– ಡಾ. ಮೊಗಳ್ಳಿ ಗಣೇಶ್
ಮತ್ತೆ ಬಂತು ಶ್ರಾವಣ
(ದ.ರಾ. ಬೇಂದ್ರೆ ಸ್ಮೃತಿ ಅಂತರ ಕಾಲೇಜು ಕವನ ಸ್ಪರ್ಧೆಯ ಆಯ್ದ ಕವಿತೆಗಳ ಸಂಕಲನ)
ಸಂ: ವಿಕ್ರಮ ವಿಸಾಜಿ, ಪ್ರ: ಕ್ರೈಸ್ಟ್ ಯೂನಿವರ್ಸಿಟಿ, ಕನ್ನಡ ಸಂಘ, ಹೊಸೂರು ರಸ್ತೆ, ಬೆಂಗಳೂರು– 560 029
ಪು: 304 ರೂ. 200
ಬೆಂಗಳೂರಿನ ‘ಕ್ರೈಸ್ಟ್ ಕಾಲೇಜ್’ ತನ್ನ ಕನ್ನಡ ವಿಭಾಗದ ಕನ್ನಡ ಸಂಘದ ಮೂಲಕ ಸತತ ಮೂವತ್ತೆರಡು ವರ್ಷಗಳಿಂದ ದ.ರಾ. ಬೇಂದ್ರೆ ಅವರ ಹೆಸರಲ್ಲಿ ಯುವ ಕಾವ್ಯ ಸ್ಪರ್ಧೆಯನ್ನು ಏರ್ಪಡಿಸುತ್ತ ಹೊಸ ಪೀಳಿಗೆಯ ಹಾದಿಗೆ ಸೂಕ್ತ ವೇದಿಕೆಯನ್ನು ರೂಪಿಸುತ್ತ ಬಂದಿದೆ. ಇಂತಹ ಒಂದು ಚೇತೋಹಾರಿ ಕಾವೋದ್ದೇಶದ ಹಿಂದೆ ಬಲವಾಗಿ ನಿಂತಿದ್ದವರು ಚಿ. ಶ್ರೀನಿವಾಸರಾಜು ಅವರು.
ಕನ್ನಡದಲ್ಲಿ ಯಾವುದೇ ಕಾವ್ಯ ಪಂಥಗಳು ಈ ಬಗೆಯ ಕಾವ್ಯ ಸ್ಪರ್ಧೆಗಳನ್ನು ಯುವ ಜನಾಂಗಕ್ಕೆ ರೂಪಿಸಲು ಮುಂದಾಗಲಿಲ್ಲ. ಶ್ರೀನಿವಾಸರಾಜು ಅವರ ಕಾವ್ಯ ಪ್ರೀತಿಯು ಕಾವ್ಯ ಸ್ಪರ್ಧೆಯ ಹಿಂದೆ ಬಲವಾಗಿತ್ತು. 1982ರ ದಶಕ ದಲಿತ ಬಂಡಾಯದ ಕಾವ್ಯದ ಚೋರುದನಿಯ ಕಾಲ. ಆಗತಾನೆ ನವ್ಯ ಕಾವ್ಯ ಇಳಿಮುಖವಾಗಿತ್ತು. ಈ ಎರಡೂ ಕಾವ್ಯಧಾರೆಗಳು ನಿರ್ಣಾಯಕ ಪ್ರಭಾವವನ್ನು ಯುವ ಕಾವ್ಯದ ಮೇಲೆ ಒಡ್ಡಿದ್ದವು. ಒಂದೆಡೆ ಸಾಮಾಜಿಕ ನ್ಯಾಯದ ಕಾವ್ಯ; ಮತ್ತೊಂದೆಡೆ ವ್ಯಕ್ತಿ ವಿಶಿಷ್ಟ ಪ್ರತಿಭೆಯ ಮೂಲಕವೇ ಏಕಾಂತ ಮತ್ತು ಲೋಕಾಂತಗಳನ್ನು ಬೆಸೆದುಕೊಂಡು ವ್ಯಕ್ತಿಯ ಒಳಗಿರುವ ಖಾಸಗೀ ಸಮಾಜದ ಸುಖದುಃಖವನ್ನು ಹೇಗೆ ಕಾವ್ಯವಾಗಿಸಬೇಕು ಎಂಬ ಇಕ್ಕಟ್ಟನ್ನು ದಾಟಬೇಕಾದ ಸ್ಥಿತಿಯಲ್ಲಿ ಆಗಿನ ತಲೆಮಾರು ಸಂಕೀರ್ಣ ಸ್ಥಿತಿಯಲ್ಲಿತ್ತು.
