ಕರ್ನಾಟಕ

ಹಿತ್ತಲಿಲ್ಲದ ಊರು; ಅಸ್ವಚ್ಛ ಬೆಂಗಳೂರು!

Pinterest LinkedIn Tumblr

Pressed plastic waste ready for loading are seen at the Ecores waste processing enterprise on the outskirts of  Minsk

– ಪ್ರವೀಣ ಕುಲಕರ್ಣಿ
ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2012ರಲ್ಲಿ ಮಾವಳ್ಳಿಪುರ ಕಸ ಸಂಗ್ರಹ ಘಟಕವನ್ನು ಬಂದ್‌ ಮಾಡಿಸಿದ್ದು, ಮಂಡೂರು ಗ್ರಾಮಸ್ಥರೂ ಪ್ರತಿಭಟನೆಗೆ ಇಳಿದಿದ್ದು, ಸುಸ್ಥಿರ ವ್ಯವಸ್ಥೆ ರೂಪಿಸುವಂತೆ ಹೈಕೋರ್ಟ್‌ ಮತ್ತೆ ಮತ್ತೆ ಕಿವಿ ಹಿಂಡಿದ್ದು… ತ್ಯಾಜ್ಯ ನಿರ್ವಹಣೆಯತ್ತ ಬಿಬಿಎಂಪಿ ಗಂಭೀರವಾಗಿ ಗಮನಹರಿಸಲು ಹೀಗೆ ಕಾರಣಗಳು ಹತ್ತು–ಹಲವು.

ದೇಶದ ಮೂರನೇ ಮಹಾನಗರ ಬೆಂಗಳೂರಿನಲ್ಲಿ ಕಳೆದ ಒಂದು ದಶಕದ ಅವಧಿಯಲ್ಲೇ ಜನಸಂಖ್ಯೆ ಶೇ 47.18ರಷ್ಟು ಹೆಚ್ಚಾಗಿದೆ. ಸಾಲದೆಂಬಂತೆ ನಗರದ ಗಾತ್ರವನ್ನೂ ಸರ್ಕಾರ ಇದೇ ಅವಧಿಯಲ್ಲಿ ವಿಸ್ತಾರಗೊಳಿಸಿದೆ. ಜನಸಂಖ್ಯೆಗೆ ತಕ್ಕಂತೆ ಉಳಿದ ಸೌಲಭ್ಯಗಳು ಬೆಳೆಯದೇ ಇರುವುದರಿಂದ ಸಮಸ್ಯೆಗಳು ಹೆಚ್ಚಿವೆ. ವಾರ್ಡ್‌ ಮಟ್ಟದಲ್ಲಿ ಹಿತ್ತಲು (ಡಂಪ್‌ಯಾರ್ಡ್‌) ಇಲ್ಲದಿದ್ದುದು, ದಿನದ 24 ಗಂಟೆ ಕೆಲಸದ ಸಂಸ್ಕೃತಿ ಬೆಳೆದಿದ್ದು, ಜೀವನಶೈಲಿ ಬದಲಾಗಿದ್ದು, ಕಸ ವಿಲೇವಾರಿಗೆ ಕೇಂದ್ರೀಕೃತ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದ್ದು…  ತ್ಯಾಜ್ಯದ ಸಮಸ್ಯೆ ಬೆಟ್ಟದಂತೆ ಬೆಳೆಯಲು ಹೀಗೆ ‘ಮಣ್ಣು’ ಎಲ್ಲೆಲ್ಲಿಂದಲೋ ಬಿದ್ದಿದೆ.

