ಕರ್ನಾಟಕ

ವಿಧಾನಸಭೆಯಲ್ಲಿ ಹಾಲಿ-ಮಾಜಿ ಸಿಎಂಗಳ ಜುಗಲ್ ಬಂಧಿ

Pinterest LinkedIn Tumblr

Siddu-and-Kummi

ಬೆಂಗಳೂರು, ಮಾ.30- ಜನತಾದಳದ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಜುಗಲ್ ಬಂಧಿ ನಡೆದ ಪ್ರಸಂಗ ಜರುಗಿತು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾಡಿದ ಪ್ರಸ್ತಾಪ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ಜುಗಲ್ ಬಂಧಿಗೆ ಕಾರಣವಾಯಿತು.  ಕುಮಾರಸ್ವಾಮಿ ಅವರು ಹೇಳಿದಂತೆ ಪದ್ಮನಾಭ ನಗರದ ಸಲಹೆ ಪಡೆದಿದ್ದರೆ,

ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ತಾವು ಜೆಡಿಎಸ್‌ನಿಂದ ಡಿಸ್‌ಮಿಸ್ ಆಗಿ ಪಕ್ಷ ಬಿಡುವ ಪರಿಸ್ಥಿತಿ ಬರುತ್ತಿರಲಿಲ್ಲ. ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಮಾಹಿತಿ ಇದೆ ಎಂದು ಸ್ವಾರಸ್ಯಕರ ಚರ್ಚೆಗೆ ಸಿದ್ದರಾಮಯ್ಯ ನಾಂದೀ ಹಾಡಿದರು.

ಆಗ ಕುಮಾರಸ್ವಾಮಿ ಅವರು ನಿಮಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿಲ್ಲ ಎಂದರು. ಮಾತು ಮುಂದುವರೆಸಿದ ಸಿದ್ದರಾಮಯ್ಯ, ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ ಸಕ್ರೀಯವಾಗಿರದಿದ್ದರೂ ನಿಮ್ಮ ಪಕ್ಷದಲ್ಲೇ ಇದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರೆಲ್ಲ ಸೇರಿ  ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಬಳಿ ಹೋಗೋಣ ಸತ್ಯಾಂಶ ಗೊತ್ತಾಗಲಿದೆ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಅವರು, ಶರದ್ ಪವಾರ್ ಬೇಡ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರ ಬಳಿ ಹೋದರೆ ಸತ್ಯಾಂಶ ಗೊತ್ತಾಗಲಿದೆ. 2004ರಲ್ಲಿ ಏಳು ದಿನ ಕಾಯಿರಿ ಎಂದರೆ ಕಾಯಲಿಲ್ಲ ಎಂದು ತಿರುಗೇಟು ನೀಡಿದರು. ಆಗ ಜೆಡಿಎಸ್ ಉಪ ನಾಯಕ ವೈಎಸ್‌ವಿ ದತ್ತಾ ಅವರು, ಮುಖ್ಯಮಂತ್ರಿ ಹುದ್ದೆ ತಪ್ಪಿದ ಗುಟ್ಟಿನ ಗಂಟು ಬಿಚ್ಚಲಿ ಎಂದರು.
ಮಾತು ಮುಂದುವರೆಸಿದ ಮುಖ್ಯಮಂತ್ರಿ 2004ರಲ್ಲಿ ದೇವೇಗೌಡ ಅವರು, ಎಸ್.ಎಂ.ಕೃಷ್ಣ ಸರ್ಕಾರದ ವಿರುದ್ಧ ದೋಷಾರೋಪ ಮಾಡಿದ್ದೇವೆ ನಮಗೆ ಉಪ ಮುಖ್ಯಮಂತ್ರಿ ಸಾಕು ಎಂದು ಹೇಳಿದ್ದರು ಎಂದಾಗ ಕುಮಾರಸ್ವಾಮಿ ಆಕ್ಷೇಪ ಎತ್ತಿದರು.
ಸೋನಿಯಾಗಾಂಧಿ ಹಾಗೂ ಶಾಸಕರ ತೀರ್ಮಾನದಂತೆ ಈಗ ಮುಖ್ಯಮಂತ್ರಿಯಾಗಿದ್ದೇನೆ ಎಂದು ಸಮರ್ಥಿಸಿಕೊಂಡ ಸಿದ್ದರಾಮಯ್ಯ, 1996ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ತಾವು ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ಹಾಗೂ ವಿ.ಸೋಮಣ್ಣ ಪರಿಶ್ರಮಪಟ್ಟರು.
ಆಗ ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕೆ ರೇವಣ್ಣ ಕಣ್ಣೀರು ಹಾಕಿದ್ದರು. ಅದರಿಂದಲೇ ರೇವಣ್ಣ ಅವರ ಬಗ್ಗೆ ಹೆಚ್ಚು ಪ್ರೀತಿ ಎಂದರು. ಆಗ ದತ್ತ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಅಪೇಕ್ಷೆಪಟ್ಟಿದ್ದೆವು ಎಂದರು. ಮತ್ತೆ ಕುಮಾರಸ್ವಾಮಿ ಮಾತನಾಡಿ, ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾದ ಮೇಲೆ ನಡೆದ ಮುಖ್ಯಮಂತ್ರಿ ಪ್ರಯತ್ನವನ್ನು ನಾನು ತಪ್ಪಿಸಿದ್ದು ನಿಜ ಎಂದರು.
ಆಗ ಬಿ.ಆರ್.ಪಾಟೀಲ್ ಮಾತನಾಡಿ, ನೀವು ಡೆಪ್‌ಟೇಷನ್ ಮೇಲೆ ಕಾಂಗ್ರೆಸ್‌ಗೆ ಹೋಗಿದ್ದರಾ ಎಂದು ಛೇಡಿಸಿದರು. ಇದಕ್ಕೆ ಸ್ಪಂಧಿಸಿದ ಮುಖ್ಯಮಂತ್ರಿ ತಾವು ಸಮಾಜವಾದಿ ತತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ಮುಖ್ಯಮಂತ್ರಿ ಹುದ್ದೆ ತಪ್ಪಿದ ಸತ್ಯಾಂಶ ಗೊತ್ತಾಗಲಿ ಎಂದು ಹೇಳಿದ್ದಾಗಿ ಹೇಳಿದರು. ಕುಮಾರಸ್ವಾಮಿ ಅವರು ಬೂಸಾ ಬಜೆಟ್ ಹೇಳಿಕೆ ವಾಪಸ್ಸು ಪಡೆಯಬೇಕು ಎನ್ನುವ ಮೂಲಕ ಈ ಚರ್ಚೆಗೆ ತೆರೆ ಎಳೆದರು.

Write A Comment