ಕರ್ನಾಟಕ

“ನನ್ನ ರವಿ ಪಪ್ಪ ಸತ್ತು ಹೋಗಿದ್ದಾರೆ. ಯಾರೋ ಅವರನ್ನು ಸಾಯಿಸಿದರು”

Pinterest LinkedIn Tumblr

DKRavi-Son

ಕುಣಿಗಲ್: “ನನ್ನ ರವಿ ಪಪ್ಪ ಸತ್ತು ಹೋಗಿದ್ದಾರೆ. ಯಾರೋ ಅವರನ್ನು ಸಾಯಿಸಿದರು”- ಹೀಗೆ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಹುಡುಗ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಹೋದರ ರಮೇಶ್ ಅವರ ಪುತ್ರ ರೋಹನ್‌ಗೌಡ.  “ಬೆಂಗಳೂರಿನಲ್ಲಿ ಕೆಲವು ಬಿಲ್ಡರ್ಸ್ಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ನನ್ನ ತಮ್ಮ  ತಿಳಿಸಿದ್ದ. ಆಗ ನಾನು ಅವನಿಗೆ ನೀನು ಪೊಲೀಸರ ರಕ್ಷಣೆ ತೆಗೆದುಕೊ ಎಂದು ಹೇಳಿದ್ದೆ. ಅದಕ್ಕೆ ಅವನು ನಗುನಗುತ್ತಲೇ ನಾನೇನು ರಾಜಕಾರಣಿಯೇ, ನಾನೊಬ್ಬ ಅಧಿಕಾರಿ ಅಷ್ಟೆ.

ನನಗೆ ಪೊಲೀಸರ ರಕ್ಷಣೆ ಏಕೆ ಎಂದಿದ್ದ”- ಹೀಗೆ ಮನಸ್ಸಿನಲ್ಲಿ ಮಡುಗಟ್ಟಿದ ದುಃಖವನ್ನು ತೋಡಿಕೊಂಡವರು  ಡಿ.ಕೆ.ರವಿ ಅಣ್ಣ ರಮೇಶ್.

ಇಡೀ ರಾಜ್ಯದ ಗಮನ ಸೆಳೆದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ಸಾವಿನ ನೋವಿನಿಂದ ದೊಡ್ಡಕೊಪ್ಪಲು ಗ್ರಾಮ ಇನ್ನೂ ಹೊರಬಂದಿಲ್ಲ. ಅಲ್ಲಿ ಈಗಲೂ ಒಂದು ರೀತಿಯ ಸ್ಮಶಾನ ಮೌನ  ಹಾಗೂ ಸೂತಕದ ಛಾಯೆ ಆವರಿಸಿದ್ದು, ಜನರ ಮನಸ್ಸಿನಲ್ಲಿ ರವಿ ಮರೆಯಾದ  ಆತಂಕ ದೂರಾಗಿಲ್ಲ.  ಈ ಸಂದರ್ಭದಲ್ಲಿ ದೊಡ್ಡಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ ಈ ಸಂಜೆ ಪತ್ರಿಕೆ ವರದಿಗಾರ ಸಿ.ಎಸ್.ಕುಮಾರ್ ಮತ್ತು ಕುಣಿಗಲ್ ಶ್ರೀನಿವಾಸ್ ಅವರು, ರವಿ ಸಹೋದರ ರಮೇಶ್ ಹಾಗೂ ಅವರ ಪುತ್ರ ರೋಹನ್‌ಗೌಡ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

