ಕರ್ನಾಟಕ

ವಿದ್ಯುತ್ ಕಣ್ಣಾ ಮುಚ್ಚಾಲೆ ಆಟ : ಪ್ರತಿಷ್ಠಿತರ ಸಮರದಲ್ಲಿ ಕತ್ತಲೆಯಾಯ್ತು ಕರುನಾಡು

Pinterest LinkedIn Tumblr

viಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಈ ಬಾರಿ ರಾಜ್ಯಕ್ಕೆ ಭೀಕರ ಬರಗಾಲ ಆವರಿಸಿದೆ.  ನಾಡಿನ ಪ್ರಮುಖ ಜಲಾಶಯಗಳು ಖಾಲಿ ಖಾಲಿಯಾಗಿವೆ. ಇದರ ಪರಿಣಾಮ ಕುಡಿಯುವ ನೀರು, ಕೃಷಿ ಚಟುವಟಿಕೆಗಳು, ಜಾನುವಾರುಗಳಿಗೆ ಮೇವು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಯನ್ನು ಪರಿಹರಿಸಬೇಕಾದದ್ದು ರಾಜ್ಯಸರ್ಕಾರದ ಕರ್ತವ್ಯ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ  ಡಿ.ಕೆ.ಶಿವಕುಮಾರ್ ನಡುವಿನ ಶೀತಲ ಸಮರ ಕರುನಾಡನ್ನು ಕತ್ತಲೆಯತ್ತ ಜಾರುವಂತೆ ಮಾಡಿದೆ.ಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ನಾಣ್ನುಡಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಡುವಿನ ಶೀತಲ ಸಮರದಿಂದ ಇಡೀ ಕರ್ನಾಟಕ ಕತ್ತಲ ಸಾಮ್ರಾಜ್ಯದಲ್ಲಿ ಮುಳುಗುವಂತಾಗಿದೆ.

ಇಡೀ ದೇಶದಲ್ಲೇ ದೊಡ್ಡ ಗಾತ್ರದ ಬಜೆಟ್ ಮಂಡಿಸುವ ಎರಡನೆ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದಲ್ಲಿ ವಿದ್ಯುತ್ ಸಮಸ್ಯೆಗೆ ಮೂಲ ಕಾರಣವೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ವೈಮನಸ್ಸು ಎಂಬುದು ಜಗಜ್ಜಾಹೀರಾಗಿದೆ. ವಿದ್ಯುತ್ ಖರೀದಿಗೆ ಮುಖ್ಯಮಂತ್ರಿಗಳು ಅನುಮತಿ ನೀಡದಿರುವುದು ಒಂದು ಕಾರಣವಾದರೆ ಉತ್ಪಾದನೆಗಿಂತ ಹೆಚ್ಚಿನ ಬೇಡಿಕೆ ಇರುವುದರಿಂದ ನಾನೇನು ಮಾಡಲಿ ಎಂದು ಇಂಧನ ಸಚಿವರು ಕೈಚೆಲ್ಲಿ ಕುಳಿತಿದ್ದಾರೆ. ಕೆಲ ದಿನಗಳ ಹಿಂದೆ ವಿದ್ಯುತ್ ಸಮಸ್ಯೆ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್‌ನ ಉನ್ನತಾಧಿಕಾರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಎಲ್ಲ ವಿದ್ಯುತ್ ವಿತರಣಾ ಕಂಪೆನಿಗಳ ಅಧಿಕಾರಿಗಳು ಕೂಡ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಹೊರರಾಜ್ಯಗಳಿಂದ 4500 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಅವಕಾಶ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕೇವಲ 1150 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಅನುಮತಿ ನೀಡಿದ್ದಾರೆ. ಇದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಒಪ್ಪಂದ ಮಾಡಿಕೊಂಡಿರುವ ರಾಜ್ಯಗಳು ಕೂಡ ವಿದ್ಯುತ್ ಪೂರೈಕೆ ಮಾಡಲು ಮೀನಾಮೇಷ ಎಣಿಸುತ್ತಿವೆ. ಕಿವಿ ಕಚ್ಚಿದ ಅಧಿಕಾರಿಗಳು: ಸಭೆಯಲ್ಲಿ ಶಿವಕುಮಾರ್ ಅರ್ಧಕ್ಕೇ ಹೊರಹೋದ ಬಳಿಕ ಅಧಿಕಾರಿಗಳು, ಸಚಿವರು ಬೇಡಿಕೆಗಿಂತ ಹೆಚ್ಚು ವಿದ್ಯುತ್ ಖರೀದಿಗೆ ಮುಂದಾಗಿದ್ದಾರೆ. ರಾಜ್ಯಕ್ಕೆ ಪ್ರಸ್ತುತ ಇಷ್ಟು ದೊಡ್ಡ ಪ್ರಮಾಣದ ವಿದ್ಯುತ್ ಖರೀದಿ ಅಗತ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.

ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಂಡರೂ ಸದ್ಯಕ್ಕೆ ಕಾರಿಡಾರ್ ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಹೊರ ರಾಜ್ಯಗಳಿಂದ ವಿದ್ಯುತ್ ಪೂರೈಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಸದ್ಯಕ್ಕೆ 1150 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಸಿಎಂ ಅನುಮತಿ ನೀಡಿದ್ದಾರೆ. ಇದರಿಂದ ಕೆರಳಿರುವ ಶಿವಕುಮಾರ್, ಬೇಡಿಕೆಯಂತೆ ವಿದ್ಯುತ್ ಒದಗಿಸಲು ಸಾಧ್ಯವಾಗದಿದ್ದರೆ ನಾನು ರೈತರಿಗೆ ಏನು ಉತ್ತರ ಕೊಡಬೇಕೆಂದು ಅರಚಾಡಿಕೊಂಡು ಹೊರ ಬಂದಿದ್ದಾರೆ. ಕಮಿಷನ್ ದಂಧೆ: ರಾಜ್ಯದಲ್ಲಿರುವ ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು. ಉಡುಪಿಯ ಯುಪಿಟಿಸಿಎಲ್, ರಾಯಚೂರಿನ ಆರ್‌ಟಿಪಿಎಸ್ ಬಳ್ಳಾರಿಯ ಕುಡತಿನಿ ವಿದ್ಯುತ್ ಉತ್ಪಾದನಾ ಘಟಕ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು 3000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹು ದೆಂಬುದು ಅಧಿಕಾರಿಗಳ ವಾದವಾಗಿದೆ.

ಆದರೆ, ಇದಕ್ಕೆ ಶಿವಕುಮಾರ್ ಉತ್ಪಾದನೆ ಮಾಡುವ ಬದಲು ನಾವು ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿದರೆ ತಾತ್ಕಾಲಿಕವಾಗಿ ಸಮಸ್ಯೆಯನ್ನು ಪರಿಹರಿಸಬಹುದು. ನಮ್ಮಲ್ಲಿರುವ ಘಟಕಗಳಿಂದ ಇಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿಲ್ಲ ಎಂಬ ಮೊಂಡು ವಾದ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ವಿದ್ಯುತ್ ಖರೀದಿ ಎಂಬುದು ಹಗಲು ದರೋಡೆಯಾಗಿದೆ. ಕೆಲವು ಖಾಸಗಿ ಕಂಪೆನಿಗಳು, ಮಧ್ಯವರ್ತಿಗಳು ಸೇರಿಕೊಂಡು ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರದಲ್ಲಿ ವಿದ್ಯುತ್ ಮಾರಾಟ ಮಾಡುವ ಕಂಪೆನಿಗಳಿವೆ. ಸಂಬಂಧಪಟ್ಟವರಿಗೆ ಇಂತಿಷ್ಟು ಕಮಿಷನ್ ನೀಡಿದರೆ ಸಾಕು, ರಾತ್ರೋರಾತ್ರಿಯೇ ವಿದ್ಯುತ್ ಸರಾಗವಾಗಿ ಹರಿದುಬರುತ್ತದೆ. ವಿದ್ಯುತ್ ಖರೀದಿಯಲ್ಲಿ ಭಾರೀ ಪ್ರಮಾಣದ ಗೋಲ್‌ಮಾಲ್ ನಡೆಯಲಿದೆ ಎಂಬ ಸೂಚನೆ ಸಿಕ್ಕ ಕಾರಣವೇ ಮುಖ್ಯಮಂತ್ರಿ ಇದಕ್ಕೆ ಕೊಕ್ಕೆ ಹಾಕಿದ್ದಾರೆಂದು ತಿಳಿದುಬಂದಿದೆ. ರಾಜ್ಯದಲ್ಲಿ ಬರಗಾಲ ಆವರಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಈ ಹಿಂದೆ ಇದಕ್ಕಿಂತಲೂ ಭೀಕರ ಬರಗಾಲ ಎದುರಾದ ಸಂದರ್ಭದಲ್ಲಿ ಸರ್ಕಾರಗಳು ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಿರುವ ನಿದರ್ಶನಗಳು ಸಾಕಷ್ಟಿವೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ ಅವರುಗಳ ಕಾಲದಲ್ಲಿ ವಿದ್ಯುತ್ ಸಮಸ್ಯೆ ಬಂದಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ರಾಜ್ಯದಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ, ಬೇಡಿಕೆಗಿಂತ ಹೆಚ್ಚಿನ ವಿದ್ಯುತ್ ಖರೀದಿ ಮಾಡಿದರೆ ಸಹಜವಾಗಿ ನೂರೆಂಟು ಅನುಮಾನಗಳು ಮೂಡುತ್ತವೆ. ಕೈ ಕೊಟ್ಟ ಘಟಕಗಳು ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳು ವಿದ್ಯುತ್ ಉತ್ಪಾದನೆಯನ್ನೇ ಸ್ಥಗಿತಗೊಳಿಸಿವೆ. ಒಂದೆಡೆ ಬರಗಾಲ ಮತ್ತೊಂದೆಡೆ ಕಲ್ಲಿದ್ದಲು ಪೂರೈಕೆ ಇದಕ್ಕೆ ಇನ್ನೊಂದು ಕಾರಣವಾಗಿದೆ. ರಾಯಚೂರು, ಉಡುಪಿ, ಬಳ್ಳಾರಿಯ ವಿದ್ಯುತ್ ಉತ್ಪಾದನಾ ಘಟಕಗಳಿಗೆ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ವಿದ್ಯುತ್ ಸ್ಥಗಿತವಾಗಿದೆ.