ಖಾಸಗೀ ಸಮಾಜ ಎಂದರೆ ಅದೇನು ಹೊರಗಿನದಾಗಿರಲಿಲ್ಲ. ಖಾಸಗಿಯಾಗಿಯೇ ಸಾರ್ವತ್ರಿಕವಾದ ಭಾವ ತುಮುಲಗಳನ್ನು ಪ್ರಾಯದ ಒಗರಿನಲ್ಲಿ ಹೇಗೆ ವ್ಯಕ್ತಪಡಿಸಬಹುದು ಎಂಬ ತಡಕಾಟದಲ್ಲಿದ್ದವರಿಗೆ ಕ್ರೈಸ್ಟ್ ಕಾಲೇಜಿನ ಸ್ಪರ್ಧೆಯು ಒಂದು ಅತ್ಯುತ್ತಮ ಕಾವ್ಯರಂಗಭೂಮಿಯೇ ಅಥವಾ ಕಾವ್ಯದ ಒಕ್ಕಲುತನವೇ ಆಗಿತ್ತು. ಈ ಸ್ಪರ್ಧೆಯ ಕಾವ್ಯದ ರಂಗದಲ್ಲಿ ಅನೇಕರು ದಿವ್ಯವಾಗಿ ಬಂದು ಹೋಗಿದ್ದಾರೆ.
ಸುಮ್ಮನೇ ಬಂದು ದೊಡ್ಡವರಾಗಿ ಬೆಳೆದವರಿದ್ದಾರೆ. ಕಾವ್ಯದ ಆಕಾಶಕ್ಕೆ ಏಣಿಹಾಕಿ ಅರ್ಧದಲ್ಲೇ ಅತಂತ್ರರಾದವರೂ ಇದ್ದಾರೆ. ಮತ್ತೆ ಕೆಲವರು ಹೆಸರು ಉಸಿರು ಏನೂ ತಿಳಿಯದಂತೆ ಕಾವ್ಯದ ಕಾಲದ ಅಲೆಯಲ್ಲಿ ಎಲ್ಲೊ ಕೊಚ್ಚಿ ಹೋಗಿದ್ದಾರೆ. ಕ್ರೈಸ್ಟ್ ಕಾಲೇಜಿನ ಕಾವ್ಯ ಸ್ಪರ್ಧೆಯಲ್ಲಿ ಬಂದು ಹೋದ ಸರಿಸುಮಾರು ಮೂರು ತಲೆಮಾರು ಈಗಲೂ ಅಲ್ಲಿ ಇಲ್ಲಿ ಬದುಕುಳಿದಿದೆ. ಈ ಭಾವನೆಗಳು ಬರಲಿಕ್ಕೆ ಕಾರಣವಾದ ಕಾವ್ಯ ಸಂಕಲನ ‘ಮತ್ತೆ ಬಂತು ಶ್ರಾವಣ’.
‘ಮತ್ತೆ ಬಂತು ಶ್ರಾವಣ’ ಕನ್ನಡ ಕಾವ್ಯದ ಕಳೆದ ಮೂರು ದಶಕಗಳ ಯುವ ಕಾವ್ಯದ ಪಾಡನ್ನು ಮಾರ್ಮಿಕವಾಗಿ ಧ್ವನಿಸುವ ಸಂಕಲನವಾಗಿದೆ. ಈವರೆಗಿನ ಬಹುಮಾನಿತ ಕವಿತೆಗಳಲ್ಲಿ ಅತಿಮುಖ್ಯ ಎನಿಸಿದವನ್ನು ಸಂಕಲಿಸಿ ಲೇಖಕ ಡಾ. ವಿಕ್ರಂ ವಿಸಾಜಿ ಅವರ ಸಂಪಾದಕತ್ವದಲ್ಲಿ ಈ ಕೃತಿಯನ್ನು ಕ್ರೈಸ್ಟ್ ಕಾಲೇಜ್ ಪ್ರಕಟಿಸಿದೆ. ಒಂದು ಕಾಲಕ್ಕೆ ಈ ಕಾವ್ಯ ಸ್ಪರ್ಧೆಯಲ್ಲಿ ನಾನೂ ಇದ್ದೆ. ನನ್ನ ವಾರಿಗೆಯವರಾದ ಬಂಜಗೆರೆ ಜಯಪ್ರಕಾಶ್, ನಟರಾಜ್ ಹುಳಿಯಾರ್, ಅಬ್ದುಲ್ ರಶೀದ್, ಜಿ.ಎನ್. ಮೋಹನ್, ಎಲ್ಸಿ ನಾಗರಾಜ್, ಮಮತಾ ಜಿ. ಸಾಗರ, ಆರತಿ ಎಚ್.ಎನ್., ಕೆ.ವೈ.ನಾರಾಯಣಸ್ವಾಮಿ, ರಾಮಲಿಂಗಪ್ಪ ಬೇಗೂರು, ಎಂ.ಡಿ.ವಕ್ಕುಂದ, ಸುಧಾಶರ್ಮ ಚವತ್ತಿ ಮುಂತಾದವರು ಈ ಕಾವ್ಯ ಸ್ಪರ್ಧೆಯ ಮೂಲಕ ಕವಿಗಳು ಎಂದು ಪರಿಚಿತರಾದವರು.