ಪ್ರಶ್ನೆ: ಬಾಲ್ಯದಲ್ಲಿ ನೀವು ಮತ್ತು ನಿಮ್ಮ ತಮ್ಮ ರವಿ ಅವರ ಒಡನಾಟ ಹೇಗಿತ್ತು..?
ಉತ್ತರ: ಕರಿಯಪ್ಪ ಹಾಗೂ ಗೌರಮ್ಮ ಅವರ ಮಕ್ಕಳಾದ ಭಾರತಿ, ರಮೇಶ್ ಮತ್ತು ರವಿ ಬಡತನದ ಬೇಗೆಯಲ್ಲಿದ್ದರೂ ಅನ್ಯೋನ್ಯವಾಗಿದ್ದೆವು. ಬಡತನದಿಂದಾಗಿ ನನ್ನ ವಿದ್ಯಾಭ್ಯಾಸವನ್ನು ಎಸ್‌ಎಸ್‌ಎಲ್‌ಸಿಗೆ ನಿಲ್ಲಿಸಿದ್ದೆ. ನನ್ನ ತಮ್ಮ ರವಿ ಉತ್ತಮವಾಗಿ ಕಲಿಯುತ್ತಿದ್ದನ್ನು ಗುರುತಿಸಿ ಅವನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ನಾನು ವ್ಯವಸಾಯದಲ್ಲಿ ತೊಡಗಿಕೊಂಡೆ. ರವಿ 1 ರಿಂದ 4ನೆ ತರಗತಿಯನ್ನು ದೊಡ್ಡಕೊಪ್ಪಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು 5 ರಿಂದ 7ನೆ ತರಗತಿಯನ್ನು ಧರಡಿಹಳ್ಳಿಯಲ್ಲಿ ಕಲಿತನು. ನಂತರ 8 ರಿಂದ 10ನೆ ತರಗತಿವರೆಗೆ ಟಿಎಚ್ ಹಳ್ಳಿಯಲ್ಲಿ ಮುಗಿಸಿ ನಂತರ ಕೆಎಎಸ್ ಪರೀಕ್ಷೆ ಪಾಸ್ ಮಾಡಿ ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಪ್ರಾರಂಭಿಸಿದ.

ಆ ವೇಳೆ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಕಿಡಿಕಾರುತ್ತಿದ್ದ. ತಾನು ಏನಾದರೂ ದೊಡ್ಡ ಸಾಧನೆ ಮಾಡುವುದಾಗಿ ನನ್ನ ಜತೆ ಹೇಳುತ್ತಿದ್ದ. ಐಎಎಸ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿ ಗುಲ್ಬರ್ಗದ ಸೇಲಂನಲ್ಲಿ ಉಪವಿಭಾಗಾಧಿಕಾರಿಯಾಗಿ ನೇಮಕವಾದ. ನಂತರ ಕೋಲಾರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ. ನಮ್ಮ ತಂದೆ-ತಾಯಿ ಅವನ ಜತೆ ಅವನು ವರ್ಗಾವಣೆಯಾದ ಕಡೆಯಲ್ಲೆಲ್ಲ ಹೋಗಿದ್ದರು. ಆದರೆ, ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗಿರಲಿಲ್ಲ. ನಮ್ಮ ಭಾವನ ಮುಖಾಂತರ ಬೆಂಗಳೂರಿನ ಹನುಮಂತರಾಯಪ್ಪ ಅವರ ಪರಿಚಯವಾಗಿ ಅವರ ಮಗಳು ಕುಸುಮಾರೊಂದಿಗೆ ನನ್ನ ತಮ್ಮನಿಗೆ ಮದುವೆ ಮಾಡಿಸಲಾಯಿತು. ಅವರು ಅನ್ಯೋನ್ಯವಾಗಿದ್ದರು.  ಇತ್ತೀಚೆಗೆ ಕುಸುಮಾರ ಬಗ್ಗೆ ಊಹಾಪೋಹಗಳು ಕೇಳಿಬಂದಿವೆ.   ಆದರೆ, ಆ ಬಗ್ಗೆ ನನಗೆ ಗೊತ್ತಿಲ್ಲ. ಇದು ಸುಳ್ಳು. ಪೊಲೀಸರು ಮತ್ತು ಸಿಬಿಐ ವಿಚಾರಣೆ ನಡೆದರೆ ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಕುಸುಮಾ ನಮ್ಮ ಕುಟುಂಬದವರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು.