ರಾಯಚೂರಿನ ಥರ್ಮಲ್ ಪವರ್ ಪ್ಲಾಂಟ್‌ನಿಂದ 200 ಮೆಗಾವ್ಯಾಟ್, ಉಡುಪಿಯ ಪವರ್ ಕಾರ್ಪೊರೇಷನ್‌ನಿಂದ 600 ಮೆಗಾವ್ಯಾಟ್, ಬಳ್ಳಾರಿಯ ಘಟಕದಿಂದ 500 ಹಾಗೂ ಸಿಜಿಎಸ್‌ನಿಂದ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಕೇಂದ್ರ ಸರ್ಕಾರ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಈ ಘಟಕಗಳು ಕೈಕೊಟ್ಟಿವೆ. ವಿದ್ಯುತ್ ಬಿಗಡಾಯಿಸಲು ಇದು ಕೂಡ ಕಾರಣ.
ಕೈಗಾರಿಕೆಗಳಿಗೆ ದೇವರೇ ಗತಿ ಇನ್ನು ಈ ಬಾರಿ ವಿದ್ಯುತ್ ಸಮಸ್ಯೆ ಎದುರಾಗಿರುವುದು ಮುಖ್ಯವಾಗಿ ಕೈಗಾರಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎರಡನೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗ, ಶಿವಮೊಗ್ಗ, ತುಮಕೂರು ಸೇರಿದಂತೆ ಮತ್ತಿತರ ಕಡೆ ಕೈಗಾರಿಕೆಗಳಿಗೂ ಇದರ ಬಿಸಿ ತಟ್ಟಿದೆ.

