ದಾವಣಗೆರೆ, ಮೇ 29-ನನ್ನ ಮನೆ ಮತ್ತು ಸಂಸ್ಥೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿರುವುದರಿಂದ ನಾನು ಧೃತಿಗೆಟ್ಟಿಲ್ಲ ಮತ್ತು ವಿಚಲಿತನಾಗಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಇಂದಿಲ್ಲಿ ಮಾತನಾಡಿದ ಅವರು ತನಿಖೆಯ ವೇಳೆ ಲೋಕಾಯುಕ್ತ ಎಸ್‌ಪಿ ಶ್ರೀಧರ್ ಮತ್ತು ಅವರ ತಂಡಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕಗಳನ್ನು ಮಾಡಿಲ್ಲ ಎಂದು ತಿಳಿಸಿದರು.
ನನ್ನ ತೋಟ, ಭೂಮಿ, ಮನೆ ಎಲ್ಲವೂ ಪಿರ್ತಾರ್ಜಿತ. ನಾನು ಸಚಿವನಾದ ಮೇಲೆ ಯಾವುದೇ ರೀತಿಯಲ್ಲೂ ಹಣ ಮಾಡಿಲ್ಲ. 1992-93ರಲ್ಲೇ ನಾನು ತೋಟ, ಭೂಮಿ ಎಲ್ಲಾ ಮಾಡಿದ್ದೆ. ಬೋರ್‌ವೆಲ್ ಗುತ್ತಿಗೆ ಮೂಲಕ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಕೆಲಸ ಮಾಡಿಸಿದ್ದೇನೆ. ನಾನು ರಾಜಕಾರಣ ಮಾಡಿ ಶ್ರೀಮಂತನಾಗಿಲ್ಲ ಎಂದು ರೇಣುಕಾಚಾರ್ಯ ಪುನರುಚ್ಚರಿಸಿದರು. ಕಾಲಕ್ಕೆ ಸರಿಯಾಗಿ ಸರ್ಕಾರಕ್ಕೆ ತೆರಿಗೆಗಳನ್ನು ಕಟ್ಟಿದ್ದೇನೆ. ಆ ಬಗ್ಗೆ ಎಲ್ಲಾ ದಾಖಲಾತಿಗಳನ್ನೂ ಕ್ರಮಬದ್ಧವಾಗಿ ಇಟ್ಟಿದ್ದೇನೆ. ಯಾರೋ ಒಬ್ಬ ಖಾಸಗೀ ವ್ಯಕ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆಯ ಹಿಂದೆ ಪಿತೂರಿ ನಡೆದಿದೆ. ನಾನು ಅಬಕಾರಿ ಸಚಿವನಾಗಿದ್ದಾಗ ಕಳ್ಳಬಟ್ಟಿ ದಂಧೆ ನಿಯಂತ್ರಿಸಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಮಾಡಿಕೊಟ್ಟಿದ್ದೇನೆ ಎಂದು ಅವರು ಹೇಳಿದರು.
