ಕರ್ನಾಟಕ

ಟಿಪ್ಪು ಮತಾಂಧನೂ ಅಲ್ಲ, ಹಿಂದೂ ವಿರೋಧಿಯೂ ಅಲ್ಲ ; ಮಡಿಕೇರಿಯಲ್ಲಿ ವ್ಯಕ್ತಿಯ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ

Pinterest LinkedIn Tumblr

siddaramaiah-delhi

ಬೆಂಗಳೂರು: ಟಿಪ್ಪು ಒಬ್ಬ ಅಪ್ಪಟ ದೇಶಪ್ರೇಮಿ. ಮತಾಂಧ ಅಲ್ಲ, ಹಿಂದೂ ವಿರೋಧಿಯೂ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿಲ್ಲ. ಜನರ ನಡುವೆ ದ್ವೇಷವನ್ನು ಹುಟ್ಟುಹಾಕುವುದು ಸರ್ಕಾರದ ಉದ್ದೇಶವಲ್ಲ, ಆ ಕ್ರಮವೂ ಸರಿಯಲ್ಲ. ಜನತೆ ದೀಪಾವಳಿಯ ಈ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.

ರಾಜಕೀಯ ಕಾರಣಕ್ಕಾಗಿ ಕೋಮುವಾದಿಗಳು ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ. ಆತ ಹಿಂದೂ ವಿರೋಧಿಯಾಗಿದ್ದ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಅದೆಲ್ಲ ಸತ್ಯಕ್ಕೆ ದೂರವಾದ ವಿಚಾರ. ಕೋಮುವಾದಿಗಳು ಜನರ ನಡುವೆ ದ್ವೇಷ ಹುಟ್ಟುಹಾಕಿ ಶಾಂತಿ ಕದಡಬೇಡಿ ಎಂದು ಅವರು ಮನವಿ ಮಾಡಿಕೊಂಡರು.

ಸರ್ಕಾರ ಜಯಂತಿ ಮಾಡುವಾಗ ಶಾಂತಿ ಉಲ್ಲಂಘನೆ ಮಾಡುವುದು, ಕೋಮು ಸೌಹಾರ್ದತೆಯನ್ನು ಕದಡುವುದು ಕೋಮುವಾದಿಗಳು. ಕೊಡಗಿನಲ್ಲಿ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ. ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಕಾನೂನು, ಸುವ್ಯವಸ್ಥೆ ಕಾಪಾಡುವಂತೆ ಅವರು ಹೇಳಿದರು.

ಮಡಿಕೇರಿಯಲ್ಲಿ ವಿಎಚ್ ಪಿ ನಾಯಕ ಸಾವಿಗೀಡಾಗಿರುವುದು ಲಾಠಿ ಚಾರ್ಜ್ ನಿಂದಲ್ಲ, ಅಥವಾ ಗುಂಡಿನ ದಾಳಿಯಿಂದಲ್ಲ. ಓಡಿ ಹೋಗುವಾಗ ಕೆಳಗೆ ಬಿದ್ದು ಸಾವಿಗೀಡಾಗಿದ್ದು. ಆದರೆ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಬಂದ್ ಆಚರಣೆ ಮಾಡುವ ಅಗತ್ಯವೇನಿತ್ತು? ಎಂದು ಅವರು ಪ್ರಶ್ನಿಸಿದರು.

ಇದು ಕೋಮು ಭಾವನೆಯನ್ನು ಸೂಚಿಸುತ್ತದೆ. ಶಾಂತಿ, ಸೌಹಾರ್ದತೆ ಕಾಪಾಡುವ ಬದಲಾಗಿ ಬಂದ್ ಆಚರಿಸಿ ಗಲಾಟೆ ಎಬ್ಬಿಸಿರುವ ಕ್ರಮ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Write A Comment