ಕರ್ನಾಟಕ

ಹಣಕಾಸಿನ ಮುಗ್ಗಟ್ಟಿನಿಂದ ಅರ್ಧಕ್ಕೇ ನಿಂತುಹೋದ ಚಿತ್ರ; ಖಿನ್ನತೆಗೊಳಗಾದ ನಾಯಕ ನಟ ಆತ್ಮಹತ್ಯೆ ಯತ್ನ

Pinterest LinkedIn Tumblr

ram

ಬೆಂಗಳೂರು, ಮೇ 25: ರೌಡಿಗಳ ನಿಜ ಜೀವನದ ಕಥೆಯನ್ನಾಧರಿಸಿ ತಯಾರಾಗುತ್ತಿರುವ ಸಿದ್ದಾಪುರ ಚಿತ್ರ ಹಣಕಾಸಿನ ಮುಗ್ಗಟ್ಟಿನಿಂದ ಅರ್ಧಕ್ಕೇ ನಿಂತುಹೋದ ಪರಿಣಾಮ ಖಿನ್ನತೆಗೊಳಗಾದ ನಾಯಕ ನಟ ಮತ್ತು ನಿರ್ಮಾಪಕ ಇಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಚನ್ನಮ್ಮನ ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕತ್ರಿಗುಪ್ಪೆಯಲ್ಲಿ ನೆಲೆಸಿದ್ದ ನಲವತ್ತು ವರ್ಷದ ರಾಮ್ ಅವರನ್ನು ಇದೀಗ ಉದ್ಭವ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ರಾಮ್ ತಂದೆ-ತಾಯಿ ಸೇರಿದಂತೆ ಚಿತ್ರದ ನಿರ್ದೇಶಕ ಕೃಷ್ಣ ಮುಂತಾದವರು ನೆರೆದಿದ್ದು, ತೀವ್ರ ಆತಂಕದಲ್ಲಿದ್ದಾರೆ.

ಮೂಲತಃ ದೇವನಹಳ್ಳಿಯವರಾದ ರಾಮ್ ಹಲವು ವರ್ಷಗಳಿಂದ ಕತ್ರಿಗುಪ್ಪೆಯಲ್ಲಿ ನೆಲೆಸಿದ್ದು, ಸಿದ್ದಾಪುರ ಅವರ ಪ್ರಥಮ ಅಭಿನಯದ ಚಿತ್ರ. ಚಿತ್ರದ ಚಿತ್ರೀಕರಣ ಶೇ.40ರಷ್ಟು ಮುಗಿದಿದ್ದು, ಈ ನಡುವೆ ನಿರ್ಮಾಪಕರಾಗಿದ್ದ ಶ್ರೀನಿವಾಸ್ ಮುಂದಿನ ಚಿತ್ರೀಕರಣಕ್ಕೆ ಹಣ ಹೊಂದಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಚಿಂತೆಗೊಳಗಾಗಿದ್ದ ನಾಯಕ ನಟ ರಾಮ್ ತಾವೇ ಚಿತ್ರವನ್ನು ನಿರ್ಮಿಸಲು ಮುಂದಾದರು. ಈ ಸಂದರ್ಭದಲ್ಲಿ ಅವರ ತಂದೆ-ತಾಯಿ ತಮ್ಮ ಬಳಿ ಇದ್ದ ಸಾಕಷ್ಟು ಹಣವನ್ನು ನೀಡಿದ್ದರು. ಆದರೂ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ. ಈ ನಡುವೆ ರಾಮ್ ತಮ್ಮ ಸ್ನೇಹಿತರ ಬಳಿ ಹಣಕ್ಕಾಗಿ ಕೇಳಿಕೊಂಡಿದ್ದರು. ಹಲವು ಸ್ನೇಹಿತರು ಹಣ ನೀಡಲು ಒಪ್ಪಿಕೊಂಡು ಆ ನಂತರ ಕೈಕೊಟಟ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ನಿಂತುಹೋಗಿತ್ತು.

ಹೀಗಾಗಿ ತೀವ್ರ ಖಿನ್ನತೆಗೊಳಗಾದ ರಾಮ್ ಇಂದು ಬೆಳಗ್ಗೆ ಯಾರಿಗೂ ತಿಳಿಯದಂತೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ ಇನ್ನೂ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಈಗಲೇ ಏನನ್ನೂ ಹೇಳಲಾಗದು ಎಂಬುದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿರುವ ಸುದ್ದಿ. ಈ ಸಂಬಂಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment