ಮದುವೆಯ ವಯಸ್ಸೀಗ ಮುಂದೂಡಲಾಗುತ್ತಿದೆ. 25ರೊಳಗೆ ಮದುವೆಯಾಗುತ್ತಿದ್ದವರೆಲ್ಲ ಇದೀಗ 26 –27ಕ್ಕೆ ಮುಂದೂಡುತ್ತಿದ್ದಾರೆ. ಇದೀಗ ವಿದ್ಯಾಭ್ಯಾಸ ಮುಗಿಯುವುದರಲ್ಲಿಯೇ ಕಾಲು ಶತಮಾನ ಕಳೆದಿರುತ್ತದೆ. ನಂತರ ಸೂಕ್ತ ಉದ್ಯೋಗ, ಕೆಲಸ ಸಿಕ್ಕೊಡನೆ ಮದುವೆಯಾದರೆ ರಜೆ ಸಮಸ್ಯೆ, ಮಕ್ಕಳಾದರೆ ಭವಿಷ್ಯ ನಿರ್ಮಾಣ ಹೇಗೆ? ವೃತ್ತಿನಿರತರಾಗಿದ್ದಾಗ ಸಹಜವಾಗಿಯೇ ಮಹತ್ವಾಕಾಂಕ್ಷೆ ಇರುತ್ತದೆ.
ಎಲ್ಲ ಅರ್ಹತೆಗಳಿದ್ದೂ ಮುಂದುವರಿಯಬೇಕಾದ ಸಮಯದಲ್ಲಿ ಮದುವೆಗಾಗಿ ರಜೆ ಹಾಕುವುದೇ? ಮದುವೆಯ ನಂತರ ವೃತ್ತಿಯನ್ನು ನಿಭಾಯಿಸಬಹುದೇ? ಅದಕ್ಕೆ ಒಂದಿಷ್ಟು ಸಮಯ ಬೇಕಾಗುವುದಿಲ್ಲವೇ? ವೇಗದಿಂದ ಮುಂದುವರಿಯುವ ಓಟದಲ್ಲಿ ವೇಗ ನಿರೋಧಕದಂತೆ ಮದುವೆ ಕಾಣಿಸಿದ್ದಲ್ಲಿ ತಪ್ಪೇನಿಲ್ಲ.
ಇದೇ ಕಾರಣಕ್ಕೆ ಹಲವಾರು ಯುವತಿಯರು ಮದುವೆಯ ಬಗ್ಗೆ ಯೋಚಿಸುವುದೇ ಇಲ್ಲ. ಕೆಲಸ ಸಿಕ್ಕರೂ… ಇನ್ನೂ ಒಂದೆರಡು ವರ್ಷ ಕಳೀಲಿ. ವೃತ್ತಿಯಲ್ಲೊಂದು ಗಟ್ಟಿಯಾದ ಸ್ಥಾನ ಸಿಕ್ಕರೆ, ನಂತರ ರಾಜೀನಾಮೆ ನೀಡಿದರೂ ಅನುಭವದ ಹಿನ್ನೆಲೆ ಇರುವುದರಿಂದ ಮತ್ತೆಲ್ಲಾದರೂ ಕೆಲಸ ಸಿಕ್ಕೇಸಿಗುತ್ತದೆ ಎಂಬ ಲೆಕ್ಕಾಚಾರ ಅವರದ್ದು.
ಕೆಲಸ ಬಿಡುವ ಮುನ್ನ ಕನಿಷ್ಠ ಒಂದೆರಡು ವರ್ಷಗಳಾದರೂ ಆರಾಮವಾಗಿ ಇರುವಷ್ಟು ಉಳಿಕೆ ಬ್ಯಾಂಕ್ ಖಾತೆಯಲ್ಲಿರಬೇಕು ಎನ್ನುವ ದೂರದೃಷ್ಟಿಯವರೂ ಇದ್ದಾರೆ. ಆದರೆ ವಿವಾಹ ವಿಳಂಬವಾದಷ್ಟೂ ವೈಯಕ್ತಿಕ ಬದುಕಿಗೆ ಹಾನಿಗಳಿವೆ ಎನ್ನುತ್ತಾರೆ ತಜ್ಞರು.
