ಕರ್ನಾಟಕ

ಪತ್ನಿಯ ಮೇಲಿನ ಕಾಳಜಿಗೆ ಮುಟ್ಟಾದ ಗಂಡು!

Pinterest LinkedIn Tumblr

Arunachal

ಮಹಿಳೆಯರು ಋತುಸ್ರಾವದ ಸಂದರ್ಭದಲ್ಲಿ ಧರಿಸುವ ‘ಸ್ಯಾನಿಟರಿ ಪ್ಯಾಡ್’ ಧರಿಸಿದ ಏಕೈಕ ಪುರುಷ ಎಂಬ ‘ಕುಖ್ಯಾತಿ’ ತಮಿಳುನಾಡಿನ ಅರುಣಾಚಲಂ ಮುರುಗನಾಥನ್ ಅವರದು. ಹೆಣ್ಣುಮಕ್ಕಳ ಮುಟ್ಟಿನ ದಿನಗಳಿಗೆ ಕಡಿಮೆ ವೆಚ್ಚದ ಪ್ಯಾಡ್‌ಗಳನ್ನು ರೂಪಿಸುವ ದಾರಿಯಲ್ಲಿ ‘ಸೈಕೊ’ ಎಂದು ಕರೆಸಿಕೊಂಡ ಅವರು, 2014ರ ‘ಟೈಮ್‌’ ಮ್ಯಾಗಜಿನ್‌ನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾದುದು ವಿಶೇಷ.

ಆ ವ್ಯಕ್ತಿಯನ್ನು ಕಂಡು ಊರಿಗೆ ಊರೇ ಅಸಹ್ಯಪಟ್ಟುಕೊಳ್ಳುತ್ತಿತ್ತು. ‘ಈ ವಿಕೃತ ಮನುಷ್ಯನೊಂದಿಗೆ ಜೀವನ ಅಸಾಧ್ಯ’ ಎಂದು ಅವನ ಹೆಂಡತಿ, ಅಮ್ಮ, ಸುತ್ತಲಿದ್ದ ಜನ ದೂರ ಸರಿದರು. ಅವನು ಈ ಸಮಾಜ ಊಹಿಸಿಕೊಳ್ಳಲೂ ಮುಜುಗರಪಡುವ ಕ್ರಿಯೆಯಲ್ಲಿ ತೊಡಗಿದ್ದ! ಹೌದು… ಆತ ಮಹಿಳೆಯರು ಮುಟ್ಟಿನ ದಿನಗಳಲ್ಲಿ ತೊಡುವ ನ್ಯಾಪ್‌ಕಿನ್ ಧರಿಸುತ್ತಿದ್ದ!

ಈ ‘ಹುಚ್ಚು’ ಪ್ರಾರಂಭವಾದದ್ದು ಹೀಗೆ… ಆತನಿಗೆ ಮಹಿಳೆಯರು ಬೇಕಿತ್ತು! ತಮ್ಮ ಮುಟ್ಟಿನ ದಿನದಲ್ಲಿ ಉಂಟಾಗುವ ರಕ್ತಸ್ರಾವದ ಅನುಭವದ ಬಗ್ಗೆ, ಬಳಸುವ ಬಟ್ಟೆ ಅಥವಾ ಪ್ಯಾಡ್‌ಗಳು ಸ್ರಾವವನ್ನು ಎಷ್ಟು ಹೊತ್ತು ತಡೆಯಬಲ್ಲವು ಎಂಬುದರ ಬಗ್ಗೆ ಹಾಗೂ ಅವುಗಳು ಕೊಡುವ ಕಂಫರ್ಟ್ ಬಗ್ಗೆ ಮಾಹಿತಿ ನೀಡಲು ಆತನಿಗೆ ಮಹಿಳೆಯರು ಬೇಕಿತ್ತು.