ಈ ಕಾವ್ಯಸ್ಪರ್ಧೆಯಲ್ಲಿ ಬಹುಮಾನ ಪಡೆದ ಕವಿತೆಗಳ ಸಂಖ್ಯೆ ಹೆಚ್ಚುಕಡಿಮೆ ಏಳನೂರು. ಸ್ಪರ್ಧೆಗೆ ಬಂದ ಕವಿತೆಗಳೇ ಹತ್ತು ಸಾವಿರಕ್ಕೂ ಮಿಗಿಲು. ಇದೇನು ಸಾಧಾರಣ ಸಂಗತಿ ಅಲ್ಲ. ಇಷ್ಟು ಪ್ರಮಾಣದ ಕಾವ್ಯದ ಸ್ಪರ್ಧಾ ಮನೋಭಾವ ಮುಂದೆ ಏನಾಯಿತು? ಇಲ್ಲಿ ಕಾಣಿಸಿಕೊಂಡ ಕವಿಗಳು ತುಂಡಾದ ಸುಂದರ ಗಾನ ಒಂದರ ವಿದಾಯದಂತೆ ಎಲ್ಲಿ ಕರಗಿ ಹೋದರು? ಅದಕ್ಕೆ ಕನ್ನಡ ಕಾವ್ಯ ಪರಂಪರೆಯನ್ನು ನಿರ್ವಹಿಸುವವರ ನೈತಿಕ ಹೊಣೆಗಾರಿಕೆಯ ಬಗ್ಗೆ ಈಗ ಯಾವ ತೀರ್ಮಾನವನ್ನು ಕೈಗೊಳ್ಳುವುದು? ಕಾವ್ಯ ಅರಳಲಿಕ್ಕೆ ಸಾಧ್ಯವಿರುವ ಬದುಕಿನ ಭದ್ರತೆ, ಅಭದ್ರತೆ, ವೈಯಕ್ತಿಕ ಜಂಜಡ ಹಾಗೂ ಸಾಮಾಜಿಕ ವಾಸ್ತವಗಳು ಇಲ್ಲಿ ಬಹುಮಾನ ಪಡೆದ ಕವಿಗಳ ಕಾವ್ಯ ವ್ಯವಸಾಯದಲ್ಲಿ ಯಾವ ಯಾವ ಪರಿಣಾಮ ಬೀರಿರಬಹುದು? ಕಾವ್ಯ ತಂತಾನೆ ಪ್ರತಿಭಾವಂತ ಕವಿ ಒಬ್ಬನ ಪ್ರಯತ್ನ ಮಾತ್ರದಿಂದಲೆ ಬೆಳಗಿಬಿಡುವುದೇ? ಇಂತಹ ಅನೇಕ ಪ್ರಶ್ನೆಗಳನ್ನು ಈ ಸಂಕಲನ ಈ ಕಾಲದ ಕಾವ್ಯದ ಪಲ್ಲಟದ ನಡುವೆ ಕಾಡುತ್ತವೆ.