ಈ ಸಂಬಂಧ ಲಂಡನ್‌, ಪಣಜಿ, ಪುಣೆ ಮಾದರಿಗಳ ಅಧ್ಯಯನ ನಡೆಸಿದ ಸೋಶಿಯಲ್‌ ವೆಂಚರ್‌ ಪಾರ್ಟ್ನರ್ಸ್‌ (ಎಸ್‌ವಿಪಿ), ವೇಕ್‌ ಅಪ್‌ ಕ್ಲೀನ್‌ ಅಪ್‌, ಬೆಂಗಳೂರು ಸಿಟಿ ಕನೆಕ್ಟ್‌, ಹ್ಯಾಂಡ್‌ ಇನ್‌ ಹ್ಯಾಂಡ್‌ ಮೊದಲಾದ ಸ್ವಯಂಸೇವಾ ಸಂಘಟನೆಗಳು ವಾರ್ಡ್‌ಮಟ್ಟದಲ್ಲಿ ಹಿತ್ತಲು ರೂಪಿಸುವುದೇ, ಅಂದರೆ ಕಸ ವಿಲೇವಾರಿಗೆ ವ್ಯವಸ್ಥೆ ರೂಪಿಸುವುದೇ, ಸಮಸ್ಯೆ ನಿವಾರಣೆಗೆ ಸರಿಯಾದ ಮದ್ದು ಎನ್ನುವ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿವೆ. ಬಿಬಿಎಂಪಿ ಆಡಳಿತ ಪುನರ್‌ರಚನೆ ಸಮಿತಿ ಸದಸ್ಯರು ಈ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಪ್ರಮುಖ ಸಲಹೆಗಳು
* ಮೂಲದಲ್ಲೇ ಕಸ ಬೇರ್ಪಡಿಸಬೇಕು
* ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಮಾಡಬೇಕು
* ಪ್ರತಿ ವಾರ್ಡ್‌ನಲ್ಲಿ ಒಣಕಸ ಸಂಗ್ರಹ ಕೇಂದ್ರ ತೆರೆಯಬೇಕು
*ಸಗಟು ಕಸ ಉತ್ಪಾದಕರು ತಮ್ಮ ತ್ಯಾಜ್ಯವನ್ನು ತಾವೇ ವಿಲೇವಾರಿ ಮಾಡಬೇಕು
* ಪ್ಯಾಕೇಜಿಂಗ್ ಸಾಮಗ್ರಿಗಳ ವಿಲೇವಾರಿಯನ್ನು ಉತ್ಪಾದಕರ ಹೊಣೆಯಾಗಿಸಬೇಕು
* ಭೂಭರ್ತಿ ಮಾಡುವ ಕಸದ ಪ್ರಮಾಣವನ್ನು ಶೇ 20ಕ್ಕೆ ಸೀಮಿತಗೊಳಿಸಬೇಕು

***
ಭೂಭರ್ತಿ ಘಟಕಗಳೇ ಇಲ್ಲದ ಪಣಜಿ
ಗೋವಾದ ರಾಜಧಾನಿ ಪಣಜಿಯ ವಿಸ್ತೀರ್ಣವನ್ನು ಲೆಕ್ಕ ಹಾಕಿದರೆ ಅದರಲ್ಲಿ ನಮ್ಮ ಎಂಟು ಕೋರಮಂಗಲ ಆಗುತ್ತವೆ. 20 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಈ ನಗರದ ಮೂಲ ಜನಸಂಖ್ಯೆ ಕೇವಲ ಒಂದು ಲಕ್ಷ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಮೂಲ ನಿವಾಸಿಗಳಿಗಿಂತ ನಾಲ್ಕು ಪಟ್ಟು ಅಧಿಕ.

ಪಣಜಿಯಲ್ಲಿ 23 ವಾರ್ಡ್‌ಗಳಿದ್ದರೂ ಕಸ ನಿರ್ವಹಣೆಗಾಗಿ ಅವುಗಳನ್ನು 12 ವಲಯ­ಗಳಾಗಿ (ಸಮುದ್ರ ತೀರ, ಗುಡ್ಡಗಾಡು ಪ್ರದೇಶ, ಗೃಹ ಹಾಗೂ ಸಗಟು ತ್ಯಾಜ್ಯ ಉತ್ಪಾದಕರು ಇತ್ಯಾದಿ) ವಿಂಗಡಣೆ ಮಾಡಲಾಗಿದೆ. ಪ್ರತಿಯೊಂದು ವಲಯದ ಕಸ ಸಂಗ್ರಹ ಮತ್ತು ವಿಲೇವಾರಿ ಮಾರ್ಗಸೂಚಿ ಪ್ರಕಾರವೇ ನಡೆಯುತ್ತದೆ.

ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಶಾಲೆಗೆ ತಂದರೆ ಮಕ್ಕಳಿಗೆ ಗೇರ್‌ ಸೈಕಲ್‌ನಿಂದ ಪೆನ್‌ವರೆಗೆ ವಿವಿಧ ಬಹುಮಾನ ನೀಡಲಾಗುತ್ತದೆ. ಪಣಜಿ ಮುನ್ಸಿಪಾಲಿಟಿ ಸ್ವತಃ ಇಲ್ಲವೆ ಖಾಸಗಿ ಸಹಭಾಗಿತ್ವದ ಮೂಲಕ ಇಂತಹ ಯೋಜನೆಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತದೆ.

ನಗರದ ಎಲ್ಲ ಕಾಲೊನಿಗಳಲ್ಲಿ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲು ಮುನ್ಸಿಪಾಲಿಟಿ ವತಿಯಿಂದಲೇ ಮನೆಗಳ ಸಂಖ್ಯೆಗೆ ಅನುಗುಣವಾಗಿ ಗುಂಡಿಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ಹೊದಿಕೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಹೊದಿಕೆಗಳು ತ್ಯಾಜ್ಯದಿಂದ ವಾಸನೆ ಹರಡದಂತೆ ತಡೆಯುತ್ತವೆ. ಮಳೆಯಿಂದಲೂ ರಕ್ಷಣೆ ಒದಗಿಸುತ್ತವೆ.

ನಿವಾಸಿಗಳು ಬೇರ್ಪಡಿಸಿದ ಹಸಿ ಕಸವನ್ನು ತಂದು ಸುರಿದರೆ ಅವರ ಕೆಲಸ ಮುಗಿಯಿತು. ಮುನ್ಸಿಪಾಲಿಟಿಯೇ ಆ ಗುಂಡಿಗಳನ್ನು ನಿರ್ವಹಣೆ ಮಾಡುತ್ತದೆ. ಗೊಬ್ಬರವನ್ನು ಬ್ಯಾಗ್‌ಗಳಲ್ಲಿ ತುಂಬಿ ಉದ್ಯಾನಗಳ ನಿರ್ವಾಹಕರು ಹಾಗೂ ರೈತರಿಗೆ ವಿತರಣೆ ಮಾಡುತ್ತದೆ.

ಒಣಕಸ ಸಂಗ್ರಹಕ್ಕಾಗಿ ಪ್ರತಿ ವಾರ್ಡ್‌ಗೆ ನಾಲ್ಕು ಡಬ್ಬಿಗಳಿರುವ ಕಿಟ್‌ ಒದಗಿಸಲಾಗಿದೆ. ಕಿತ್ತಲೆ ಡಬ್ಬಿಯಲ್ಲಿ ಪ್ಲಾಸ್ಟಿಕ್‌, ಗುಲಾಬಿ ಡಬ್ಬಿಯಲ್ಲಿ ಕಾಗದ ಹಾಗೂ ರಟ್ಟು, ಕಪ್ಪು ಡಬ್ಬಿಯಲ್ಲಿ ಗ್ಲಾಸ್‌ ಮತ್ತು ಲೋಹದ ತ್ಯಾಜ್ಯ  ಹಾಗೂ ಬಿಳಿ ಡಬ್ಬಿಯಲ್ಲಿ ಮರುಬಳಕೆ ಮಾಡಲು ಅಸಾಧ್ಯವಾದ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ.

ಒಣಕಸ ಸಂಗ್ರಹ ಘಟಕಗಳಲ್ಲಿ ಈ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ನಗರದ ವಿವಿಧ ಘಟಕಗಳಲ್ಲಿ ಹೀಗೆ ಸಂಗ್ರಹವಾದ ಒಣಕಸವನ್ನು ಕೇಂದ್ರ ಘಟಕಕ್ಕೆ ತರಲಾಗುತ್ತದೆ. ಅಲ್ಲಿ ಮರುಬಳಕೆಗೆ ಸಾಧ್ಯವಿರುವ ವಸ್ತುಗಳನ್ನೆಲ್ಲ ಪ್ರತ್ಯೇಕಗೊಳಿಸಿದ ಮೇಲೆ ಉಳಿಯುವ ತ್ಯಾಜ್ಯವನ್ನು ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ.