ರಾಜ್ಯದಲ್ಲಿ ಶೇ.30ರಷ್ಟು ಬೃಹತ್ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿವೆ. ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿರುವುದರಿಂದ ಒಂದು ವಾರಕ್ಕೆ ಕೈಗಾರಿಕೆಗಳಿಗೆ ಕೇವಲ 100 ರಿಂದ 150 ಮೆಗಾವ್ಯಾಟ್ ಪೂರೈಕೆ ಮಾಡಲಾಗುತ್ತಿದೆ. ಇದರ ಪರಿಣಾಮ ಕೈಗಾರಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನಾ ಸಾಮರ್ಥ್ಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿವೆ.  ಒಂದು ಅಂದಾಜಿನ ಪ್ರಕಾರ, ಬೆಂಗಳೂರಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಪ್ರದೇಶ ಸೇರಿದಂತೆ ಒಟ್ಟು 10 ಸಾವಿರ ಕೈಗಾರಿಕೆಗಳು ಬೆಂಗಳೂರಿನಲ್ಲೇ ಇವೆ. ದಿನದ 24 ಗಂಟೆಯೂ ಕೈಗಾರಿಕೆಗಳು ಉತ್ಪಾದನಾ ಸಾಮರ್ಥ್ಯ ಆರಂಭಿಸಿದರೆ, 2500 ದಿಂದ 3000 ಮೆಗಾವ್ಯಾಟ್ ವಿದ್ಯುತ್ ಬೇಕು. ಆದರೆ, ರಾಜ್ಯ ಸರ್ಕಾರ ಕೈಗಾರಿಕೆಗಳಿಗೂ ಕೂಡ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿದೆ.ಉತ್ಪಾದನಾ ಸಾಮರ್ಥ್ಯ
ರಾಜ್ಯದಲ್ಲಿ ಒಟ್ಟು 9021 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದೆ. ಸದ್ಯಕ್ಕೆ 8700 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಆದರೆ, ಪ್ರತಿದಿನ 4750 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.

ಉತ್ಪಾದನಾ ಸಾಮರ್ಥ್ಯ ಮತ್ತು ಬೇಡಿಕೆ ಪ್ರಮಾಣ ಶೇ.50ರಷ್ಟು ವ್ಯತ್ಯಾಸವಾಗುವುದರಿಂದ ರೈತರು ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉಡುಪಿಯ ಯುಪಿಟಿಸಿಎಲ್‌ನಿಂದ 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಆದರೆ, ಹಾಲಿ ಇಲ್ಲಿ 561 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ರಾಯಚೂರಿನ ಥರ್ಮಲ್ ಪವರ್ ಪ್ಲಾಂಟ್‌ನಲ್ಲಿ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದರೆ, ಸದ್ಯಕ್ಕೆ 1100 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ಬಳ್ಳಾರಿಯ ಕುಡತಿನಿ ಪವರ್ ಪ್ಲಾಂಟ್‌ನಿಂದ 1000 ಮೆಗಾವ್ಯಾಟ್ ಉತ್ಪಾದಿಸುವ ಸಾಮರ್ಥ್ಯವಿತ್ತು. ಇಲ್ಲಿ ಸದ್ಯಕ್ಕೆ ಘಟಕ ಸ್ಥಗಿತಗೊಂಡಿದೆ. ಇದರಿಂದ ಭಾರೀ ಹಿನ್ನಡೆಯಾಗಿದೆ. ಲೋಡ್ ಶೆಡ್ಡಿಂಗ್ ಜಾರಿ

ಈ ಬಾರಿ ಬರಗಾಲ ಆವರಿಸಿದ ಪರಿಣಾಮ ಈಗಾಗಲೇ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕು ಗಂಟೆ ಲೋಡ್ ಶೆಡ್ಡಿಂಗ್ ಮಾಡಿದರೆ, ಎರಡನೆ ಹಂತದ ನಗರಗಳಾಗಿರುವ ಮೈಸೂರು, ಮಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಕಲಬುರಗಿ, ಬೀದರ್, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಗಳಲ್ಲಿ ಆರು ಗಂಟೆ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ಇನ್ನು ಮೂರನೆ ಹಂತದ ನಗರಗಳಾದ ರಾಮನಗರ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಉಡುಪಿ, ಕಾರವಾರ, ಹಾಸನ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಹಾವೇರಿ, ಯಾದಗಿರಿ ಮತ್ತಿತರ ಕಡೆ 8 ಗಂಟೆಗೂ ಹೆಚ್ಚು ಕಾಲ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ.

