ಕರ್ನಾಟಕ

ಚಾಲಕರಿಗೊಂದು ಖಡಕ್ ಎಚ್ಚರಿಕೆ ! ಅಪ್ರಾಪ್ತರು ವಾಹನ ಚಲಾಯಿಸಿದರೆ ಪೋಷಕರು ಸೇರುವರು ಜೈಲು! ಈಗಾಗಲೇ 30 ಪ್ರಕರಣಗಳು ದಾಖಲು

Pinterest LinkedIn Tumblr

bangalore_traffic

ಬೆಂಗಳೂರು: ಪೋಷಕರೇ ತುಸು ಎಚ್ಚರ! 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕಾರು ಅಥವಾ ಬೈಕ್ ತೆಗೆದುಕೊಂಡು ಹೋದರೆ, ನೀವು ಜೈಲು ಶಿಕ್ಷೆಗೆ ಗುರಿಯಾಗಬೇಕುತ್ತದೆ.

ಪಾದಾಚಾರಿಗಳು ಹಾಗೂ ಇತರೆ ವಾಹನ ಚಾಲಕರ ರಕ್ಷಣಾ ದೃಷ್ಟಿಯಿಂದ ಸಂಚಾರಿ ಪೊಲೀಸರು ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಈ ಅಭಿಯಾನ ಆರಂಭವಾಗಿದೆ. ಕಳೆದ ಕೆಲವು ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ 30 ಪ್ರಕರಣಗಳು ದಾಖಲಾಗಿವೆ.

‘ಅಪ್ರಾಪ್ತರು ಗಾಡಿ ಓಡಿಸಿದರೆ, ಪೋಷಕರ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವಂತೆ ಪ್ರಾದೇಶಿಕ ಸಂಚಾರಿ ಕಚೇರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುತೇಕ ಅಪ್ರಾಪ್ತರು ಗುಂಪು ಕಟ್ಟಿಕೊಂಡು, ರಾತ್ರಿ ವೇಳೆ ರೇಸಿಂಗ್, ವೀಲ್ಙಿಂಗ್‌ನಂಥ ಅಪಾಯಕಾರಿ ಸ್ಟಂಟ್ ಮಾಡುತ್ತಾರೆ. ಇದರಿಂದ ಅವರ ಜೀವಕ್ಕೂ ಕುತ್ತು ತಂದು ಕೊಳ್ಳುತ್ತಿದ್ದಾರೆ. ಅಪ್ರಾಪ್ತರು ವಾಹನಗಳನ್ನು ಚಲಾಯಿಸುವುದ ಕಂಡರೆ, ಪೋಷಕರಿಗೆ ಆರು ತಿಂಗಳ ಸಜೆ ಅಥವಾ ಸಾವಿರ ರೂ. ದಂಡ ಅಥವಾ ಎರಡೂ ಶಿಕ್ಷೆ ವಿಧಿಸಬಹುದು ಎಂದು ಇತ್ತೀಚಿನ ಹೈ ಕೋರ್ಟ್ ಆದೇಶ ತಿಳಿಸಿದೆ,’ ಎಂದು ಹಿರಿಯ ಸಂಚಾರಿ ಅಧಿಕಾರಿಗಳು ತಿಳಿಸಿದ್ದಾರೆ.

‘ಯಾವುದೇ ರೀತಿಯ ವಾಹನವನ್ನು ಚಲಾಯಿಸಲು ಅಪ್ರಾಪ್ತರಿಗೆ ಅನುಮತಿ ನೀಡಲಾಗುವುದಿಲ್ಲ. ಅಕಸ್ಮಾತ್ ಅವರು ವಾಹನ ಓಡಿಸುವುದ ಕಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳಲೂ ಕಾನೂನಿನಲ್ಲಿ ಅವಕಾಶವಿಲ್ಲ. ಅದಕ್ಕೆ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಅಂಥ ಪೋಷಕರ ವಿರುದ್ಧ ಎಫ್ಐಆರ್ ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು,’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರಿ) ಎಂ.ಎ.ಸಲೀಂ ಹೇಳಿದ್ದಾರೆ.

‘ಸಾಮಾನ್ಯವಾಗಿ ನಂದಿದುರ್ಗ ರಸ್ತೆ, ಜಯಮಹಲ್ ರಸ್ತೆ, ಆರ್‌ಟಿ ನಗರ ಮತ್ತು ಬಳ್ಳಾರಿ ರಸ್ತೆಗಳಲ್ಲಿ ಹೆಚ್ಚಾಗಿ ಅಪ್ರಾಪ್ತರು ರಾತ್ರಿ 10 ಗಂಟೆ ನಂತರ ವಾಹನಗಳನ್ನು ಚಲಾಯಿಸುವುದು, ಸ್ಟಂಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹಾಗೆ ಸಿಕ್ಕಿಬಿದ್ದ 30 ಪೋಷಕರ ವಿರುದ್ಧ ಭಾರತೀಯ ವಾಹನ ಕಾಯಿದೆ ಸೆಕ್ಷನ್ 184ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ,’ ಎಂದರು.

’18 ವರ್ಷದ ಒಳಗೆ ವಾಹನಗಳನ್ನು ಚಲಾಯಿಸುವುದೇ ಒಂದು ಅಪರಾಧ. ಅದರಲ್ಲಿಯೂ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿದರೆ ಎರಡು ತಪ್ಪೆಸೆಗಿದಂತಾಗುತ್ತದೆ. ಹದಿಹರೆಯದವರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಕಷ್ಟ. ಈ ಮುಂಚೆ ಪೋಷಕರಿಗೆ ದಂಡ ವಿಧಿಸಲಾಗುತ್ತಿತ್ತು. ಆದರೂ, ಈ ಉಪಟಳ ಕಮ್ಮಿಯಾಗದ ಕಾರಣ ಇಂಥದ್ದೊಂದು ಕ್ರಮಕ್ಕೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ,’ ಎಂದು ಸಲೀಂ ಹೇಳಿದ್ದಾರೆ.

Write A Comment