ಕರ್ನಾಟಕ

ಅಂದು ವೀರಾವೇಶ, ಇಂದು ಮೀನಾಮೇಷ: ಸಿದ್ದರಾಮಯ್ಯ ವಿರುದ್ಧ ಹಿರೇಮಠ್ ಟೀಕೆ

Pinterest LinkedIn Tumblr

Hiremath

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ಅಕ್ರಮದ ವಿರುದ್ಧ ವೀರಾವೇಶ ತೋರಿಸಿದ್ದ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದಮೇಲೆ ಅಕ್ರಮವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಮಾಡುತ್ತಿದ್ದಾರೆ ಎಂದು ಸಮಾಜ ಪರಿವರ್ತನ ಸಮುದಾಯ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಶನಿವಾರ ಆರೋಪಿಸಿದ್ದಾರೆ.

ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಎಸ್ ಆರ್ ಹಿರೇಮಠ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಧಿಕಾರ ಇಲ್ಲದಿದ್ದಾಗ ವೀರಾವೇಶ ತೋರಿಸಿದ ಸಿದ್ದರಾಮಯ್ಯ, ಇಂದು ತಮ್ಮ ಪಕ್ಷದ ನಾಯಕರೇ ಕೊಳ್ಳೆ ಹೊಡೆಯುತ್ತಿರುವುದನ್ನು ಕಂಡಿದ್ದರೂ, ಕ್ರಮ ಕೈಗೊಳ್ಳದೇ, ಮೀನಾಮೇಷ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಗಳು ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಿದ್ದರು. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅದೇ ರೀತಿ ಬಿಡಿಎ ಕೂಡ ಕೆರೆ ಒತ್ತುವರಿ ಮಾಡಿದೆ. ನಗರದಲ್ಲಿ ಕೆರೆ ಒತ್ತುವರಿ ಮಾಡಿ ಬಿಡಿಎ ನಿವೇಶನಗಳನ್ನು ನಿರ್ಮಿಸಲಾಗಿದೆ. ಇದು ಕೂಡ ಅಕ್ರಮವಾಗಿದ್ದು, ಸರ್ಕಾರ ಇದರ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವಿದೆ.

ಯಾವ ಯಾವ ಕೆರೆಗಳು ಒತ್ತುವರಿಯಾಗಿದೆ? ಕೆರೆ ಒತ್ತುವರಿಯಿಂದ ನಿರ್ಮಾಣವಾಗಿರುವ ಲೇಔಟ್ ಗಳು ಎಷ್ಟು?, ಲೇಔಟ್ ನಿರ್ಮಿಸಿದ ವ್ಯಕ್ತಿಗಳು ಯಾರು, ಇದರಲ್ಲಿ ಯಾರ್ಯಾರ ಕೈವಾಡವಿದೆ ಎಂಬುದರ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದ ಅವರು, ಬಿಡಿಎ ಸೈಟ್ ಖರೀದಿಸಿರುವವರೆಲ್ಲ ಸಾಚಾಗಳಲ್ಲ, ನಿವೇಶನ ಹೊಂದಿರುವವರೇ ಬಿಡಿಎ ನಿವೇಶನ ಖರೀದಿಸಿದ್ದಾರೆ. ಹಾಗಂತ ಎಲ್ಲರೂ ಹಾಗಿರುವುದಿಲ್ಲ. ಹಾಗಾಗಿ, ಕೆರೆ ಒತ್ತುವರಿ, ಬಿಡಿಎ ನಿವೇಶನ ಹಂಚಿಕೆ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಭೂಗಳ್ಳರನ್ನು ಶಿಕ್ಷೆಗೊಳಪಡಿಸಬೇಕು. ಹೈಕೋರ್ಟ್ ತೀರ್ಪಿನಂತೆ ಬಲಾಢ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಭೂಒತ್ತುವರಿಯಲ್ಲಿ ಶಾಮಿಲಾಗಿರುವ ಬಿಡಿಎ ಆಯುಕ್ತ ಟಿ ಶ್ಯಾಮ್ ಭಟ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಭೂ ಒತ್ತುವರಿ ಎಸ್.ಎಂ ಕೃಷ್ಣ ಕಾಲದಿಂದಲೂ ನಡೆದು ಬಂದಿದೆ. ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಹಿಡಿದು ಇಂದಿನ ಮುಖ್ಯಮಂತ್ರಿ ವರೆಗೆ ಆಗಿರುವ ಭೂ ಒತ್ತುವರಿಗೆ ತನಿಖೆ ಕೈಗೊಳ್ಳುವ ಅಗತ್ಯವಿದೆ. ಈ ಸಂಬಂಧ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಧನಿ ಎತ್ತಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Write A Comment