ಆ ತ್ಯಾಜ್ಯದ ದಹನದಿಂದ ಉಳಿಯುವ ಬೂದಿಯನ್ನು ಕರ್ನಾಟಕದ ಕಾರ್ಖಾನೆಗಳು ಸಿಮೆಂಟ್‌ ಉತ್ಪಾದನೆಯಲ್ಲಿ ಬಳಕೆ ಮಾಡುತ್ತಿವೆ. ಹೀಗಾಗಿ ಪಣಜಿಯಲ್ಲಿ ಕೊನೆಗೆ ಕಸದ ಲವಲೇಷವೂ ಉಳಿಯುವುದಿಲ್ಲ. ಭೂಭರ್ತಿ ಕೇಂದ್ರ ಈ ಊರಿಗೆ ಬೇಕಿಲ್ಲ! ಪಣಜಿಯಲ್ಲಿ ಸಗಟು ಕಸ ಉತ್ಪಾದಕರು ಸಹ ಕಸವನ್ನು ಪ್ರತ್ಯೇಕಗೊಳಿಸಿ ಕೊಡಬೇಕು.

* 54,750 ಟನ್‌: ಪಣಜಿಯಲ್ಲಿ ವಾರ್ಷಿಕವಾಗಿ ಉತ್ಪಾದನೆಯಾಗುವ ಒಟ್ಟು ಕಸದ ಪ್ರಮಾಣ
* 100% ಮೂಲದಲ್ಲೇ ಕಸ ವಿಂಗಡಣೆ, ₨ 30 ಕೋಟಿ ವಾರ್ಷಿಕ ವೆಚ್ಚ, 550 ಪೌರಕಾರ್ಮಿಕರು

***
ಲಂಡನ್‌ ನಗರ ಕಲಿಸುವ ಪಾಠ
ಲಂಡನ್ನಿನಲ್ಲಿ 1990ರ ದಶಕದ ಅಂತ್ಯದವರೆಗೆ ತ್ಯಾಜ್ಯವನ್ನು ಸಂಗ್ರಹಿಸುವುದು ಸ್ಥಳೀಯ ಬರೋಗಳ ಹೊಣೆಯಾದರೆ ಅದನ್ನು ವಿಲೇವಾರಿ ಮಾಡುವುದು ಲಂಡನ್ನಿನ ಮುಖ್ಯ ಆಡಳಿತದ ಹೊಣೆಯಾಗಿತ್ತು. ಹೀಗಾಗಿ ಮಂಡೂರು ಮಾದರಿ ಸಮಸ್ಯೆ ಅಲ್ಲಿಯೂ ಇತ್ತು. ಸಮಸ್ಯೆ ಗಂಭೀರ ಸ್ವರೂಪ ತಾಳುತ್ತಿರುವ ಸೂಚನೆ ಅರಿತ ಅಲ್ಲಿನ ಆಡಳಿತ, ಕಸ ನಿರ್ವಹಣೆ ಸಂಪೂರ್ಣವಾಗಿ ಬರೋಗಳ ಜವಾಬ್ದಾರಿ­ಯಾಗಿದ್ದು, ತಮ್ಮ ಸರಹದ್ದಿನಲ್ಲೇ ಅದನ್ನು ವಿಲೇವಾರಿ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತಂದಿತು.

