ಕರ್ನಾಟಕ

ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಗಂಟೆ, ನಗರಗಳಲ್ಲಿ ನಾಲ್ಕು ಗಂಟೆ ಲೋಡ್‌ ಶೆಡ್ಡಿಂಗ್‌

Pinterest LinkedIn Tumblr

kattalalli-karnatttaalaಬೆಂಗಳೂರು: ರಾಜ್ಯದ ಗ್ರಾಮೀಣ ಭಾಗಗಳಲ್ಲಿ 10 ಗಂಟೆ, ನಗರಗಳಲ್ಲಿ 4 ಗಂಟೆ ಹಾಗೂ ಬೆಂಗಳೂರಿನಲ್ಲಿ ಮೂರು ಗಂಟೆ ವಿದ್ಯುತ್‌ ಕಡಿತ (ಲೋಡ್‌ ಶೆಡ್ಡಿಂಗ್‌) ಮಾಡಲು ಇಂಧನ ಇಲಾಖೆ ತೀರ್ಮಾನಿಸಿದೆ.

ಜಲಾಶಯಗಳಲ್ಲಿ ನೀರಿನ ಪ್ರಮಾಣ  ಕಡಿಮೆ ಇರುವ ಕಾರಣ ಜಲವಿದ್ಯುತ್‌ ಉತ್ಪಾದನೆ ಕುಂಠಿತವಾಗಿರುವುದರಿಂದ ರಾಜ್ಯದಾದ್ಯಂತ ವಿದ್ಯುತ್‌ ಕಡಿತ  ಮಾಡಲು ಸಚಿವ ಸಂಪುಟ ಸೋಮವಾರ ತೀರ್ಮಾನಿಸಿತ್ತು. ಬೆಂಗಳೂರು ನಗರದಲ್ಲಿ ನಿತ್ಯ 2 ಗಂಟೆ  ವಿದ್ಯುತ್‌ ಕಡಿತ ಹಾಗೂ ಉಳಿದ ಕಡೆಗಳಲ್ಲಿ ಸದ್ಯಕ್ಕೆ 4ರಿಂದ 6 ಗಂಟೆ ವಿದ್ಯುತ್‌ ಕಡಿತ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ವಿದ್ಯುತ್‌ ಪೂರೈಕೆ ಪ್ರಮಾಣ ಗಣನೀಯವಾಗಿ ಕುಸಿದಿರುವ ಕಾರಣ ಲೋಡ್‌ ಶೆಡ್ಡಿಂಗ್‌ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ರಾಜ್ಯ ಇನ್ನಷ್ಟು ಕಗ್ಗತ್ತಲ್ಲಿನತ್ತ ಸಾಗಿದೆ.

ನಗರಗಳಲ್ಲಿ ಗರಿಷ್ಠ 4 ಗಂಟೆ ಲೋಡ್‌ ಶೆಡ್ಡಿಂಗ್‌ ಮಾಡಲಾಗುವುದು. ನಿರಂತರ ಜ್ಯೋತಿ ಫೀಡರ್‌ಗಳಿಗೆ ನಾಲ್ಕು ಗಂಟೆ ವಿದ್ಯುತ್‌ ಇರುವುದಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ 5 ಗಂಟೆ ಮೂರು ಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುವುದು. ಗ್ರಾಮೀಣ ಫೀಡರ್‌ಗಳಲ್ಲಿ 5 ಗಂಟೆ ಮೂರು ಫೇಸ್‌ ವಿದ್ಯುತ್‌ ಹಾಗೂ 9 ಗಂಟೆ ಸಿಂಗಲ್‌ ಫೇಸ್‌  ವಿದ್ಯುತ್‌ ಪೂರೈಕೆ (ಒಟ್ಟು 14 ಗಂಟೆ) ಮಾಡಲಾಗುವುದು.

ವಾರದ ನಂತರ ವೇಳಾಪಟ್ಟಿ ಪರಿಷ್ಕರಣೆ: ಆದರೆ, ಕುಡಿಯುವ ನೀರು ಪೂರೈಕೆ ಹಾಗೂ ಅಗತ್ಯ ಸೇವೆಯ ಫೀಡರ್‌ಗಳಿಗೆ 24 ಗಂಟೆ ವಿದ್ಯುತ್‌ ಪೂರೈಕೆ ಮಾಡಲು ತೀರ್ಮಾನಿಸಿದೆ. ಈ ಪ್ರಸ್ತಾವಿತ ವೇಳಾಪಟ್ಟಿ ಒಂದು ವಾರ ಇರಲಿದೆ. ಪರಿಸ್ಥಿತಿ ಸುಧಾರಿಸಿದರೆ ವೇಳಾಪಟ್ಟಿ ಪರಿಷ್ಕರಿಸಲು ತೀರ್ಮಾನಿಸಲಾಗಿದೆ.
ಈ ನಡುವೆ, ರಾಜಧಾನಿಯಲ್ಲಿ ಪ್ರತಿನಿತ್ಯ 3 ಗಂಟೆ  ಲೋಡ್‌ ಶೆಡ್ಡಿಂಗ್‌ ಮಾಡುವುದಾಗಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಗುರುವಾರ ವೇಳಾಪಟ್ಟಿ  ಪ್ರಕಟಿಸಿದೆ. ವಿದ್ಯುತ್‌ ಉತ್ಪಾದನೆ ಕಡಿತ, ತಾಂತ್ರಿಕ ಸಮಸ್ಯೆ ಹಾಗೂ ವಾರ್ಷಿಕ ನಿರ್ವಹಣಾ ಕಾಮಗಾರಿಗಳಿಂದ ವಿದ್ಯುತ್‌ ಕೊರತೆ ಉಂಟಾಗಿದೆ.
*
ಗ್ರಾಮೀಣ ಭಾಗದಲ್ಲಿ  ಈಗಾಗಲೇ ಗರಿಷ್ಠ ಪ್ರಮಾಣದ ವಿದ್ಯುತ್ ಕಡಿತ ಮಾಡಲಾಗಿದೆ. ಇನ್ನೂ ಸಮಸ್ಯೆಯಾದರೆ ನಗರಗಳಲ್ಲಿ ವಿದ್ಯುತ್ ಕಡಿತ ಪ್ರಮಾಣ ಹೆಚ್ಚಿಸಲಾಗುವುದು.
– ಪಿ. ರವಿಕುಮಾರ್‌,
ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

Write A Comment