಮುಖ್ಯಮಂತ್ರಿಗಳ ಎದುರಲ್ಲೇ ಕೆಂಪೇಗೌಡರಿಗೆ ಅವಮಾನ ಆಗಿರುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿರುವ ಅವರು, ಗಿರೀಶ್ ಕಾರ್ನಾಡ್ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Write A Comment