ಕಸ ವಿಲೇವಾರಿಗೆ ಸ್ಥಳಾವಕಾಶ ಸಿಗದ ಬರೋಗಳಿಗೆ ಪಕ್ಕದ ಬರೋದಿಂದ ದುಡ್ಡು ಕೊಟ್ಟು ಸ್ಥಳ ಖರೀದಿ ಮಾಡಲು ಅವಕಾಶ ಕಲ್ಪಿಸಲಾಯಿತು. ಈ ವ್ಯವಹಾರವನ್ನು ಅಂತರ ಬರೋ ಸಮನ್ವಯ ಕೌನ್ಸಿಲ್‌ಗಳು ಕುದುರಿಸಿ ಕೊಡುತ್ತಿದ್ದವು. ಒಣಕಸದ ಮರು ಬಳಕೆಗೆ ಲಂಡನ್‌ ತ್ಯಾಜ್ಯ ಮತ್ತು ಮರು ಬಳಕೆ ಮಂಡಳಿ ಅಸ್ತಿತ್ವಕ್ಕೆ ತರಲಾಗಿದೆ. ಅಲ್ಲೀಗ ಕಸದ ಸಮಸ್ಯೆ ಇಲ್ಲ. ಲಂಡನ್ನಿನ ಬರೋಗಳಂತೆ ಬೆಂಗಳೂರಿನಲ್ಲೂ ವಾರ್ಡ್‌ ಮಟ್ಟದಲ್ಲೇ ಕಸ ವಿಲೇವಾರಿ ಆಗಬೇಕು ಎನ್ನುವುದು ಆಡಳಿತ ಪುನರ್‌ರಚನಾ ಸಮಿತಿ ಆಶಯವಾಗಿದೆ.

* 2 ಕೋಟಿ ಟನ್‌: ಲಂಡನ್‌ನಲ್ಲಿ ವಾರ್ಷಿಕವಾಗಿ ಉತ್ಪಾದನೆಯಾಗುವ ಒಟ್ಟು ಕಸದ ಪ್ರಮಾಣ
* 48% ಕಟ್ಟಡ ನೆಲಸಮ/ನಿರ್ಮಾಣ ತ್ಯಾಜ್ಯ, 32% ಕೈಗಾರಿಕೆ/ವಾಣಿಜ್ಯ ತ್ಯಾಜ್ಯ, 20% ಗೃಹ ತ್ಯಾಜ್ಯ

***
ಹೇಗಿದ್ದರೆ ಚೆನ್ನ?
ಬಿಬಿಎಂಪಿ ಆಡಳಿತದ ಪುನರ್‌­ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಪ್ರಕ್ರಿಯೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿದೆ. ಜನರಿಗೆ ಸಮರ್ಪಕ ಸೇವೆ ಒದಗಿಸಲು ಬಿಬಿಎಂಪಿ ಆಡಳಿತ ಹೇಗಿದ್ದರೆ ಚೆನ್ನ ಎಂಬುದನ್ನು ಓದುಗರು ಹಂಚಿಕೊಳ್ಳಬಹುದು. ನಗರವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು. ‘ಪ್ರಜಾವಾಣಿ’ ಓದುಗರು ಮತ್ತು ಸಮಿತಿ ನಡುವಿನ ಸೇತುವೆ­­ಯಾಗಲಿದೆ.
ಅಭಿಪ್ರಾಯ ಕಳುಹಿಸಬೇಕಾದ ವಿಳಾಸ:nbangalore@prajavani.co.in ಸಂಪರ್ಕ: 080 2588 0607

ಕತ್ರಜ್‌ ವಾರ್ಡ್‌ ತೋರಿದ ಹಾದಿ
ಮಹಾರಾಷ್ಟ್ರದ ಪುಣೆ ನಗರ ಕೂಡ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಬೆಂಗಳೂರಿನಂತಹ ಸಮಸ್ಯೆಯನ್ನೇ ಎದುರಿಸಿತ್ತು. ಅಲ್ಲಿನ ಅತಿ ದೊಡ್ಡ ವಾರ್ಡ್‌ ಎನಿಸಿದ ಕತ್ರಜ್‌ ಪ್ರದೇಶದಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದೆ ರಸ್ತೆಗಳೇ ತ್ಯಾಜ್ಯದ ಘಟಕಗಳಾಗಿ ರೂಪಾಂತರ ಹೊಂದಿದ್ದವು. ಉರಲಿ ದೇವಾಚಿ ಬಳಿಯಿದ್ದ ಕಸ ಭೂಭರ್ತಿ ಕೇಂದ್ರ ತುಂಬಿ ತುಳುಕುತ್ತಿತ್ತು. ಆಗಾಗ ಅಗ್ನಿ ಆಕಸ್ಮಿಕಗಳು ಸಂಭವಿಸುತ್ತಿದ್ದವು. ಮಂಡೂರು, ಮಾವಳ್ಳಿಪುರದ ಜನರಂತೆ ಅಲ್ಲಿನ ಗ್ರಾಮಸ್ಥರೂ ಇದರಿಂದ ಹಿಂಸೆ ಅನುಭವಿಸಿದ್ದರು.

