ಕರ್ನಾಟಕ

ಕೃಷ್ಣ ಚಿತ್ರಮಂದಿರದ ಮಾಲೀಕ ಪತ್ನಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

Pinterest LinkedIn Tumblr

MaliniRoa-Murdr

ತುಮಕೂರು, ಏ.21-ತೀವ್ರ ಕುತೂಹಲ ಕೆರಳಿಸಿದ್ದ ಎಂ.ಜಿ.ರಸ್ತೆಯ ಕೃಷ್ಣ ಚಿತ್ರಮಂದಿರ ಮಾಲೀಕ ಶ್ರೀನಿವಾಸ್‌ರಾವ್ ಅವರ ಪತ್ನಿ ಮಾಲಿನಿರಾವ್ ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಲಿನಿರಾವ್ ಅವರ ಪತಿ ಶ್ರೀನಿವಾಸ್‌ರಾವ್(65), ಮಗ ಸಂತೋಷ್(32), ಸೊಸೆ ಲಕ್ಷ್ಮಿ (28) ಬಂಧಿತ ಆರೋಪಿಗಳು. 2011ರಲ್ಲಿ  ಮಾಲಿನಿರಾವ್ ಅವರು ಮಲಗುವ ಕೋಣೆಯಲ್ಲಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಂತರ ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿತ್ತು.

ಮನೆಯವರ ಮೇಲೆ ಅನುಮಾನ ಗಾಢವಾಗಿ ಅವರನ್ನು ವಿಚಾರಣೆಗೆ ಒಳಪಡಿಸುವಷ್ಟರಲ್ಲಿ ಅವರು ತಲೆ ಮರೆಸಿಕೊಂಡಿದ್ದರು.

ಈ ಪ್ರಕರಣ ತುಮಕೂರಿನಲ್ಲಿ ಭಾರಿ ಸಂಚಲನವನ್ನೇ ಮೂಡಿಸಿತ್ತು. ನಾಪತ್ತೆಯಾಗಿದ್ದವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ನೇತೃತ್ವವನ್ನು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ವಹಿಸಿಕೊಂಡಿದ್ದರು. ನಿನ್ನೆ ಮೈಸೂರಿನ ಸಿದ್ಧಾರ್ಥ ಬಡಾವಣೆಯ ಸರ್ವೀಸ್ ಅಪಾರ್ಟ್‌ಮೆಂಟ್‌ವೊಂದರಲ್ಲಿ ಇವರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ನಂತರ ವಿಶೇಷ ತಂಡ ಅಲ್ಲಿಗೆ ತೆರಳಿ ಆರೋಪಿಗಳನ್ನು ಬಂಧಿಸಿದೆ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿದ್ದ ಮಾಲಿನಿ ಬಗ್ಗೆ ನನಗೆ ಸಾಕಷ್ಟು ಅನುಮಾನಗಳು ಕಾಡಿದ್ದವು. ಸಂಸಾರದಲ್ಲೂ ಬಿರುಕು ಕಾಣಿಸಿಕೊಂಡಿತ್ತು. ಪ್ರತೀ ದಿನ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದೆವು ಎಂದು ಶ್ರೀನಿವಾಸ್‌ರಾವ್ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಡೆದ 6.2.2011ರಂದು ತಡರಾತ್ರಿ ಮಾಲಿನಿ ಮನೆಗೆ ಬಂದಾಗ ಎಲ್ಲಿ ಹೋಗಿದ್ದೆ ಎಂದು ವಿಚಾರಿಸಿದ್ದೆವು. ಆದರೆ, ಆಕೆ ಸರಿಯಾದ ಉತ್ತರ ನೀಡಲಿಲ್ಲ. ನಂತರ ನಾನೇ ಆಕೆ ಕತ್ತು ಹಿಸುಕಿ ಕೊಂದೆ. ನಂತರ ಆದ ಅಚಾತುರ್ಯದ ಬಗ್ಗೆ ಮನೆಯವರಿಗೂ ತಿಳಿಸಿದ್ದೆ ಎಂದು ಹೇಳಿದ್ದಾರೆ. ಪ್ರಸ್ತುತ ಘಟನೆ ನಡೆದಿದ್ದರೂ ಮುಚ್ಚಿಟ್ಟ ಆರೋಪದ ಮೇಲೆ ಮಗ ಸಂತೋಷ್ ಹಾಗೂ ಸೊಸೆ ಲಕ್ಷ್ಮಿಯನ್ನು ಬಂಧಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ತಿಳಿಸಿದ್ದಾರೆ.

Write A Comment