ಈ ಸಂಕಲನದಲ್ಲಿರುವ ಬಹುಪಾಲು ಕವಿತೆಗಳು ಯಾರ ಹಂಗೂ ಇಲ್ಲದೆ ಹೊಳೆಯುತ್ತಿವೆ. ಅತ್ತ ನವ್ಯವನ್ನು ಗೌರವದಿಂದಲೆ ಸರಿಸಿ ಇತ್ತ ದಲಿತ ಬಂಡಾಯದ ಸಂಕಟವನ್ನು ತಣ್ಣಗೆ ಮಿಡಿಸಿ ನುಡಿಸುವ ಇಲ್ಲಿನ ಬಹಳಷ್ಟು ಕವಿಗಳು ಬೆರಗು ಹುಟ್ಟಿಸುತ್ತಾರೆ. ಈ ಸಂಕಲನದಲ್ಲಿ ಮೂರು ಸಾಲಿನ ಸರದಿಯ ಕವಿಗಳಿದ್ದಾರೆ. ಮೇಲೆ ಹೆಸರಿಸಿದ ಕವಿಗಳು ಮೊದಲ ಸರದಿಯವರು.
ಎರಡನೆಯ ಸರದಿಯ ಕವಿಗಳು ಪಿ.ಚಂದ್ರಿಕಾ, ಕವಿತಾರೈ, ಎಂ.ಆರ್.ಭಗವತಿ, ಆನಂದ ಋಗ್ವೇದಿ, ಎಲ್.ಹನುಮಂತಯ್ಯ, ಚ.ಹ.ರಘುನಾಥ, ಸಂದೀಪ ನಾಯಕ, ಚಂದ್ರು ತುರುವಿಹಾಳ, ಟಿ. ಯಲ್ಲಪ್ಪ ಮುಂತಾದವರು. ಈ ಎರಡನೆ ಸಾಲಿನ ಕವಿಗಳ ಸರದಿಯಲ್ಲೇ ಈ ಸಂಕಲನದ ಸಂಪಾದಕರಾದ ವಿಕ್ರಂ ವಿಸಾಜಿ ಕೂಡ ಬರುವುದು. ಇವರ ಪೈಕಿ ಎನ್.ಕೆ.ಹನುಮಂತಯ್ಯ ಒಂದು ಮಿಂಚಿನಂತೆ ಬಂದು ಹೋದವರು.
ಈ ಸರದಿಯ ಕವಿಗಳು ಕೂಡ ಯಾವುದೇ ನಿರ್ದಿಷ್ಟ ಕಾವ್ಯಪಂಥಕ್ಕೆ ಒಳಪಡುವುದಿಲ್ಲ. ಮೊದಲ ಸರದಿಯವರೂ ಹಾಗೆ ಒಳಪಟ್ಟಿರಲಿಲ್ಲ. ಸಹಜ ಪ್ರಾಯದ ಅಸಲಿ ಸುಖದುಃಖದ ಉತ್ಕಟತೆಯಲ್ಲಿ ಮಿಡಿದಿರುವ ಈ ಕವಿಗಳು ಮಕ್ಕಳಂತೆ ಸಹಜವಾಗಿ ಅತ್ತುಬಿಟ್ಟಿದ್ದಾರೆ. ಅಷ್ಟೇ ಸಹಜವಾಗಿ ನಕ್ಕುಬಿಟ್ಟಿದ್ದಾರೆ.
ಕಾವ್ಯದ ಸಹಜ ತುಳುಕು ಭಾವನೆಗಳಲ್ಲಿ ಲೋಕದವ್ಯಾಪಾರವನ್ನು ಸಾಕ್ಷೀಕರಿಸಿದ್ದಾರೆ. ಕೆಲವರ ಕವಿತೆಗಳಂತೂ ಹೆಮ್ಮೆ ಎನಿಸುತ್ತವೆ; ಹಾಗೆಯೇ ಆ ಕವಿತೆಗಳನ್ನು ಅಷ್ಟು ಗಾಢವಾಗಿ ಕಟ್ಟಿದ ಕವಿಗಳು ಎಲ್ಲಿ ಹೋದರು ಎಂದು ವಿಷಾದವಾಗುತ್ತದೆ. ಅಂಥವರ ಪೈಕಿ– ಪಿ.ಎಂ. ಮುತ್ತಣ್ಣ, ಎಲ್ಸಿ ನಾಗರಾಜ್, ಜಿ.ಎನ್. ಮೋಹನ್, ಗಂಗಾಧರಯ್ಯ ಎಸ್., ಆರತಿ ಎಚ್.ಎನ್., ಸುಧಾಶರ್ಮ ಚವತ್ತಿ, ಗಾಯತ್ರಿ ಬಿ.ಎಸ್, ಕಾಮನ ವಿ, ಕಮಲಾಕರ ಕಡವೆ, ಭಗವತಿ ಎಂ.ಆರ್., ಮಲ್ಲು ಸಿ. ಕೊತ್ನೂರು, ರೋಸಿ ಡಿಸೋಜ, ನರಸಿಂಹಮೂರ್ತಿ ಕೆ., ಕರಿಸ್ವಾಮಿ ಕೆ… ದೊಡ್ಡ ಪಟ್ಟಿಯೇ ಎದುರಾಗುತ್ತದೆ.
