ಬೆಂಗಳೂರು, ಆ.2- ಬಿಬಿಎಂಪಿ ವಿಭಜನೆ ನೆಪದಲ್ಲಿ ಚುನಾವಣೆ ಮುಂದೂಡಿಕೆಯ ನದಿ-ದಡ ಆಟವಾಡುತ್ತಿದ್ದ ಪ್ರಹಸನಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬಿಬಿಎಂಪಿ ಚುನಾವಣೆ ನಡೆಯಲು ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಸಮರೋಪಾದಿಯಲ್ಲಿ ಸಜ್ಜಾಗಿವೆ. ಮೂರು ಪಕ್ಷಗಳು ನಿನ್ನೆಯಿಂದ ದಿಢೀರ್ ರಣೋತ್ಸವ ಪಡೆದಿವೆ. ಚುನಾವಣೆ ಮುಂದೂಡಿಕೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಯಾವ ಪಕ್ಷಗಳು ಅಷ್ಟಾಗಿ ಸಿದ್ದತೆ ಮಾಡಿಕೊಂಡಿರಲಿಲ್ಲ. ಯಾವಾಗ ರಾಜ್ಯಪಾಲರು ಬಿಬಿಎಂಪಿ ವಿಭಜನೆ ಮಸೂದೆಯನ್ನು ಅಂಗೀಕರಿಸದೆ ರಾಷ್ಟ್ರಪತಿಯವರಿಗೆ ರವಾನಿಸಿದರೋ ಆಗಿನಿಂದ ಎಲ್ಲ ರಾಜಕೀಯ ಪಕ್ಷಗಳಲ್ಲಿ ಮಿಂಚಿನ ಸಂಚಲನ ಉಂಟಾಯಿತು.
ತಕ್ಷಣವೇ ಪಕ್ಷದ ರಾಜ್ಯಾಧ್ಯಕ್ಷರು ಮುಖಂಡರ ಸಭೆ ಕರೆದು ಚುನಾವಣಾ ಸೂಚನೆಗಳನ್ನು ರವಾನಿಸಿದರು. ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ಯಾವ ಪಕ್ಷದ ನಾಯಕರು ಅಲುಗಾಡಲೂ ಸಹ ಆಗುತ್ತಿಲ್ಲ. ತಮ್ಮ ತಮ್ಮ ಕ್ಷೇತ್ರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವುದು ಮಾತ್ರ ಮುಖ್ಯವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಪ್ರಮುಖವಾಗಿ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವುದರ ಜತೆಗೆ ಪಕ್ಷೇತರರು ಕೂಡ ಚುನಾವಣೆ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದಾರೆ.
ಟಿಕಟ್ ಪಡೆಯಲು ಆಕಾಂಕ್ಷಿಗಳು ಹಗಲಿರುಳು ಹರಸಾಹಸ ಮಾಡುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ನಿನ್ನೆಯಿಂದಲೇ ಸಭೆಗಳ ಮೇಲೆ ಸಭೆಯನ್ನು ನಡೆಸುತ್ತಿವೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬಿಬಿಎಂಪಿ ಗದ್ದುಗೆ ಹಿಡಿಯಲು ಭಾರಿ ರಣತಂತ್ರ ರೂಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ, ಎಲ್ಲ ಸಚಿವರು ಚುನಾವಣೆ ಮುಗಿಯುವವರೆಗೆ ಬೆಂಗಳೂರಿನಲ್ಲೇ ಠಿಕಾಣಿ ಹೂಡುವಂತೆ ಕಟ್ಟಪ್ಪಣೆ ಮಾಡಿದ್ದರೆ. ಎಲ್ಲಾ ವಿಧಾನಸಭೆ ಕ್ಷೇತ್ರಗಳ ಉಸ್ತುವಾರಿ ಹೊಣೆಯನ್ನು ಸಚಿವರಿಗೆ ನೀಡಿದ್ದಾರೆ. ಬಿಬಿಎಂಪಿ ಚುನಾವಣೆಗೆ ಬಿಜೆಪಿ ದಿನವಿಡಿ ಕಾರ್ಯತಂತ್ರ ರೂಪಿಸಿದ್ದು, ಇದೇ 6 ಮತ್ತು 7ರಂದು ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಬಿಬಿಎಂಪಿಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಧಾನಿ ಮೋದಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲು ಕಾರ್ಯತಂತ್ರ ರೂಪಿಸಿದೆ. 10 ಅಂಶಗಳ ಯೋಜನೆಗಳನ್ನು ಜನರ ಮುಂದಿಡಲು ತೀರ್ಮಾನಿಸಿದ್ದು, ಆ.5ರಂದು ರಾಜ್ಯನಾಯಕರು, ಹಲವು ರಾಷ್ಟ್ರೀಯ ನಾಯಕರು ಬೆಂಗಳೂರು ಮಹಾನಗರದಲ್ಲಿ ಚುನಾವಣಾ ಪ್ರಚಾರದ ಸಭೆಗಳನ್ನು ನಡೆಸಲಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಅಧ್ವಾನಗಳು, ಸರ್ಕಾರದ ಜನವಿರೋಧಿ ನೀತಿ, ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ ಬಿಜೆಪಿ ಪಕ್ಷದ ವೈಫಲ್ಯಗಳು, ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಜನರ ಮುಂದಿಟ್ಟು, ಬಿಬಿಎಂಪಿ ಚುನಾವಣೆಯನ್ನು ತನ್ನತ್ತ ಸೆಳೆಯಲು ಜೆಡಿಎಸ್ ಕೂಡ ರಣತಂತ್ರ ರೂಪಿಸಿದೆ.
