ಕರ್ನಾಟಕ

ಹಾಸ್ಟೆಲ್‌ ಮೇಲೆ ‘ವಾಟ್ಸ್‌ಆ್ಯಪ್‌’ ನಿಗಾ

Pinterest LinkedIn Tumblr

anjaneya-ಪಿ.ವಿ. ಪ್ರವೀಣ್‌ಕುಮಾರ್‌
ಬೆಂಗಳೂರು: ರಾಗಿ ಮುದ್ದೆ, ಕೋಳಿ ಸಾರು, ಅನ್ನ,  ಜತೆಗೆ ಸೌತೆಕಾಯಿ… ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯವೊಂದರಲ್ಲಿ ಮಧ್ಯಾಹ್ನದ ಊಟಕ್ಕೆ ನೀಡಿದ್ದ ಆಹಾರ ಪದಾರ್ಥಗಳಿವು.  ಊಟಕ್ಕಾಗಿ ಸಿದ್ಧಪಡಿಸಿದ ಆಹಾರದ ಚಿತ್ರದ ಜತೆ ವಿದ್ಯಾರ್ಥಿಗಳು ಊಟ ಸೇವಿಸುವ ಚಿತ್ರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಮೊಬೈಲ್‌ಗಳಲ್ಲಿ ಹರಿದಾಡುತ್ತದೆ.

ವಿದ್ಯಾರ್ಥಿನಿಲಯದಲ್ಲಿ ನೀಡುವ ಊಟಕ್ಕೂ, ಅದರ ಚಿತ್ರ ಅಧಿಕಾರಿಗಳ ಮೊಬೈಲ್‌ಗಳಲ್ಲಿ ಹರಿದಾಡುವುದಕ್ಕೂ  ಸಂಬಂಧ ಇದೆ. ವಿದ್ಯಾರ್ಥಿ ನಿಲಯಗಳ ಮೇಲೆ ನಿಗಾ ಇಡಲು ಇಲಾಖೆ ಕಂಡುಕೊಂಡ ಉಪಾಯ ಇದು.

ಇಲಾಖೆಯ ಆಯುಕ್ತರಾದ ಎಂ.ವಿ. ಸಾವಿತ್ರಿ ಅವರು ಜಿಲ್ಲಾ  ಸಮಾಜ ಕಲ್ಯಾಣ ಅಧಿಕಾರಿಗಳನ್ನು ಒಳಗೊಂಡ ‘ವಾಟ್ಸ್‌ಆ್ಯಪ್‌’ ಬಳಗ ರಚಿಸಿಕೊಂಡಿದ್ದಾರೆ. ವಿದ್ಯಾರ್ಥಿ ನಿಲಯಗಳಿಗೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಭೇಟಿ ನೀಡಿ ಅಲ್ಲಿನ  ಊಟದ ವ್ಯವಸ್ಥೆ ಹಾಗೂ ಇತರ ಚಟುವಟಿಕೆ ಕುರಿತ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಬಳಗದಲ್ಲಿ ಹಂಚಿಕೊಳ್ಳಬೇಕು.   ಈ ಮಾಹಿತಿಯನ್ನು  ಆಯುಕ್ತರೂ ಗಮನಿಸುತ್ತಾರೆ.

‘ಇದಕ್ಕಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಇಲಾಖೆಯೇ  ಮೊಬೈಲ್ ಸಿಮ್‌ಗಳನ್ನು ಒದಗಿಸಿದೆ.  ಇಲಾಖೆಯ ಬಹುತೇಕ ಅಧಿಕಾರಿಗಳು ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ.  ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಹಾಗೂ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಬಳಗ ಜಿಲ್ಲಾ ಮಟ್ಟದಲ್ಲಿದೆ.  ವಾಟ್ಸ್‌ಆ್ಯಪ್‌ ಮೂಲಕವೇ ಇಲಾಖೆಯ  ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ’ ಎಂದು ಸಾವಿತ್ರಿ  ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ ಎಷ್ಟು ವಿದ್ಯಾರ್ಥಿಗಳು ಊಟ ಮಾಡಿದ್ದಾರೆ, ಅಡುಗೆ ಏನು ಎಂಬ ಬಗ್ಗೆ ಮೇಲ್ವಿಚಾರಕರು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದೇನೆ. ಇದರಿಂದಾಗಿ ಊಟದ ವ್ಯವಸ್ಥೆ ಬಗ್ಗೆ ನಿಗಾ ಇಡುವುದು ಸುಲಭವಾಗಿದೆ’ ಎಂದು ಅವರು ವಿವರಿಸಿದರು.

‘ವಾಟ್ಸ್‌ಆ್ಯಪ್‌ ಬಳಗದಿಂದ ಎರಡು ರೀತಿಯ ಪ್ರಯೋಜನಗಳಾಗಿವೆ. ಮಾಹಿತಿಯನ್ನು ಸುಲಭವಾಗಿ ಹಂಚಿಕೊಳ್ಳಬಹುದು. ಪ್ರತಿಕ್ರಿಯೆಯನ್ನು ತಕ್ಷಣವೇ ನೀಡಬಹುದು.  ಹೆಚ್ಚಿನ ಮಾಹಿತಿತಕ್ಷಣ ತರಿಸಿಕೊಳ್ಳಬಹುದು’ ಎಂದರು.