ಪ್ರಶ್ನೆ: ನಿಮ್ಮ ತಮ್ಮನ ಸಾವಿನ ಸುದ್ದಿ ತಿಳಿದಾಗ ಏನನ್ನಿಸಿತು..?
ಉತ್ತರ: ಕಳೆದ ಸೋಮವಾರ ಸಂಜೆ 7 ಗಂಟೆ ವೇಳೆಗೆ ನನ್ನ ತಮ್ಮ ಸಾವಿಗೀಡಾದ ವಿಷಯ ತಿಳಿದು ಬರಸಿಡಿಲು ಬಡಿದಂತಾಯಿತು. ಈ ವಿಷಯ ಕೇಳಿ ನಾವೆಲ್ಲರೂ ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಇದು ಸುಳ್ಳು ಎಂದುಕೊಂಡೆವು. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ತನಿಖೆಗೆ ಇಡೀ ರಾಜ್ಯದ ಜನತೆ ನಮ್ಮ ಕುಟುಂಬದ ನೆರವಿಗೆ ದಾವಿಸಿತು. ಇದನ್ನು ನಾವು ಮರೆಯಲು ಸಾಧ್ಯವಿಲ್ಲ.

ಪ್ರಶ್ನೆ: ರವಿ ಅವರು ಅಧಿಕಾರಿಯಾಗಿದ್ದಾಗ ನಿಮ್ಮ ಜತೆ ಯಾವುದಾದರೂ ಘಟನೆಗಳನ್ನು ಹಂಚಿಕೊಂಡಿದ್ದರೆ..?
ಉತ್ತರ: ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಡಬೇಕು, ಮರಳು ಮಾಫಿಯಾ, ಭೂ ಮಾಫಿಯಾ, ಬಿಲ್ಡರ್ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ ಎಂದು ಹೆಮ್ಮೆಯಿಂದ ನನ್ನ ಬಳಿ ಹೇಳುತ್ತಿದ್ದ ಅಷ್ಟೆ. ರವಿಗೆ ಬಾಂಬೆ ಮತ್ತು ಡೆಲ್ಲಿಯಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರ ಸ್ನೇಹಿತರಿಗೆ ಹೇಳಿದ್ದನಂತೆ. ಆ ಸಂದರ್ಭದಲ್ಲಿ ಅವನಿಗೆ ನಾವು ಧೈರ್ಯ ತುಂಬಿದ್ದೆವು. ಬೆಂಗಳೂರಿನಲ್ಲಿ ಕೆಲವು ಬಿಲ್ಡರ‌ಸ್ಾಂಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇನೆ ಎಂದು ನನಗೆ ರವಿ ತಿಳಿಸಿದ್ದ. ಆಗ ನೀನು ಪೊಲೀಸರ ರಕ್ಷಣೆ ಪಡೆದುಕೊ ಎಂದು ಹೇಳಿದ್ದೆ. ಅದಕ್ಕೆ ನಗುನಗುತ್ತಲೇ ನಾನೇನು ರಾಜಕಾರಣಿಯೇ, ನಾನೊಬ್ಬ ಅಧಿಕಾರಿ ಅಷ್ಟೆ. ನನಗೆ ಪೊಲೀಸರ ರಕ್ಷಣೆ ಏಕೆ ಎಂದಿದ್ದ.

ಪ್ರಶ್ನೆ: ತುಮಕೂರು ಜಿಲ್ಲೆ ಬಗ್ಗೆ ರವಿ ಏನು ಹೇಳುತ್ತಿದ್ದರು..?
ಉತ್ತರ: ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲಾಧಿಕಾರಿಯಾಗಿ ಬರುತ್ತೇನೆ. ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಗುರಿ ನನಗಿದೆ ಎಂದು ನನ್ನ ತಂದೆ-ತಾಯಿ ಮುಂದೆ ಹೇಳುತ್ತಿದ್ದ. ಕುಣಿಗಲ್ ತಾಲೂಕಿನ ಯಾವ ರೈತರು ಕೂಡ ಹಿಂದುಳಿದಿದ್ದೇವೆ ಎಂಬ ಭಾವನೆ ಇರದಂತೆ ಮಾಡುತ್ತೇನೆ ಎಂಬ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದ.   ರವಿ ಸಾವಿನ ನಂತರ ಬೆಂಗಳೂರಿನಲ್ಲಿ ಪೊಲೀಸರು ನಮ್ಮ ಜತೆ ನಡೆದುಕೊಂಡ ರೀತಿ ನೋವು ತಂದಿದೆ. ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ನಡೆದುಕೊಂಡ ರೀತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಕೊಟ್ಟ ಹೇಳಿಕೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. ಇವರು ಜನರಿಂದ ಆಯ್ಕೆಯಾಗಿದ್ದಾರೆ ಎಂಬುದನ್ನು ಮರೆತು ಸರ್ವಾಧಿಕಾರಿಯಂತೆ ವರ್ತಿಸಿದ್ದರು. ರವಿ ಸಾವಿನ ರಹಸ್ಯ ಮಾಹಿತಿಯನ್ನು ನಾಶ ಪಡಿಸಿದ್ದಾರೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಸಿಬಿಐ ತನಿಖೆಯಿಂದ  ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ನಮ್ಮಲ್ಲಿದೆ.

