ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣ ಸಂಬಂಧ ಸಿಬಿಐಗೆ ವಹಿಸುವಂತೆ ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಯಾವುದೇ ರೀತಿಯಾಗಿ ನಿರ್ದೇಶನ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಇಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ ಎಂದು ಸೋನಿಯಾ ಗಾಂಧಿಯವರೂ ನಿಮಗೆ ನಿರ್ದೇಶಿಸಿದ್ದಾರೆ ಎನ್ನಲಾಗುತ್ತಿದೆ. ಹೌದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾವೇ ಖುದ್ದು ಪ್ರಕರಣದ ಎಲ್ಲಾ ವಿವರವನ್ನು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೆವು. ಆದರೆ ಅವರು ನಮಗೆ ಯಾವುದೇ ನಿರ್ದೇಶನ ನೀಡಿಲ್ಲ. ಅಲ್ಲದೆ ಅದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಷಯವಾಗಿದ್ದು, ತಾವೇ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದ್ದಾರೆ ಎಂದರು.
ಇದೇ ವೇಳೆ, ಪ್ರಕರಣವನ್ನು ಸಿಬಿಐಗೆ ನೀಡಬೇಕೆ ಇಲ್ಲವೆ ಎಂಬ ಬಗ್ಗೆ ಸರ್ಕಾರ ಸೋಮವಾರ ತನ್ನ ನಿಲುವನ್ನು ವಿಧಾನಸಭೆಯಲ್ಲಿ ಪ್ರಕಟಿಸಲಿದ್ದು, ಪರೀಕ್ಷಾ ಮಧ್ಯಂತರ ವರದಿಯನ್ನೂ ಕೂಡ ಸದನದ ಮುಂದಿಡಲಿದ್ದೇವೆ ಎಂದರು.
2009ನೇ ಸಾಲಿನ ನಾಗರೀಕ ಆಡಳಿತ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ದಕ್ಷ ಅಧಿಕಾರಿ ರವಿ ಅವರು 36ನೇ ರ್ಯಾಂಕ್ ಪಡೆದು ಹೊರ ಹೊಮ್ಮಿದ್ದರು. ಅಲ್ಲದೆ ಎಸಿ, ಸಿಇಓ, ಜಿಲ್ಲಾಧಿಕಾರಿ ಹಾಗೂ ಆಯುಕ್ತರಾಗಿ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದರು. ಜೊತೆಗೆ ತಮ್ಮ ದಕ್ಷ ಆಡಳಿತ ವೈಖರಿಯಿಂದ ಕರ್ನಾಟಕ ರಾಜ್ಯದ ಜನರ ಮನ ಗೆದ್ದಿದ್ದರು.
ಇತ್ತೀಚೆಗೆ ರವಿ ಅವರು ರಾಜ್ಯದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬರುವ ಮೂಲಕ ನಿಗೂಢವಾಗಿ ಸಾವನ್ನಪ್ಪಿದ್ದರು.
ರಾಜ್ಯ ಸರ್ಕಾರವು ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಆದರೆ ಪ್ರಕರಣವನ್ನು ಸಿಬಿಐನಿಂದಲೇ ತನಿಖೆ ನಡೆಸಬೇಕು ಎಂಬುದು ರಾಜ್ಯದ ಸಾರ್ವಜನಿಕರ ಹಾಗೂ ರವಿ ಅವರ ಪೋಷಕರ ಒತ್ತಾಯವಾಗಿದೆ.
