ಕರ್ನಾಟಕ

ರಾಜ್ಯಾದ್ಯಂತ ಮುಜರಾಯಿ ದೇವಾಲಯಗಳಲ್ಲಿ ಸ್ವಚ್ಛ ಮಂದಿರ ಅಭಿಯಾನಕ್ಕೆ ರಾಜ್ಯ ಸರ್ಕಾರದಿಂದ ಚಾಲನೆ

Pinterest LinkedIn Tumblr

temple cleaning

ಬೆಂಗಳೂರು, ಜೂ.14: ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಬೆನ್ನಲ್ಲೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಮುಜರಾಯಿ ದೇವಾಲಯಗಳಲ್ಲಿ ಸ್ವಚ್ಛ ಮಂದಿರ ಅಭಿಯಾನವನ್ನು ಕೈಗೊಂಡಿದೆ.

ಮುಜರಾಯಿ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಇಂದು ಮಧ್ಯಾಹ್ನ ಸ್ವಚ್ಛ ಮಂದಿರ ಅಭಿಯಾನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಚಾಮರಾಜಪೇಟೆಯ ಕೋಟೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಇಸ್ಕಾನ್ ಸಹಕಾರದೊಂದಿಗೆ ಮತ್ತು ರಾಮೇಶ್ವರ ದೇವಾಲಯ ಹಾಗೂ ಕಲ್ಯಾಣ ಮಂಟಪವನ್ನು ಬ್ರಹ್ಮಕುಮಾರಿ ಸಂಸ್ಥೆಯ ವತಿಯಿಂದ ಸ್ವಚ್ಛ ಮಂದಿರ ಅಭಿಯಾನ ಕೈಗೊಳ್ಳಲಾಯಿತು. ಮಲ್ಲೇಶ್ವರದ ನಂದೀಶ್ವರ ದೇವಾಲಯವನ್ನು ಬಿಬಿಎಂಪಿ ಹಾಗೂ ಮಲ್ಲೇಶ್ವರಂ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸ್ವಚ್ಛಗೊಳಿಸುವ ಅಭಿಯಾನ ಕೈಗೊಳ್ಳಲಾಯಿತು.

ದೇವಾಲಯಗಳಲ್ಲಿ ದೇವರ ದರ್ಶನ, ಪೂಜೆ, ವಸತಿ ವ್ಯವಸ್ಥೆಗೆ ಆನ್‌ಲೈನ್ ಸೇವೆ ಒದಗಿಸಿದ ಮುಜರಾಯಿ ಇಲಾಖೆ ಈಗ ಸ್ವಚ್ಛತೆಯ ಕಡೆಗೂ ಗಮನ ಹರಿಸಿದೆ. ದೇವಾಲಯಗಳನ್ನು ಪ್ಲ್ಯಾಸ್ಟಿಕ್ ಮುಕ್ತಗೊಳಿಸುವುದು, ದೇವಾಲಯದಲ್ಲಿ ಉತ್ಪನ್ನವಾಗುವ ಹಸಿ ತ್ಯಾಜ್ಯವನ್ನು ಸ್ವಯಂ ನಿರ್ವಹಣೆ ಇಲ್ಲವೇ ಸ್ವಯಂ ವಿಲೇವಾರಿ ಮಾಡುವುದು, ಶಾಲಾ -ಕಾಲೇಜುಗಳು, ವಿವಿಧ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಆಧ್ಯಾತ್ಮಿಕ ಸಂಸ್ಥೆಗಳ ನೆರವಿನೊಂದಿಗೆ ದೇವಸ್ಥಾನ ಸ್ವಚ್ಛಗೊಳಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ದೇವಾಲಯಗಳಿಗೆ ಹೊಂದಿಕೊಂಡಿರುವ ಕಲ್ಯಾಣಿಗಳನ್ನು ಪುನರುಜ್ಜೀವಗೊಳಿಸವುದು, ಕಳೆ ತೆಗೆದು ಹೂವಿನ ಗಿಡಗಳನ್ನು ಬೆಳೆಸುವ ಮೂಲಕ ಉದ್ಯಾನವನವನ್ನಾಗಿ ಮಾರ್ಪಡಿಸುವ ಉದ್ದೇಶವನ್ನು ಅಭಿಯಾನ ಹೊಂದಿದೆ.

ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಕಳೆದ ನವೆಂಬರ್ 21ರಂದು ಪ್ರಾಯೋಗಿಕವಾಗಿ ಈ ಯೋಜನೆ ಕೈಗೊಂಡಿದ್ದು ಯಶಸ್ವಿಯಾದ ಬೆನ್ನಲ್ಲೇ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ವಿಸ್ತರಿಸಲು ಮುಜರಾಯಿ ಇಲಾಖೆ ತೀರ್ಮಾನ ಕೈಗೊಂಡಿತ್ತು. ದೇವಾಲಯಗಳಲ್ಲಿ ಪ್ಲ್ಯಾಸ್ಟಿಕ್ ಬಳಕೆ ನಿಷೇಧ ಫಲಕ ಪ್ರದರ್ಶಿಸುವುದು, ಕಸದ ಬುಟ್ಟಿ ಹೊರತುಪಡಿಸಿ ಬೇರೆ ಕಡೆ ತ್ಯಾಜ್ಯ ಬಿಸಾಡುವವರಿಗೆ ಪ್ರತಿ ಬಾರಿ 10 ರೂ. ದಂಡ ವಿಧಿಸಲಾಗುತ್ತದೆ.

ಯಶವಂತಪುರದ ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ 2004ರ ನವೆಂಬರ್‌ನಲ್ಲಿ 98 ಕೆ.ಜಿ ಇದ್ದ ಜೈವಿಕ ತ್ಯಾಜ್ಯ 2015ರ ಫೆಬ್ರುವರಿವರೆಗೆ 60 ಕೆ.ಜಿಗೆ ಇಳಿಕೆಯಾಗಿದೆ. ಜೈವಿಕೇತರ ತ್ಯಾಜ್ಯವೂ ಕೂಡ 21 ಕೆ.ಜಿಯಿಂದ 3 ಕೆ.ಜಿಗೆ ಇಳಿಕೆಯಾಗಿರುವುದು ಕಂಡುಬಂದಿದೆ. ಕಸ ವಿಂಗಡಣೆಯಿಂದ ಇದು ಸಾಧ್ಯವಾಗಿದೆ. ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಹಸಿ ತ್ಯಾಜ್ಯದಿಂದ ಅಡುಗೆ ಅನಿಲ ಉತ್ಪಾದನೆ ಮಾಡುವ ಘಟಕವನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ಕೆಲವು ದೇವಾಲಯಗಳಲ್ಲಿ ಭಕ್ತಾದಿಗಳು ಪ್ಲ್ಯಾಸ್ಟಿಕ್ ವಸ್ತುಗಳಿಗೆ ಬದಲಾಗಿ ಬಟ್ಟೆ ಚೀಲಗಳನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.

Write A Comment