ತಮಿಳುನಾಡಿನ ಕೊಯಮತ್ತೂರಿನ ಅರುಣಾಚಲಂ ಮುರುಗನಾಥನ್ ಅವರ ಕಥೆಯಿದು. ಅದು ಶುರುವಾದದ್ದು ಹೀಗೆ… ಒಮ್ಮೆ ಅವರ ಹೆಂಡತಿ ಶಾಂತಿ ಹಳೆಯ ಬಟ್ಟೆಯೊಂದನ್ನು ಮುದುರಿ ಬೆನ್ನಿಗೆ ಹಿಡಿದು ಹೋಗುತ್ತಿದ್ದುದು ಕಂಡುಬಂತು. ಅವಳು ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾಳೆ ಎಂಬ ಕುತೂಹಲದಿಂದ ವಿಚಾರಿಸಿದಾಗ ಆಕೆ ಕೆನ್ನೆಗೆ ಬಾರಿಸಿದಂತೆ ಉತ್ತರಿಸಿದ್ದಳು, “ಅದು ನಿಮಗೆ ಸಂಬಂಧಪಡದ ವಿಷಯ!”.

ಆಕೆ ಒಯ್ಯುತ್ತಿರುವುದು ಮಾಸಿಕ ಋತುಚಕ್ರಕ್ಕೆ ಬಳಸುವ ಬಟ್ಟೆ! ಮತ್ತದು ಗಂಡಸರಿಗೆ ಸಂಬಂಧಪಡದ ವಿಷಯ! “ನಿಜ ಹೇಳಬೇಕೆಂದರೆ ಆಕೆ ಹಿಡಿದಿದ್ದ ಬಟ್ಟೆ ನಾನು ಸ್ಕೂಟರ್ ಒರೆಸುವ ಬಟ್ಟೆಗಿಂತ ಕೆಟ್ಟದಾಗಿತ್ತು”– ಇದು ಮುರುಗನಾಥನ್ ಮಾತು. ಅಂದಹಾಗೆ, ನಮ್ಮಲ್ಲಿ ಎಷ್ಟು ಮಂದಿ ಪುರುಷರು ಹೆಂಗಸರ ಋತುಚಕ್ರದ ದಿನಗಳ ಬಗ್ಗೆ ಕಾಳಜಿ ವಹಿಸುತ್ತಾರೆ? ಎಷ್ಟು ಮಂದಿ ತಮ್ಮ ಅಕ್ಕ-ತಂಗಿ, ಪತ್ನಿ, ಗೆಳತಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಂಡು ತರುತ್ತಾರೆ?

ಮುರುಗನಾಥನ್ ತಮ್ಮ ಪತ್ನಿಯನ್ನು ಬಡಪೆಟ್ಟಿಗೆ ಬಿಡಲಿಲ್ಲ. “ಟೀವಿಯಲ್ಲಿ ನೂರಾರು ಜಾಹೀರಾತು ತೋರಿಸುತ್ತಾರಲ್ಲಾ… ಆ ಪ್ಯಾಡ್‌ಗಳನ್ನು ಬಳಸುವುದರ ಬದಲು ನೀನ್ಯಾಕೆ ಬಟ್ಟೆ ಬಳಸುತ್ತೀಯಾ?’’ ಎಂದವರು ಪ್ರಶ್ನಿಸಿದರು. ಆದಕ್ಕೆ ಆಕೆ ಹೇಳಿದ್ದು– “ಹಾಗಾದರೆ ನಾವು ಮನೆಗೆ ಹಾಲು ತರೋದು ನಿಲ್ಲಿಸಬೇಕು!”. ಹೆಂಡತಿಯ ಮಾತು ಮುರುಗನಾಥನ್‌ರ ತಲೆಯಲ್ಲಿ ನೂರಾರು ಆಲೋಚನೆಗಳನ್ನು ಹುಟ್ಟುಹಾಕಿತು. ಹೀಗೆ ಶುರುವಾದುದು ನ್ಯಾಪ್‌ಕಿನ್ ಪ್ರವರ.

