ಕರ್ನಾಟಕ

12 ದಿನಗಳ ವಿಧಾನಮಂಡಲದ ಅಧಿವೇಶನಕ್ಕೆ ತೆರೆ

Pinterest LinkedIn Tumblr

Session-01

ಬೆಂಗಳೂರು, ಮಾ.31-ರಾಜ್ಯ ವಿಧಾನಮಂಡಲದ ಉಭಯ ಸದನಗಳ ಬಜೆಟ್ ಅಧಿವೇಶನಕ್ಕೆ ಇಂದು ತೆರೆ ಬೀಳಲಿದೆ. ಮಾ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನೊಂದಿಗೆ ಆರಂಭಗೊಂಡ ಅಧಿವೇಶನ ಇಂದು ಮುಕ್ತಾಯಗೊಳ್ಳಲಿದೆ.  ಒಟ್ಟು 12 ದಿನಗಳ ಕಾಲ ಅಧಿವೇಶನ ನಡೆದಿದೆ.  ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ವಿಚಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಪ್ರತಿಧ್ವನಿಸಿ ಮೂರು ದಿನಗಳ ಕಾರ್ಯಕಲಾಪಗಳನ್ನು ನುಂಗಿ ಹಾಕಿತು.  ಈ ಪ್ರಕರಣದಿಂದಾಗಿ ಮಾ.20 ರಂದು ಅಧಿವೇಶನವೇ ನಡೆಯಲಿಲ್ಲ.

ಉಳಿದಂತೆ ಉಭಯ ಸದನಗಳ ಕಾರ್ಯಕಲಾಪಗಳು ಸುಗಮವಾಗಿ ನಡೆದವು.  2015-16ನೇ ಸಾಲಿನ ಬಜೆಟ್ ಮೇಲಿನ ಸುದೀರ್ಘ ಚರ್ಚೆ, ಮುಖ್ಯಮಂತ್ರಿಗಳ ಉತ್ತರ, ಪ್ರಶ್ನೋತ್ತರ ಕಲಾಪ, ಗಮನ ಸೆಳೆಯುವ ಸೂಚನೆ, ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಬರಪೀಡಿತ ಜಿಲ್ಲೆಗಳ ಕುಡಿಯುವ ನೀರಿನ ವಿಚಾರ ಪ್ರಮುಖವಾಗಿ ಚರ್ಚೆಗೆ ಬಂದವು. ಎತ್ತಿನಹೊಳೆ, ಮೇಕೆದಾಟು ಕುಡಿಯುವ ನೀರಿನ ಯೋಜನೆಯು ಅಧಿವೇಶನದಲ್ಲಿ ಪ್ರತಿಧ್ವನಿಸಿತು.

ಜುಲೈ ಅಂತ್ಯದವರೆಗೆ ನಾಲ್ಕು ತಿಂಗಳ ಕಾಲ ಲೇಖಾನುದಾನಕ್ಕೂ ಒಪ್ಪಿಗೆ ದೊರೆಯಿತು. ಕರ್ನಾಟಕ ಮೌಲ್ಯವರ್ಧಿತ ತೆರಿಗೆ ತಿದ್ದುಪಡಿ ವಿಧೇಯಕ, ಕರ್ನಾಟಕ ತರಿಗೆ ಕಾನೂನುಗಳ ತಿದ್ದುಪಡಿ  ವಿಧೇಯಕ, ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ, ನೋಂದಣಿ ತಿದ್ದುಪಡಿ ವಿಧೇಯಕ, ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಸಚಿವರ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ(ಸೌಲಭ್ಯ ಮತ್ತು ನಿಯಂತ್ರಣ)ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕಗಳು ವಿಧಾನಸಭೆಯಲ್ಲಿ ಅನುಮೋದನೆಗೊಂಡಿವೆ.

ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಿಷಯಾಧಾರಿತ ಹಾಗೂ ರಾಜಕೀಯ ಪ್ರೇರಿತ ವಿಷಯಗಳ ಮೇಲೆ ವಾಕ್ಸಮರ ನಡೆಯಿತು. ಗಂಗಾ-ಕಲ್ಯಾಣ ಯೋಜನೆ, ಕುಡಿಯುವ ನೀರು, ವಿದ್ಯುತ್ ಮೊದಲಾದ ಸಮಸ್ಯೆಗಳು ಸದನದಲ್ಲಿ ಪ್ರಸ್ತಾಪಗೊಂಡು ಸರ್ಕಾರದಿಂದ ಸದಸ್ಯರು ಉತ್ತರವನ್ನು ಪಡೆದಿದ್ದಾರೆ.  ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣ ಹೊರತು ಪಡಿಸಿದರೆ ಬಹುತೇಕ ವಿಚಾರಗಳು ಆರೋಗ್ಯಕರ ರೀತಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಚರ್ಚಿತಗೊಂಡವು.

Write A Comment