ಕರ್ನಾಟಕ

6 ಮಂದಿ ಸಾವಿನ ಪ್ರಕರಣ: ಹಂತಕ ಅಪ್ಪನೋ..ಮಗನೋ ..?

Pinterest LinkedIn Tumblr

Suicide-Family

ಬೆಂಗಳೂರು, ಮಾ.15: ಪಾರ್ಶ್ವವಾಯುಗೆ ತುತ್ತಾಗಿದ್ದ ತನ್ನ ತಾಯಿ ಮೇಲಿನ ಅಸಹನೆಯೋ, ಮದುವೆಗೆ ಒಲ್ಲೆ ಎನ್ನುತ್ತಿದ್ದ ಸಹೋದರಿಯ ಮೇಲಿನ ಕೋಪವೋ ಅಥವಾ ಕೌಟುಂಬಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲದ ತನ್ನ ತಂದೆ ಮೇಲಿನ ಸಿಟ್ಟಿನಿಂದ ಯತೀಶ ತನ್ನ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡು ತಾನೂ ನೇಣಿಗೆ ಶರಣಾದನೇ..? ಹೌದು, ನಾಗರಬಾವಿ ಸಮೀಪದ ಎಂಪಿಎಂ ಬಡಾವಣೆಯಲ್ಲಿ ತಂದೆ ಗಂಗಹನುಮಯ್ಯ, ತಾಯಿ ಜಯಲಕ್ಷ್ಮಿ, ಸಹೋದರಿಯರಾದ ಹೇಮಲತ, ವಿಮಲ ಹಾಗೂ ನೇತ್ರಾವತಿಗೆ ಊಟದಲ್ಲಿ ವಿಷ ಬೆರೆಸಿ ಅವರ ಸಾವಿಗೆ ಕಾರಣನಾದ ಯತೀಶನ ಕುರಿತಂತೆ ಪೊಲೀಸರನ್ನು ಕಾಡುತ್ತಿರುವ ಪ್ರಶ್ನೆಗಳಿವು.

ತಾಯಿಯ ಅನಾರೋಗ್ಯ, ಮದುವೆಗೆ ಒಲ್ಲೆ ಎನ್ನುತ್ತಿದ್ದ ತನ್ನ ಸಹೋದರಿ ವರ್ತನೆಯಿಂದ ಬೇಸತ್ತಿದ್ದ ಯತೀಶ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ತಂದೆ ಗಂಗಹನುಮಯ್ಯ ಅವರಿಗೂ ವಿಷವುಣಿಸಲು ಮೀನಾಮೇಷ ಎಣಿಸದಿರುವುದು ಆತನ ಮನಸಾಕ್ಷಿ ಕಟುವಾಗಿತ್ತು ಎಂಬುದಕ್ಕೆ ಉದಾಹರಣೆಯಂತಿದೆ.