ನಗರದ ಹೆಣ್ಣುಮಕ್ಕಳು ದೊಡ್ದ ದೊಡ್ಡ ಬ್ರಾಂಡ್‌ಗಳ ನ್ಯಾಪ್‌ಕಿನ್‌ಗಳನ್ನು ಬಳಸುತ್ತಾರೆ. ಜಾಹೀರಾತುಗಳಲ್ಲಿ ಜೀನ್ಸ್ ತೊಟ್ಟ ಹೆಣ್ಣುಮಗಳು ನಾಯಿಯ ಹಿಂದೆ ಓಡಿ ಅದನ್ನು ಹಿಡಿದು ಮುದ್ದಿಸುತ್ತಾಳೆ. ಅವಳಿಗೆ ತನ್ನ ಮುಟ್ಟಿನ ಮುಜುಗರ ಲವಲೇಶವೂ ಇಲ್ಲ. ಇನ್ನೊಂದು ಜಾಹೀರಾತಿನಲ್ಲಿ– ಹಾಕಿ ಆಟದಲ್ಲಿ ಮಗಳು ನಿರಾತಂಕವಾಗಿ ಆಡಿ ಜಯಿಸಲು ಅಮ್ಮ ಕೊಟ್ಟ ಸ್ಯಾನಿಟರಿ ಪ್ಯಾಡ್ ಕೆಲಸಮಾಡಿರುತ್ತದೆ. ಮತ್ತೊಂದರಲ್ಲಿ ಯುವತಿಯೊಬ್ಬಳು ಗಂಡುಮಕ್ಕಳಿಗೆ ಸರಿಸಮನಾಗಿ ಏರಿ ಮಡಕೆ ಒಡೆಯುತ್ತಾಳೆ.

ಅಲ್ಲೂ ಅವಳಿಗೆ ‘ಅದರ’ ಚಿಂತೆ ಇಲ್ಲ. ಅಲ್ಲವೇ ಮತ್ತೆ! ಮಾರುಕಟ್ಟೆಯಲ್ಲಿ ಈಗಾಗಲೇ ಬೃಹದಾಕಾರವಾಗಿ ಹಬ್ಬಿರುವ ಪ್ರಖ್ಯಾತ ಬ್ರಾಂಡ್‌ಗಳ ಸ್ಯಾನಿಟರಿ ಪ್ಯಾಡ್‌ಗಳು ‘ಹ್ಯಾವ್ ಎ ಹ್ಯಾಪೀ ಪೀರಿಯಡ್’ ಮುಂತಾಗಿ ಕರೆ ಕೊಡುತ್ತಿರುವಾಗ… ಸಾಮಾನ್ಯ ದಿನಗಳಲ್ಲಿ ಗರ್ಭಕೋಶ ಹಾಗೂ ಇತರೆ ಭಾಗಗಳಲ್ಲಿ ಸೋಂಕು ಉಂಟಾಗದಂತೆ ಸ್ತ್ರೀ ಜನನಾಂಗದಲ್ಲಿ ಆಮ್ಲೀಯ ವಾತಾವರಣ ಇರುತ್ತದೆ. ಆ ಕಾರಣದಿಂದಾಗಿ ಸೋಂಕುಕಾರಕ ಕ್ರಿಮಿಗಳು ವೃದ್ಧಿಯಾಗುವುದಿಲ್ಲ.