ಒಬ್ಬ ಕವಿ ಕಣ್ಮರೆ ಆದ ಎಂದರೆ ಅದು ಅಷ್ಟರ ಮಟ್ಟಿಗೆ ಒಂದು ರೂಪಕ, ಒಂದು ವಾಕ್ಯವಿನ್ಯಾಸ, ಒಂದು ನುಡಿಗಟ್ಟು ಕಣ್ಮರೆ ಆದಂತೆ. ಇಲ್ಲಿರುವ ಕವಿತೆಗಳನ್ನು ಓದುತ್ತಿದ್ದರೆ ಕನ್ನಡದ ಹೊಸ ಪೀಳಿಗೆಯು ಹೇಗೆ ಅರಳಲು ತೊಡಗಿತ್ತು ಎಂಬುದು ತಿಳಿಯುತ್ತಿದ್ದಂತೆಯೇ; ‘ಮರಳಿ ಕಾವ್ಯದತ್ತ’ ಅವರನ್ನು ಕರೆತರುವ ದಾರಿ ಯಾವುದೊ ಎಂಬ ಆಸೆ ಉಂಟಾಗುತ್ತದೆ.
ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಳುನೂರು ಕವಿತೆಗಳ ಪೈಕಿ ನೂರಾ ಮುವತ್ತು ಕವಿತೆಗಳನ್ನು ಮಾತ್ರ ವಿಕ್ರಂ ವಿಸಾಜಿ ಆಯ್ದು ಸಂಪಾದಿಸಿದ್ದಾರೆ. ಇಲ್ಲಿರುವ ಕವಿತೆಗಳು ಹೆಸರಿಗೆ ‘ಯುವ’ ಅಷ್ಟೇ. ಆದರೆ ಅತ್ಯಂತ ಸಂವೇದನಾಶೀಲ ಪ್ರಬುದ್ಧ ಕವಿಗಳೇ ಈ ಕವಿತೆಗಳನ್ನು ಬರೆದಿದ್ದಾರೆ ಎಂಬಷ್ಟು ಈ ಕವಿತೆಗಳು ಸಶಕ್ತವಾಗಿವೆ. ರೂಪಕ ಪ್ರತಿಮೆ ಸಂಕೇತಗಳ ಅಸಲಿತನ, ಕಾವ್ಯ ಪರಂಪರೆಯ ಜೊತೆಗಿನ ಅತ್ಯುತ್ತಮ ಬಾಂಧವ್ಯ; ಪರಂಪರೆ ಮತ್ತು ವರ್ತಮಾನವನ್ನು ಕಾವ್ಯದ ನಾದದಲ್ಲಿ ನಿವೇದಿಸುವ ಸೂಕ್ಷ್ಮಸಂವೇದಿ ತವಕ, ತಲ್ಲಣ, ತನ್ಮಯತೆ ಹಾಗೂ ಕಾಲಾತೀತ ತುಡಿತ ಈ ಕವಿತೆಗಳಲ್ಲಿ ದಟ್ಟವಾಗಿವೆ. ಯುವಕಾವ್ಯ ಪಯಣದ ಹಾದಿಯನ್ನು ಅರಿಯುವ ತವಕ ಇರುವ ಯಾರಾದರೂ ಈ ಕಾವ್ಯ ಸ್ಪರ್ಧೆಯ ಬಹುಮಾನಿತ ಕವಿತೆಗಳನ್ನು ಅಧ್ಯಯನ ಮಾಡುವುದರ ಮೂಲಕವೇ ಯುವ ಕಾವ್ಯದ ಯುಗಧರ್ಮ ಮತ್ತು ಅದು ವಿಕಾಸಗೊಳ್ಳುವ ಪರಿಯನ್ನು ಗಂಭೀರವಾಗಿ ಚಿಂತಿಸಬಹುದು.
