ಕರ್ನಾಟಕ

ರಾಜಕೀಯಕ್ಕಾಗಿ ಟಿಪ್ಪು ತೇಜೋವಧೆ ಮಾಡಲಾಗುತ್ತಿದೆ: ಹಿರಿಯ ಕನ್ನಡ ಸಾಹಿತಿ ಮರಳುಸಿದ್ದಪ್ಪ

Pinterest LinkedIn Tumblr

tippu

ಬೆಂಗಳೂರು: ಆಲೂರು ವೆಂಕಟರಾಯರನ್ನು ರಾಜಕೀಯದ ಪಗಡೆಯ ದಾಳವಾಗಿ ಬಳಿಸಿಕೊಂಡು, ಟಿಪ್ಪು ಸುಲ್ತಾರನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಹಿರಿಯ ಕನ್ನಡ ಸಾಹಿತಿ ಮರಳಸಿದ್ದಪ್ಪ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿರುವ ಎ.ವಿ ರಸ್ತೆಯನ್ನು ಆಲೂರು ವೆಂಕಟರಾಯರ ರಸ್ತೆಯೆಂದು ಹೇಳಲಾಗುತ್ತಿದೆ. ಆದರೆ ಕಡತಗಳ ಆಧಾರದ ಪ್ರಕಾರ, ಅದರ ಹೆಸರು ಆಲ್ಬರ್ಟ್ ವಿಕ್ಟರ್ ರಸ್ತೆ. ಆದರೆ, ಇದನ್ನು ಆಲೂರು ವೆಂಕಟರಾಯರ ರಸ್ತೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಮತ್ತೆ ಕೋಮುಗಲಭೆ ಸೃಷ್ಟಿಸಲು ಕೆಲವರು ಮುಂದಾಗಿದ್ದಾರೆ ಎಂದಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಎ.ವಿ ರಸ್ತೆಗೆ ಟಿಪ್ಪು ಸುಲ್ತಾನ್ ಹೆಸರು ಇಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಬಿಬಿಎಂಪಿ ಅಧಿಕಾರಿಗಳ ಮೇಲೆ ರಾಜಕೀಯದವರು ಒತ್ತಡ ಹೇರುತ್ತಿದ್ದಾರೆ. ಈ ಮೂಲಕ ಟಿಪ್ಪು ಸುಲ್ತಾನ್ ಅವರನ್ನು ತೇಜೋವಧೆ ಮಾಡಲಾಗುತ್ತಿದೆ ಎಂದ ಅವರು, ಚರಿತ್ರೆಯಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಈ ವ್ಯತ್ಯಾಸಗಳನ್ನು ದುರುದ್ದೇಶದಿಂದ ಸೃಷ್ಟಿಸಲಾಗುತ್ತಿದೆ. ಕೋಮುಗಲಭೆ ಉಂಟಾಗುವ ಬೀಜ ಬಿತ್ತಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ರಸ್ತೆಗೆ ಆಲೂರು ವೆಂಕಟರಾಯರ ರಸ್ತೆ ಎಂದು ಅಧಿಕೃತವಾಗಿ ಸರ್ಕಾರಿ ಕಡತಗಳಲ್ಲಿ ನಾಮಕರಣವಾಗಿದ್ದರೆ ನಮ್ಮದೇನು ಆಕ್ಷೇಪವಿಲ್ಲ. ಆದರೆ, ಕಡತಗಳಲ್ಲಿ ಆಲ್ಬರ್ಟ್ ವಿಕ್ಟರ್ ರಸ್ತೆ ಎಂದು ಬಿಬಿಎಂಪಿ ಕಡತಗಳಲ್ಲಿ ದಾಖಲಾಗಿದ್ದರೆ, ಅದಕ್ಕೆ ದೇಶಪ್ರೇಮಿ ಟಿಪ್ಪು ಸುಲ್ತಾನ್ ಹೆಸರು ಇಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Write A Comment