ಆದರೆ ಮುಟ್ಟಿನ ದಿನಗಳಲ್ಲಿ ಸ್ರಾವದಿಂದ ಉಂಟಾಗುವ ಕ್ಷಾರೀಯ ವಾತಾವರಣವು ಸುಲಭವಾಗಿ ಸೋಂಕು ಉಂಟಾಗಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಮುಟ್ಟಿನ ಸಂದರ್ಭದ ಸ್ವಚ್ಛತೆ ಅತೀ ಮುಖ್ಯ. ಆದರೆ ಗ್ರಾಮೀಣ ಹೆಣ್ಣುಮಕ್ಕಳು ತಮ್ಮ ‘ಆ’ ದಿನಗಳಲ್ಲಿ ಅನುಭವಿಸುವ ಯಾತನೆ ಅವರ್ಣನೀಯ. ಹಳೆಯ ಕಾಟನ್ ಸೀರೆಯನ್ನು ಹರಿದು ತಿಂಗಳುಗಟ್ಟಲೆ ಅದನ್ನೇ ಒಗೆದು ಬಳಸುತ್ತಾರೆ. ಗಂಡಸರಿಗೆ ಕಾಣುವಂತಿಲ್ಲ, ಸೋಕುವಂತಿಲ್ಲ, ಬಯಲಲ್ಲಿ ಒಣಗಿಸುವಂತಿಲ್ಲ, ಬಚ್ಚಲು ಮನೆಯ ಮೂಲೆಯಲ್ಲಿ, ಮೆಟ್ಟಿಲುಗಳ ಕೆಳಗೆ ಅಥವಾ ಇನ್ನಿತರೆ ಕತ್ತಲ ಜಾಗಗಳನ್ನೇ ಹುಡುಕಿಕೊಳ್ಳಬೇಕು.

ಮುಟ್ಟೆಂದರೆ ಪುರುಷರ ತಿಳಿವಳಿಕೆಯಲ್ಲಿ ಮೂರು ನಾಲ್ಕು ರಕ್ತಸ್ರಾವದ ದಿನಗಳು. ಕೆಲವರ ಮನೆಯಲ್ಲಿ ಅಸೃಶ್ಯತೆ! ಮತ್ತೆ ಕೆಲವರ ಮನೆಯಲ್ಲಿ ಏನೂ ವ್ಯತ್ಯಾಸವಾಗದ ಸಾಮಾನ್ಯ ಹೆಣ್ಣುಗಳು! ಇದಿಷ್ಟೇ ಕಾಣುವ ಜನರಿಗೆ, ಆಕೆಯ ಮನೋದೈಹಿಕ ಬಾಧೆಯ ಅರಿವಿರುವುದಿಲ್ಲ. ಮುಟ್ಟಿನ ಸಂದರ್ಭದಲ್ಲಿ ದೇಹಪ್ರಕೃತಿ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಕೆಲವರಿಗೆ ಅತಿಯಾಗಿ ರಕ್ತಸ್ರಾವ, ಬಿಳಿಸೆರಗು, ಅಲರ್ಜಿ, ಹೊಟ್ಟೆನೋವು, ಬಳಲಿಕೆ ಕಾಡುತ್ತದೆ. ಇವುಗಳು ಪುರುಷರ ಅರಿವಿಗೆ ಬಾರದಂತೆ ಇಡುವಲ್ಲಿ ಸ್ತ್ರೀಯರ ಪ್ರಯತ್ನ, ಶ್ರಮ ದೊಡ್ಡದು. ಏಕೆಂದರೆ ಸ್ವತಃ ಅವರ ದೃಷ್ಠಿಯಲ್ಲಿ ಆ ಮೂರು ದಿನಗಳು ಅಸಹ್ಯಕರ, ಕೊಳಕು ದಿನಗಳು.