ಮೂವತ್ತಕ್ಕಿಂತ ಮೊದಲು ಪ್ರೀತಿ
ಮೂವತ್ತು ವರ್ಷಕ್ಕಿಂತಲೂ ಮೊದಲು ಹೊಂದಾಣಿಕೆ ಮಾಡಿಕೊಳ್ಳುವುದು ಅತಿ ಸುಲಭ. ಆಗ ಮನಸು ಹಟಕ್ಕೆ ಇಳಿಯುವುದಿಲ್ಲ. ಇನ್ನೊಬ್ಬರನ್ನು ಪಡೆಯುವುದೆಂದರೆ ಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎನ್ನುವ ಪ್ರಜ್ಞೆ ಇದ್ದೇ ಇರುತ್ತದೆ. ಪುರುಷರಲ್ಲಿಯೂ ಒಂದು ಬಾಂಧವ್ಯವನ್ನು ಸುದೀರ್ಘಕಾಲದವರೆಗೆ ಕಾಪಿಟ್ಟುಕೊಳ್ಳಬೇಕೆಂದರೆ ಆರೈಕೆ, ಆರಾಧನೆ ಎರಡೂ ಮುಖ್ಯ ಎನಿಸುತ್ತದೆ.
ಮೂವತ್ತರೊಳಗೆ ಪ್ರೀತಿಯಲ್ಲಿರಬೇಕಾದ ತುಂಟತನ, ಹಟಮಾರಿತನ, ಒಬ್ಬರಿಗೊಬ್ಬರು ತಹತಹಿಸುವುದು ಇದ್ದೇ ಇರುತ್ತದೆ. ಮೂವತ್ತರ ಅಂಚನ್ನು ಇಬ್ಬರೂ ಒಟ್ಟೊಟ್ಟಿಗೆ ದಾಟಿದರೆ ಖಂಡಿತವಾಗಿಯೂ ಸುದೀರ್ಘಕಾಲದ ದಾಂಪತ್ಯ ನಿಮ್ಮದಾಗುತ್ತದೆ.
ಮೂವತ್ತರ ನಂತರದ ಮದುವೆ
ಮೂವತ್ತರವರೆಗೂ ಒಂಟಿಯಾಗಿ ಬದುಕಿದವರು, ಜಂಟಿಯಾದಾಗ ಮೊದಲ ಕೆಲದಿನಗಳು ಘರ್ಷಣೆಯ ಸ್ವರೂಪ ಪಡೆಯ ಬಹುದು. ಇದಕ್ಕೆ ಗಂಡಸರನ್ನು ಬೆಳೆಸುವ ರೀತಿಯೂ ಆಗಿದೆ. ಪುರುಷರೆಲ್ಲರೂ ಮದುವೆಯಾಗುವುದೇ ತಮ್ಮ ಅನುಕೂಲಕ್ಕೆ ಎಂಬ ಮನೋಭಾವದವರಾಗಿರುತ್ತಾರೆ. ಅವರಿಗೆ ಹೆಂಡತಿ ಬಂದರೆ ಪಾತ್ರೆ ತೊಳೆಯುವ ಕಷ್ಟ ತಪ್ಪಿತು. ಬೆಳಗೆದ್ದು ಹಾಲು ತೊಗೊಂಡು ಕಾಯಿಸ ಬೇಕಾಗಿಲ್ಲ. ಹೀಟರ್ ಸಹ ಆನ್ ಮಾಡಬೇಕಾಗಿಲ್ಲ.
ಇದೆಲ್ಲಕ್ಕೂ ಹೆಂಡತಿಯೊಬ್ಬಳನ್ನು ಕಟ್ಟಿಕೊಂಡಾಗಿದೆ ಎನ್ನುವ ಅಹಂ ಹೆತ್ತವರಿಂದ ಒಡಹುಟ್ಟಿದವರಿಂದಲೇ ಬೆಳೆದು ಬಂದಿರುತ್ತದೆ. ಆದರೆ ಮದುವೆಯಾದ ಹುಡುಗಿಗೆ ಈ ಎಲ್ಲ ಕೆಲಸಗಳೂ ಕೂಡುತ್ತಲೇ ಹೋಗುತ್ತವೆ. ಅವಳ ದಿನಚರಿಯಿಂದ ಯಾವುದೇ ಕೆಲಸಗಳೂ ಕಡಿಮೆಯಾಗುವುದಿಲ್ಲ.
