ಕರ್ನಾಟಕ

ಪಾರ್ಕಿಂಗ್‌ನಲ್ಲಿದ್ದ ಕಾರ್‌ ಓಎಲ್‌ಎಕ್ಸ್‌ನಲ್ಲಿ ಸೇಲ್‌

Pinterest LinkedIn Tumblr

Tata-Motors-Net-Profit-Falls-23-Despite-Revenue-Riseಬೆಂಗಳೂರು: ಐಷಾರಾಮಿ ಕಾರುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಕ್ವಿಕರ್ ಮತ್ತು ಒಎಲ್‌ಎಕ್ಸ್ ನಲ್ಲಿ ಜಾಹೀರಾತು ನೀಡಿ ಸಾರ್ವಜನಿಕರನ್ನು ವಂಚಿಸಿ ಲಕ್ಷಗಟ್ಟಲೆ ಹಣ ಸುಲಿಯುತ್ತಿದ್ದ ಇಬ್ಬರು ಮಹಿಳೆಯರೂ ಸೇರಿದಂತೆ ಏಳು ಮಂದಿ ನೈಜೀರಿಯಾ ಪ್ರಜೆಗಳನ್ನು ಚಿಕ್ಕಪೇಟೆ ಪೊಲೀಸರು ಬಂಧಿಸಿದ್ದಾರೆ.

ಕಣ್ಣು ಕುಕ್ಕುವ ಕಾರುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಜಾಹೀರಾತುಗಳನ್ನು ಕ್ವಿಕರ್ ಮತ್ತು ಒಎಲ್‌ಎಕ್ಸ್ ನಲ್ಲಿ ನೀಡುತ್ತಿದ್ದ ಆರೋಪಿಗಳು, ಜಾಹೀರಾತಿನ ಜತೆಗೆ ತಮ್ಮ ಮೊಬೈಲ್ ನಂಬರನ್ನೂ ಹಾಕಿರುತ್ತಿದ್ದರು. ಕಾರಿನ ಫೋಟೋಗಳನ್ನು ನೋಡಿ ಆಕರ್ಷಿತರಾಗಿ ಯಾರಾದರೂ ಕರೆ ಮಾಡಿದರೆ ಅವರಿಂದ ತಮ್ಮ ಬ್ಯಾಂಕ್ ಖಾತೆಗೆ ಹಣ ತರಿಸಿಕೊಂಡು ನಾಪತ್ತೆಯಾಗುತ್ತಿದ್ದರು. ಈ ರೀತಿ ವಂಚಿತರಾದ ಶೇಖರ್ ಎನ್ನುವವರು ಜೂ. 20ರಂದು ಕೊಟ್ಟ ದೂರಿನ ಆಧಾರದಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿದ ಚಿಕ್ಕಪೇಟೆ ಠಾಣೆಯ ಇನ್ಸ್‌ಪೆಕ್ಟರ್ ವಸಂತ್‌ಕುಮಾರ್ ನೇತೃತ್ವದ ತಂಡ, ದೇಶಾದ್ಯಂತ ಸಂಚರಿಸುತ್ತಾ ವಂಚನೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದೆ.

ವೀಸಾ ಅವಧಿ ಮುಗಿದಿತ್ತು: ಬೋಲಾಜಿ ಲಾವಾಲ್ ಡೆಸ್ಮಂಡ್ (36), ಈತನ ಪತ್ನಿ ಅವೇರಿಲ್ ಲಾವಾಲಾ (24), ಓಕ್‌ಜೀ ಕೋಲಿಂಗ್ (28), ಓಜಾಲಾವಾಲ್ (24), ಒಬೀನಾ (31), ಚುಕಾಓಕ್‌ಪಾಲಾ (30), ಎಬೀ ಈಯಸ್(27) ಹಾಗೂ ಕಾವಲ್ ಬೈರಸಂದ್ರ ನಿವಾಸಿ ಇಂದ್ರಾಣಿ (25) ಬಂಧಿತ ಆರೋಪಿಗಳು. ಬಂಧಿತರಾಗಿರುವ ನೈಜೀರಿಯಾ ಪ್ರಜೆಗಳೆಲ್ಲಾ ಪ್ರವಾಸಿ ಮತ್ತು ವ್ಯಾಪಾರಿ ವೀಸಾ ಮೇಲೆ ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದ ನಂತರ ಗೋವಾ, ಕರ್ನಾಟಕ, ಮುಂಬೈ ಮತ್ತು ತಮಿಳುನಾಡಿನಲ್ಲಿ ತಿರುಗಾಡುತ್ತಾ ಸಾರ್ವಜನಿಕರನ್ನು ವಂಚಿಸುತ್ತಿದ್ದರು. ಇದೇ ಗ್ಯಾಂಗ್‌ನ ಇನ್ನೂ ಹಲವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ವ್ಯಾಪಕ ಬಲೆ ಬೀಸಲಾಗಿದೆ.