ನಗರ ಪ್ರದೇಶದ ಮಹಿಳೆಯರಿಗೆ ಹೋಲಿಸಿದರೆ, ಹೊಲಗದ್ದೆಯ ಕೆಲಸ, ಕೊಟ್ಟಿಗೆ ಕೆಲಸ, ನೀರು ಹೊರುವುದು, ಮನೆಗೆಲಸ ಮುಂತಾಗಿ ಹೆಚ್ಚು ದೈಹಿಕ ಶ್ರಮದ ಕೆಲಸಗಳನ್ನು ಮಾಡುವ ಗ್ರಾಮೀಣ ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ದುಪ್ಪಟ್ಟು ಕಂಫರ್ಟ್ ಹೊಂದಬೇಕು. ಈ ಬಡ ಗ್ರಾಮೀಣ ಹೆಣ್ಣುಮಕ್ಕಳೂ ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳಲು ನ್ಯಾಪ್‌ಕಿನ್ ಬಳಸುವಂತಾಗಬೇಕು. ಆದರೆ ಅವರಿಗೆ ಇದು ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು.

ಇಂಥದ್ದೇ ಆಲೋಚನೆಗೆ ಬಿದ್ದ ಮುರುಗನಾಥನ್, ಒಂದು ದಿನ ಅಂಗಡಿಗೆ ಹೋಗಿ ಸ್ಯಾನಿಟರಿ ಪ್ಯಾಡ್ ಕೊಂಡುತಂದರು. ಪ್ಯಾಕೆಟ್ ಒಡೆದು ಅದನ್ನು ಸ್ವರ್ಶಿಸಿ, ಸೂಕ್ಷ್ಮವಾಗಿ ಗಮನಿಸಿದರು. ಕೆಲವೇ ಪೈಸೆಗಳಿಗೆ ಒದಗುವ ಹತ್ತಿಯನ್ನು ಬಳಸಿ ತಯಾರಿಸಿದ ಆ ಪ್ಯಾಡ್ ಒಂದಕ್ಕೆ 5ರಿಂದ 8 ರೂಪಾಯಿವರೆಗೂ ಬೆಲೆ ನಿಗದಿ ಪಡಿಸ­ಲಾಗಿತ್ತು. ಹೆಂಡತಿ ಹೇಳಿದ ಮನೆಗೆ ಹಾಲು ತರುವುದನ್ನು ನಿಲ್ಲಿಸುವ ವಿಚಾರ ಮುರುಗನಾಥನ್ ಅವರಿಗೆ ಆಗ ಅರಿವಾಯ್ತು.

ಆ ಕ್ಷಣವೇ ಹೊಳೆದದ್ದು– ಮುಂದೆ ಜಗತ್ತಿನಲ್ಲೇ ಹೊಸ ಚರಿತ್ರೆ ಬರೆಯಬಹುದಾದ ಆಲೋಚನೆ. “ಅಗ್ಗದ ದರದಲ್ಲಿ ಗ್ರಾಮೀಣ ಮಹಿಳೆಯರಿಗೆ ದಕ್ಕುವಂಥ ಇಂಥಹ ನ್ಯಾಪ್‌ಕಿನ್ ಗಳನ್ನು ನಾನೇ ತಯಾರಿಸಬಾರದೇಕೆ..?”.

ಈ ಯೋಚನೆ ಹೊಳೆದದ್ದೇ ತಡ, ಮುರುಗನಾಥನ್ ಮನೆಯಲ್ಲೇ ಹತ್ತಿಯನ್ನು ಆಯತಾಕಾರ ಹರವಿ ಬ್ಯಾಂಡೇಜ್ ಬಟ್ಟೆಯಿಂದ ಸುತ್ತಿ ನ್ಯಾಪ್‌ಕಿನ್ ರೂಪ ಕೊಟ್ಟರು. ಅದನ್ನು ಹೆಂಡತಿಯ ಕೈಗಿತ್ತು ಪರೀಕ್ಷಿಸಿ ಅನುಭವ ಹಂಚಿಕೊಳ್ಳುವಂತೆ ತಿಳಿಸಿದರು. ದಿನವಾಯ್ತು, ವಾರವಾಯ್ತು, ಎರಡು ಮೂರು ವಾರಗಳಾದವು. ಹೆಂಡತಿಯಿಂದ ಉತ್ತರವಿಲ್ಲ! ಇವರ ತರಾತುರಿಗೆ ಹೆಂಡತಿ ಸಿಡುಕುತ್ತಾ ಉತ್ತರಿಸಿದರು, “ನಿಮ್ಮ ಅರ್ಜೆಂಟಿಗೆ ನಾನು ಹೊರಗಾಗಲಾರೆ!”. ಆಗಷ್ಟೇ ಮುರುಗನಾಥನ್ ಅವರಿಗೆ ಅರಿವಾಯ್ತು.

