ಕರ್ನಾಟಕ

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ’: ‘ದೇವನೂರ ಮಹದೇವ ಬೇಡ ಎಂದ ಅಧ್ಯಕ್ಷ ಸ್ಥಾನವನ್ನು ಏಕೆ ಒಪ್ಪಿದಿರಿ’- ನನ್ನನ್ನು ಕೇಳಿದರು ನಾನು ಒಪ್ಪಿದೆ; ಸಿದ್ಧಲಿಂಗಯ್ಯ

Pinterest LinkedIn Tumblr

pvec040215kss sanmana

ಶ್ರವಣಬೆಳಗೊಳ: ವ್ಯವಸ್ಥೆಯ ಒಳಗಿದ್ದು ಹೋರಾಡುವುದು ಸರಿಯೋ ಅಥವಾ ಹೊರಗಿದ್ದು ಹೋರಾಡುವುದು ಸರಿಯೋ ಎಂಬ ಪ್ರಶ್ನೆ ಮಂಗಳವಾರ ಇಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ’  ಕಾರ್ಯಕ್ರಮದಲ್ಲಿ ಬಹುವಾಗಿ ಕಾಡಿತು.

ದೊಡ್ಡೇಗೌಡ ಎಂಬುವವರು ‘ದೇವನೂರ ಮಹದೇವ ಬೇಡ ಎಂದ ಅಧ್ಯಕ್ಷ ಸ್ಥಾನವನ್ನು ಏಕೆ ಒಪ್ಪಿದಿರಿ’ ಎಂದು ಕೇಳಿದ ಪ್ರಶ್ನೆಗೆ ಸಿದ್ಧಲಿಂಗಯ್ಯ ‘ನನ್ನನ್ನು ಕೇಳಿದರು ನಾನು ಒಪ್ಪಿದೆ’ ಎಂದು ಉತ್ತರಿಸುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ಆದರೆ, ಮರುಕ್ಷಣವೇ ಎದ್ದು ನಿಂತ ಲೇಖಕಿ ಬಾನು ಮುಷ್ತಾಕ್  ನೇರವಾಗಿಯೇ ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯ ಅವರಿಗೆ ‘ಹಾರಿಕೆಯ ಉತ್ತರ ನೀಡುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು. ‘ವ್ಯವಸ್ಥೆಯೊಂದಿಗೆ ಅಪ್ರಮಾಣಿಕವಾಗಿ ರಾಜಿ ಮಾಡಿಕೊಂಡಿದ್ದೀರಿ. ನೆಪ ಹೇಳುತ್ತೀರಿ. ನಮಗೆ ರಾಜಕೀಯದ ಸಿದ್ಧಲಿಂಗಯ್ಯ ಅವರಿಗಿಂತ ಊರುಕೇರಿಯ ಸಿದ್ಧಲಿಂಗಯ್ಯ ಬೇಕು. ಆತ್ಮ ಸಂವಾದ ನಡೆಸಿಕೊಳ್ಳಿ’ ಎಂದು ಕಿಡಿಕಾರಿದರು.

ಇದಕ್ಕೆ ಹೊಂದುವಂತಹ ಪ್ರಶ್ನೆಯನ್ನು ಡಾ.ಕುಮಾರ ಚಲ್ಯ ಸಹ, ‘ದೇವನೂರ ಮಹದೇವ ಅವರು ವ್ಯವಸ್ಥೆಯ ಹೊರಗಿದ್ದು ಪ್ರತಿಭಟನೆ ಮಾಡುತ್ತಾರೆ. ಇದು ಸರಿಯೇ ತಪ್ಪೇ’ ಎಂದು ಕೇಳಿದರು. ಇದಕ್ಕೆ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ ಸಿದ್ಧಲಿಂಗಯ್ಯ ‘ಎಲ್ಲಿವರೆಗೆ ವ್ಯವಸ್ಥೆಯೊಳಗೆ ಅಭಿವ್ಯಕ್ತಿಗೆ ಮುಕ್ತ ಅವಕಾಶ ಇರುತ್ತದೋ ಅಲ್ಲಿವರೆಗೆ ವ್ಯವಸ್ಥೆಯ ಒಳಗೆ ಹೋರಾಟ ಮಾಡುವುದು ಸರಿ. ಇಲ್ಲಿ ನನ್ನ ಅಭಿವ್ಯಕ್ತಿಗೆ ಯಾರೂ ತಡೆ ಒಡ್ಡಿಲ್ಲ. ನನ್ನ ಅಭಿವ್ಯಕ್ತಿಯನ್ನು ಸರ್ಕಾರ ಒಪ್ಪಿದೆ. ಹಾಗೆಯೇ, ದೇವನೂರರು ಸಹ ಇಲ್ಲಿ ಬಂದು ತಮ್ಮ ಅಭಿಪ್ರಾಯ ಮಂಡಿಸಿದ್ದರೆ ಅದಕ್ಕೆ ಹೆಚ್ಚು ಬಲ ಬರುತ್ತಿತ್ತು’ ಎಂದು ಹೇಳಿದರು.

‘ಸರ್ಕಾರ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಅದರಿಂದ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತೇನೆ. ಇದು ತಪ್ಪೇ?’ ಎಂದು ಪ್ರಶ್ನಿಸಿದರು. ‘ಆಳ್ವಾಸ್ ನುಡಿಸಿರಿ ಕಾರ್ಯಕ್ರಮ­ವೊಂದರಲ್ಲಿ ನಿಮ್ಮ ಸಮ್ಮುಖದಲ್ಲೇ ಅಜಲು ಆಚರಣೆ ನಡೆದರೂ ಏಕೆ ಸುಮ್ಮನಿದ್ದಿರಿ, ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಮನುಸ್ಮೃತಿ ಗ್ರಂಥವನ್ನು ಏಕೆ ಬಿಡುಗಡೆ ಮಾಡಿದಿರಿ’ ಎಂಬ ಬಾನು ಮುಷ್ತಾಕ್ ಅವರ ಪ್ರಶ್ನೆಗಳಿಗೆ ಅಷ್ಟೇ ಸಾವಧಾನದಿಂದ ಅವರು ಉತ್ತರಿಸಿದರು.

ಒಳ್ಳೆಯ ಮನುಸ್ಮೃತಿ ಬಿಡುಗಡೆ
‘ಆಳ್ವಾಸ್ ನುಡಿಸಿರಿ ಕಾರ್ಯಕ್ರಮವೊಂದರಲ್ಲಿ ಅಜಲು ಪದ್ಧತಿ ಆಚರಣೆ ನಡೆದುದು ನನ್ನ ಗಮನಕ್ಕೆ ಬಂದಿಲ್ಲ. ಅಜಲು ಪದ್ದತಿ ನಿಷೇಧಿಸಲು ವಿಧಾನಪರಿಷತ್‌ನಲ್ಲಿ ಹೋರಾಡಿದೆ. ಅದರ ಪ್ರತಿಫಲವಾಗಿ ಅಜಲು ನಿಷೇಧ ಕಾಯ್ದೆ ಬಂದಿದೆ. ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ನಾನು ಬಿಡುಗಡೆ ಮಾಡಿದ್ದು  ಕೆಟ್ಟ ವಿಚಾರಗಳು ಇಲ್ಲದ ಮನುಸ್ಮೃತಿಯನ್ನು. ಮೂಲ ಮನುಸ್ಮೃತಿಯಲ್ಲಿ ಒಳ್ಳೆಯ ಅಂಶಗಳೂ ಇವೆ, ಕೆಟ್ಟ ಅಂಶಗಳೂ ಇವೆ. ಅದರಲ್ಲಿ ಕೇವಲ ಒಳ್ಳೆಯ ಅಂಶಗಳ ‘ಮನುಸ್ಮೃತಿ’ಯನ್ನು ಬಿಡುಗಡೆ ಮಾಡಿದ್ದು ತಪ್ಪೇ’ ಎಂದು ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯ ಪ್ರಶ್ನಿಸಿದರು.

Write A Comment