ಹೀಗೆ ನಡೆಯುತ್ತಿತ್ತು ವಂಚನೆ:
ನಾನಾ ಪಾರ್ಕಿಂಗ್‌ಗಳಲ್ಲಿ ನಿಂತಿರುತ್ತಿದ್ದ ಐಷಾರಾಮಿ ಕಾರುಗಳು ಮತ್ತು ಅಂತರ್ಜಾಲದಲ್ಲಿ ಸಿಗುವ ಕಾರುಗಳ ಫೋಟೋಗಳನ್ನು ಸಂಗ್ರಹಿಸಿ ಅವುಗಳನ್ನು ತನ್ನದೇ ಕಾರು ಎನ್ನುವಂತೆ ಶೇ 50 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಸಿದ್ಧವಿರುವುದಾಗಿ ಬೋಲಾಜಿ ಲಾವಾಲ್ ಡೆಸ್ಮಂಡ್ ಜಾಹೀರಾತು ನೀಡಿದ್ದ. ಆ ಜಾಹೀರಾತಿನಲ್ಲಿರುವ ಸಂಖ್ಯೆಗೆ ಶೇಖರ್ ಎನ್ನುವವರು ಕರೆ ಮಾಡಿದಾಗ, ”ನಾನು ತುರ್ತು ಕೆಲಸದ ಮೇಲೆ ವಿದೇಶಕ್ಕೆ ಹೋಗುತ್ತಿದ್ದೇನೆ. ಕಾರನ್ನು ಏರ್‌ಪೋರ್ಟ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದೇನೆ. ಕಸ್ಟಮ್ಸ್ ಅಧಿಕಾರಿಯ ಬಳಿ ಮಾತನಾಡಿ ಆ ಕಾರನ್ನು ತೆಗೆದುಕೊಂಡು ಹೋಗಿ. ದಾಖಲೆಗಳೂ ಕೂಡ ಆ ಅಧಿಕಾರಿಯ ಬಳಿಯೇ ಇವೆ. ಕೇಳಿದರೆ ಕೊಡುತ್ತಾರೆ”ಎಂದು ಬೋಲಾಜಿ ಹೇಳಿದ್ದ. ಜತೆಗೆ ಕಸ್ಟಮ್ಸ್ ಅಧಿಕಾರಿಯದ್ದು ಎಂದು ಮೊಬೈಲ್ ನಂಬರ್ ಒಂದನ್ನೂ ಕೊಟ್ಟಿದ್ದ. ಶೇಖರ್ ಅವರು ಆ ನಂಬರಿಗೆ ಕರೆ ಮಾಡಿದಾಗ ಬೋಲಾಜಿಯ ಪತ್ನಿ ಅವೇರಿಲ್ ಲಾವಾಲಾ, ತಾನೇ ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ”ನೀವು ಬೇಕಾದರೆ ಬಂದು ಕಾರು ಮತ್ತು ದಾಖಲೆಗಳನ್ನು ತೆಗೆದುಕೊಂಡು ಹೋಗಿ. ಆದರೆ ಅದಕ್ಕೆ ಮುಂಚೆ ಏರ್‌ಪೋರ್ಟ್‌ನ ಪಾರ್ಕಿಂಗ್ ಶುಲ್ಕ ಹಾಗೂ ದಾಖಲೆಯ ಶುಲ್ಕ ಕಟ್ಟಬೇಕಾಗುತ್ತದೆ. ಕಾರಿನ ಹಣವನ್ನು ಅವರು ಬಂದ ಮೇಲೆ ಅವರಿಗೇ ನೀಡಿ”ಎನ್ನುತ್ತಾ ಪಾರ್ಕಿಂಗ್ ಹಣ ಕಟ್ಟಲು ಒಂದು ಬ್ಯಾಂಕ್ ಖಾತೆಯ ಸಂಖ್ಯೆ ನೀಡಿದ್ದರು. ಈ ಮಾತನ್ನು ನಂಬಿದ ಶೇಖರ್ ಆ ಖಾತೆಗೆ ಹಣ ಹಾಕಿದ್ದರು. ಖಾತೆಗೆ ಜಮೆಯಾದ ಹತ್ತೇ ನಿಮಿಷದಲ್ಲಿ ಎಟಿಎಂ ಮೂಲಕ ಹಣ ಡ್ರಾ ಮಾಡಿದ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿ ಸಂಪರ್ಕಕ್ಕೆ ಬಾರದೆ ವ್ಯಾಪ್ತಿ ಪ್ರದೇಶದಿಂದ ದೂರವಾಗಿದ್ದರು.

ಒಬಾಮಾ ಹೆಸರಲ್ಲೂ ವಂಚನೆ: ಚಿಕ್ಕಪೇಟೆಯ ನಿವಾಸಿ ಶೇಖರ್ ಅವರನ್ನು ವಂಚಿಸಿದ್ದ ಆರೋಪಿಗಳು ಬಾಗಲಗುಂಟೆಯ ಶೇಷಾದ್ರಿನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇಂಟರ್‌ನೆಟ್‌ನಲ್ಲಿ ಸಿಗುವ ಕಾರುಗಳ ಫೋಟೋ ಜತೆಗೆ ಈ ಆರೋಪಿಗಳು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೆಸರಿನಲ್ಲೂ ಸಾರ್ವಜನಿಕರನ್ನು ವಂಚಿಸಿ ಹಣ ಲಪಟಾಯಿಸಿದ್ದು ಬೆಳಕಿಗೆ ಬಂದಿದೆ. ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಷೆಲ್ ಒಬಾಮಾ ಹೆಸರಿನಲ್ಲಿ ಟ್ರಸ್ಟ್ ರಚಿಸಿರುವುದಾಗಿ ಹೇಳಿ ಬಡವರಿಗೆ ನೆರವಾಗುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಲಪಟಾಯಿಸಿದ್ದರು. ಅಷ್ಟೇ ಅಲ್ಲದೆ, ಸಾಕು ನಾಯಿ, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳ ಮಾರಾಟದ ಬಗ್ಗೆಯೂ ಜಾಹೀರಾತು ನೀಡಿ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment