ಕರ್ನಾಟಕ

ಕಣಕುಂಬಿಯಲ್ಲಿ ಕಳಸಾ ಬಂಡೂರಿ ಕಿಚ್ಚು : ದೆಹಲಿಯಲ್ಲಿ ಧರಣಿ

Pinterest LinkedIn Tumblr

baಬೆಳಗಾವಿ(ಕಣಕುಂಬಿ)- ಮಹದಾಯಿ ನದಿ ತಿರುವು ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಶ್ರೀ ಕ್ಷೇತ್ರ ಕೂಡಲ ಸಂಗಮದಿಂದ ಗೋವಾದ ಮಹದಾಯಿ ನದಿವರೆಗೆ ಮಠಾಧೀಶರ ನೇತೃತ್ವದಲ್ಲಿ ರೈತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆ ಇಂದು ಮಲಪ್ರಭಾ ನದಿಯ ಉಗಮ ಸ್ಥಾನವಾದ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಮುಕ್ತಾಯಗೊಂಡಿತು.
ಸಹಸ್ರ ಸಂಖ್ಯೆಯಲ್ಲಿ ರೈತರು ಕಣಕುಂಬಿಯಲ್ಲಿ  ಜಮಾಯಿಸಿದ್ದು, ಯಾವುದೇ  ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಧಿಕಾರಿ ಜಯರಾಂ  ನಿಷೇಧಾಜ್ಞೆ ಹೊರಡಿಸಿದ್ದಾರೆ.

ಕಳಸಾಬಂಡೂರಿ ಯೋಜನೆ  ಜಾರಿಯಾಗಬೇಕೆಂದು ಭಗವಂತನಲ್ಲಿ ಮೊರೆ ಹೋದ ಹೋರಾಟಗಾರರು ನದಿಯ ದಡದಲ್ಲಿಯೇ ಹೋಮವನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಹುಲಿ ದೇವಸ್ಥಾನದಲ್ಲಿ ರಾಮದುರ್ಗದ ಪ್ರಹ್ಲಾದಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಗಣಪತಿ ಹೋಮ ಹವನ ಕಾರ್ಯಕ್ರಮಗಳು ಬೆಳಗ್ಗೆಯಿಂದಲೇ  ಆರಂಭವಾಗಿದೆ. ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಸಹಸ್ರಾರು ರೈತರು ಲಾರಿ ಹಾಗೂ ಟ್ರಾಕ್ಸ್‌ಗಳಲ್ಲಿ ಕಣಕುಂಬಿಗೆ ತೆರಳಿದ್ದು, ಇಡೀ ಕಣಕುಂಬಿಯೇ ಹಸಿರು ಟವಲ್‌ಗಳಿಂದ ಕಂಗೊಳಿಸುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಸ್ವಾಮೀಜಿಗಳು ಕಣಕುಂಬಿಗೆ ತೆರಳಿದ್ದಾರೆ.

ನಂತರ ಬಹಿರಂ ಸಭೆ ನಡೆಯಲಿದ್ದು , 50 ಸಾವಿರಕ್ಕೂ ಹೆಚ್ಚು ಜನರು  ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷಾತೀತ ಹೋರಾಟ ಸಮಿತಿಯ ವಿರೇಶ್ ಸೊಬರದ ಮಠ, ವಿಜಯ ಕುಲಕರ್ಣಿ ಈ ಸಂಜೆಗೆ ತಿಳಿಸಿದರು.
ರೈತ ಬಂಡಾಯಕ್ಕೆ ನಾಂದಿ ಹಾಡಿದ ನರಗುಂದ, ನವಲಗುಂದದಿಂದ ಸುಮಾರ 5 ಸಾವಿರಕ್ಕೂ  ಹೆಚ್ಚು ರೈತರು ಕಣಕುಂಬಿಯಲ್ಲಿ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲು ಲಾರಿ ಹಾಗೂ ಟ್ರಾಕ್ಸ್ ಮೂಲಕ ತೆರಳಿದ್ದಾರೆ. ಧಾರವಾಡದ ರೇವಣ್ಣ ಸಿದ್ಧೇಶ್ವರ ಮಠದ ಶ್ರೀಗಳ ನೇತೃತ್ವದಲ್ಲಿ ಸಾವಿರಾರು ಹೋರಾಟಗಾರರು ತೆರಳಿದ್ದಾರೆ. ಹೋರಾಟಗಾರರಾದ ಬಿ.ಡಿ.ಹಿರೇಮಠ, ಗುರುರಾಜ್, ಹುಣಸಿ ಮರದ ಲಕ್ಷ್ಮಣ್ ಬಕ್ಕಾಯಿ ಸೇರಿದಂತೆ ಅನೇಕರು ಈಗಾಗಲೇ ಕಣಕುಂಬಿಗೆ ತೆರಳಿದ್ದಾರೆ.

ನಿರ್ಣಯ: ಕಳೆದ ಮೂರು ದಶಕಗಳಿಂದ ಕಳಸಾ- ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಾ ಬಂದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಭಾಗದ ಜನ ಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣ ಎಂದು ತಿಳಿಸಿದ ಹೋರಾಟಗಾರರು ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಶೀಘ್ರ  ದೆಹಲಿಗೆ ತೆರಳಿ ಜಂತರ್‌ಮಂತರ್‌ನಲ್ಲಿ ಧರಣಿ ನಡೆಸುವ ಬಗ್ಗೆ ಬಹಿರಂಗ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುವುದೆಂದು ಈ ಬಗ್ಗೆ ಹೋರಾಟದ ರೂಪು ರೇಷೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದು  ತಿಳಿಸಿದ್ದಾರೆ. ಕಳಸಾಬಂಡೂರಿ ನಾಲಾ ತಡೆಗೋಡೆ ರಕ್ಷಣೆಗೆ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಭಾಗದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಬೆಳಗಾವಿ ಎಸ್‌ಪಿ ರವಿಕಾಂತೇಗೌಡ ತಿಳಿಸಿದ್ದಾರೆ. ಹೋರಾಟಗಾರರಾದ ಶಿವಯ್ಯ ಪೂಜಾರ್, ವೀರೇಂದ್ರ ಸೊಬರದ ಮಠ ಶಂಕ್ರಪ್ಪ , ಅಂಬಲಿ, ಪರಶುಮ್ ಜಂಬಗಿ, ಬಿ.ಎಸ್.ಉಪ್ಪಾರ್ ವೀರಬಸಪ್ಪ ಹೂಗಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Write A Comment