ಇನ್ನು ತಾಲೂಕು, ಹೋಬಳಿ, ಗ್ರಾಮೀಣ ಭಾಗಗಳಲ್ಲಿ ದಿನಕ್ಕೆ ಆರು ಗಂಟೆ ಮಾತ್ರ ತ್ರಿ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ವಾಸ್ತವವಾಗಿ 4 ರಿಂದ 5 ಗಂಟೆ ಮಾತ್ರ ತ್ರಿ ಫೇಸ್ ವಿದ್ಯುತ್ ಇದ್ದರೆ ಉಳಿದ ಅವಧಿಯಲ್ಲಿ ಹೋದ ಪುಟ್ಟ ಬಂದ ಪುಟ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಗ್ರಾಮೀಣ ಭಾಗಗಳು ಕಳೆದ ಎರಡು ತಿಂಗಳಿನಿಂದ ಕತ್ತಲೆಯ ಸಾಮ್ರಾಜ್ಯವಾಗಿವೆ. ಉತ್ಪಾದನಾ ಸಾಮರ್ಥ್ಯ ರಾಜ್ಯದಲ್ಲಿ ಉಷ್ಣ ವಿದ್ಯುತ್, ಜಲ ವಿದ್ಯುತ್, ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು 9021 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದೆ.  ಕೇಂದ್ರ ಸರ್ಕಾರ ಈ ಬಾರಿ ದೇಶದೆಲ್ಲೆಡೆ ಬರಗಾಲ ಆವರಿಸಿರುವುದರಿಂದ ಬೇಡಿಕೆಗನುಗುಣವಾಗಿ ಕಲ್ಲಿದ್ದಲನ್ನು ಪೂರೈಕೆ ಮಾಡುತ್ತಿಲ್ಲ.

ಕೈ ಕೊಟ್ಟ ಬೆಳೆಗಳು
ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಗ್ರಾಮೀಣ ಭಾಗಗಳಲ್ಲಿ ಬೆಳೆದು ನಿಂತ  ಬೆಳೆಗಳು ಒಣಗಿ ನಿಂತಿವೆ. ಕಡೆ ಪಕ್ಷ ಆರು ಗಂಟೆಯಾದರೂ ತ್ರಿ ಫೇಸ್ ವಿದ್ಯುತ್ ಪೂರೈಕೆಯಾಗದೆ ತರಕಾರಿ ಬೆಳೆಗಳಾದ ಟೊಮ್ಯಾಟೋ, ಮೆಣಸಿನಕಾಯಿ, ಕ್ಯಾರೆಟ್, ಬೀನ್ಸ್, ಬೀಟ್ರೂಟ್, ಆಲೂಗಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ವಾಣಿಜ್ಯ ಬೆಳೆಗಳಾದ ಅಡಿಕೆ, ಬಾಳೆ, ಕಬ್ಬು, ಭತ್ತ ಸೇರಿದಂತೆ ಮತ್ತಿತರ ಬೆಳೆಗಳ ಪರಿಸ್ಥಿತಿ ಅಯೋಮಯವಾಗಿದೆ.ದಿನಕ್ಕೆ 4 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ಇಷ್ಟು ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಇದ್ದರೆ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂದು ನಾಡಿನ ಅನ್ನದಾತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಕುಡಿಯುವ ನೀರಿಗೂ ಸಂಕಷ್ಟ ಈ ಬಾರಿಯ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಕುಡಿಯುವ ನೀರು, ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.ಕಳೆದ ಜೂನ್ ತಿಂಗಳಿನಿಂದಲೇ ರಾಜ್ಯದ ಸುಮಾರು 15 ಜಿಲ್ಲೆಗಳಲ್ಲಿ ಸರಾಸರಿ ಪ್ರಮಾಣಕ್ಕಿಂತಲೂ ಮಳೆಯ ಪ್ರಮಾಣ ಕಡಿಮೆಯಾಯಿತು. ಬೀದರ್, ಗುಲ್ಬರ್ಗ, ವಿಜಾಪುರ, ಯಾದಗಿರಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಹಾಸನಗಳಲ್ಲಿ ಮಳೆಯ ಪ್ರಮಾಣ ಸರಾಸರಿಗಿಂತ ಕಡಿಮೆಯಾಗಿದೆ. ಇದ್ದದ್ದರಲ್ಲಿ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕಾರವಾರ, ಬೆಳಗಾವಿ, ಕೊಡಗು ಮತ್ತಿತರ ಕಡೆ ಒಂದಿಷ್ಟು ಉತ್ತಮ ಮಳೆಯಾಗಿದೆ. ರಾಜ್ಯದ 20 ಜಿಲ್ಲೆಗಳ 135 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು, ನದಿಗಳು ಸೇರಿದಂತೆ ನೀರಿನ ಮೂಲವೇ ಬತ್ತಿ ಹೋಗಿರುವುದರಿಂದ ಮನುಷ್ಯರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದಂತಾಗಿದೆ. ಮತ್ತೊಂದೆಡೆ ಮೇವಿನ ಕೊರತೆಯೂ ಎದುರಾಗಿದ್ದು, ಜಾನುವಾರುಗಳ ಸ್ಥಿತಿ ಮುಂದೇನು ಎಂಬಂತಾಗಿದೆ.