ಈ ವೇಳೆ ಡಿ.ಕೆ.ರವಿ ಅವರ ಪ್ರೀತಿಯ ಅಣ್ಣನ ಮಗ ರೋಹನ್‌ಗೌಡನನ್ನು ಮಾತನಾಡಿಸಿ ಚಿಕ್ಕಪ್ಪನ ಬಗ್ಗೆ ಕೇಳಿದಾಗ, ನನ್ನ ರವಿ ಪಪ್ಪ ನನಗೆ ಪುಸ್ತಕ, ಬಟ್ಟೆ ಎಲ್ಲವನ್ನೂ ಕೊಡಿಸುತ್ತಿದ್ದರು. ನಾನು ಸಹ ಮುಂದೆ ಚೆನ್ನಾಗಿ ಓದಿ ರವಿ ಪಪ್ಪನಂತಾಗುತ್ತೇನೆ ಎಂದು ತೊದಲು ನುಡಿದನು.
ಆದಿಚುಂಚನಗಿರಿ ಮಠಕ್ಕೆ ಹೋಗುತ್ತೀಯ ಎಂದು ಕೇಳಿದಾಗ ನಾನು ಎಲ್ಲಿಗೂ ಹೋಗುವುದಿಲ್ಲ. ಮುಂದಿನ ವರ್ಷ ನನ್ನ ಅಕ್ಕ ಮೋನಿಷಾಳ ಜತೆ ದುರ್ಗದ ಜ್ಞಾನಭಾರತಿ ಶಾಲೆಗೆ ಸೇರುತ್ತೇನೆ ಎಂದ. ಈಗ ಎಲ್ಲಿ ಓದುತ್ತಿರುವೆ ಎಂದು ಕೇಳಿದ್ದಕ್ಕೆ ದೊಡ್ಡಕೊಪ್ಪಲಿನ ಶಿಶು ವಿಹಾರದಲ್ಲಿ ಓದುತ್ತಿದ್ದೇನೆ. ನನಗೆ ಅಆಇಈ- ಎಬಿಸಿಡಿ ಎಲ್ಲ ಬರುತ್ತದೆ. ನನ್ನ ರವಿ ಪಪ್ಪ ಊರಿಗೆ ಬಂದಾಗ ನನಗೆ ಅಕ್ಷರ ಕಲಿಸುತ್ತಿದ್ದರು.  ಈಗ ನಿನ್ನ ರವಿ ಪಪ್ಪ ಎಲ್ಲಿ ಎಂದಾಗ ಒಂದು ಕ್ಷಣ ಮೌನವಾಗಿ ನನ್ನ ರವಿ ಪಪ್ಪ ಸತ್ತು ಹೋಗಿದ್ದಾರೆ. ಯಾರೋ ಅವರನ್ನು ಸಾಯಿಸಿದರು ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಈಗ ನಿನ್ನ ರವಿ ಪಪ್ಪ ಎಲ್ಲಿ ಎಂದಾಗ ಹೊಲದ ಬಳಿ ಗುಂಡಿಯಲ್ಲಿ ಮುಚ್ಚಿದ್ದೇವೆ ಎಂದು ಅಳುತ್ತ ರೂಮಿಗೆ ಹೋಗಿ ಬಾಗಿಲು ಮುಚ್ಚಿಕೊಂಡ.  ಈ ಸಂದರ್ಭದಲ್ಲಿ ಅಲ್ಲೇ ಇದ್ದ ರವಿ ಅವರ ಅಕ್ಕನ ಮಗಳು ಬಾಲಕನ ಮಾತು ಕೇಳಿ ಬಿಕ್ಕಳಿಸಿ ಅಳುತ್ತಿದ್ದಳು.

Write A Comment