ದೊಡ್ಡಕೊಪ್ಪಲು (ಕುಣಿಗಲ್ ತಾಲ್ಲೂಕು): ಡಿ.ಕೆ.ರವಿ ಅಂತ್ಯಕ್ರಿಯೆ ಅವರ ಹುಟ್ಟೂರಾದ ದೊಡ್ಡಕೊಪ್ಪಲು ಗ್ರಾಮದ ತೋಟದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ರಾತ್ರಿ 9 ಗಂಟೆಗೆ ನೆರವೇರಿತು.
ರವಿ ಅವರ ಅಣ್ಣ ರಮೇಶ್‌ಗೌಡ ಪುತ್ರ ಐದು ವರ್ಷದ ಬಾಲಾಜಿ ಅಂತಿಮ ವಿಧಿವಿಧಾನ ನೆರವೇರಿಸಿದರು. ಅಂತಿಮ ಕ್ರಿಯೆ ನಡೆಯುವಾಗ ರವಿ ಅವರ ತಾಯಿ, ತಂದೆ, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತು.
ಮೃತರ ಗೌರವಾರ್ಥ ಪೊಲೀಸರು ಮೂರು ಸುತ್ತು ಹಾರಿಸಿದರು. ಕೋಲಾರ ಜಿಲ್ಲೆಯಿಂದ ಆಗಮಿಸಿದ್ದ ಕೆಲವರು ಅಲ್ಲಿಂದ ತಂದಿದ್ದ ಮಣ್ಣನ್ನು ಗುಂಡಿಗೆ ಹಾಕಿ ಅಂತಿಮ ನಮನ ಸಲ್ಲಿಸಿದರು.
ದೊಡ್ಡಕೊಪ್ಪಲಿನಲ್ಲಿ ಕಣ್ಣೀರ ಕೋಡಿ
ದೊಡ್ಡಕೊಪ್ಪಲು (ಕುಣಿಗಲ್ ತಾಲ್ಲೂಕು): ದೊಡ್ಡಕೊಪ್ಪಲು ಗ್ರಾಮವು ಮಂಗಳವಾರ ಕಣ್ಣೀರ ಕೋಡಿಯಲ್ಲಿ ತೊಯ್ದು ಹೋಯಿತು. ಕಣ್ಣೀರು ಹಾಕದ ಒಬ್ಬನೇ ಒಬ್ಬ ಮನುಷ್ಯ ಅಲ್ಲಿರಲಿಲ್ಲ. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ದುಃಖದ ಮಡುವಿನಲ್ಲಿ ಇದ್ದರು.
ಡಿ.ಕೆ.ರವಿ ಪಾರ್ಥಿವ ಶರೀರ ಗ್ರಾಮಕ್ಕೆ ಬರುವಾಗ ರಾತ್ರಿ 7 ಮೀರಿತ್ತು. ಅಷ್ಟರೊಳಗೆ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹಿಂದೇಟು ಹಾಕಿದ ಸರ್ಕಾರದ ನಿಲುವು ತಿಳಿದ ಜನರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಕಣ್ಣೀರು ಗರೆದರು. ಗ್ರಾಮದ ಜನರು, ಸಂಬಂಧಿಕರ ಕಣ್ಣೀರು ನೋಡಿ ಬೇರೆ ಊರುಗಳಿಂದ ಬಂದಿದ್ದ ನೂರಾರು ಜನರು ಕೂಡ ದುಃಖತಪ್ತರಾಗಿದ್ದರು.
ರವಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಮಾಡಲಾಗಿದೆ ಎಂದೇ ಜನರು ಹೇಳುತ್ತಿದ್ದರು. ಗ್ರಾಮಕ್ಕೆ ಬಂದಿದ್ದ ಸಾಕಷ್ಟು ಮಂದಿ ಹಿರಿಯ ಅಧಿಕಾರಿಗಳು ಕೂಡ ಇದೇ ಮಾತನ್ನು ಅನುಮೋದಿ ಸುತ್ತಿದ್ದರು.
ರವಿ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸರ್ಕಾರಕ್ಕೆ ಹೇಳಿ ಎಂದು ಊರಿಗೆ ಬಂದ ರಾಜಕಾರಣಿಗಳ ಎದುರು ಗೋಳಾಡಿದರು. ಮಹಿಳೆಯರ ಗೋಳು ಹೇಳತೀರದಾಗಿತ್ತು. ಶಾಸಕ ಸಿ.ಟಿ.ರವಿ ಅವರಿಗೆ ಮಹಿಳೆಯರನ್ನು ಸಮಾಧಾನಪಡಿಸುವಲ್ಲಿ ಸಾಕು ಸಾಕಾಯಿತು.
ಅಂತಿಮ ದರ್ಶನಕ್ಕೆ ತಡೆ ಮಾಡಬಾರದೆಂಬ ಉದ್ದೇಶದಿಂದ ಗ್ರಾಮಸ್ಥರು ಶಾಸಕ ಡಿ.ನಾಗರಾಜಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಅವರೊಂದಿಗೆ ಕುಳಿತು ಧರಣಿ ನಡೆಸಿದರು.
ಸ್ಥಳಕ್ಕೆ ಬಂದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಇತರ ಶಾಸಕರಿಗೆ ಸಿಬಿಐ ತನಿಖೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು.