ಕರ್ನಾಟಕ

ಕ್ಯಾಂಪಸ್ ಕಲರವ: ರಸಪ್ರಶ್ನೆ ಸ್ಪರ್ಧೆಯಲ್ಲಿ ಅದೃಷ್ಟ ಕೈಹಿಡಿದಾಗ…

Pinterest LinkedIn Tumblr

psmec07campuswin

– ಪೀರ್‌ಪಾಷಾ

ಇದು ಕೃಷ್ಣರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗ ನಡೆದ ಪ್ರಸಂಗ. ಈಶಾನ್ಯ ಭಾರತದ ಪ್ರಜೆಗಳ ಮೇಲೆ ಹಲ್ಲೆಗಳಾಗುತ್ತಿರುವ, ಅವರ ಮೊಬೈಲ್‌ ಸಂಖ್ಯೆಗೆ ಬೆದರಿಕೆ ಸಂದೇಶಗಳು ಬರುತ್ತಿರುವ, ಅದರಿಂದಾಗಿ ಅವರು ತಮ್ಮ ಮೂಲ ನೆಲೆಗೆ ಮರಳಿ ಹೋಗುತ್ತಿರುವ ಸುದ್ದಿ ಮತ್ತು ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಇದನ್ನೆಲ್ಲಾ ಗಮನಿಸಿದ ಅಂದಿನ ಕೆ.ಆರ್‌.ಪುರದ ಶಾಸಕರು ಮತ್ತು ಕಾಲೇಜಿನ ಆಡಳಿತ ಮಂಡಳಿ, ಕಾಲೇಜಿನಲ್ಲಿ ಕೋಮು ಸೌಹಾರ್ದತಾ ಸಾಪ್ತಾಹ ಆಚರಿಸಲು ನಿರ್ಣಯಿಸಿತು.

ಆ ಸಾಪ್ತಾಹದ ಭಾಗವಾಗಿ ಜಾಗೃತಿ ಜಾಥಾ, ಜನಾಂಗ ಮತ್ತು ಧಾರ್ಮಿಕ ಸಹಿಷ್ಣತಾ ವಿಷಯಾಧಾರಿತ ನೃತ್ಯ, ಗಾಯನ, ಭಾಷಣ, ಪ್ರಬಂಧ ರಚನೆ, ರಸಪ್ರಶ್ನೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಾಮಾನ್ಯವಾಗಿ ವೇದಿಕೆ ಮೇಲೆ ನಿಂತು ಭಾಗವಹಿಸುವ ಸ್ಪರ್ಧೆಗಳಿಂದ ಸದಾ ದೂರವಿರುತ್ತಿದ್ದ ನನಗೆ ಈ ಸಾಪ್ತಾಹದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ಹಂಬಲ ಹುಟ್ಟಿತು. ಕಾರಣ ಆ ಸ್ಪರ್ಧೆ ಪ್ರಶ್ನೋತ್ತರದ ಮೌಖಿಕ ಮಾದರಿಯಾಗಿರದೆ ಲಿಖಿತ ರೂಪದಲ್ಲಿತ್ತು. ಅಂದರೆ 25 ಪ್ರಶ್ನೆಗಳು, 30 ನಿಮಿಷದ ಕಾಲಾವಕಾಶ. ಪ್ರತಿ ತಂಡದಲ್ಲಿ ಇಬ್ಬರು ಸ್ಪರ್ಧಿಗಳು. ಯಾವ ತಂಡದವರು ಹೆಚ್ಚು ಸರಿ ಉತ್ತರಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಬರೆದು ಕೊಡುವವರೋ, ಅವರೇ ವಿಜೇತರು ಎಂಬ ನಿಯಮಗಳಿದ್ದವು.