ಹೆಚ್ಚುವರಿ ದಣಿವು, ಹೆಚ್ಚುವರಿ ಕೆಲಸ, ಅದೂ ಕೃತಜ್ಞಾರಹಿತ ಕೆಲಸ. ಅಲ್ಲಿಯ ವರೆಗೂ ಆತ್ಮಗೌರವಕ್ಕೆ ಹೆಚ್ಚು ಮಹತ್ವ ಕೊಟ್ಟ ಮಹಿಳೆಗೆ ಇದೀಗ ಈ ಕೆಲಸಗಳು ದಾಸ್ಯತ್ವದ ಭಾವ ಮೂಡಿಸುತ್ತವೆ. ಅವಳಲ್ಲಿಯ ಆತ್ಮಾಭಿಮಾನ ಇನ್ನುಳಿದವರಿಗೆ ಅಹಂಕಾರ ಎನಿಸತೊಡಗುತ್ತದೆ. ಈ ಭಾವನಾತ್ಮಕ ಸಂಘರ್ಷಗಳು ಕೆಲವು ಸಂದರ್ಭದಲ್ಲಿ ಹೆಚ್ಚಾಗುತ್ತಲೇ ಹೋಗುತ್ತವೆ.
ಇನ್ನೂ ಕೆಲವು ಪ್ರೌಢ ಸಂಗಾತಿಗಳಲ್ಲಿ ಇವ್ಯಾವೂ ಮಹತ್ವದ ಅಂಶಗಳೆನಿಸುವುದಿಲ್ಲ. ಕೆಲಸವನ್ನೂ ಜವಾಬ್ದಾರಿಗಳನ್ನೂ ಹಂಚಿಕೊಳ್ಳುತ್ತಾರೆ. ಸುಖದುಃಖ, ದೂರು ದುಮ್ಮಾನಗಳೇನೇ ಇದ್ದರೂ ಕೈ ಹಿಡಿದು ಕೊಂಡೇ ಸಾಗುತ್ತಾರೆ. ಸುದೀರ್ಘಕಾಲೀನ ಸಾಂಗತ್ಯಕ್ಕೆ ಈ ಪ್ರೌಢಿಮೆಯ ಅಗತ್ಯವಿದೆ. ಮನೆ, ಮಕ್ಕಳು, ಆರೈಕೆ ಎಲ್ಲವನ್ನೂ ನಿಭಾಯಿಸಲೂ ಕೆಲವೊಮ್ಮೆ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ.
ವೃತ್ತಿನಿರತರ ಓಟದಲ್ಲಿ ಒಂದೆರಡು ವರ್ಷಗಳ ವಿರಾಮ ಪಡೆಯುತ್ತಾರೆ. ಆದರೆ ಮತ್ತದೇ ಉತ್ಸಾಹದಿಂದ ಅನುಭವವನ್ನೇ ಚಿಮ್ಮುಹಲಗೆ ಆಗಿಸಿಕೊಂಡು ಮತ್ತೊಂದು ಇನ್ನಿಂಗ್ಸ್ ಆರಂಭಿಸುತ್ತಾರೆ. ಮದುವೆ ಮುಂದೂಡುವುದು, ಅಲ್ಲಗಳೆಯುವುದು ಸಬಲೀಕರಣವಲ್ಲ. ಮನೆ–ವೃತ್ತಿ ನಿಭಾಯಿಸುತ್ತ ತಮ್ಮನ್ನೇ ಕಳೆದುಕೊಳ್ಳುತ್ತ, ತಮ್ಮತನವನ್ನೂ ಪೋಷಿಸುತ್ತ ಸಾಗುವುದು ಸಬಲೀಕರಣದ ಸ್ಪಷ್ಟ ಉದಾಹರಣೆ.
ಮೂವತ್ತರ ನಂತರ ಮದುವೆ ಆದವರಲ್ಲಿ ಪ್ರೌಢಿಮೆ ಇರುತ್ತದೆ. ಅವರಲ್ಲಿ ಪ್ರೀತಿ ಹೊಂದಾಣಿಕೆಯ ಸ್ವರೂಪ ಪಡೆದಿರುತ್ತದೆ. ದಾಂಪತ್ಯಗೀತದಲ್ಲಿ ಎಲ್ಲವೂ ತಮ್ಮ ಅನುಕೂಲಕ್ಕೆ ಎಂಬಂತೆ ವರ್ತಿಸುವುದು ಸಾಮಾನ್ಯ. ಒಂಟಿಯಾಗಿ ಬದುಕಿದವರು, ಜಂಟಿಯಾದಾಗ ಮೊದಲ ಕೆಲದಿನಗಳು ಇಂಥ ಭಾವಗಳಿಂದಾಗಿ ಘರ್ಷಣೆಗೆ ಇಳಿಯಬಹುದು.