ಇಲ್ಲಿನ ಕವಿತೆಗಳ ಮಹತ್ವವನ್ನು ಕನ್ನಡದ ಅತ್ಯುತ್ತಮ ಕಾವ್ಯ ಸಂಕಲನಗಳ ಜೊತೆ ಹೋಲಿಸಿ ನೋಡಿದರೆ ಈ ಸಂಕಲನದ ಮಹತ್ವ ತಿಳಿಯುತ್ತದೆ. ಈ ಕಾವ್ಯ ಸ್ಪರ್ಧೆಯ ಆಚೆಯೇ ಉಳಿದಿದ್ದೋ ಬೇಡವಾಗಿಯೋ ಇದ್ದವರೂ ಕೂಡ ಇಂದಿನ ಹೊಸ ಪೀಳಿಗೆಯ ಕಾವ್ಯದಲ್ಲಿ ಹೆಸರಾಗಿದ್ದಾರೆ. ಅಂತವರು ಭಾಗಶಃ ಕಾವ್ಯ ತೆಪ್ಪಕ್ಕೆ ತಡವಾಗಿ ಬಂದರೇನೊ. ಶಂಕನಪುರ ಮಹದೇವ, ಲಲಿತಾ ಸಿದ್ಧಬಸವಯ್ಯ, ಎಂ.ಎಸ್. ಶೇಖರ್, ಆರಿಫ್‌ರಾಜ, ವೀರಣ್ಣ ಮಡಿವಾಳ, ಅರುಣ್ ಜೋಳದ ಕೂಡ್ಲಿಗಿ ಮುಂತಾದ ಪ್ರತಿಭಾವಂತರು ಈ ಕಾವ್ಯ ಸ್ಪರ್ಧೆಯಿಂದ ಹೊರಗಿನವರಾದರೂ ಕೂಡ ಇವರ ಕಾವ್ಯಕ್ಕೂ ಇಲ್ಲಿನ ಸಂಕಲನದ ಕವಿತೆಗಳಿಗೂ ಒಂದು ಅವಿನಾಭಾವ ಸಂಬಂಧವಿದೆ. ವಿಪರ್ಯಾಸ ಎಂದರೆ; ಇಲ್ಲಿನ ಯಾವೊಬ್ಬ ಕವಿಗೂ ದಲಿತ ಬಂಡಾಯ ಕಾವ್ಯದ ಆತ್ಮೀಯ ಅನುಸಂಧಾನವಿಲ್ಲ; ಹಾಗೆಯೇ ಆ ವೇದಿಕೆಗಳಲ್ಲಿ ಇಲ್ಲಿನ ಕವಿಗಳು ಸದಸ್ಯರಲ್ಲ.
ಇಂತಹ ಒಂದು ಕಾವ್ಯ ಪ್ರತಿಭೆಯ ತಲೆಮಾರನ್ನು ನಮ್ಮ ಕಾಲದ ಕಾವ್ಯರಾಜ ಕಾರಣ ಮತ್ತು ಅವುಗಳ ಮ್ಯಾನಿಫೆಸ್ಟೋ ಹಿನ್ನೆಡೆಗೆ ಈಡುಮಾಡಿದವೇ… ತಜ್ಞರು ಈ ಬಗ್ಗೆ ನಿರ್ಣಯಿಸಬೇಕಾಗಿದೆ. ಹೊಸ ಪೀಳಿಗೆಯ ಮೂರನೆ ಸರದಿಯಲ್ಲಿ ನಿಂತು ಬರೆಯುತ್ತಿರುವ ಈ ಹೊತ್ತಿನ ಕವಿಗಳಾದ ಆಲೂರು ದೊಡ್ಡ ನಿಂಗಪ್ಪ, ನಾಗಣ್ಣ ಕಿಲಾರಿ, ರಶ್ಮಿ ಹೆಗಡೆ, ಉಗಮ ಶ್ರೀನಿವಾಸ, ಅಕ್ಷತಾ ಕೆ., ಅಂಕುರ್ ಬೆಟಗೇರಿ, ಕಾವ್ಯಾ ಪಿ.ಕೆ, ಸ್ಮಿತಾ ಮಾಕಳ್ಳಿ ಮುಂತಾದವರ ಕಾವ್ಯವೂ ಹಂಗಿನ ಕಾವ್ಯದ ಬೇಲಿ ದಾಟಿದೆ ಹಾಗೆಯೇ ಎಲ್ಲೆಡೆ ದಕ್ಕುವ ಕಾವ್ಯದ ಅಂತಃಕರಣದ ಚಿಲುಮೆಗಳ ನೀರು ಕುಡಿದು ತನ್ನ ಪಾಡಿಗೆ ತನ್ನ ಪಾಡನ್ನು ನುಡಿಸುತ್ತಿದೆ. ಭಾಗಶಃ ಟಿ.ಎಸ್. ಎಲಿಯಟ್ ಹೇಳಿದ ಪ್ರತಿಭೆ ಮತ್ತು ಪರಂಪರೆಗಳ ಕಾವ್ಯದ ಆತ್ಮೀಯ ಅನುಸಂಧಾನ ಈ ಸಂಕಲನದ ಎಲ್ಲ ಕಲಿಗಳಲ್ಲೂ ಆಯಾ ಕಾಲಿಕವಾಗಿ ಕಂಡುಬರುವುದನ್ನು ಗಮನಿಸಬಹುದು.
ಕಾವ್ಯವು ಒಂದು ವ್ಯಕ್ತಿ ವಿಶಿಷ್ಟ ಏಕಾಂತದ ಏಕಾಂಕ ಪ್ರದರ್ಶನ. ಅದು ಶೃಂಗಾರವೊ ದುರಂತವೊ ಎಂಬುದು ಮುಖ್ಯವಲ್ಲ. ಅದು ಲೋಕವನ್ನು ರೂಪಕಗಳಲ್ಲಿ ಆಚರಿಸುವ ಭಾಷೆಯ ದಿವ್ಯಕ್ರಿಯೆ. ಈ ದಿವ್ಯ ಕ್ರಿಯೆ ಭಂಗವಾಗುತ್ತಲೆ ಇರುತ್ತದೆ. ಆದ್ದರಿಂದಲೆ ಎಷ್ಟೇ ಪ್ರತಿಭಾವಂತ ಕವಿಯೂ ಒಮ್ಮೊಮ್ಮೆ ತನಗೆ ತಾನೇ ಅಗತ್ಯವಿಲ್ಲದವನು ಎಂಬಂತೆ ನೇಪಥ್ಯಕ್ಕೆ ಸರಿಯುವನು. ಇಲ್ಲವೇ ವೇದಿಕೆಯಲ್ಲೇ ಉಳಿಯುವ ಹಟದಲ್ಲಿ ಇಲ್ಲಸಲ್ಲದ್ದನ್ನೆಲ್ಲ ನುಡಿದು ನುಡಿಯ ಘನತೆ ಕೆಡಿಸಿಕೊಳ್ಳುವನು. ಕ್ರೈಸ್ಟ್ ಕಾಲೇಜಿನ ಈ ಕಾವ್ಯ ಸ್ಪರ್ಧೆಯ ಮೂಲಕ ಕಾವ್ಯದ ರಂಗಕ್ಕೆ ಏರಿ ಬಂದವರು ಅನೇಕರು ಮರೆಯಾಗಿರಬಹುದು.
ಆದರೆ ಕಾವ್ಯ ವೇದಿಕೆಯಿಂದಲೇ ಕಥೆ, ಕಾದಂಬರಿ, ವಿಮರ್ಶೆ, ವಿಚಾರ, ಪ್ರಬಂಧ, ಸಂಶೋಧನೆಯ ಆಯಾಮಗಳಿಗೆ ಚಾಚಿಕೊಂಡ ಲೇಖಕರು ಬಹಳಷ್ಟಿದ್ದಾರೆ. ಅಷ್ಟರ ಮಟ್ಟಿಗೆ ಈ ಕಾವ್ಯ ಸ್ಪರ್ಧೆಯು ಕನ್ನಡ ಸಾಹಿತ್ಯದ ಹೊಸ ಅಭಿವ್ಯಕ್ತಿಗಳ ಹಾದಿಗೆ ಒತ್ತಾಸೆಯಾಗಿದೆ. ಒಂದು ಕಾಲೇಜಿನ ಪುಟ್ಟ ಕನ್ನಡ ಸಂಘ ಇಷ್ಟೆಲ್ಲವನ್ನು ಆಗುಮಾಡಿದೆಯಲ್ಲಾ… ದೊಡ್ಡ ದೊಡ್ಡ ಪರಿಷತ್ತು, ಅಕಾಡೆಮಿ, ವಿ.ವಿ.ಗಳು ಅಂತಹದನ್ನು ಯಾಕೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಅಸಮಾಧಾನ ಎದುರಾಗುವುದು ಸಹಜ.
ಮೇಲಿನ ಈ ಎಲ್ಲ ವಿವರಗಳೂ ’ಮತ್ತೆ ಬಂತು ಶ್ರಾವಣ’ ಕಾವ್ಯ ಸಂಕಲನದ ಜೊತೆಗೆ ಹುಟ್ಟಿದ ಜಿಜ್ಞಾಸೆ. ವರ್ತಮಾನದ ಕಾವ್ಯ ವಿದ್ಯಾರ್ಥಿಗಳು ಈ ಸಂಕಲನವನ್ನು ತಪ್ಪದೆ ಗಮನಿಸಬೇಕು. ಹಾಗೆಯೇ ಕನ್ನಡ ಕಾವ್ಯದ ದಿಕ್ಕುದೆಸೆಯ ಬಗ್ಗೆ ಯೋಚಿಸುವ ವಿಮರ್ಶಕರು, ಹಿರಿಯ ಲೇಖಕರು ಅವಲೋಕಿಸಬೇಕಾದ ಸಂಕಲನ ಇದು. ಈಗತಾನೆ ಕಾವ್ಯದ ವಾನಪ್ರಸ್ಥದ ಬಾಗಿಲ ಬಳಿ ನಿಂತವರು ಕೂಡ ಇಂತಹ ಒಂದು ಸಂಕಲನವನ್ನು ‘ಮತ್ತೆ ಬಂತು ಕಾವ್ಯ ಪ್ರಾಯ’ ಎಂದು ಮನನ ಮಾಡಿಕೊಳ್ಳಬೇಕಾಗಿದೆ.
ಈ ಸಂಕಲನದ ಕವಿಗಳ ವಿಳಾಸ ಸಿಕ್ಕಿದ್ದರೆ ಚೆಂದವಿತ್ತು. ಚದುರಿದ ಕಾಲದ ಅಳತೆಯಲ್ಲಿ ಅದು ಈ ಸಂಕಲನದಲ್ಲಿ ಸಾಧ್ಯವಾಗಿಲ್ಲ. ಆಯಾ ಕವಿತೆಗಳು ಪ್ರಕಟವಾದ ವರ್ಷವನ್ನು ಕವಿತೆಗಳ ಕೆಳಗೆ ಕೊಡಬಹುದಿತ್ತು. ಒಂದೆರಡು ಬಾರಿ ಬಹುಮಾನ ಪಡೆದ ಕವಿತೆಗಳ ಕವಿಗಳು ಇಲ್ಲಿ ಸ್ಥಾನ ಪಡೆಯಲಾಗಿಲ್ಲ. ಇಷ್ಟು ಕಾಲದ ಎಲ್ಲ ಬಹುಮಾನಿತ ಕವಿತೆಗಳನ್ನು ಸಂಪುಟ ಮಾದರಿಯಲ್ಲಿ ಪ್ರಕಟಿಸಿದ್ದರೆ ನಷ್ಟವೇನೂ ಆಗುತ್ತಿರಲಿಲ್ಲ. ಎಷ್ಟೇ ಆಗಲಿ ಅವೆಲ್ಲವೂ ಬಹುಮಾನಿತ ಕವಿತೆಗಳೇ ಆಗಿದ್ದವು ತಾನೇ… ಇಂತಹ ಒಂದು ಸಂಕಲನದಿಂದ ಮತ್ತೆ ಈ ಸಂಕಲನದ ಎಲ್ಲ ಕವಿಗಳು ಮರಳಿ ತಮ್ಮ ಕಾವ್ಯದತ್ತ ಹೊರಳಿನೋಡಿ ಪಯಣಿಸುವಂತಾದರೆ; ಕನ್ನಡ ಕಾವ್ಯಕ್ಕೆ ಹೊಸದೊಂದು ಹಾದಿ ನಿರ್ಮಾಣವಾದಂತೆಯೇ ಸರಿ.