ಕರ್ನಾಟಕ

ಲಾಟರಿ ಕಿಂಗ್‌ಪಿನ್ ಜೊತೆ ಸಂಪರ್ಕ: ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ನೋಟಿಸ್; ವಿಚಾರಣೆಗೊಳಪಡಿಸಲು ಮುಂದಾದ ಸಿಐಡಿ ಅಧಿಕಾರಿಗಳು

Pinterest LinkedIn Tumblr

PARI-RAJAN

ಬೆಂಗಳೂರು,ಮೇ 25: ನಕಲಿ ಛಾಪಾ ಕಾಗದದ ನಂತರ ಬಹುದೊಡ್ಡ ಹಗರಣವೆಂದೇ ಬಿಂಬಿತವಾಗಿರುವ ಅಕ್ರಮ ಲಾಟರಿ ಹಗರಣದಲ್ಲಿ ಕೆಲ ಪೊಲೀಸ್ ಅಧಿಕಾರಿಗಳನ್ನು ಸಿಐಡಿ ವಿಚಾರಣೆಗೊಳಪಡಿಸಲು ಮುಂದಾಗಿದೆ. ಈ ಹಗರಣದಲ್ಲಿ ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತರಾಗಿರುವ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖಾ ತಂಡ ವಿಚಾರಣೆಗೆ ಒಳಪಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಮೊದಲ ಹಂತದಲ್ಲಿ ಪೊಲೀಸ್ ಅಧಿಕಾರಿಗಳಿಗೆ ನೋಟೀಸ್ ನೀಡುವುದು ನಂತರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡಲಾಗುವುದು ಎಂದು ಸಿಐಡಿ ಆಡಳಿತ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಡಿ.ಟಿ.ಪವಾರ್ ತೀರ್ಮಾನಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಹಗರಣದ ಪ್ರಮುಖ ರೂವಾರಿ ಈಗಾಗಲೇ ನ್ಯಾಯಂಗ ಬಂಧನದಲ್ಲಿರುವ ಪಾರಿರಾಜನ್ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಸರ್ಕಾರ ಶನಿವಾರವಷ್ಟೆ ಅಮಾನತು ಪಡಿಸಿತ್ತು. ಅಮಾನತುಪಡಿಸಿದ ಮರುದಿನವೇ ಸಿಐಡಿ ಆಡಳಿತ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಡಿ.ಟಿ.ಪವಾರ್ ನೇತೃತ್ವದ ತಂಡ ಅಲೋಕ್ ಕುಮಾರ್‌ರನ್ನು 9 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದಿತ್ತು.

ಎಡಿಜಿಪಿ ಸಂಪರ್ಕ..?:
ಇದೀಗ ಅಲೋಕ್ ಕುಮಾರ್ ನಂತರ ಪಾರಿರಾಜನ್ ಜೊತೆ ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಸಂಪರ್ಕ ಹೊಂದಿರುವುದು ಸಿಐಡಿ ತನಿಖಾ ತಂಡದಿಂದ ಬೆಳಕಿಗೆ ಬಂದಿದೆ. ಈ ಹಿಂದೆ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿ ಇದೀಗ ಬೆಂಗಳೂರಿನಲ್ಲಿರುವ ಈ ಅಧಿಕಾರಿ ಪಾರಿರಾಜನ್ ಜೊತೆ ಹಣದ ವಹಿವಾಟು ನಡೆಸಿದ್ದರೆಂಬ ಗುಮಾನಿ ಎದ್ದಿದೆ. ಪಾರಿರಾಜನ್‌ನ ಸ್ವಗ್ರಾಮ ಕೆಜಿಎಫ್ ಸಮೀಪದ ಭಾರತಿನಗರದಲ್ಲಿ ಜಮೀನು ಖರೀದಿಗೆ ಸಂಬಂಧಿಸಿದಂತೆ ಈ ಅಧಿಕಾರಿ ಪಾರಿರಾಜನ್‌ಗೆ ಹಲವು ಬಾರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಈ ಇಬ್ಬರ ನಡುವಿನ ಮಾತುಕತೆ ಕೇವಲ ವ್ಯವಹಾರಕ್ಕಷ್ಟೇ ಸೀಮಿತವಾಗಿತ್ತೇ ಇಲ್ಲವೇ ಅಕ್ರಮ ಲಾಟರಿ ದಂಧೆಗೆ ಸಂಬಂಧಿಸಿದ್ದೆ ಎಂಬುದು ವಿಚಾರಣೆಯಿಂದಷ್ಟೇ ತಿಳಿಯಬೇಕು. ಈ ಹಿನ್ನೆಲೆಯಲ್ಲಿ ಸಿಐಡಿ ತಂಡ ಎಡಿಜಿಪಿಗೆ ಯಾವುದೇ ವೇಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವ ಅಕ್ರಮ ಲಾಟರಿ ದಂಧೆ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರಿಗೆ ನೋಟಿಸ್ ನೀಡಲು ಸಿಐಡಿ ಸಜ್ಜಾಗಿದೆ. ಎಡಿಜಿಪಿ ದರ್ಜೆಯ ಓರ್ವ ಅಧಿಕಾರಿ, ಐಜಿಪಿ ದರ್ಜೆಯ ಇಬ್ಬರು, ಬೆಂಗಳೂರಿನಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ನಾಲ್ವರು ಹಾಗೂ ಇಬ್ಬರು ಪೊಲೀಸ್ ಮಹಾನಿರ್ದೇಶಕರ ಹೆಸರು ಈ ಹಗರಣದಲ್ಲಿ ಕೇಳಿಬಂದಿದೆ. ಇದರ ಜೊತೆಗೆ ಹಾಲಿ ಸೇವೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು, ಇನ್‌ಸ್ಪೆಕ್ಟರ್‌ಗಳು, ಸಬ್‌ಇನ್‌ಸ್ಪೆಕ್ಟರ್‌ಗಳು ಕೂಡ ಪಾರಿರಾಜನ್ ಕೊಟ್ಟಿದ್ದ ಪ್ರಸಾದ ಸ್ವೀಕರಿಸಿದ್ದಾರೆಂಬ ಮಾತುಗಳು ಪೊಲೀಸ್ ಇಲಾಖೆಯಲ್ಲಿ ಹರಿದಾಡುತ್ತಿವೆ. ಯಾವುದೇ ವೇಳೆ ಸಿಐಡಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡುವ ಸಂಭವ ಹೆಚ್ಚಾಗಿದೆ.

Write A Comment