ನಗರದಲ್ಲಿ ಗುಡ್ಡದಂತೆ ಬೀಳುತ್ತಿದ್ದ ಕಸ, ಭೂಭರ್ತಿ ಕೇಂದ್ರದಿಂದ ಹಳ್ಳಿಗರು ಎದುರಿಸುತ್ತಿದ್ದ ಸಂಕಷ್ಟ ಎರಡನ್ನೂ ನೋಡಿದ ‘ಜನವಾಣಿ’ ಎಂಬ ಸ್ವಯಂಸೇವಾ ಸಂಸ್ಥೆ, ಪುಣೆ ಪಾಲಿಕೆ ಸಹಕಾರದೊಂದಿಗೆ ಕೈಜೋಡಿಸಿ ‘ಶೂನ್ಯ ಕಸ ವಾರ್ಡ್‌’ ಸೃಷ್ಟಿಗೆ ಮುಂದಡಿ ಇಟ್ಟಿತು. ಕಸ ಆಯುವವರ ಸೇವೆ ಪಡೆದು ಮನೆ–ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ಆರಂಭಿಸಲಾಯಿತು. ಕಸ ಸಂಗ್ರಹಕಾರರಿಗೆ ಪ್ರತಿ ಮನೆಯಿಂದ ದಿನವೂ 1 ರೂಪಾಯಿ ಕೊಡಬೇಕಿತ್ತು.

ಗರಿಷ್ಠ ಮರುಬಳಕೆ, ಕನಿಷ್ಠ ಕಸಕ್ಕೆ ಎನ್ನುವುದು ಕತ್ರಜ್‌ ಜನರ ಹೊಸಮಂತ್ರವಾಯಿತು. ಹಸಿಕಸವನ್ನು ಗೊಬ್ಬರ ಹಾಗೂ ವಿದ್ಯುತ್‌ ಉತ್ಪಾದನೆಗೆ ಉಪಯೋಗ ಮಾಡಲಾಯಿತು. ಕಸದ ಬೆಟ್ಟವೆಲ್ಲ ದಿನದಿಂದ ದಿನಕ್ಕೆ ಕರಗುತ್ತ ಅಲ್ಲಿನ ತ್ಯಾಜ್ಯ ನಿರ್ವಹಣೆ ಸಮಸ್ಯೆಯೇ ನೀಗಿತು. ಕತ್ರಜ್‌ ಮಾದರಿಯನ್ನು ಈಗ ಪುಣೆಯ 25 ವಾರ್ಡ್‌ಗಳು ಅನುಸರಿಸುತ್ತಿವೆ.

* 5.84 ಲಕ್ಷ ಟನ್‌: ಪುಣೆಯಲ್ಲಿ ವಾರ್ಷಿಕವಾಗಿ ಉತ್ಪಾದನೆಯಾಗುವ ಒಟ್ಟು ಕಸದ ಪ್ರಮಾಣ
*158 ಮನೆ ಕಸ ಸಂಗ್ರಹ ಟ್ರಕ್‌ಗಳು, 23 ಹೋಟೆಲ್‌ ಕಸ ಸಂಗ್ರಹ ಟ್ರಕ್‌ಗಳು, ವಾರ್ಡ್‌ನಲ್ಲೇ ಕಸ ವಿಲೇವಾರಿಯಿಂದ ವಾರ್ಷಿಕ ₨ 24 ಕೋಟಿ ಉಳಿತಾಯ

Write A Comment