‘ಊಟಕ್ಕೆ ಹಾಜರಿದ್ದ ವಿದ್ಯಾರ್ಥಿಗಳ  ಸಂಖ್ಯೆ ಬಗ್ಗೆ ಮೇಲ್ವಿಚಾರಕರು ಸುಳ್ಳು ಲೆಕ್ಕ ಕೊಡುತ್ತಾರೆ ಎಂಬ ಆರೋಪ ಇರುವುದು ನಿಜ. ಬಯೊಮೆಟ್ರಿಕ್‌ ವ್ಯವಸ್ಥೆಯನ್ನು ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಇದರಿಂದ ವಿದ್ಯಾರ್ಥಿಗಳ ಹಾಜರಿ ಬಗ್ಗೆ ನಿಖರ ಮಾಹಿತಿ ಸಿಗುತ್ತದೆ. ವಾಟ್ಸ್‌ಆ್ಯಪ್‌ ಮೂಲಕ ಅಡುಗೆಯ ಚಿತ್ರವನ್ನೂ ತರಿಸಿಕೊಳ್ಳುವುದರಿಂದ ಮೇಲ್ವಿಚಾರಕರು ಗುಣಮಟ್ಟದ ಆಹಾರ ಪೂರೈಸುವ ಬಗ್ಗೆ ಹೆಚ್ಚು ಆಸ್ಥೆ ವಹಿಸಬಹುದು ಎಂಬ ನಿರೀಕ್ಷೆ ನಮ್ಮದು’ ಎಂದರು.

ಪ್ರೇರಣೆ: ‘ವಿದ್ಯಾರ್ಥಿನಿಲಯದಲ್ಲಿ ಇತರರಿಗೆ ಮಾದರಿ ಆಗುವಂಥ ಚಟುವಟಿಕೆ ಗಳನ್ನು ಹಮ್ಮಿಕೊಂಡಿದ್ದರೆ ಅದನ್ನು ಅಧಿಕಾರಿಗಳು ವಾಟ್ಸ್‌ಆ್ಯಪ್‌ ಬಳಗದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ವಿದ್ಯಾರ್ಥಿ ನಿಲಯವೊಂದರಲ್ಲಿ ಉತ್ತಮವಾದ ಕೈತೋಟ ನಿರ್ಮಿಸಿದ ಚಿತ್ರವನ್ನು ಹಂಚಿಕೊಂಡಿದ್ದರು. ಬೇರೆ ಜಿಲ್ಲೆಗಳ ಅಧಿಕಾರಿಗಳಿಗೂ ಇದರಿಂದ ಪ್ರೇರಣೆ ಸಿಕ್ಕಿದೆ’ ಎಂದು ಅವರು ತಿಳಿಸಿದರು.

ಕುಂದುಕೊರತೆ ಬಗ್ಗೆಯೂ ನಿಗಾ: ‘ಕುಂದುಕೊರತೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಕ್ಕೂ ವಾಟ್ಸ್‌ಆ್ಯಪ್‌ ಬಳಗ ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಚಿತ್ರವನ್ನು ಮೊಬೈಲ್‌ನಲ್ಲೇ ಹಂಚಿಕೊಳ್ಳುವಂತೆ ಸೂಚಿಸಿದೆ.  ಯಾವ ಜಿಲ್ಲೆಯಲ್ಲಿ ಸಮವಸ್ತ್ರವನ್ನು ಸಕಾಲದಲ್ಲಿ ಮಕ್ಕಳಿಗೆ ತಲುಪಿಸಿಲ್ಲ, ಸಮವಸ್ತ್ರಗಳ ಗುಣಮಟ್ಟ ಚೆನ್ನಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಇದರಿಂದ ನೆರವಾಯಿತು’ ಎಂದು ಅವರು ವಿವರಿಸಿದರು.  ‘ಇಲಾಖೆಯ ಅಧೀನದಲ್ಲಿ ಒಟ್ಟು 1,724 ವಿದ್ಯಾರ್ಥಿ ನಿಲಯಗಳಿವೆ.  ಇವೆಲ್ಲವುಗಳ ಮೇಲೆ ನಿಗಾ ಇಡಲು ಕಷ್ಟವಾಗುತ್ತಿತ್ತು. ಈಗ, ಬೀದರ್‌ನಲ್ಲಿ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೆ, ಅದರ  ಪ್ರಗತಿ ಬಗ್ಗೆ  ಬೆಂಗಳೂರಿನಿಂದಲೇ ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ಪಡೆಯಬಹುದು.’ ಎಂದರು.

ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯಾರ್ಥಿ ನಿಲಯಗಳ ಆಡಳಿತ ಸುಧಾರಣೆಗೆ ಪೂರ್ಣ ಸಹಮತ ಇದೆ. ಸರ್ಕಾರದ ಹಣ ಸದ್ವಿನಿಯೋಗ ಆಗಬೇಕು.- ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ

Write A Comment