ಬೆಂಗಳೂರು,ಮೇ26-ಪಂಚಾಯ್ತಿ ಫೈಟ್ ಕಾವು ದಿನೆ ದಿನೇ ಏರತೊಡಗಿದೆ. ಮೊದಲ ಹಂತದ ಮತದಾನಕ್ಕೆ ಇನ್ನು ಮೂರು ದಿನಗಳು ಬಾಕಿ ಇದ್ದು, ಗೆಲುವಿಗಾಗಿ ಕಣದಲ್ಲಿರುವ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಉರಿ ಬಿಸಿಲಿನ ನಡುವೆಯೂ ಹಳ್ಳಿಹಳ್ಳಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಪ್ರಚಾರ ಮಾಡುತ್ತಿದ್ದು,
ಗ್ರಾಮಪಂಚಾಯ್ತಿ ಚುನಾವಣೆಯ ಖದರ್ ರಂಗೇರುತ್ತಿದೆ. ರಾಜ್ಯಾದ್ಯಂತ ಉಷ್ಣಾಂಶ ಏರಿಕೆಯಾಗಿದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳಲ್ಲಿ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹುಬ್ಬಳ್ಳಿ , ಧಾರವಾಡ, ಬೆಳಗಾವಿ ಮುಂತಾದ ಕಡೆ ಬಿಸಿಲಿನ ಕಾವು ಹೆಚ್ಚಾಗಿದೆ. ಈ ನಡುವೆಯೂ ಅಭ್ಯರ್ಥಿಗಳು ಭರದ ಪ್ರಚಾರಕ್ಕಿಳಿದಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಾದ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಮ್ಮ ಮುಖಂಡರ ಮೂಲಕ ಮತಯಾಚನೆ, ಬಹಿರಂಗಸಭೆಗಳನ್ನು ನಡೆಸಿದ್ದಾರೆ.
ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಡೆಯುತ್ತಿವೆ. ಗ್ರಾಮಗಳ ಅಭಿವೃದ್ಧಿಗೆ ಆಯ್ಕೆಯಾದವರು ಬೆವರು ಸುರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಚಾರಕ್ಕಾಗಿ ಬಿಸಿಲಿನಲ್ಲಿ ಬೆವರಿಳಿಸುತ್ತಿದ್ದಾರೆ. ಇವರ ಹಿಂದೆ ಹಿಂಬಾಲಕರು ಕೂಡ ಬೆವರು ಹರಿಸುತ್ತಿದ್ದಾರೆ.
ಕರಾವಳಿ ಪ್ರದೇಶಗಳಲ್ಲಿ ಮಿತಿ ಮೀರಿದ ಬಿಸಿಲು ಇರುವುದರಿಂದ ಹಗಲಿನ ವೇಳೆ ಪಂಚಾಯ್ತಿ ಚುನಾವಣೆಯ ಪ್ರಚಾರ ನಡೆಯುತ್ತಿಲ್ಲ. ಸಂಜೆಯಾದ ಮೇಲೆ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಬಳ್ಳಾರಿ, ಗದಗ, ಧಾರವಾಡ, ಹಾವೇರಿ ಮುಂತಾದ ಕಡೆ ಬಿಸಿಲನ್ನು ಲೆಕ್ಕಿಸದೆ ಅಭ್ಯರ್ಥಿಗಳು ಮತ ಪ್ರಚಾರ ನಡೆಸುತ್ತಿರುವುದು ಕಂಡುಬಂದಿದೆ. ರಾಜಕೀಯ ಪಕ್ಷಗಳ ಚಿಹ್ನೆ ಇಲ್ಲದಿರುವ ಕಾರಣ ಚುನಾವಣಾ ಆಯೋಗ ನೀಡಿರುವ ಚಿನ್ಹೆಯನ್ನು ಮುಂದಿಟ್ಟುಕೊಂಡು ಮತ ಯಾಚನೆ ನಡೆಸಿದ್ದಾರೆ.
ಎದುರಾಳಿಗಳನ್ನು ಮಣಿಸುವುದು, ಮನವೊಲಿಸುವ ಕ್ರಿಯೆಯೂ ಕೂಡ ಮುಂದುವರೆದಿದೆ. ಈಗಾಗಲೇ ವಿವಿಧ ಗ್ರಾಪಂಗಳ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಲವೆಡೆ ಹರಾಜು ಮೂಲಕ ಆಯ್ಕೆ ಮಾಡಲಾಗಿದೆ. ಸ್ಥಳೀಯವಾಗಿ ನಡೆಯುವ ಈ ಚುನಾವಣೆಗಳಲ್ಲಿ ಪ್ರತಿಷ್ಠೆ ಮತ್ತು ಜಾತಿ ಪ್ರಮುಖವಾಗಿರುತ್ತದೆ. ಮೀಸಲು ನಿಗದಿಯಾಗಿರುವುದರಿಂದ ಅನಿವಾರ್ಯವಾಗಿ ಜನ ಆಯಾ ಮೀಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಮೀಸಲು ಪ್ರಕಟವಾಗಿರುವ ಅಭ್ಯರ್ಥಿಗಳು ಇಲ್ಲದ ಕಾರಣ ಸ್ಥಾನಗಳು ಖಾಲಿ ಉಳಿದಿವೆ. ಇವುಗಳನ್ನು ಆಯಾ ಜಿಲ್ಲಾಧಿಕಾರಿಗಳು ಮೀಸಲು ಬದಲಿಸಿ ಚುನಾವಣೆ ನಡೆಸಲಿದ್ದಾರೆ. ಗ್ರಾಮೀಣ ಭಾಗದಲ್ಲಿ ನಡೆಯುವ ಮದುವೆ ಸಮಾರಂಭ, ಅರತಕ್ಷತೆ, ಬೀಗರ ಊಟ ಮುಂತಾದ ಕಡೆ ತೆರಳುವ ಅಭ್ಯರ್ಥಿಗಳು ತಮ್ಮ ಪರವಾಗಿ ಮತ ನೀಡುವಂತೆ ಮತ ಯಾಚಿಸುತ್ತಿದ್ದು ಹಲವೆಡೆ ಕಂಡುಬಂದಿದೆ. ಒಟ್ಟಾರೆ ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ ಚುನಾವಣೆ ರಂಗೇರತೊಡಗಿದೆ.