ನಿನ್ನೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆದಿದ್ದು, ಗೆಲ್ಲುವ ಅಭ್ಯರ್ಥಿಗಳ ಪ್ರಕಟಿಸಿ ಕಣಕ್ಕಿಳಿಸಲು ನಿರ್ಧರಿಸಲಿದ್ದಾರೆ. ಜೆಡಿಎಸ್ ಪಕ್ಷ ಬಿಬಿಎಂಪಿ ವಿಭಜನೆಯನ್ನು ತೀವ್ರವಾಗಿ ವಿರೋಧಿಸಿ ನಗರದಾದ್ಯಂತ ಪ್ರತಿಭಟನೆ ನಡೆಸಿತ್ತು. ಇದೇ ಅಂಶವನ್ನು ಚುನಾವಣೆಯ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣ, ರೈತರ ಸರಣಿ ಆತ್ಮಹತ್ಯೆ, ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣ ಮುಂತಾದ ವಿಷಯಗಳನ್ನು ಜನರ ಮುಂದಿಟ್ಟು ಜೆಡಿಎಸ್ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದೆ.
ಚುನಾವಣೆ ಮುಂದೂಡಬಹುದು ಎಂಬ ಉದ್ದೇಶದಿಂದ ಎಎಪಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ. ಪಕ್ಷೇತರ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ನಾಳೆ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಲಿದ್ದು, ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೋರಿ ಈಗಾಗಲೇ 600ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಸ್ಕ್ರೀನಿಂಗ್ ಕಮಿಟಿ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸಮರ್ಥ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ. ಬಿಜೆಪಿ ಪಕ್ಷವು ಕೂಡ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಜೆಡಿಎಸ್ ಪಕ್ಷ ಒಂದು ಹೆಜ್ಜೆ ಮುಂದಿದ್ದು, ಈಗಾಗಲೇ ಹಲವು ಕಡೆ ಅಭ್ಯರ್ಥಿಗಳನ್ನು ಪರೋಕ್ಷವಾಗಿ ಘೋಷಿಸಿದ್ದು, ಅಧಿಕೃತ ಬಿ ಫಾರಂ ನೀಡಬೇಕಾಗಿದೆ. ನಾಳೆಯಿಂದ ಬಿಬಿಎಂಪಿ ಚುನಾವಣಾ ಕಣ ರಂಗೇರಲಿದೆ.
ಚುನಾವಣಾ ವೇಳಾಪಟ್ಟಿ
ಆ.3- ಅಧಿಸೂಚನೆ ಹೊರಡಿಸುವುದು
ಆ.3- ನಾಮಪತ್ರ ಸಲ್ಲಿಕೆ ಆರಂಭ
ಆ.9- ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಆ.11- ನಾಮಪತ್ರ ಪರಿಶೀಲನೆ
ಆ.13- ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಆ.22 – ಮತದಾನ ದಿನಾಂಕ
ಆ.24- ಅಗತ್ಯವಿದ್ದಲ್ಲಿ ಮರುಮತದಾನ
ಆ.25- ಮತ ಎಣಿಕೆ ಫಲಿತಾಂಶ
ಆ.26- ಚುನಾವಣಾ ಪ್ರಕ್ರಿಯೆ ಮುಕ್ತಾಯ