ಕರ್ನಾಟಕ

ಬ್ಯಾಂಡೇಜ್ ತೆಗೆಯಲು ಹೋಗಿ ಹೆಬ್ಬರಳೇ ಕಟ್: ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಯಿಂದಾಗಿ ಹೆಬ್ಬೆರಳು ಕಳೆದುಕೊಂಡ ಹಸುಗೂಸು

Pinterest LinkedIn Tumblr

baby-finger-cuts

ಚಿತ್ರದುರ್ಗ: ಚಿತ್ರದುರ್ಗದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ಮಾಡಿದ ಯಡವಟ್ಟಿನಿಂದಾಗಿ ಪುಟ್ಟಮಗುವೊಂದು ತನ್ನ ಎಡಗೈ ಹೆಬ್ಬೆರಳು ಕಳೆದುಕೊಂಡಿದೆ.

“ವೈದ್ಯೋ ನಾರಾಯಣೋ ಹರಿ”-ವೈದ್ಯರೆಂದರೆ ರೋಗಿಗಳ ಪ್ರಾಣ ಕಾಪಾಡುವ ದೇವರಿದ್ದಂತೆ ಎನ್ನುವುದು ಸಾಮಾನ್ಯರ ನಂಬಿಕೆ. ಆದರೆ ಕೆಲವೊಮ್ಮೆ ತಮ್ಮ ಜವಾಬ್ದಾರಿ ಮರೆಯುವ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ರೋಗಿಗಳ ಪ್ರಾಣ ಉಳಿಸುವ ಬದಲು ಅವರ ಪ್ರಾಣಕ್ಕೆ ಸಂಕಟ ತರುತ್ತಾರೆ. ಇಂತಹುದೇ ಮತ್ತೊಂದು ಪ್ರಕರಣ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದ್ದು, ಕೈಗೆ ಹಾಕಿದ್ದ ಪ್ಲಾಸ್ಟರ್ ತೆಗೆಯಲು ಹೋಗಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ಪುಟ್ಟ ಮಗುವಿನ ಕೈ ಬೆರಳನ್ನೇ ಕತ್ತರಿಸಿ ಹಾಕಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರೇಕುಂಟನೂರು ಗ್ರಾಮದ ನಿವಾಸಿಗಳಾದ ಸೈಯದ್ ಅಬ್ಬಾಸ್, ಮುಮ್ತಾಜ್ ದಂಪತಿಗೆ ಕಳೆದ 15 ದಿನದ ಹಿಂದೆ ಜನಿಸಿದ ಗಂಡು ಮಗುವಿಗೆ ಮೂರ್ಛೆ ರೋಗ ಇದ್ದಿದ್ದರಿಂದ ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಂತೆಯೇ ವೈದ್ಯರು ಮಗುವಿಗೆ ಉತ್ತಮ ಚಿಕಿತ್ಸೆ ನೀಡಿದ್ದರಿಂದ ಮಗು ಸಂಪೂರ್ಣ ಗುಣಮುಖವಾಗಿತ್ತು. ಅದರಂತೆ ಇಂದು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಹಿರಿಯ ವೈದ್ಯರು ಸೂಚಿಸಿದ್ಗರು.

ವೈದ್ಯರ ಸೂಚನೆಯಂತೆ ಮಗುವನ್ನು ಡಿಸ್ಚಾರ್ಜ್ ಮಾಡಲು ಆಸ್ಪತ್ರೆಯ ನರ್ಸ್ ಒಬ್ಬರು ಇಂಜೆಕ್ಷನ್ ಹಾಕಲು ಮಗುವಿನ ಕೈಗೆ ಹಾಕಿದ್ದ ಕೆನೋಲ್ ಹಾಗೂ ಬ್ಯಾಂಡೇಜ್ ತೆಗೆಯಲು ಹೋಗಿ ಮಗುವಿನ ಎಡಗೈನ ಹೆಬ್ಬೆರಳಿಗೆ ಕತ್ತರಿ ಹಾಕಿದ್ದಾರೆ. ಪರಿಣಾಮ ಮಗುವಿನ ಎಡಗೈ ಹೆಬ್ಬರಳು ಕತ್ತರಿಸಿ ಹೋಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಪೋಷಕರು ಹರಿಹಾಯ್ದಿದ್ದಾರೆ.

ಇನ್ನು ಮಗುವಿನ ಪೋಷಕರಾದ ಸೈಯದ್ ಅಬ್ಬಾಸ್, ಮುಮ್ತಾಜ್ ದಂಪತಿಗಳ ಸಂಬಂಧಿಕರಿಗೂ ಈ ವಿಚಾರ ತಿಳಿದಿದ್ದು, ಆಸ್ಪತ್ರೆಗೆ ಧಾವಿಸಿದ ಸಂಬಂಧಿಗಳು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ವೈದ್ಯರು ಹಾಗೂ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಇದೇ ವೇಳೆ ಆಸ್ಪತ್ರೆ ಮುಖ್ಯಸ್ಥರಾದ ಡಾ. ರಾಜೇಶ್ ಮಗುವಿನ ಸಂಬಂಧಿಕರನ್ನು ಸಮಾಧಾನ ಮಾಡಲು ಯತ್ನಿಸಿದರು. ಗೊತ್ತಿಲ್ಲದೇ ಆಗಿರುವ ಈ ತಪ್ಪನ್ನು ಸರಿಪಡಿಸಲು ಯತ್ನಿಸುತ್ತೇವೆ ಎಂದು ಹೇಳಿದರು.

“ನರ್ಸ್ ಮಾಡಿದ ತಪ್ಪಿನಿಂದಾಗಿ ಮಗುವಿನ ಬೆರಳು ಕಟ್ ಆಗಿದೆ. ಸಣ್ಣ ಮಗುವಾದ್ದರಿಂದ ಬೆರಳನ್ನು ಜೋಡಿಸಬಹುದಾಗಿದೆ. ಶಸ್ತ್ರ ಕ್ರಿಯೆ ಮಾಡುವ ಮೂಲಕ ಬೆರಳನ್ನು ಜೋಡಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಶೇ.100 ರಷ್ಟು ಗ್ಯಾರಂಟಿ ನೀಡಲು ಸಾಧ್ಯವಿಲ್ಲ. ಆದರೂ ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ”ಎಂದು ರಾಜೇಶ್ ಹೇಳಿದರು.

ಒಟ್ಟಾರೆ ಆಸ್ಪತ್ರೆ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ಪುಟ್ಟಮಗು ತನ್ನ ಹೆಬ್ಬರಳುಕಳೆದುಕೊಳ್ಳುವಂತಾಗಿದೆ.

Write A Comment