ಗುಳೆ ಹೊರಟ ಜನ
ಭೀಕರ ಬರಗಾಲಕ್ಕೆ ಸಿಲುಕಿರುವ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಜನರು ಜೀವನ ಅರಸಿ ನೆರೆ ರಾಜ್ಯಗಳತ್ತ ಗುಳೆ ಹೊರಡುತ್ತಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಗದಗ, ಬೀದರ್, ಗುಲ್ಬರ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಭಾಗದ ಜನತೆ ತಮ್ಮ ಕುಟುಂಬ ಸಮೇತ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದತ್ತ ಗುಳೆ ಹೋಗುತ್ತಿದ್ದಾರೆ. ಪ್ರತಿದಿನ ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ಜಿಲ್ಲಾ ಬಸ್ ನಿಲ್ದಾಣಗಳಲ್ಲಿ ಸುಮ್ಮನೆ ನಿಂತುಕೊಂಡರೂ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಹೋಗುವ ಪ್ರತಿ ಬಸ್‌ನಲ್ಲೂ ಕರ್ನಾಟಕದ ಜನತೆಯೇ ಜೀವನಕ್ಕಾಗಿ ಗುಳೆ ಹೋಗುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ.

ಬರಿದಾದ ಜಲಾಶಯಗಳು

ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನೆ ಮಾಡುವ ಜಲಾಶಯಗಳಾದ ಲಿಂಗನಮಕ್ಕಿ ಖಾಲಿ ಖಾಲಿಯಾಗಿದೆ. ಇನ್ನು ಕುಡಿಯುವ ನೀರು ಬಳಕೆ ಮಾಡಿಕೊಳ್ಳುವ ಕೆಆರ್‌ಎಸ್, ಕಬಿನಿ, ಹಾರಂಗಿ, ತುಂಗಭದ್ರಾ, ಕೃಷ್ಣಾ ಜಲಾಶಯಗಳು ಕೂಡ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ.ಲಿಂಗನಮಕ್ಕಿ ಜಲಾಶಯದ ಒಟ್ಟು ಸಾಮರ್ಥ್ಯ 1819 ಅಡಿಯಾದರೆ, ಪ್ರಸ್ತುತ 1792.82 ಅಡಿ ನೀರು ಸಂಗ್ರಹಣವಾಗಿದೆ. ಕಳೆದ ವರ್ಷಕ್ಕಿಂತ 26.18 ಅಡಿ ನೀರಿನ ಕೊರತೆ ಎದುರಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆ ಮೇಲೆ ಭಾರೀ ಪರಿಣಾಮ ಬೀರಿದೆ. ಸೂಫಾ ಜಲಾಶಯದಲ್ಲಿ ಒಟ್ಟು ನೀರಿನ ಮಟ್ಟ 1849.92 ಅಡಿ ಇದ್ದರೆ, ಪ್ರಸ್ತುತ 1773.20 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 77 ಅಡಿ ನೀರು ಕಡಿಮೆಯಾಗಿದೆ. ಇದೇ ರೀತಿ ವರಾಹಿ, ಹಾರಂಗಿ, ಹೇಮಾವತಿ, ಘಟಪ್ರಭ, ಮಲಪ್ರಭೆ ಸೇರಿದಂತೆ ಎಲ್ಲ ಜಲಾಶಯಗಳೂ ಖಾಲಿ ಖಾಲಿಯಾಗಿವೆ.

ಪಾತಾಳಕ್ಕಿಳಿದ ಕೆಆರ್‌ಎಸ್
ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸುವ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಕುಸಿಯತೊಡಗಿದೆ. ಈ ಅಣೆಕಟ್ಟಿನಲ್ಲಿ ಒಟ್ಟು 124.80 ಅಡಿ ನೀರು ಸಂಗ್ರಹಿಸಿಟ್ಟುಕೊಳ್ಳಬಹುದು. ಪ್ರಸ್ತುತ 107.65 ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 17 ಅಡಿ ನೀರಿನ ಕೊರತೆ ಎದುರಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕೃಷಿ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಪೂರೈಕೆ ಮಾಡುವುದು ಕಷ್ಟಕರ ಎಂಬುದು ಅಧಿಕಾರಿಗಳ ಅಂಬೋಣ.  ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ನೀರನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Write A Comment