ಕರ್ನಾಟಕ

2ನೇ ಬಾರಿ ಪಂಚಾಯತ್‌ರಾಜ್ ವಿಧೇಯಕ ವಾಪಸ್ ಕಳಿಸಿದ ಗೌರ್ನರ್

Pinterest LinkedIn Tumblr

vaju

ಬೆಂಗಳೂರು,ಏ.21-ಪಂಚಾಯ್ತಿ ಚುನಾವಣೆಯಲ್ಲಿ ಕಡ್ಡಾಯ ಮತದಾನಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ -2015ನ್ನು  ರಾಜ್ಯಪಾಲ ವಿ.ಆರ್.ವಾಲಾ ಅವರು 2ನೇ ಬಾರಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.  ಪಂಚಾಯ್ತಿ ಚುನಾವಣೆಯಲ್ಲಿ ಮತದಾನ ಕಡ್ಡಾಯಗೊಳಿಸುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂಬುದನ್ನು ಕಾನೂನಾತ್ಮಕವಾಗಿ ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದಾರೆ.  ಕಳೆದ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ವಿಧಾನಮಂಡಲದ

ಉಭಯ ಸದನಗಳ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಗೀಕಾರಕ್ಕಾಗಿ ಕಳುಹಿಸಲಾಗಿತ್ತು.  ಮತದಾನ ಕಡ್ಡಾಯಗೊಳಿಸುವುದರಿಂದ ಸಂವಿಧಾನದತ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲವೇ ಎಂಬುದಕ್ಕೆ ಸ್ಪಷ್ಟನೆ ಕೇಳಿ ರಾಜ್ಯಪಾಲರು ಸರ್ಕಾರಕ್ಕೆ ಈಗಾಗಲೇ ವಾಪಸ್ ಕಳುಹಿಸಿದ್ದರು.

ರಾಜ್ಯಪಾಲರು ಬಯಸಿದ್ದ ಸ್ಪಷ್ಟನೆಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ನೀಡಿ ಮತ್ತೆ ಒಪ್ಪಿಗೆಗಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ವಿಧೇಯಕದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದರು.  ಆದರೂ  ರಾಜ್ಯಪಾಲರು ವಿಧೇಯಕದ ಬಗ್ಗೆ ಇರುವ ಸಂದೇಹಗಳು ನಿವಾರಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ಸ್ಪಷ್ಟವಾದ ವಿವರಣೆ ನೀಡುವಂತೆ ವಿಧೇಯಕವನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.  ರಾಜ್ಯದ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಒಳಗೊಂಡ ವಿಧೇಯಕವನ್ನು ಕಳುಹಿಸುವಂತೆ ಸೂಚಿಸಿದ್ದಾರೆ. ಮತದಾನ ಕಡ್ಡಾಯಗೊಳಿಸುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿರುವುದನ್ನು  ಅಡ್ವೋಕೇಟ್ ಜನರಲ್ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕಿದೆ. ಆನಂತರ ರಾಜ್ಯಪಾಲರು ವಿಧೇಯಕದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಅಧ್ಯಕ್ಷತೆಯ ತಜ್ಞರ ಸಮಿತಿ ಶಿಫಾರಿಸಿನಂತೆ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರದ ಅವಧಿಯನ್ನು 5 ವರ್ಷಗಳಿಗೆ ಹೆಚ್ಚಿಸುವುದು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ ಸರದಿಯನ್ನು 10 ವರ್ಷಗಳವರೆಗೆ ಮುಂದುವರೆಸುವುದು, ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸುವುದು ಹಾಗೂ ಎಲ್ಲ ಪಂಚಾಯ್ತಿಗಳಲ್ಲಿ ಶೇಕಡ ಅರ್ಧದಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಕಲ್ಪಿಸುವ ಉದ್ದೇಶವನ್ನು ಪಂಚಾಯತ್ ರಾಜ್ ವಿಧೇಯಕ ಒಳಗೊಂಡಿತ್ತು.  ಇದಕ್ಕಾಗಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿ, ಈ ವಿಧೇಯಕವನ್ನು ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆದಿತ್ತು.

Write A Comment