ನಾನೇನೋ ಸ್ಪರ್ಧೆಗೆ ತಯಾರಾಗಿ ನಿಂತಿದ್ದೆ. ಆದರೆ ನನಗೆ ಸಾಥ್‌ ನೀಡಲು ಜೊತೆಗಾರನೊಬ್ಬನ ಜರೂರತ್ತು ಇತ್ತು. ಆ ಸಮಯದಲ್ಲಾಗಲೇ ನನ್ನ ಆಪ್ತ ಮಿತ್ರ–ಮಿತ್ರೆಯರು ಎನಿಸಿಕೊಂಡವರು ರಂಗೋಲಿ, ಅಂತ್ಯಾಕ್ಷರಿ, ಗಾಯನ, ನೃತ್ಯ ಸ್ಪರ್ಧೆಗಳ ಹುರಿಯಾಳುಗಳಾಗಿ ಹೊರಟು ಹೋಗಿದ್ದರು. ಆಗ ಬಯಸದೆ ಬಂದ ಭಾಗ್ಯ ಎಂಬಂತೆ ದೊರೆತವ, ಅಷ್ಟೇನೂ ಪರಿಚಿತನಲ್ಲದ ಸಹಪಾಠಿ ಮುನಿರಾಜ.

ಅವನೊಂದಿಗೆ ಸ್ಪರ್ಧೆ ಎದುರಿಸಲು ಕುಳಿತಾಗ ಮತ್ತೊಂದು ಗಂಡಾಂತರ ಎದುರಾಯಿತು. ಅದೇನಪ್ಪಾ ಅಂದರೆ, ಪ್ರಶ್ನೆಪತ್ರಿಕೆ ಇಂಗ್ಲೀಷ್‌ನಲ್ಲಿತ್ತು. ಕನ್ನಡದ ಕಡುಬು ತಿನ್ನಲು ಹೋದವರಿಗೆ, ಇಂಗ್ಲಿಷೆಂಬ ಕಲ್ಲು ಸಿಕ್ಕಂತಾಯಿತು. ಆದರೆ ಪ್ರಶ್ನೆಗಳಿಗೆ ಉತ್ತರಿಸಲು ನಮಗಿದ್ದ ಸುವರ್ಣಾವಕಾಶ ಪ್ರತಿ ಪ್ರಶ್ನೆಗೂ ನಾಲ್ಕು ಆಯ್ಕೆಗಳಿದ್ದುದು. ಈ ಕಾರಣದಿಂದಲೋ ಏನೋ ನಮ್ಮ ಎದುರಾಳಿ ಸತೀಶ್‌ ಮತ್ತು ಮಂಜುನಾಥ್‌, ತೌಸಿಫ್‌ ಮತ್ತು ಯಾಸಿನ್‌, ಲಕ್ಷ್ಮಿ ಮತ್ತು ಮಂಜುಳಾರ ತಂಡಗಳು ಹತ್ತು–ಹದಿನೈದು ನಿಮಿಷಗಳಲ್ಲೇ ಉತ್ತರ ಬರೆದುಕೊಟ್ಟು ಬೀಗುತ್ತಾ ಹೊರಟು ಹೋದವು.

ನಾನು–ಮುನಿ ಕಾದು, ಅಳೆದು, ತೂಗಿ, ಅಂದಾಜಿಸಿ, ಊಹಿಸಿ, ಕೈ ಬೆರಳುಗಳ ಸಹಾಯ ಪಡೆದು, ನಾಲ್ಕು ಮಾವಿನ ಕಾಯಿಗಳಿಗೆ ಕಣ್ಣು ಮುಚ್ಚಿ ಕಲ್ಲು ಹೊಡೆಯುವಂತೆ, ನಾಲ್ಕು ಉತ್ತರಗಳಲ್ಲಿ ಒಂದೊಂದನ್ನೇ ಆರಿಸಿ ಬರೆಯುತ್ತ 25 ನಿಮಿಷಗಳಲ್ಲಿ 25 ಪ್ರಶ್ನೆಗಳಿಗೆ ಉತ್ತರಿಸಿದೆವು. ಯಾವುದೇ ಪ್ರಶ್ನೆಗೂ ಖಚಿತವಾದ ಉತ್ತರವೇ ಗೊತ್ತಿಲ್ಲದ ನಮಗೆ ಸ್ಪರ್ಧೆಯ ಫಲಿತಾಂಶದಿಂದ ನಮಗೇನೂ ಲಾಭವಿಲ್ಲ ಎನಿಸಿತ್ತು.