ಇದು ಬಹಳ ನಿಧಾನಗತಿಯ ವಿಧಾನ ಎಂದು. ಪ್ರತಿ ಬಾರಿ ಪ್ಯಾಡ್‌ಗಳನ್ನು ಪರೀಕ್ಷಿಸಲು ಹೆಂಡತಿಯ ಕೈಗಿತ್ತು ತಿಂಗಳು ಕಾಯಬೇಕು. ನಂತರ ಹೊಳೆದದ್ದು ಆತನ ತಂಗಿಯರು. ಅವರೂ ಸ್ವಂತ ಅಣ್ಣನೊಂದಿಗೆ ‘ಹೊಲಸು’ ವಿಚಾರ ಚರ್ಚಿಸುವುದಕ್ಕೆ ಮುಜುಗರಪಟ್ಟರು. ಇದು ಆಗದ ಕೆಲಸವೆಂದುಕೊಂಡ ಮುರುಗನಾಥನ್ ವೈದ್ಯಕೀಯ ವಿದ್ಯಾರ್ಥಿನಿಯರ ಮೊರೆಹೊಕ್ಕರು. ಅವರೂ ಸಹ ಬೇರೆಯವರ ವಿವರಗಳನ್ನು ಹಂಚಿಕೊಳ್ಳಲು ಸಿದ್ಧರಿದ್ದರೇ ವಿನಃ ತಮಗೆ ಖುದ್ದು ಆಗುವ ಅನುಭವವನ್ನು ತೆರೆದಿಡಲು ಅಂಜಿದರು.

ಅಗ್ಗದ ಹಾಗೂ ಪರಿಣಾಮಕಾರಿ ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕೆಯನ್ನು ಯಶಸ್ವಿಗೊಳಿಸೇ ತೀರಬೇಕೆಂದು ಪಣತೊಟ್ಟ ಮುರುಗನಾಥನ್, ಪ್ರಾಯೋಗಿಕ ಪರೀಕ್ಷೆಯನ್ನು ಸ್ವತಃ ಕೈಗೊಳ್ಳಲು ತೀರ್ಮಾನಿಸಿಬಿಟ್ಟರು. ಫುಟ್ ಬಾಲ್ ಒಳಗಿನ ಟ್ಯೂಬಿನಲ್ಲಿ ಪ್ರಾಣಿರಕ್ತವನ್ನು ತುಂಬಿ, ಅದಕ್ಕೆ ಪೈಪ್ ಅಳವಡಿಸಿ ಪ್ಯಾಂಟಿನೊಳಗೆ ಕಟ್ಟಿಕೊಂಡರು! ತಾವೇ ತಯಾರಿಸಿದ ನ್ಯಾಪ್‌ಕಿನ್ ಧರಿಸಿ ಸೈಕಲ್, ಬೈಕ್, ಬಸ್‌ಗಳಲ್ಲಿ ಪ್ರಯಾಣಿಸಿದರು. ಜನಜಂಗುಳಿಯ ನಡುವೆ ಓಡಾಡಿದರು. ವ್ಯಾಯಾಮ ಮಾಡಿದರು.