ಗಂಗಹನುಮಯ್ಯನವರ ಮೊದಲ ಪುತ್ರಿ ಹೇಮಲತಾಗೆ ದಾವಣಗೆರೆ ಮೂಲದ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು. ಆದರೆ ಆಕೆ ಯಾವುದೇ ಕಾರಣಕ್ಕೂ ನಾನು ಮದುವೆಯಾಗುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಳು. ಇನ್ನು 2ನೇ ಪುತ್ರಿ ತನ್ನ ತಂದೆಯ ವಿರೋಧದ ನಡುವೆಯೂ ಸೋದರ ಮಾವನ ಮಗನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಇನ್ನು 3ನೇ ಮಗಳು ನೇತ್ರಾವತಿ ಬಿಇ ವ್ಯಾಸಂಗ ಮಾಡುತ್ತಿದ್ದಳು. ಈಗಾಗಲೇ 25ರ ವಯೋಮಾನ ದಾಟಿದ್ದ ಯತೀಶ ತನ್ನ ಸಹೋದರಿಯರ ವಿವಾಹ ಮುಗಿಸಿ ತಾನು ಸಾಂಸಾರಿಕ ಜೀವನ ನಡೆಸುವುದು ಯಾವಾಗ…? ಪಾರ್ಶವಾಯು ಪೀಡಿತಳಾಗಿರುವ ತಾಯಿಯ ಅನಾರೋಗ್ಯ ಸರಿಯಾಗುವುದು ಇನ್ನೆಷ್ಟು ದಿನಗಳ ನಂತರವೊ.. ಆದಷ್ಟು ಬೇಗ ಸಮಸ್ಯೆ ಪರಿಹಾರ ಕಂಡುಕೊಳ್ಳುವಂತೆ ತಂದೆಗೆ ದುಂಬಾಲು ಬಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಜರ್ಜರಿತಗೊಂಡು ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳಲು ನಿಶ್ಚಯಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಪ್ಪನ ಮೇಲೂ ಅನುಮಾನ: ಅನಾರೋಗ್ಯಪೀಡಿತ ಪತ್ನಿ ಹಾಗೂ ಮಾತು ಕೇಳದ ಪುತ್ರಿಯರ ವರ್ತನೆಯಿಂದ ಬೇಸತ್ತು ತಂದೆ ಗಂಗಹನುಮಯ್ಯನೇ ನಾಲ್ಕು ಜನಕ್ಕೂ ವಿಷವುಣಿಸಿ ತಾನೂ ಸಾವನ್ನಪ್ಪಿರಬಹುದು ಎನ್ನುವುದು ಸ್ಥಳೀಯರ ಅನುಮಾನವಾಗಿದೆ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುತ್ರ ಯತೀಶನನ್ನು ಬಲಿ ತೆಗೆದುಕೊಳ್ಳಲು ಮನಸು ಬಾರದೆ ಆತನನ್ನು ಉಳಿಸಿರಬಹುದು. ಆದರೆ ತನ್ನ ಇಡೀ ಕುಟುಂಬ ಶವವಾಗಿ ಮಲಗಿರಬೇಕಾದರೆ ನಾನಿನ್ಯಾವ ಪುರುಷಾರ್ಥಕ್ಕೆ ಬದುಕಿರಬೇಕು ಎಂಬ ಆಲೋಚನೆ ಮಾಡಿ ಯತೀಶ ನೇಣಿಗೆ ಕೊರಳೊಡ್ಡಿರುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು. ಯತೀಶನೇ ಹಂತಕ: ಇಡೀ ಕುಟುಂಬ ಶವವಾದ ಸಂದರ್ಭದಲ್ಲಿ ಮನೆಯ ಎಲ್ಲ ಕಿಟಕಿಗಳನ್ನು ಬಂದ್ ಮಾಡಿ, ಕಾಲಿಂಗ್ ಬೆಲ್ ಕಟ್ ಮಾಡಿರುವುದಲ್ಲದೆ ಶವಗಳ ವಾಸನೆ ಬರಬಾರದು ಎಂದು ಇಡೀ ಮನೆಗೆಲ್ಲ ತನ್ನ ತಾಯಿಯ ಅಂಗಮರ್ಧನಕ್ಕೆ ಬಳಸುವ ಮಿರಾಕುಲ್ ಟಚ್ ಎಣ್ಣೆಯನ್ನು ಸಿಂಪಡಿಸಿರುವುದು ಹಾಗೂ ಮನೆಗೆಲಸದಾಕೆ ಬಂದಾಗ ಕಿಟಕಿಯಿಂದ ನಾಳೆ ಬಾ ಎಂದು ಹೇಳಿರುವುದು ಯತೀಶನೆ ಹಂತಕ ಎಂಬುದಕ್ಕೆ ಪುರಾವೆಗಳಾಗಿವೆ ಎಂದು ತನಿಖಾಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಗಂಗಹನುಮಯ್ಯನೇ ಈ ಕೃತ್ಯ ಎಸಗಿದ್ದರೆ ಮನೆಗೆ ಬಂದ ಯತೀಶ ಕೃತ್ಯವನ್ನು ಕಂಡು ಕಿರುಚಾಡಬೇಕಾಗಿತ್ತು. ಇಲ್ಲವೆ ಅಕ್ಕಪಕ್ಕದವರನ್ನು ಕರೆಯಬೇಕಿತ್ತು. ಕೆಲಸದಾಕೆ ಬಂದಾಗ ಏನು ನಡೆದೇ ಇಲ್ಲವೆಂಬಂತೆ ನಾಳೆ ಬಾ ಎಂದು ಹೇಳಿ ಕಳುಹಿಸಿರುವುದು ಆತನೇ ಹಂತಕ ಎಂಬುದನ್ನು ದೃಢಪಡಿಸಿದೆ. ಘಟನೆ ಕುರಿತಂತೆ ಠಾಣೆಗೆ ದೂರು ನೀಡಿರುವ ಗಂಗಹನುಮಯ್ಯನವರ ಸಂಬಂಧಿಕರು ಕೂಡ ಯತೀಶನ ಮೇಲೆ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಆತನೇ ಕೊಲೆಗಾರ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ವರದಿ ನಂತರ ಸತ್ಯಾಂಶ: ತನಿಖೆ ನಡೆಸುತ್ತಿರುವ ಪೊಲೀಸರು ತಾವು ಸಂಗ್ರಹಿಸಿರುವ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿ ಬಂದು ಪೊಲೀಸರು ತನಿಖೆ ಪೂರ್ಣಗೊಳಿಸಿದ ನಂತರವಷ್ಟೇ ಹಂತಕ ಯಾರು ಎಂಬ ಸತ್ಯಾಂಶ ಹೊರಬೀಳಲಿದೆ.

Write A Comment