ಕರ್ನಾಟಕ

ಅಕ್ರಮ ಲಾಟರಿ ಹಗರಣ : ಸರ್ಕಾರದಿಂದ ವಿವರಣೆ ಕೇಳಿದ ರಾಜ್ಯಪಾಲ

Pinterest LinkedIn Tumblr

Vajubhai-Vala

ಬೆಂಗಳೂರು,ಮೇ 25: ರಾಜ್ಯದ ಘಟಾನುಘಟಿ ಪೊಲೀಸ್ ಅಧಿಕಾರಿಗಳಿಗೆ ನಡುಕ ಹುಟ್ಟಿಸಿರುವ ಅಕ್ರಮ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ರಾಜ್ಯಪಾಲರು ವಿವರಣೆ ಕೋರಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಮೌಖಿಕ ಸೂಚನೆ ನೀಡಿರುವ ರಾಜ್ಯಪಾಲ ವಿ.ಆರ್.ವಾಲಾ ಅವರು ಸಂಪೂರ್ಣ ವಿವರ ನೀಡಬೇಕೆಂದು ಸೂಚನೆ ನೀಡಿದ್ದಾರೆ.

ಲಾಟರಿ ಹಗರಣದಲ್ಲಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ. ಈವರೆಗೂ ನಡೆದಿರುವ ತನಿಖಾ ಪ್ರಗತಿ, ಯಾವ ಯಾವ ಅಧಿಕಾರಿಗಳು ಶಾಮೀಲಾಗಿದ್ದಾರೆ ಸೇರಿದಂತೆ ವಿಸ್ತೃತ ವರದಿ ನೀಡಬೇಕೆಂದು ಅವರು ತಾಕೀತು ಮಾಡಿದ್ದಾರೆ. ಲಾಟರಿ ದಂಧೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ರಾಜ್ಯಪಾಲರು ನಿಷೇಧ ಮಾಡಿದ ಮೇಲೂ ಲಾಟರಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.

ಬೇಲಿಯೇ ಎದ್ದು ಹೊಲ ಮೇಯ್ದಂತೆ: ಅಕ್ರಮ ಲಾಟರಿಯಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವುದಕ್ಕೆ ರಾಜ್ಯಪಾಲರು ಕಿಡಿಕಾರಿದ್ದಾರೆ ಎನ್ನಲಾಗಿದೆ. ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಇಂತಹ ಹಗರಣದಲ್ಲಿ ಹಣದ ಆಸೆಗಾಗಿ ಶಾಮೀಲಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. ನೂನು ಹೆಸರಿನಲ್ಲಿ ಖಾಕಿ ತೊಟ್ಟವರೇ ಕಾನೂನು ಭಕ್ಷಕರಾದರೆ ಜನತೆ ಪೊಲೀಸರ ಬಗ್ಗೆ ಯಾವ ಗೌರವ ಇಟ್ಟುಕೊಳ್ಳುತ್ತಾರೆ. ಇಂತಹ ಅಧಿಕಾರಿಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೌಶಿಕ್ ಮುಖರ್ಜಿ ಅವರಿಗೆ ಪ್ರಶ್ನಿಸಿದ್ದಾರೆ.

ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಕ್ರಮ ಲಾಟರಿ ಅವ್ಯಾಹತವಾಗಿ ನಡೆಯುತ್ತಿದ್ದರೂ ಗುಪ್ತಚರ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದರು. ಸಾವಿರಾರು ಕೋಟಿ ವಹಿವಾಟು ನಡೆದಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲವೆಂದರೆ ಗುಪ್ತಚರ ದಳ ಇರುವುದಾದರೂ ಏಕೆ? ಎಂದು ರಾಜ್ಯಪಾಲರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳೇ ಗುಪ್ತಚರ ದಳದ ಮುಖ್ಯಸ್ಥರಾಗಿದ್ದಾರೆ. ರಾಜಧಾನಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಾಮರಾಜನಗರ ಸೇರಿದಂತೆ ಅನೇಕ ಕಡೆ ಅಕ್ರಮ ಲಾಟರಿ ದಂಧೆ ನಡೆಯುತ್ತಿದ್ದರೂ ಗುಪ್ತಚರ ದಳ ಕಣ್ಮುಚ್ಚಿ ಕುಳಿತಿದೆಯೇ ಎಂದು ಪ್ರಶ್ನಿಸಿದರು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳೆಂದೇ ಪೊಲೀಸ್ ಇಲಾಖೆಯಲ್ಲಿ ಗುರುತಿಸಿಕೊಂಡವರು ಈ ಹಗರಣದಲ್ಲಿ ಭಾಗಿಯಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪ್ರಕರಣದ ಪೂರ್ಣ ಮಾಹಿತಿಯನ್ನು ತಕ್ಷಣವೇ ನೀಡಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ.

ಒಂದಂಕಿ ಲಾಟರಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಸರ್ಕಾರ ಶನಿವಾರವಷ್ಟೇ ಅಮಾನತು ಮಾಡಿದೆ. ರಾಜ್ಯದ ಇತಿಹಾಸದಲ್ಲೇ ಐಜಿಪಿ ದರ್ಜೆಯ ಅಧಿಕಾರಿಯೊಬ್ಬರು ಅಮಾನತು ಆಗಿರುವ ಪ್ರಕರಣ ಇದೇ ಮೊದಲು ಎನ್ನಲಾಗಿದೆ. ಈ ಪ್ರಕರಣದ ಪ್ರಮುಖ ರೂವಾರಿ ಪಾರಿರಾಜನ್ ಅವರು ಈಗಾಗಲೇ ನ್ಯಾಯಂಗ ಬಂಧನದಲ್ಲಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತರಾಗಿರುವ ಕೆಲ ಪೊಲೀಸ್ ಅಧಿಕಾರಿಗಳನ್ನು ಸಿಐಡಿ ತನಿಖಾ ತಂಡ ವಿಚಾರಣೆಗೊಳಪಡಿಸಲು ಮುಂದಾಗಿದೆ.

Write A Comment