ಆಗೆಲ್ಲಾ ಒಳಗಿನ ಟ್ಯೂಬಿನ ಮೇಲೆ ಸ್ವಲ್ಪ ಸ್ವಲ್ಪವೇ ಒತ್ತಡ ಹಾಕುತ್ತಿದ್ದರು. ರಕ್ತ ಸ್ವಲ್ಪ ಸ್ವಲ್ಪವೇ ಒಸರುತ್ತಿತ್ತು. ಹೀಗೆ ತಾವೇ ತಯಾರಿಸಿದ ಪ್ಯಾಡ್‌ಗಳನ್ನು ತಾವೇ ಪರೀಕ್ಷಿಸುವ ಮೂಲಕ ಸ್ಯಾನಿಟರಿ ಪ್ಯಾಡ್ ಧರಿಸಿದ ಏಕೈಕ ಪುರುಷ ಎಂಬ ‘ಕುಖ್ಯಾತಿ’ಗೆ ಗುರಿಯಾದರು. ಇವರ ಈ ‘ಹುಚ್ಚಾಟ’ ಬಯಲಾಗುತ್ತಲೇ ಈತನ ಜೊತೆ ಸಂಸಾರ ಅಸಾಧ್ಯವೆಂದು ಪತ್ನಿ ಶಾಂತಿ ಮನೆ ಬಿಟ್ಟು ಹೋದರು. ಇತ್ತ ಮನೆಗೆ ಬಂದ ಅಮ್ಮ ಮಗನ ನಡವಳಿಕೆಯಿಂದ ಕಂಗಾಲಾಗಿ ತಲೆ ಚಚ್ಚಿಕೊಳ್ಳುತ್ತಾ ಮನೆಯಿಂದ ಹೊರನಡೆದವರು, ಮರಳಿ ಅತ್ತ ತಲೆಹಾಕಲೇ ಇಲ್ಲ.

ಮುರುಗನಾಥನ್ ಏಕಾಂಗಿಯಾಗಿ ಬದುಕಬೇಕಾಯ್ತು. ತಮ್ಮ ಅಡುಗೆ ತಾವೇ ಮಾಡಿಕೊಳ್ಳಬೇಕಾಯ್ತು. ಇಷ್ಟಾದರೂ ಅವರು ತಮ್ಮ ಛಲ ಬಿಡಲಿಲ್ಲ. ಕೊನೆಗೂ ಕಡಿಮೆ ವೆಚ್ಚದಲ್ಲಿ ಮಹಿಳೆಯರಿಗೆ ಪೂರೈಸಬಲ್ಲ ಸ್ಯಾನಿಟರಿ ಪ್ಯಾಡ್ ತಯಾರಿಕೆಯ ಸೂತ್ರ ಕಂಡುಹಿಡಿದೇಬಿಟ್ಟರು. ತಾವೇ ಪ್ಯಾಡ್‌ಗಳನ್ನು ತಯಾರಿಸಿ ಮಾರುಕಟ್ಟೆ ಕಂಡುಕೊಳ್ಳುವುದು ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಅದೂ ಕೂಡಾ ಒಂದು ವ್ಯಾಪಾರೀ ತಂತ್ರವಾಗಿ ಕಂಡಿತೇ ಹೊರತು, ಈ ನೆಲದ ಕಟ್ಟಕೊನೆಯ ಹೆಣ್ಣುಮಗಳ ಆ ಮೂರು ದಿನಗಳ ತಳಮಳವನ್ನು ತೊಡೆದುಹಾಕುವುದಿಲ್ಲ ಎಂದು ಅವರಿಗನ್ನಿಸಿತು.