ಮರುದಿನ ತರಗತಿ ಮುಗಿಸಿಕೊಂಡು ಮನೆ ಸೇರುವ ಧಾವಂತದಲ್ಲಿದ್ದೆವು. ಆಗ ಓಡೋಡಿ ಬಂದ ಮುನಿಯನ ಆಪ್ತಮಿತ್ರನಾದ ಶ್ರೀನಿವಾಸ, ರಸಪ್ರಶ್ನೆ ಸ್ಪರ್ಧೆಯಲ್ಲಿ ನಿಮ್ಮ ತಂಡ ಪ್ರಥಮ ಸ್ಥಾನ ಗಳಿಸಿದೆ ಎಂಬ ಬ್ರೇಕಿಂಗ್‌ ನ್ಯೂಸ್‌ ನೀಡಿದ. ಅದನ್ನು ನಂಬಲಾಗದ ಮನಸ್ಥಿತಿಯಲ್ಲಿದ್ದ ನಾವು ಸೀದಾ ನೋಟಿಸ್‌ ಬೋರ್ಡ್‌ನತ್ತ ಧಾವಿಸಿ ಬಂದು ನೋಡಲಾಗಿ, ಶ್ರೀನಿ ಹೇಳಿದ ಮಾತು ಸತ್ಯವಾಗಿತ್ತು. ಫಲಿತಾಂಶ ನೋಡುತ್ತಲೇ ನಾವಿಬ್ಬರು ಪರಸ್ಪರ ಮುಖ ನೋಡಿಕೊಂಡು ಮುಸಿ ಮುಸಿ ನಗಲಾರಂಭಿಸಿದೆವು.

ಯಾವೊಂದು ಪ್ರಶ್ನೆಗೂ ಖಚಿತ ಉತ್ತರ ಗೊತ್ತಿಲ್ಲದೆಯೂ, ಅಂದಾಜಿನ ಮೇಲೆ ಆರಿಸಿ ಬರೆದ ಉತ್ತರಗಳೇ ನಮ್ಮನ್ನು ಜಯಶಾಲಿಗಳನ್ನಾಗಿಸಿದ್ದವು. 25ಕ್ಕೆ ಕೇವಲ 12 ಸರಿ ಉತ್ತರ ನೀಡಿದ ನಮ್ಮ ತಂಡವೇ ಪ್ರಥಮ ಸ್ಥಾನ ಗಿಟ್ಟಿಸಿತು.ಆ ವಿಜಯದ ನೆನಪಿಗಾಗಿ ಆಯೋಜಕರು ಬಂಗಾರ ಬಣ್ಣದ, ಸೂರ್ಯಾಕೃತಿಯ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿದರು.

ಅದಲ್ಲದೆ ಕೋಮು ಸೌಹಾರ್ದತಾ ಸಪ್ತಾಹದ ಸ್ಪರ್ಧೆಯಲ್ಲಿ ಹಿಂದೂ ಮುನಿರಾಜನೂ, ಮುಸಲ್ಮಾನನಾದ ಪೀರನೂ ಒಂದಾಗಿ, ಕೇವಲ ಅರ್ಧ ಗಂಟೆ ಅವಧಿಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ಪಾರಿತೋಷಕ, ಪ್ರಶಸ್ತಿ ಪತ್ರದಂತ ಸಿಹಿ ಅನುಭವ ದೊರೆಯಿತು. ಇದು ಕೂಡ ಮರೆಯಲಾಗದ ಅನುಭವವೇ.

Write A Comment