ಆಗ ಅವರಿಗೆ ಹೊಳೆದುದು, ಕಡಿಮೆ ವೆಚ್ಚದ ಪ್ಯಾಡ್ ತಯಾರಿಕಾ ಯಂತ್ರವನ್ನು ಪರ್ಯಾಯ ವಿಧಾನದಲ್ಲಿ ಮಹಿಳೆಯರಿಗೆ ತಲುಪಿಸುವ ಮಾರ್ಗ. ಪ್ರಾರಂಭದಲ್ಲಿ ಯಂತ್ರವನ್ನು ಕೇವಲ 65 ಸಾವಿರ ರೂಪಾಯಿಗಳಿಗೆ ಸಣ್ಣ ಸಣ್ಣ ಸ್ವ-ಸಹಾಯ, ಸ್ತ್ರೀಶಕ್ತಿ ಸಂಘಗಳಿಗೆ ಒದಗಿಸುವುದರ ಮೂಲಕ ಮಹಿಳೆಯರ ಸ್ವಾವಲಂಬನೆಯನ್ನು ಬೆಂಬಲಿಸುತ್ತಾ, ತನ್ಮೂಲಕ ಮಹಿಳೆಯರ ಆರೋಗ್ಯ, ನೈರ್ಮಲ್ಯದ ಕಡೆಗೂ ಕ್ರಿಯಾತ್ಮಕ ಪರಿಹಾರ ಕಂಡುಕೊಂಡರು.

ಪ್ರಸ್ತುತ ಭಾರತದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸ್ತ್ರೀಶಕ್ತಿ ಗುಂಪುಗಳು ಮುರುಗನಾಥನ್ ಅವರ ‘ಜಯಶ್ರೀ ಇಂಡಸ್ಟ್ರೀಸ್‌’ನ ಯಂತ್ರಗಳನ್ನು ಬಳಸಿ, ಕಡಿಮೆ ವೆಚ್ಚದ ನ್ಯಾಪ್‌ಕಿನ್ ತಯಾರಿಸುತ್ತಿವೆ. ಈ ನ್ಯಾಪ್‌ಕಿನ್‌ಗಳು ವಿವಿಧ ಬ್ರಾಂಡ್ ಹೆಸರುಗಳಲ್ಲಿ ಗ್ರಾಮೀಣ ಮಹಿಳೆಯರನ್ನು ತಲುಪುತ್ತಿವೆ. ಭಾರತದ 23 ರಾಜ್ಯಗಳೇ ಅಲ್ಲದೇ ಬಾಂಗ್ಲಾದೇಶ, ನೇಪಾಳ, ಆಪ್ಘಾನಿಸ್ತಾನ, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ದೇಶಗಳಿಗೂ ಮುರುಗನಾಥನ್ ತಮ್ಮ ಯಂತ್ರಗಳನ್ನು ಪೂರೈಸುತ್ತಿದ್ದಾರೆ. ಮುಂದೆ ಜಗತ್ತಿನ 106 ದೇಶಗಳಿಗೂ ಈ ಯಂತ್ರಗಳನ್ನು ಪೂರೈಸುವುದು ಅವರ ಗುರಿ.

ಮುರುಗನಾಥನ್ ಓದಿರುವುದು 9ನೇ ತರಗತಿ, ಅಷ್ಟೇ. ಪತ್ನಿಯ ಮೇಲಿನ ಕಾಳಜಿಯೊಂದಿಗೆ ಶುರುವಾದ ಅವರ ಮಹಿಳಾಪರ ಆಲೋಚನೆ ಎಷ್ಟೆಲ್ಲಾ ಸಾಮಾಜಿಕ ನಿಂದನೆ, ನೋವು ಹತಾಶೆಗಳ ನಂತರ ಜಗತ್ತಿನ ಗಮನಸೆಳೆದಿದೆ. ‘ಮಗ ಹೀಗೆ ಬೆಳೆದಿರುವುದು ನಂಬಲೂ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಅವರ ತಾಯಿ. ಇಂದಿಗೂ ಮುಟ್ಟಿನ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುವ ಅವರ ಪತ್ನಿ ಶಾಂತಿ, ತಮ್ಮ ಮುನಿಸು ತೊರೆದು ಮುರುಗನಾಥನ್ ಅವರನ್ನು ಸೇರಿದ್ದಾರೆ.
ದೀಪಾ ಗಿರೀಶ್(ಪ್ರಜಾವಾಣಿ)

Write A Comment